ಬಿಜೆಪಿ 125 ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲ್ಲುತ್ತದೆ: ಕೋಟ ಶ್ರೀನಿವಾಸ ಪೂಜಾರಿ

By Girish Goudar  |  First Published May 12, 2023, 5:42 PM IST

2018 ರ ಚುನಾವಣೆಗೆ ಹೋಲಿಸಿದರೆ ಈ ಬಾರಿ 24,000 ಅಧಿಕ ಮತಗಟ್ಟೆಗಳಲ್ಲಿ ಹೆಚ್ಚು ಮತ ಪಡೆದಿದ್ದೇವೆ. 2018 ರಲ್ಲಿ ನಾವು 104 ಸ್ಥಾನಗಳನ್ನು ಗೆದ್ದಿದ್ದೇವು. ಹೀಗಾಗಿ 34,000 ಬೂತ್ ಗಳಲ್ಲಿ ಪಡೆದ ಮತಗಳ ಹಿನ್ನೆಲೆಯಲ್ಲಿ ನಾವು ನಿಶ್ಚಯವಾಗಿ ಬಹುಮತ ಸಾಧಿಸಲಿದ್ದೇವೆ ಎಂದ ಕೋಟ ಶ್ರೀನಿವಾಸ ಪೂಜಾರಿ 


ಉಡುಪಿ(ಮೇ.12): ಮತ ಎಣಿಕೆಯಲ್ಲಿ ಬಿಜೆಪಿ ಪಕ್ಷವು 125 ಕ್ಕೂ ಅಧಿಕ ಸೀಟುಗಳನ್ನು ಗೆಲ್ಲುತ್ತದೆ ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಭವಿಷ್ಯ ನುಡಿದಿದ್ದಾರೆ. ಇಂದು(ಶುಕ್ರವಾರ) ಉಡುಪಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ನಾವು ನಿಖರವಾಗಿ ಪಡೆದಿರುವ ಮಾಹಿತಿಯ ಆಧಾರದಲ್ಲಿ  ಕಂಡುಕೊಂಡ ಫಲಿತಾಂಶ ಇದಾಗಿದ್ದು, 58,000 ಬೂತುಗಳು ಹೊಂದಿರುವ ರಾಜ್ಯದಲ್ಲಿ 31 ಸಾವಿರ ಬೂತಗಳಲ್ಲಿ ನಾವು ಹೆಚ್ಚಿನ ಅಂತರ ಪಡೆದಿದ್ದೇವೆ ಎಂದರು. 

2018 ರ ಚುನಾವಣೆಗೆ ಹೋಲಿಸಿದರೆ ಈ ಬಾರಿ 24,000 ಅಧಿಕ ಮತಗಟ್ಟೆಗಳಲ್ಲಿ ಹೆಚ್ಚು ಮತ ಪಡೆದಿದ್ದೇವೆ. 2018 ರಲ್ಲಿ ನಾವು 104 ಸ್ಥಾನಗಳನ್ನು ಗೆದ್ದಿದ್ದೇವು. ಹೀಗಾಗಿ 34,000 ಬೂತ್ ಗಳಲ್ಲಿ ಪಡೆದ ಮತಗಳ ಹಿನ್ನೆಲೆಯಲ್ಲಿ ನಾವು ನಿಶ್ಚಯವಾಗಿ ಬಹುಮತ ಸಾಧಿಸಲಿದ್ದೇವೆ ಎಂದರು. 

Latest Videos

undefined

UDUPI: ಚುನಾವಣೆ ಮುಗಿತು, ರಿಲ್ಯಾಕ್ಸ್ ಮೂಡ್‌ಗೆ ಜಾರಿದ ಅಭ್ಯರ್ಥಿಗಳು

2014 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 284 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಯಾವ ಸಮೀಕ್ಷೆ ಹೇಳಿರಲಿಲ್ಲ. 2019 ರ ಲೋಕಸಭಾ ಚುನಾವಣೆಯಲ್ಲಿ 303 ಸ್ಥಾನಗಳನ್ನು  ಗಳಿಸುತ್ತೇವೆಂದು ಯಾವ ಸಮೀಕ್ಷೆ ಹೇಳಿರಲಿಲ್ಲ. ಬಿಜೆಪಿಗೆ ಸಮೀಕ್ಷೆಗೂ ಮೀರಿ ಮತಗಟ್ಟೆಯ ಕಾರ್ಯಕರ್ತರ ಮೇಲೆ ವಿಶ್ವಾಸವಿದ್ದು, ನಮ್ಮ ಕಾರ್ಯಕರ್ತರು, ಮತಗಟ್ಟೆ ಏಜೆಂಟ್ ನೀಡಿರುವ ಮಾಹಿತಿ ಆಧಾರದ ಮೇಲೆ ನಾವು ನಿಶ್ಚಯವಾಗಿ ಗೆಲುವು ಸಾಧಿಸಲಿದ್ದು, ಈ ಮೂಲಕ 125 ಸ್ಥಾನಗಳೊಂದಿಗೆ ಏಕ ಪಕ್ಷವಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮೀಕ್ಷೆಗಳ ಆಧಾರದಲ್ಲಿ ಜೆಡಿಎಸ್ ನವರು ತಾವು ಕಿಂಗ್ ಮೇಕರ್ ಆಗಬಹುದು ಎಂದು ಯೋಚಿಸಿರಬಹುದು. ಕಾಂಗ್ರೆಸಿಗರು ತಾವು ಅಧಿಕಾರವನ್ನು ನಡೆಸುತ್ತೇವೆ ಎಂದು ಸಂಭ್ರಮಿಸಿರಬಹುದು, ಇಂದಿನ ಎಣಿಕೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಬಂದರೆ ವಿರೋಧ ಪಕ್ಷಗಳು ಇವಿಎಂ ಹ್ಯಾಕ್ ಆಗಿದೆ ಎನ್ನಬಹುದು. ಆದರೆ ನಿಶ್ಚಯವಾಗಿ ಗೆಲುವು ನಮ್ಮದೇ ಎಂದವರು ಹೇಳಿದರು. 

ಆಪರೇಶನ್ ಕಮಲ ವಿಚಾರ

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆಪರೇಷನ್ ಆಗುವ ಪ್ರಶ್ನೆಯೇ ಇಲ್ಲ. ಆಪರೇಷನ್ ಕಮಲದ ಅಗತ್ಯವೂ ಇಲ್ಲ, ಅತಂತ್ರ ಆದರೆ ? ಎಂದು ಕೇಳಿ ನಮ್ಮ ದಾರಿ ತಪ್ಪಿಸಬೇಡಿ. ಅತಂತ್ರ ಬಂದರೆ ಏನು ಮಾಡಬೇಕು ಎಂದು ಪಕ್ಷದ ದೊಡ್ಡವರು ಯೋಚನೆ ಮಾಡುತ್ತಾರೆ. ನಳಿನ್ ಕುಮಾರ್, ಬೊಮ್ಮಾಯಿ ,ನಡ್ದ , ಅಮಿತ್ ಶಾ ಮಟ್ಟದಲ್ಲಿ ಚರ್ಚೆ ಮಾಡುತ್ತಾರೆ. ಫಲಿತಾಂಶದಲ್ಲಿ ಮಾತ್ರ ಯಾವ ಆಪರೇಷನ್ ಅಗತ್ಯ ಬರಲ್ಲ. ಆರ್ ಅಶೋಕ್ ಅವರಿಗೆ ಪದೇ ಪದೇ ಪ್ರಶ್ನೆ ಕೇಳಿದ್ದರಿಂದ ಆ ರೀತಿ ಉತ್ತರ ಕೊಟ್ಟಿರಬಹುದು. ಸ್ಪಷ್ಟ ಬಹುಮತ ಬರುತ್ತದೆ ಎಂದು ಅಶೋಕ್ ಗೂ ಗೊತ್ತಿದೆ.ಕೆಲವೊಮ್ಮೆ ಪತ್ರಕರ್ತರು ಕೇಳುವ ಪ್ರಶ್ನೆಯಿಂದ ರಾಜಕಾರಣಿಗಳು ದಾರಿತಪ್ಪಿ ಮಾತನಾಡಬಹುದು.ನಮ್ಮ ಮೇಲೆ ವಿಶ್ವಾಸ ಇದೆ ಬಹುಮತ ದೊರೆಯುತ್ತದೆ.ನಮ್ಮ ಹಿರಿಯರು ಏನು ಯೋಚನೆ ಮಾಡಿದ್ದಾರೆ ನಮಗೆ ಗೊತ್ತಿಲ್ಲ ಎಂದರು. 

ಕುಮಾರಸ್ವಾಮಿ ಜೊತೆ ಮಾತುಕತೆ ವಿಚಾರ

ಮುಂಜಾಗ್ರತಾ ಕ್ರಮವಾಗಿ ಒಬ್ಬರ ಜೊತೆ ಇನ್ನೊಬ್ಬರು ಮಾತನಾಡಿರಬಹುದು. ಒಮ್ಮೆ ಫಲಿತಾಂಶ ಹೊರಬಿದ್ದ ನಂತರ ಯಾವುದೇ ಆತಂಕ ಇರುವುದಿಲ್ಲ. ನಾಳೆ ಲೆಕ್ಕಾಚಾರ ಮುಗಿದ ನಂತರ ಯಾವುದೇ ಚರ್ಚೆ ಇರುವುದಿಲ್ಲ. ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಯಾರು ಅನ್ನುವುದನ್ನು ಶಾಸಕಾಂಗ ಸಭೆ ತೀರ್ಮಾನ ಮಾಡುತ್ತದೆ ಎಂದರು. 

ಉಡುಪಿ ಜಿಲ್ಲೆಯಲ್ಲಿ ಎಲ್ಲಾ ಐದು ಕ್ಷೇತ್ರ ಗೆಲ್ಲುತ್ತೇವೆ. ಉಡುಪಿ, ಕುಂದಾಪುರದಲ್ಲಿ ಬಹುದೊಡ್ಡ ಅಂತರದಲ್ಲಿ ಗೆಲ್ಲಲಿದ್ದು, ಉಳಿದ ಕ್ಷೇತ್ರಗಳಲ್ಲೂ ನಿಶ್ಚಯವಾಗಿ ಗೆಲುವು ಸಾಧಿಸುತ್ತೇವೆ. ಉತ್ತಮ ಮತದಾನವಾದಾಗ ಭಾರತೀಯ ಜನತಾ ಪಕ್ಷಕ್ಕೆ ಅನುಕೂಲವಾಗಿದೆ.ಕಡಿಮೆ ಮತದಾನವಾದಾಗ ಬಿಜೆಪಿ ಗೆಲುವು ಕಂಡಿದ್ದು ಕಡಿಮೆ. ಈ ಬಾರಿ ಬಹು ದೊಡ್ಡ ಪ್ರಮಾಣದಲ್ಲಿ ಮತದಾನವಾಗಿದ್ದು, ಮತದಾನದ ಸಂಖ್ಯೆ ಹೆಚ್ಚಿರುವುದರಿಂದ ಬಿಜೆಪಿಯ ಗೆಲುವಿಗೆ ಪೂರಕವಾಗಲಿದೆ. ಬದಲಾವಣೆಗಾಗಿ ಜನ ಹೆಚ್ಚಿನ ಮತ ಹಾಕಿರಬಹುದು ಮತ್ತು ಆ ಬದಲಾವಣೆ ನಮ್ಮ ಪರವಾಗಿಯೇ ಇರಬಹುದು ಎಂದರು. 

ಹಿಜಾಬ್ ವಿವಾದಕ್ಕೆ ಸೂಕ್ತ ಉತ್ತರ ಕೊಟ್ಟ ಡ್ಯಾಶಿಂಗ್ ನಾಯಕ ಯಶ್‌ಪಾಲ್ ಸುವರ್ಣ: ಶಿಂಧೆ

ಬೆಂಗಳೂರಿನಲ್ಲಿ ಕಡಿಮೆ ಮತದಾನ ವಿಚಾರ

ದೇಶಕ್ಕೆ ಒಳ್ಳೆದಾಗಬೇಕು ಅಭಿವೃದ್ಧಿ ಆಗಬೇಕು ಎಂದು ಹೇಳುವವರು ಕಡ್ಡಾಯವಾಗಿ ಮತದಾನದಲ್ಲಿ ಭಾಗವಹಿಸಬೇಕು. ಹಾಗೆ ಮಾಡಿದರೆ ಪ್ರಜಾಪ್ರಭುತ್ವಕ್ಕೆ ಶಕ್ತಿ ಬರುತ್ತಿತ್ತು. ಆದರೆ ಅದನ್ನು ಹೇಳುವುದು ಯಾರು, ಮಾಡುವುದು ಯಾರು ಅನ್ನುವ ಚರ್ಚೆ ಇದೆ.ಕಡ್ಡಾಯ ಮತದಾನ ಮಾಡಿ ಎಂದು ಹೇಳುವ ಅಧಿಕಾರ ಸರ್ಕಾರಕ್ಕೆ ಇಲ್ಲ. ಹೆಚ್ಚು ಮತದಾನದಿಂದ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ, ಇಷ್ಟಾದರೂ ಮತದಾನವಾಗಿದೆಯಲ್ಲ ಎಂದರು.

16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕು.

click me!