ಕರ್ನಾಟಕ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕಸರತ್ತಿನ ಸಭೆಯಲ್ಲಿ ಪ್ರಧಾನಿ ಮೋದಿ ಎಲ್ಲಾ ನಾಯಕರಿಗೆ ಒಂದು ಸ್ಪಷ್ಟ ಸೂಚನೆ ನೀಡಿದ್ದರು. ಮೋದಿ ಸೂಚನೆಯಿಂದ ಈ ಬಾರಿಯ ಮಹತ್ತರ ಬದಲಾವಣೆ ಮಾಡಲಾಗಿದೆ. ಇದರಿಂದ ಬಿಜೆಪಿಯಲ್ಲೀಗ ಅಸಮಾಧಾನ ಸ್ಫೋಟಗೊಂಡಿದ್ದರೂ ಹೈಕಮಾಂಡ್ ತಲೆಕೆಡಿಸಿಕೊಂಡಿಲ್ಲ. ಅಷ್ಟಕ್ಕೂ ಮೋದಿ ಹೇಳಿದ ಒಂದು ಮಾತು ಯಾವುದು?
ನವದೆಹಲಿ(ಏ.12) ಕರ್ನಾಟಕ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದೆ. ಪ್ರತಿ ಬಾರಿ ಟಿಕೆಟ್ ಪಡೆಯುತ್ತಿದ್ದ ಹಲವರಿಗೆ ಟಿಕೆಟ್ ನೀಡಿಲ್ಲ. ಹಲವು ಪ್ರಯೋಗ, ಮಹತ್ತರ ಬದಲಾವಣೆ ಸೇರಿದಂತೆ ಹೊಸತನಕ್ಕೆ ಈ ಬಾರಿಯ ಅಭ್ಯರ್ಥಿಗಳ ಆಯ್ಕೆ ನಾಂದಿ ಹಾಡಿದೆ. ಈ ಬದಲಾವಣೆಗೆ ಮುಖ್ಯ ಕಾರಣ ಪ್ರಧಾನಿ ನರೇಂದ್ರ ಮೋದಿ ಆಡಿದ ಒಂದು ಮಾತು ಕಾರಣ. ಸಂಸದೀಯ ಮಂಡಳಿ ಸಭೆ, ಸ್ಕ್ರೀನಿಂಗ್ ಕಮಿಟಿ ಸಭೆ ಸೇರಿದಂತೆ ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ಹೈಕಮಾಂಡ್ ಆಯ್ಕೆ ಕಸರತ್ತಿನ ಸದಸ್ಯರಿಗೆ ಮೋದಿ ಸ್ಪಷ್ಟ ಸೂಚನೆ ನೀಡಿದ್ದರು. ಕರ್ನಾಟಕದಲ್ಲಿನ ಒಪ್ಪಂದ ರಾಜಕೀಯ, ಪಕ್ಷಕ್ಕೆ ಮುಜುಗರ ತಂದಿರುವ, ಭ್ರಷ್ಟಾಚಾರ ಪ್ರಕರಣಗಳಿರುವ ಅಭ್ಯರ್ಥಿಗಳ ಆಯ್ಕೆ ಉಚಿತವಲ್ಲ. ಕರ್ನಾಟಕ ಬಿಜೆಪಿ ಸಂಪೂರ್ಣ ಸ್ವಚ್ಚವಾಗಿರಬೇಕು ಪ್ರಧಾನಿ ಮೋದಿ ಸೂಚನೆ ನೀಡಿದ್ದರು. ಹೀಗಾಗಿ ಬಿಜೆಪಿ ಅಳೆದು ತೂಗಿ ಅಭ್ಯರ್ಥಿಗಳ ಆಯ್ಕೆ ಮಾಡಿದೆ. ಇಷ್ಟೇ ಅಲ್ಲ 52 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ.
ಭ್ರಷ್ಟಾಚಾರ, ಒಪ್ಪಂದ ರಾಜಕೀಯ ಸೇರಿದಂತೆ ಪಕ್ಷ ಹಾಗೂ ಆಡಳಿತಕ್ಕೆ ಮುಜುಗರ ತಂದ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಲು ಈ ಬಾರಿಯ ಬಿಜೆಪಿ ಮುಂದಾಗಿತ್ತು. ಬಿಜೆಪಿಯ ಭದ್ರಕೋಟೆ ಕರಾವಳಿ ಭಾಗದಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ಉಡುಪಿ ಕ್ಷೇತ್ರದಿಂದ ರಘುಪತಿ ಭಟ್ ಬದಲು ಯಶ್‌ಪಾಲ್ ಸುವರ್ಣಗೆ ಟಿಕೆಟ್ ನೀಡಿದ್ದರೆ, ಸುಳ್ಯದಲ್ಲಿ ಅಂಗಾರ ಬದಲು ಭಗೀರಥಿ ಮರುಳ್ಯಗೆ ಟಿಕೆಟ್ ನೀಡಲಾಗಿದೆ. ಇನ್ನು ಪುತ್ತೂರಿನಲ್ಲಿ ಸಂಜೀವ ಮಂಠದೂರು ಬದಲು, ಅಶಾ ತಿಮ್ಮಪ್ಪಗೆ ಟಿಕೆಟ್ ನೀಲಾಗಿದೆ.
ಸುಳ್ಯ ಶಾಸಕ ಎಸ್. ಅಂಗಾರ ರಾಜಕೀಯ ನಿವೃತ್ತಿ: ಬಿಜೆಪಿ ಅಭ್ಯರ್ಥಿಗೂ ಬೆಂಬಲಿಸಲ್ಲ
ಅಥಣಿ ಕ್ಷೇತ್ರದ ಟಿಕೆಟ್ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ತಪ್ಪಿದ್ದು, ಮಹೇಶ ಕುಮಟಳ್ಳಿ ಅವರಿಗೆ ಟಿಕೆಟ್ ನೀಡಲಾಗಿದೆ. ಅಥಣಿ ವಿಚಾರದಲ್ಲಿ ಲಕ್ಷ್ಮಣ ಸವದಿಗೆ ತೀವ್ರ ಹಿನ್ನೆಡೆಯಾಗಿದ್ದು, ಮಾಜಿ ಸಚಿವ ರಮೇಶ ಜಾರಕಿಹೊಳಿ ಮೇಲು ಗೈ ಸಾಧಿಸಿದ್ದಾರೆ. ಪ್ರಮುಖವಾಗಿ ಕಾಗವಾಡ ಕ್ಷೇತ್ರದಿಂದ ಶ್ರೀಮಂತ ಪಾಟೀಲ, ಅಥಣಿಯಿಂದ ಮಹೇಶ ಕುಮಟಳ್ಳಿ, ರಾಮದುರ್ಗದಿಂದ ಚಿಕ್ಕರೇವಣ್ಣ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ನಾಗೇಶ ಮನ್ನೋಳಕರ ಅವರಿಗೆ ಟಿಕೆಟ್ ನೀಡಲಾಗಿದೆ. ಇವೆಲ್ಲರೂ ರಮೇಶ ಜಾರಕಿಹೊಳಿ ಬೆಂಬಲಿತ ಅಭ್ಯರ್ಥಿಗಳು. ಅದರಲ್ಲೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿಚಾರದಲ್ಲಿ ತಮ್ಮ ಆಪ್ತ ನಾಗೇಶ ಮನ್ನೋಳಕರ ಅವರಿಗೆ ಟಿಕೆಟ್ ನೀಡುವಂತೆ ರಮೇಶ ಜಾರಕಿಹೊಳಿ ಬಿಜೆಪಿ ಹೈಕಮಾಂಡ್ ಮೇಲೆ ತೀವ್ರ ಒತ್ತಡ ಹೇರಿದ್ದರು. ಸವದತ್ತಿಯಿಂದ ಸೌರಭ ಚೋಪ್ರಾ ಮತ್ತು ಖಾನಾಪುರದಲ್ಲಿ ಅರವಿಂದ ಪಾಟೀಲ ಅವರಿಗೆ ಟಿಕೆಟ್ ನೀಡುವಂತೆ ಕೋರಿದ್ದರು. ಆದರೆ, ಅವರಿಬ್ಬರಿಗೂ ಟಿಕೆಟ್ ನೀಡಿಲ್ಲ.
ಉಡುಪಿ ಜಿಲ್ಲೆಯ 5 ಕ್ಷೇತ್ರಗಳ ಪೈಕಿ ಬೈಂದೂರನ್ನು ಹೊರತುಪಡಿಸಿ, ಉಳಿದ 4 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಬಿಜೆಪಿ ಮೊದಲ ಪಟ್ಟಿಯಲ್ಲಿ ಘೋಷಿಸಿದೆ. ಕಾರ್ಕಳವನ್ನು ಹೊರತುಡಿಸಿ ಇತರ 3 ಕ್ಷೇತ್ರಗಳಲ್ಲಿ ನಿರೀಕ್ಷೆಯಂತೆ ಹಾಲಿ ಶಾಸಕರನ್ನು ಬದಲಾಯಿಸಿ ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ.ಕಾರ್ಕಳದಲ್ಲಿ ಹಾಲಿ ಸಚಿವ ಸುನಿಲ್ ಕುಮಾರ್ ಅವರಿಗೆ 4ನೇ ಬಾರಿ ಟಿಕೇಟ್ ನೀಡಲಾಗಿದೆ. ಕುಂದಾಪುರದಲ್ಲಿ 5 ಬಾರಿ ಗೆದ್ದಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿಅವರು ಸ್ವಯಿಚ್ಛೆಯಿಂದ ಚುನಾವಣಾ ರಾಜಕೀಯದಿಂದ ಹಿಂದಕ್ಕೆ ಸರಿದಿದ್ದು, ಅವರ ಇಚ್ಛೆಯಂತೆ ಅವರ ಆಪ್ತ ಕಿರಣ್ ಕೊಡ್ಗಿ ಅವರಿಗೆ ಪ್ರಥಮ ಬಾರಿಗೆ ಟಿಕೆಟ್ ನೀಡಲಾಗಿದೆ.
ಆರ್. ಅಶೋಕ್ ಸ್ಪರ್ಧೆಯ ಎರಡೂ ಕ್ಷೇತ್ರದಲ್ಲಿ ಡಿಕೆ ಬ್ರದರ್ಸ್ ಎದುರಾಳಿ: ಪದ್ಮನಾಭನಗರದಿಂದ ಡಿ.ಕೆ. ಸುರೇಶ್ ಕಣಕ್ಕೆ!
ತೀವ್ರ ಚರ್ಚೆಗೆ ಕಾರಣವಾಗಿದ್ದ ಉಡುಪಿಯ 3 ಬಾರಿಯ ಶಾಸಕ ರಘುಪತಿ ಭಟ್ ಅವರಿಗೆ ಟಿಕೆಟ್ ನಿರಾಕರಿಸಲಾಗಿದ್ದು, ಅವರ ಬದಲಿಗೆ ಬಿಜೆಪಿಯ ಹಿಂ.ವ. ಮೋರ್ಚದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ಅವರಿಗೆ ಟಿಕೆಟ್ ನೀಡಲಾಗಿದೆ. ಕಾಪುವಿನಲ್ಲಿ 3 ಬಾರಿ ಗೆದ್ದಿರುವ ಲಾಲಾಜಿ ಮೆಂಡನ್ ಅವರೂ ಟಿಕೆಟ್ ಕಳೆದುಕೊಂಡಿದ್ದು, ಅಲ್ಲಿ ಗುರ್ಮೆ ಸುರೇಶ್ ಶೆಟ್ಟಿಅವರನ್ನು ಕಣಕ್ಕಿಳಿಸಲಾಗಿದೆ.