ರಾಜ್ಯದ ಉಪಚುನಾವಣೆಯ ಮೂರೂ ಕಡೆ ಜಿದ್ದಾಜಿದ್ದಿ ಫೈಟ್‌ : ಯಾರಿಗೆ ವಿಜಯ..?

Kannadaprabha News   | Asianet News
Published : Apr 30, 2021, 07:00 AM IST
ರಾಜ್ಯದ ಉಪಚುನಾವಣೆಯ ಮೂರೂ ಕಡೆ ಜಿದ್ದಾಜಿದ್ದಿ ಫೈಟ್‌ :  ಯಾರಿಗೆ ವಿಜಯ..?

ಸಾರಾಂಶ

ರಾಜ್ಯದಲ್ಲಿ ಮೂರು ಕ್ಷೇತ್ರಗಳಲ್ಲಿ ನಡೆದ ಉಪ ಚುಣಾವಣೆಯ ಫಲಿತಾಂಶ ಹೊರಬೀಳಲು ಇನ್ನು ಕೆಲ ದಿನಗಳು ಮಾತ್ರವೇ ಬಾಕಿ ಉಳಿದಿದೆ. ಈ ಸಂದರ್ಭದಲ್ಲಿ ನಡೆದ ಸಮೀಕ್ಷೆ ಫಲಿತಾಂಶದ ಬಗ್ಗೆ ಹೇಳಿದೆ. ಏನಿದೆ ಸಮೀಕ್ಷೆಯಲ್ಲಿ?

 ಬೆಂಗಳೂರು (ಏ.30):  ಕೊರೋನಾ ಸೋಂಕಿನ ಅಬ್ಬರದ ನಡುವೆಯೇ ಇದೇ ಭಾನುವಾರ ರಾಜ್ಯದ ಒಂದು ಲೋಕಸಭಾ ಕ್ಷೇತ್ರ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಹೊರಬೀಳಲಿದ್ದು, ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದ್ದು, ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆದಿದೆ. ಯಾರು ಗೆದ್ದರೂ ಮತಗಳ ಅಂತರ ಕಡಮೆಯೇ ಇರಲಿದೆ ಎಂಬುದು ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ನಡೆಸಿದ ಮತದಾನೋತ್ತರ ಸಮೀಕ್ಷೆಯಿಂದ ಗೊತ್ತಾಗಿದೆ.

ಸಮೀಕ್ಷೆ ಅನುಸಾರ ಬೆಳಗಾವಿ ಮತ್ತು ಬಸವಕಲ್ಯಾಣ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಸಮಬಲದ ಹೋರಾಟ ನಡೆದಿದೆ. ಉಭಯ ಪಕ್ಷಗಳಿಗೂ ಗೆಲ್ಲುವ ಸಮಾನ ಅವಕಾಶವಿದೆ. ಆದರೆ, ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್‌ಗಿಂತ ತುಸು ಮುಂದಿದೆ.

ಬಂಗಾಳದಲ್ಲಿ ದೀದಿ, ಕೇರಳದಲ್ಲಿ ಪಿಣರಾಯಿ; ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೂ ಸಿಂಹಪಾಲು!

ಕೇಂದ್ರದ ಸಚಿವರಾಗಿದ್ದ ಸುರೇಶ್‌ ಅಂಗಡಿ ಅವರ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಅವರ ಪತ್ನಿ ಮಂಗಲಾ ಅಂಗಡಿ ಅವರು ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಅವರಿಗೆ ಎದುರಾಳಿ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಶಾಸಕ ಸತೀಶ್‌ ಜಾರಕಿಹೊಳಿ. ಇವರಿಬ್ಬರ ನಡುವಿನ ಪೈಪೋಟಿಯಲ್ಲಿ ಮಂಗಲಾ ಅಂಗಡಿ ಕೊಂಚ ಮುಂದಿದ್ದರೂ ಜಾರಕಿಹೊಳಿ ಉತ್ತಮ ಸಾಧನೆ ತೋರಿದ್ದಾರೆ.

ಮಹಾರಾಷ್ಟ್ರದಲ್ಲಿ ಈ ಬಾರಿ ಶಿವಸೇನೆ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿ ಇರುವುದರಿಂದ ಬೆಳಗಾವಿ ಲೋಕಸಭಾ ಕ್ಷೇತ್ರದ ಮರಾಠಾ ಮತದಾರರು ಬಿಜೆಪಿಯನ್ನು ಎಷ್ಟರ ಮಟ್ಟಿಗೆ ಬೆಂಬಲಿಸಿದ್ದಾರೆ, ಎಂಇಎಸ್‌ ಅಭ್ಯರ್ಥಿ ಎಷ್ಟುಮತಗಳನ್ನು ಸೆಳೆಯಬಲ್ಲರು ಎಂಬುದರ ಮೇಲೆ ಗೆಲುವು ನಿರ್ಧಾರವಾಗಲಿದೆ. ಮಂಗಲಾ ಅಂಗಡಿ ಪರ ಅನುಕಂಪ ಕೆಲಸ ಮಾಡಿದ್ದರೂ ಕ್ಷೇತ್ರದಲ್ಲಿ ಜಾರಕಿಹೊಳಿ ಅವರ ಹಿಡಿತ ಕಡಮೆಯೇನೂ ಇಲ್ಲ. ಮತದಾನ ಪ್ರಮಾಣ ಕಡಮೆಯಾಗಿರುವುದು ಬಿಜೆಪಿ ಹಿನ್ನಡೆ ಉಂಟು ಮಾಡಬಹುದು. ಜತೆಗೆ ಸತೀಶ್‌ ಜಾರಕಿಹೊಳಿ ಅವರ ಇಬ್ಬರು ಸಹೋದರರಾದ ರಮೇಶ್‌ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಪ್ರತಿನಿಧಿಸುವ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಪೂರ್ಣ ಬೆಂಬಲ ಸಿಕ್ಕಿದೆಯೇ ಎಂಬುದರ ಬಗ್ಗೆಯೂ ಅನುಮಾನವಿದೆ. ಫಲಿತಾಂಶ ಹೊರಬಿದ್ದ ಬಳಿಕವೇ ಅದು ಸ್ಪಷ್ಟವಾಗಲಿದೆ. ಅಂತಿಮವಾಗಿ ಬೆಳಗಾವಿಯಲ್ಲಿ ಬಿಜೆಪಿ ಜಯಭೇರಿ ಬಾರಿಸುವ ಸಾಧ್ಯತೆ ಸ್ವಲ್ಪ ಹೆಚ್ಚಿದೆ.

ಇನ್ನು ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್‌ಗೌಡ ಪಾಟೀಲ್‌ ಅವರಿಗೆ ಹೋಲಿಸಿದರೆ ಕಾಂಗ್ರೆಸ್‌ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಅವರ ಬಗ್ಗೆ ಮತದಾರರಲ್ಲಿ ಹೆಚ್ಚಿನ ಒಲವಿದೆ. ಆದರೆ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪುತ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ರಾಜಕೀಯ ನಿರ್ವಹಣೆ ಪ್ರತಾಪ್‌ಗೌಡ ಪಾಟೀಲರಿಗೆ ಗೆಲುವು ತಂದುಕೊಡುವ ಸಾಧ್ಯತೆಯಿದೆ. ಉಳಿದೆರಡು ಕ್ಷೇತ್ರಗಳಿಗೆ ಹೋಲಿಸಿದರೆ ಮಸ್ಕಿಯಲ್ಲಿ ಕಳೆದ ಸಾರ್ವತ್ರಿಕ ಚುನಾವಣೆಗಿಂತ ಹೆಚ್ಚಿನ ಪ್ರಮಾಣದ ಮತದಾನವಾಗಿರುವುದು ಬಿಜೆಪಿಗೆ ವರದಾನವಾಗುವ ನಿರೀಕ್ಷೆಯಿದೆ.

ಬಸವಕಲ್ಯಾಣ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ತೀವ್ರ ಸೆಣಸಾಟ ನಡೆದಿದೆ. ಶಾಸಕರಾಗಿದ್ದ ಬಿ.ನಾರಾಯಣರಾವ್‌ ಅವರ ಪತ್ನಿ ಮಲ್ಲಮ್ಮ ಅವರನ್ನೇ ಕಾಂಗ್ರೆಸ್‌ ಅಭ್ಯರ್ಥಿಯಾಗಿಸಿದೆ. ಬಿಜೆಪಿಯಿಂದ ಹೊಸ ಮುಖ ಶರಣು ಸಲಗಾರ ಕಣದಲ್ಲಿದ್ದಾರೆ. ಆದರೆ, ಬಿಜೆಪಿ ಬಂಡಾಯ ಅಭ್ಯರ್ಥಿಯೂ ಆಗಿರುವ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಬಿಜೆಪಿಯ ಎಷ್ಟುಮತಗಳನ್ನು ಕಸಿಯಲಿದ್ದಾರೆ ಎಂಬುದರ ಮೇಲೆ ಗೆಲುವು ನಿರ್ಧಾರವಾಗಲಿದೆ. ಖೂಬಾ ಅವರಿಂದಾದ ಹಿನ್ನಡೆಯನ್ನು ಜೆಡಿಎಸ್‌ ಮಾಜಿ ಶಾಸಕ ಎಂ.ಜಿ.ಮುಳೆ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ಮೂಲಕ ಸರಿದೂಗಿಸುವ ಪ್ರಯತ್ನ ಮಾಡಿದೆ.

ಜೆಡಿಎಸ್‌ ಮುಸ್ಲಿಂ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದರಿಂದ ಅವರು ಮುಸ್ಲಿಂ ಮತದಾರರನ್ನು ಹೆಚ್ಚು ಸೆಳೆದಷ್ಟೂಕಾಂಗ್ರೆಸ್‌ಗೆ ನಷ್ಟವಾಗಲಿದೆ. ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಪಿ.ಜಿ.ಆರ್‌.ಸಿಂಧ್ಯ ಕಾಂಗ್ರೆಸ್‌ಗೆ ವಲಸೆ ಬಂದಿರುವುದು ಕಾಂಗ್ರೆಸ್‌ಗೆ ಸ್ವಲ್ಪ ಅನುಕೂಲವಾಗಬಹುದು. ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಮ್ಮ ಪರ ಅನುಕಂಪ ಹೆಚ್ಚು ಕೆಲಸ ಮಾಡಿದ್ದಲ್ಲಿ ಗೆಲುವು ಈ ಕಡೆ ವಾಲಬಹುದು. ಇಲ್ಲದಿದ್ದರೆ ಬಿಜೆಪಿ ಗೆಲುವನ್ನು ಕಸಿಯಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಧಿವೇಶನ ವೇಳೆ ಹಳೆಯ ಬೇಡಿಕೆಗಳ ಹೊಸ ಕೂಗು!
ಸದನದಲ್ಲಿ ಆಡಳಿತ, ವಿಪಕ್ಷ ಭಾರೀ ಕದನ ಸಂಭವ!