
ಬಂಗಾರಪೇಟೆ (ಮಾ.21): 1994ರಲ್ಲಿ ಮಾಜಿ ಪ್ರಧಾನಿ ದೇವೇಗೌಡರು ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರುವ ಮೂಲಕ ಇತಿಹಾಸ ಸೃಷ್ಟಿ ಮಾಡಿದಂತೆ 2023ರಲ್ಲಿ ಎಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಇತಿಹಾಸ ಸೃಷ್ಟಿಸುವುದು ಖಚಿತ ಎಂದು ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ಪಟ್ಟಣದಲ್ಲಿ ಜೆಡಿಎಸ್ ಪಕ್ಷದವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಬೈಕ್ ರಾರಯಲಿ ಹಾಗೂ ಕಾರ‍್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ ಡಬಲ್ ಇಂಜಿನ್ ಬಿಜೆಪಿ ಸರ್ಕಾರದಿಂದ ದೇಶಕ್ಕೆ ಹಾಗೂ ರಾಜ್ಯಕ್ಕೆ ಯಾವುದೇ ಉಪಯೋಗವಿಲ್ಲ ಆ ಸರ್ಕಾರ ಬರೀ ಜನರ ತೆರಿಗೆ ಹಣ ಲೂಟಿ ಮಾಡುವ ಸರ್ಕಾರವಾಗಿದೆ ಎಂದು ಟೀಕಿಸಿದರು.
ಕಾರ್ಯಕರ್ತರ ಮೇಲೆ ದೌರ್ಜನ್ಯ: ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ವೇಗವಾಗಿ ಬೆಳೆಯುತ್ತಿರುವುದನ್ನು ನೋಡಿ ಸ್ಥಳಿಯ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕಾರ‍್ಯಕರ್ತರ ಮೇಲೆ ದೌರ್ಜನ್ಯ ಮಾಡುವ ಮೂಲಕ ಜೆಡಿಎಸ್ ವೇಗ ತಡೆಯಲು ಮುಂದಾಗಿದ್ದಾರೆ. ಆದರೆ ಯಾರಿಂದಲೂ ಜೆಡಿಎಸ್ ವೇಗ ತಡೆಯಲು ಸಾಧ್ಯವಿಲ್ಲ ಸ್ವಾಮಿ ಎಂದು ಶಾಸಕರಿಗೆ ಎಚ್ಚರಿಕೆ ನೀಡಿದರು. ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಹಿಬ್ರಾಹಿಂ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದೆ ಖಚಿತವಿಲ್ಲ ಇನ್ನು ಅವರು ಉಚಿತ ಖಚಿತ ಎಂಬ ಆಶ್ವಾಸನೆ ಅನುಷ್ಠಾನದ ಮಾತೆಲ್ಲಿ ಎಂದು ವ್ಯಂಗ್ಯವಾಡಿದರು.
ಬಿಜೆಪಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಉರಿ: ಮಾಜಿ ಸಚಿವೆ ಉಮಾಶ್ರೀ
ಅಂತೆಯೇ ಕ್ಷೇತ್ರದಲ್ಲಿ ಸಹ ಕಾಂಗ್ರೆಸ್ ಶಾಸಕರ ದೌರ್ಜನ್ಯಕ್ಕೆ ಬೇಸತ್ತು ಮುಸ್ಲಿಮರು 80ರಷ್ಟು ಭಾಗ ಜೆಡಿಎಸ್ ಬೆಂಬಲಕ್ಕೆ ನಿಂತಿರುವುದರಿಂದ ಭೀತಿ ಶುರುವಾಗಿ ಕಾರ‍್ಯಕರ್ತರನ್ನು ಬೆದರಿಸಲು ಮುಂದಾಗಿದ್ದಾರೆ ಇದೇ ರೀತಿ ಮುಂದುವರಿದರೆ ರಣರಂಗವಾಗಲಿದೆ. ನೀವು ಕಾಂಗ್ರೆಸ್ ಪಕ್ಷದಲ್ಲಿದ್ದು ಕೆ.ಹೆಚ್.ಮುನಿಯಪ್ಪರನ್ನು ಸೋಲಿಸಿ ಪಕ್ಷ ವಿರೋಧಿ ಮಾಡಿದ್ದರಿಂದ ಈ ಬಾರಿ ಚುನಾವಣೆಯಲ್ಲಿ ಮುನಿಯಪ್ಪ ನಿಮ್ಮನ್ನು ಬಿಸ್ಮಿಲ್ಲ ಮಾಡುವರು ಎಂದರು. ಪಕ್ಷದ ಜಿಲ್ಲಾಧ್ಯಕ್ಷ ಬನಕನಹಳ್ಳಿ ನಟರಾಜ್,ಎಂಎಲ್ಸಿ ಗೋವಿಂದರಾಜು,ಅಭ್ಯರ್ಥಿ ಮಲ್ಲೇಶಬಾಬು,ಮಂಗಮ್ಮಮುನಿಸ್ವಾಮಿ,ತಾಲೂಕು ಅಧ್ಯಕ್ಷ ಮುನಿರಾಜು, ವಡಗೂರು ಹರೀಶ್, ಚೌಡರೆಡ್ಡಿ, ಸಿರಾಜ್, ಅಸ್ಲಂಪಾಷ, ರಾಮಪ್ಪ, ಸಮೃದ್ಧಿ ಮಂಜುನಾಥ್, ವಡಗೂರು ರಾಮು ಮತ್ತಿತರರು ಇದ್ದರು.
ರಾಮನಗರದಲ್ಲೂ ಮಂಡ್ಯದ ರೀತಿ ನನ್ನ ವಿರುದ್ಧ ಸಂಚು: ಮಂಡ್ಯ ಸಂಸತ್ ಚುನಾವಣೆ ರೀತಿಯಲ್ಲೇ ರಾಮನಗರ ಕ್ಷೇತ್ರದಲ್ಲೂ ನನ್ನ ವಿರುದ್ಧ ಸಂಚು ನಡೆಯುತ್ತಿದೆ. ನನಗೆ ಹಾಲು ಕೊಡುತ್ತಾರೋ ಅಥವಾ ವಿಷ ಕೊಡುತ್ತಾರೋ ಅದು ಜನರಿಗೆ ಬಿಟ್ಟಿದ್ದು ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿ ಮಂಡ್ಯದಲ್ಲಿ ಬಿಜೆಪಿ, ಕಾಂಗ್ರೆಸ್, ರೈತಸಂಘದವರೆಲ್ಲ ಸೇರಿ ಚಕ್ರವ್ಯೂಹ ಮಾಡಿ ನನ್ನನ್ನು ಸೋಲಿಸಿದರು. ಇಲ್ಲೂ ಬಿಜೆಪಿ, ಕಾಂಗ್ರೆಸ್ ಒಗ್ಗಟ್ಟಾಗಿ ರಾಜಕೀಯ ಲೆಕ್ಕಾಚಾರ ಮಾಡಿಕೊಂಡು ಆ ರೀತಿಯ ಸಂಚು ನಡೆಸುತ್ತಿವೆ. ಆದರೆ ಅಂತಿಮ ತೀರ್ಮಾನ ಮತದಾರರು ಮಾಡುತ್ತಾರೆ. ಮಂಡ್ಯದಲ್ಲಿ ತಾಂತ್ರಿಕವಾಗಿ ಅಷ್ಟೇ ಸೋತಿದ್ದೆ. ಆದರೆ 5ಲಕ್ಷಕ್ಕೂ ಅಧಿಕ ಮತ ಪಡೆದಿದ್ದೆ ಎಂದರು.
ಬಸ್ ನಿಲ್ದಾಣ ಎಲ್ಲಾ ಕಡೆ ಕಟ್ಟಲಾಗಲ್ಲ, ಪುನಃ ಬಿಜೆಪಿ ಸರ್ಕಾರ ಬರುತ್ತೆ: ಸಚಿವ ಸೋಮಣ್ಣ
ರಾಮನಗರ ಕ್ಷೇತ್ರದಿಂದ ಸಂಸದ ಡಿ.ಕೆ.ಸುರೇಶ್ ಸ್ಪರ್ಧೆ ಕುರಿತ ಪ್ರಶ್ನೆಗೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ಅಭ್ಯರ್ಥಿಗಳ ಸ್ಪರ್ಧೆ ಬಗ್ಗೆ ಆಯಾ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ನಿಖಿಲ್ ತಿಳಿಸಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನನಗೆ ಅವಕಾಶ ಕೊಟ್ಟಿದ್ದಾರೆ. ನನ್ನ ಪಕ್ಷದ ಬಗ್ಗೆ ನಾನು ಮಾತನಾಡಬಹುದು. ಆದರೆ ಬೇರೆ ಪಕ್ಷದ ಬಗ್ಗೆ ಮಾತನಾಡುವ ಸೂಕ್ತ ವ್ಯಕ್ತಿ ನಾನಲ್ಲ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.