ಫಲಿತಾಂಶಕ್ಕೆ ಕೆಲ ಗಂಟೆಗಳು ಬಾಕಿ ಇರುವಾಗಲೇ ಕಾಂಗ್ರೆಸ್ ಸರಣಿ ಸಭೆ, ಪಕ್ಷೇತರ ಅಭ್ಯರ್ಥಿಗಳಿಗೆ ಸಿದ್ದರಾಮಯ್ಯ ಕರೆ

By Gowthami K  |  First Published May 12, 2023, 7:41 PM IST

ಕಾಂಗ್ರೆಸ್ ಫಲಿತಾಂಶಕ್ಕೆ ಕೆಲ ಗಂಟೆಗಳು ಬಾಕಿಯಿರುವಾಗಲೇ ಸಭೆಗಳ ಮೇಲೆ ಸಭೆ ನಡೆಸುತ್ತಿದೆ. ಈ ನಡುವೆ ಸಿದ್ದರಾಮಯ್ಯ ಪಕ್ಷೇತರ ಅಭ್ಯರ್ಥಿಗಳ ಜೊತೆಗೆ  ಮಾತುಕತೆ ನಡೆಸಿದ್ದಾರೆ.


ಬೆಂಗಳೂರು (ಮೇ.12): ಕರ್ನಾಟಕ ವಿಧಾನ ಸಭೆ ಚುನಾವಣೆಯ ಮತದಾನದ ಎಕ್ಸಿಟ್ ಪೋಲ್ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಕಾಂಗ್ರೆಸ್ ನಲ್ಲಿ ಪಕ್ಷದ ನಾಯಕರು ಸಭೆಯ ಮೇಲೆ ಸಭೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಗೆ ಸಿಕ್ಕಿರುವ ಬೂತ್ ರಿಪೋರ್ಟ್ ನಲ್ಲಿ  120  ರಿಂದ 130 ಸ್ಥಾನ ಗೆಲ್ಲುವ ರಿಪೋರ್ಟ್ ಸಿಕ್ಕಿದೆ. ಜೊತೆಗೆ  ಮತಗಟ್ಟೆ ಸಮೀಕ್ಷೆಯಲ್ಲಿ ಬಹುತೇಕರು ಕಾಂಗ್ರೆಸ್ ಗೆ ಈ ಬಾರಿ ಜನತಾ ಜನಾರ್ಧನ ಹೆಚ್ಚು ಒಲವು ತೋರಿದ್ದಾನೆ ಎಂದು ತೋರಿಸಿವೆ. ಇದೇ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಫಲಿತಾಂಶಕ್ಕೆ ಕೆಲ ಗಂಟೆಗಳು ಬಾಕಿಯಿರುವಾಗಲೇ ಸಭೆಗಳ ಮೇಲೆ ಸಭೆ ನಡೆಸುತ್ತಿದೆ. 

ಕಾಂಗ್ರೆಸ್‌ 130ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೆ:ಜಿ.ಪರಮೇಶ್ವರ್

Tap to resize

Latest Videos

ಈ ನಡುವೆ ಸಿದ್ದರಾಮಯ್ಯ ಪಕ್ಷೇತರ ಅಭ್ಯರ್ಥಿಗಳ ಜೊತೆಗೆ  ಮಾತುಕತೆ ನಡೆಸಿದ್ದಾರೆ. ದೂರವಾಣಿ ಮೂಲಕ ಹರಪನಹಳ್ಳಿ ಮತ್ತು ಜಗಳೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ. ಹರಪನಹಳ್ಳಿ ಲತಾ ಮಲ್ಲಿಕಾರ್ಜುನ ಮತ್ತು ಜಗಳೂರು ಕ್ಷೇತ್ರದ ಹೆಚ್ ಪಿ ರಾಜೇಶ್ ಜೊತೆಗೆ ಸಂಜೆ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆ.

ನಿಖರ ಮತ್ತು ಸ್ಪಷ್ಟ ಫಲಿತಾಂಶ ಹೇಳಿದವರಿಗೆ ಸಿಗಲಿದೆ 10 ಲಕ್ಷ!

ಈ ನಡುವೆ ಕಾಂಗ್ರೆಸ್ ಹಿರಿಯ ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ಸೇರಿದ್ದಾರೆ. ಶಾಂಗ್ರಿಲಾ ಹೊಟೇಲ್ ನಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ನಾಳೆ ಫಲಿತಾಂಶದ ಬಗ್ಗೆ ಮಹತ್ವ ಚರ್ಚೆ ನಡೆಸಲಾಗಿದೆ. ಕಾಂಗ್ರೆಸ್ ಮುಂದಿನ ನಡೆ ಬಗ್ಗೆ  ಸಭೆಯಲ್ಲಿ ಚರ್ಚಿಸಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,  ಸಿದ್ದರಾಮಯ್ಯ , ವೇಣುಗೋಪಾಲ್, ಸುರ್ಜೇವಾಲ,  ಡಿಕೆ ಶಿವಕುಮಾರ್ ಸೇರಿ ಗಣ್ಯರು ಈ ಸಭೆಯಲ್ಲಿ ಭಾಗಿಯಾಗಿದ್ದಾರೆ. ನಾಳೆ ಮಾಡಬೇಕಾದ ತಂತ್ರಗಾರಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ.

ನಮಗೆ ಬಹುಮತ ಬರುತ್ತದೆ. ಬಿಜೆಪಿಯವರ ವಿಶ್ವಾಸದ ಬಗ್ಗೆ ನಾನು ಮಾತಾಡಲ್ಲ. ನನ್ನ ಅನಾಲಿಸಿಸ್ ಮಾತ್ರ ಮಾಡ್ತೇನೆ. ನಾಳೆ ತನಕ ಕಾಯೋಣ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ. ಸಿಎಂ ಹುದ್ದೆ ವಿಚಾರವಾಗಿ ಮಾತನಾಡಿದ ಅವರು ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸುವುದು ಬೇಡ. ನಾಳೆ ನೋಡೋಣ ಕೂಸಿನ ತಲೆ ಗಾತ್ರ ದೊಡ್ಡದಿರತ್ತೋ ಸಣ್ಣದಿರುತ್ತದೋ ಅಂತ. ಆಮೇಲೆ ಎಲ್ಲ ನಿರ್ಧಾರ ಮಾಡೋಣ ಎಂದಿದ್ದಾರೆ.

click me!