ಚಂಚಲ ಮನಸ್ಸಿನ ಚಿಂಚನಸೂರು ಬಿಜೆಪಿಗೆ ರಾಜೀನಾಮೆ: ಇಂದು ಕಾಂಗ್ರೆಸ್‌ಗೆ ವಾಪಸ್‌

By Kannadaprabha NewsFirst Published Mar 21, 2023, 2:40 AM IST
Highlights

ಕಲ್ಯಾಣ ಕರ್ನಾಟಕ ಭಾಗದ ಬಿಜೆಪಿಯ ಹಿರಿಯ ಮುಖಂಡ ಹಾಗೂ ವಿಧಾನಪರಿಷತ್‌ ಸದಸ್ಯ ಬಾಬುರಾವ್‌ ಚಿಂಚನಸೂರ್‌ ಅವರು ಮಂಗಳವಾರ ಪಕ್ಷ ತೊರೆದು ಕಾಂಗ್ರೆಸ್ಸಿಗೆ ವಾಪಸಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಚಿಂಚನಸೂರ್‌ ಅವರು ಸೋಮವಾರ ರಾತ್ರಿ ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿಯಾಗಿ ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು. 

ಬೆಂಗಳೂರು (ಮಾ.21): ಮಾಜಿ ಸಚಿವ, ರಾಜ್ಯ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಬಿಜೆಪಿ ಪ್ರಭಾವಿ ಮುಖಂಡ ಬಾಬುರಾವ್‌ ಚಿಂಚನಸೂರು ಅವರು ವಿಧಾನ ಪರಿಷತ್‌ ಸ್ಥಾನಕ್ಕೆ ಸೋಮವಾರ ಸಂಜೆ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದು, ಅಂಗೀಕರಿಸಲಾಗಿದೆ ಎನ್ನಲಾಗಿದೆ. ಬಾಬುರಾವ್‌ ಚಿಂಚನಸೂರು ಅವರ ಈ ನಡೆ ನಿರೀಕ್ಷಿಸಲಾಗುತ್ತಿತ್ತು ಎನ್ನಲಾಗಿದ್ದು, ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಮತ್ತೇ ಕಾಂಗ್ರೆಸ್‌ ಪಕ್ಷಕ್ಕೆ ಬಾಬುರಾವ್‌ ಘರ್‌ ವಾಪ್ಸಿ ಆಗಬಹುದೇ ಅನ್ನೋ ಲೆಕ್ಕಾಚಾರಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೊಳಪಡುತ್ತಿವೆ. ಬಾಬುರಾವ್‌ ಮಂಗಳವಾರ ಈ ಬಗ್ಗೆ ಅವರು ಹೇಳಿಕೆ ನೀಡುವ ಬಗ್ಗೆ ನಿರೀಕ್ಷಿಸಲಾಗುತ್ತಿದೆ.

ಎಸ್‌.ಎಂ. ಕೃಷ್ಣ ಸರ್ಕಾರವಧಿಯಲ್ಲಿ ಸಪ್ತ ಖಾತೆಗಳ ಸರದಾನೆಂಬ ಖ್ಯಾತಿಗೊಳಗಾಗಿದ್ದ ಬಾಬುರಾವ್‌ ಚಿಂಚನಸೂರು, ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಯಾದಗಿರಿ ಜಿಲ್ಲೆಯ ಗುರುಮಠಕಲ್‌ ಕ್ಷೇತ್ರದ ಮೀಸಲಾತಿ ಬದಲಾವಣೆ ನಂತರ ಮಲ್ಲಿಕಾರ್ಜುನ ಖರ್ಗೆ ಅವರ ಗುರುಮಠಕಲ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಾಬುರಾವ್‌ ಗೆಲುವು ಸಾಧಿಸಿ, ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದರು. 2018 ರಲ್ಲಿ ಗುರುಮಠಕಲ್‌ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬಾಬುರಾವ್‌ ಜೆಡಿಎಸ್‌ ಅಭ್ಯರ್ಥಿ ನಾಗನಗೌಡ ಕಂದಕೂರು ವಿರುದ್ಧ ಸೋಲುಂಡಿದ್ದರು.

ದೊಡ್ಡ ರಾಜ್ಯಗಳಲ್ಲೇ ಕಾಂಗ್ರೆಸ್‌ಗೆ ಅಡ್ರೆಸ್ ಇಲ್ಲ, ಅವರಿಗೆ ನಾಚಿಕೆ ಆಗಬೇಕು: ಬಿ.ಎಸ್.ಯಡಿಯೂರಪ್ಪ

ತಮ್ಮ ಈ ಸೋಲಿಗೆ ಖರ್ಗೆ ಕುಟುಂಬ ಕಾರಣವೆಂದು ದೂಷಿಸಿದ್ದ ಬಾಬುರಾವ್‌, ಅವರ ವಿರುದ್ಧ ಹರಿಹಾಯ್ದಿದ್ದರು. 2019 ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಬಿರುಸಿನ ಪ್ರಚಾರ ನಡೆಸಿದ್ದ ಬಾಬುರಾವ್‌, ಖರ್ಗೆ ಸೋಲಿಗೆ ಕಾರಣರೂ ಆಗಿದ್ದರಲ್ಲದೆ, ಮೊನ್ನೆ ಮೊನ್ನೆವರೆಗೂ ಖರ್ಗೆ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದರಲ್ಲದೆ, ಪ್ರಿಯಾಂಕ ಖರ್ಗೆ ಸೋಲಿಸಿವುದೇ ತಮ್ಮ ಗುರಿ ಎಂದು ತೊಡೆ ತಟ್ಟಿಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಕೋಲಿ ಸಮಾಜದ ಮತಗಳು ಹೆಚ್ಚಿರುವ ಚಿತ್ತಾಪುರದಲ್ಲಿ ಪ್ರಿಯಾಂಕ ಖರ್ಗೆ ಸೋಲಿಸಲು ಬಿಜೆಪಿ ಬಾಬುರಾವ್‌ ಅಸ್ತ್ರ ಪ್ರಯೋಗಿಸಲಿದ್ದಾರೆ ಎನ್ನಲಾಗಿತ್ತು.

ಬಿಜೆಪಿ ತೊರೆಯುವ ಮಾತೇ ಇಲ್ಲ ಎಂದು ಪದೇ ಪದೇ ಹೇಳಿ, ಖರ್ಗೆ ಕುಟುಂಬವನ್ನು ಸೋಲಿಸುವುದಾಗಿ ಪದೇ ಪದೇ ಬಾಬುರಾವ್‌ ಅವರ ಈ ದಿಢೀರ್‌ ನಡೆ ಬಿಜೆಪಿ ಪಾಳೆಯದಲ್ಲಿ ಬಿಸಿ ತುಪ್ಪವಾದಂತಿದೆ. ಇದೇ 25ರಂದು ಯಾದಗಿರಿ ಸಮೀಪದ ಸೈದಾಪುರದಲ್ಲಿ ನಡೆಯುವ ಕಾಂಗ್ರೆಸ್‌ ಸಮಾವೇಶದಲ್ಲಿ ಮಲ್ಲಿಕಾರ್ಜು ಖರ್ಗೆ ಉಪಸ್ಥಿತಿಯಲ್ಲಿ ಕಾಂಗ್ರೆಸ್‌ ಸೇರುವ ಸಾಧ್ಯತೆಗಳಿವೆ ಎಂಬ ಮಾತುಗಳಿವೆ.

ಆದರೆ, ಚಿಂಚನಸೂರು ನಡೆ ಮಾತ್ರ ವಿಚಿತ್ರ. ಈ ಹಿಂದೆ ಅನೇಕ ಬಾರಿ ಚಿಂಚನಸೂರು ಬಿಜೆಪಿ ಬಿಡುವ ಸುದ್ದಿಗಳು ಮುನ್ನೆಲೆಗೆ ಬಂದಾಗಿ ಅದನ್ನು ತಳ್ಳಿಹಾಕುತ್ತಿದ್ದ ಚಿಂಚನಸೂರು, ಇದೆಲ್ಲವೂ ಸುಳ್ಳು, ತಾವು ಬಿಜೆಪಿ ಬಿಡುವ ಮಾತೇ ಇಲ್ಲ ಎಂದು ಉಚ್ಛರಿಸುತ್ತಿದ್ದರು. ಸರ್ಕಾರದ ಅಧಿಕಾರಿಗಳು ಮಾತೇ ಕೇಳ್ತಿಲ್ಲ ಎಂದು ಅಸಮಾಧಾನ ಹೊರಹಾಕುತ್ತಿದ್ದರು. ಈ ಹಿಂದೆ ಸಚಿವ ಶ್ರೀರಾಮುಲು ವಸತಿನಿಲಯ ಉದ್ಘಾಟನೆಗೆ ಬಂದಿದ್ದಾಗ, ತಮಗೆ ಆಮಂತ್ರಣ ನೀಡಿಲ್ಲ ಎಂದು ತೀವ್ರ ಅಸಮಾಧಾನಗೊಂಡು ಉದ್ಘಾಟನೆ ನಡೆಸದೆ ವಾಪಸ್‌ ಕಳುಹಿಸಿದ್ದರು. ಕೋಲಿ ಸಮಾಜದ ಪ್ರಭಾವಿ ಮುಖಂಡ ಬಾಬುರಾವ್‌ ಅವರ ಮಾತು ಸಮಾಜದಲ್ಲಿ ಪ್ರಾಮುಖ್ಯತೆ ಪಡೆಯುತ್ತಿತ್ತು. ಗುರುಮಠಕಲ್‌ ಕ್ಷೇತ್ರದಿಂದ ತಾವೇ ಬಿಜೆಪಿ ಅಭ್ಯರ್ಥಿ ಎಂದು ಅವರು ಹೇಳುತ್ತಿದ್ದರು

ಬಿಜೆಪಿಗೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಉರಿ: ಮಾಜಿ ಸಚಿವೆ ಉಮಾಶ್ರೀ

ಮೊನ್ನೆ ಮೊನ್ನೆಯಷ್ಟೇ ಪರಿಷತ್‌ ಸದಸ್ಯ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌ ಜೊತೆಗೂಡಿ ಪತ್ರಿಕಾಗೋಷ್ಠಿ ನಡೆಸಿದ್ದ ಅವರು, ಬಿಜೆಪಿ ಬಿಡುವುದಿಲ್ಲ, ಖರ್ಗೆ ಸೋಲಿಸುವೆ ಎಂದಿದ್ದರು. ಆದರೀಗ, ಬಿಜೆಪಿ ಪರಿಷತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕುತೂಹಲ ಮೂಡಿಸಿದೆ. ಚಿಂಚನಸೂರು ಪತ್ನಿ ಅಮರೇಶ್ವರಿ ಚಿಂಚನಸೂರು ರಾಷ್ಟ್ರೀಯ ಆಹಾರ ನಿಗಮ ನಿರ್ದೇಶಕಿಯಾದರೆ, ಅವರ ಸಹೋದರ ಪುತ್ರ ವಿಜಯ್‌ ಚಿಂಚನಸೂರು ಅವರು ಬಿಜೆಪಿ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ. ಪ್ರತಿಕ್ರಿಯೆ ಸಂಬಂಧ ಬಾಬುರಾವ್‌ ಚಿಂಚಿನಸೂರ್‌ ಅವರನ್ನು ಸಂಪರ್ಕಿಸಲು ಸೋಮವಾರ ರಾತ್ರಿ ಬಹಹೊತ್ತಿನವರೆಗೂ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವರ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು.

click me!