ಕಲಘಟಗಿ ಕ್ಷೇತ್ರ: ಕಾಂಗ್ರೆಸ್ಸಿನಿಂದ ಸಂತೋಷ ಲಾಡ್‌ ಸ್ಪರ್ಧೆ : ಟಿಕೆಟ್‌ ವಂಚಿತರು ಬಿಜೆಪಿಯತ್ತ?

By Kannadaprabha NewsFirst Published Apr 7, 2023, 8:34 AM IST
Highlights

ಜಿಲ್ಲೆಯಲ್ಲಿ ಅತಿಹೆಚ್ಚು ಚರ್ಚೆಗೆ ಗ್ರಾಸವಾಗಿದ್ದ ಕಲಘಟಗಿ ಮತಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಗೊಂದಲ ಕೊನೆಗೂ ಬಗೆಹರಿದಿದೆ. ಎರಡು ಬಾರಿ ಶಾಸಕರಾಗಿ, ಸಚಿವರೂ ಆದ ಸಂತೋಷ ಲಾಡ್‌(Santosh Lad) ಅವರಿಗೆ ಕಾಂಗ್ರೆಸ್ಸಿನ 2ನೇ ಪಟ್ಟಿಯಲ್ಲಿ ಟಿಕೆಟ್‌ ಘೋಷಣೆ ಮಾಡಲಾಗಿದ್ದು, ಇದರಿಂದ ಪ್ರತಿಸ್ಪರ್ಧಿ ನಾಗರಾಜ ಛಬ್ಬಿ ಹಾಗೂ ಅವರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

ಧಾರವಾಡ (ಏ.7) : ಜಿಲ್ಲೆಯಲ್ಲಿ ಅತಿಹೆಚ್ಚು ಚರ್ಚೆಗೆ ಗ್ರಾಸವಾಗಿದ್ದ ಕಲಘಟಗಿ ಮತಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಗೊಂದಲ ಕೊನೆಗೂ ಬಗೆಹರಿದಿದೆ. ಎರಡು ಬಾರಿ ಶಾಸಕರಾಗಿ, ಸಚಿವರೂ ಆದ ಸಂತೋಷ ಲಾಡ್‌(Santosh Lad) ಅವರಿಗೆ ಕಾಂಗ್ರೆಸ್ಸಿನ 2ನೇ ಪಟ್ಟಿಯಲ್ಲಿ ಟಿಕೆಟ್‌ ಘೋಷಣೆ ಮಾಡಲಾಗಿದ್ದು, ಇದರಿಂದ ಪ್ರತಿಸ್ಪರ್ಧಿ ನಾಗರಾಜ ಛಬ್ಬಿ ಹಾಗೂ ಅವರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

ಕಲಘಟಗಿ ಕ್ಷೇತ್ರದ(Kalaghatagi assembly constituency) ಕಾಂಗ್ರೆಸ್‌ ಪಾಳಯದಲ್ಲಿ 2018ರ ಚುನಾವಣೆ ನಂತರ ಎರಡು ಬಣಗಳಾಗಿವೆ. ಈ ಬಣಗಳು ಕ್ಷೇತ್ರದುದ್ದಕ್ಕೂ ಬಲು ಹುರುಪಿನಿಂದ ಪಕ್ಷ ಸಂಘಟನೆ ಸಹ ಮಾಡಿವೆ. ಬರುವ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಒಬ್ಬರಿಗಿಂತ ಒಬ್ಬರು ಮೇಲೆನ್ನುವ ರೀತಿಯಲ್ಲಿ ಕ್ಷೇತ್ರದಲ್ಲಿ ಹಲವಾರು ಸಾಮಾಜಿಕ ಕಾರ್ಯ ಮಾಡಿದ್ದಾರೆ.

Latest Videos

ಧಾರವಾಡದಿಂದಲೇ ವಿನಯ್‌ ಕಣಕ್ಕೆ, ಹುಸಿಯಾಯ್ತು ಸಿಎಂ ವಿರುದ್ಧ ಸ್ಪರ್ಧೆ

ಕಾಂಗ್ರೆಸ್‌ ಪಕ್ಷದಲ್ಲಿದ್ದರೂ ಕ್ಷೇತ್ರಕ್ಕೆ ಹೊರಗಿನವರಾದ ಸಂತೋಷ ಲಾಡ್‌ಗೆ ಮತ್ತೆ ಟಿಕೆಟ್‌ ನೀಡುವ ಬಗ್ಗೆ ಛಬ್ಬಿಗೆ ತೀವ್ರ ಅಸಮಾಧಾನವಿತ್ತು. ಜೊತೆಗೆ ಈ ಬಾರಿ ನನಗೆ ಟಿಕೆಟ್‌ ಎಂದು ಕ್ಷೇತ್ರದಲ್ಲೂ ಹೇಳಿಕೊಂಡಿದ್ದರು. ಲಾಡ್‌ಗಿಂತ ಒಂದು ಹೆಜ್ಜೆ ಮುಂದಾಗಿ ವರ್ಷಗಟ್ಟಲೇ ಕ್ಷೇತ್ರದಲ್ಲಿ ಸಂಚರಿಸಿ ಸಾಕಷ್ಟುಹಣ ಸಹ ಖರ್ಚು ಮಾಡಿದ್ದಾರೆ. ಇದೀಗ ಕಾಂಗ್ರೆಸ್‌ ಮತ್ತೆ ಲಾಡ್‌ಗೆ ಮಣೆ ಹಾಕಿದ್ದು, ನಾಗರಾಜ ಛಬ್ಬಿ ನಿಲುವು ಏನಾಗುತ್ತದೆ ಎಂಬುದು ಕುತೂಹಲ ಕೆರಳಿಸಿದೆ.

ಇತ್ತ, ಲಾಡ್‌ಗೆ ಕ್ಷೇತ್ರದ ಟಿಕೆಟ್‌ ದೊರೆತ್ತಿದ್ದರಿಂದ ಸ್ಥಳೀಯ ಕಾಂಗ್ರೆಸ್‌ ಕಾರ್ಯಕರ್ತರು ಪಟ್ಟಣದಲ್ಲಿ ಪಟಾಕಿ ಸಿಡಿಸಿ ಒಬ್ಬರಿಗೊಬ್ಬರು ಸಿಹಿ ಹಂಚುವ ಮೂಲಕ ಸಂಭ್ರಮಿಸಿದರೆ, ಛಬ್ಬಿ ಬಣ ಗರಂ ಆಗಿದೆ.

ಕ್ಷೇತ್ರ ಮರುವಿಂಗಡನೆ ಪರಿಣಾಮವಾಗಿ ಬಳ್ಳಾರಿ ಜಿಲ್ಲೆ ಸಂಡೂರಿನ ಕ್ಷೇತ್ರ ಮೀಸಲು ಕ್ಷೇತ್ರವಾದ ನಂತರ ಅಲ್ಲಿಯ ಶಾಸಕರಾಗಿದ್ದ ಸಂತೋಷ ಲಾಡ್‌ ತಮ್ಮದೇ ಜಾತಿಯ ಮರಾಠಾ ಸಮಾಜ ಪ್ರಬಲವಾಗಿದ್ದ ಕಲಘಟಗಿ ಕ್ಷೇತ್ರವನ್ನು ಆರಿಸಿಕೊಂಡು 2008ರಲ್ಲಿ ಚುನಾವಣೆಗೆ ಸ್ಪ​ರ್ಧಿಸಿ ಗೆದ್ದಿದ್ದರು.

2013ರಲ್ಲಿ ಮತ್ತೊಮ್ಮೆ ಈ ಕ್ಷೇತ್ರದಿಂದ ಗೆದ್ದ ಲಾಡ್‌, ಕೆಲವು ವೈಯಕ್ತಿಕ ಸಮಸ್ಯೆಗಳಲ್ಲಿ ಸಿಲುಕಿ ಈ ಕ್ಷೇತ್ರದ ಕಡೆಗೆ ಸುಳಿಯದೇ ಕ್ಷೇತ್ರ ನಿರ್ಲಕ್ಷಿಸಿದ ಆಪಾದನೆಗೆ ಒಳಗಾದರು. ಅದರ ಪರಿಣಾಮವಾಗಿ 2018ರಲ್ಲಿ ಸೋಲಿನ ಕಹಿ ಅನುಭವಿಸಿದರು. ಇದೀಗ ಮತ್ತೊಮ್ಮೆ ಟಿಕೆಟ್‌ ಸಿಕ್ಕಿದ್ದು ಛಬ್ಬಿ ಬಣ ಹತ್ತಿಕ್ಕಿ, ಬಿಜೆಪಿಯ ಪ್ರಬಲ ಪೈಪೋಟಿ ಹೇಗೆ ಎದುರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಬಿಜೆಪಿ ಮುಖಂಡ Yogesh Gowda ಹತ್ಯೆ ಪ್ರಕರಣ, ಬಿರಾದಾರ್‌ ಮಾಫಿ ಸಾಕ್ಷಿಗೆ ಹೈಕೋರ್ಟ್ ಒಪ್ಪಿಗೆ

ಮಾಜಿ ಸಚಿವ ಸಂತೋಷ ಲಾಡ್‌ಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದ್ದು ಕ್ಷೇತ್ರದ ಕಾಂಗ್ರೆಸ್‌ ವಲಯಕ್ಕೆ ಖುಷಿ ತಂದಿದೆ. ಈ ಚುನಾವಣೆಯಲ್ಲಿ ಪಕ್ಷದ ಎಲ್ಲ ಕಾರ್ಯಕರ್ತರು ಒಗ್ಗೂಡಿ ಲಾಡ್‌ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್‌ ಪಕ್ಷ ಬಲಪಡಿಸಲಿದ್ದೇವೆ.

-ಹಸನಅಲಿ ಶೇಖ್‌, ಲಾಡ್‌ ಬೆಂಬಲಿಗ

ನಾಗರಾಜ ಛಬ್ಬಿ ಮಾರ್ಗದರ್ಶನದಲ್ಲಿ ಕ್ಷೇತ್ರದಲ್ಲಿ ಇಷ್ಟುವರ್ಷಗಳ ಕಾಲ ಪಕ್ಷ ಸಂಘಟನೆ ಮತ್ತು ಹಲವಾರು ಸಾಮಾಜಿಕ ಕಾರ್ಯ ಮಾಡಿದ್ದೇವೆ. ಛಬ್ಬಿ ಅವರಿಗೆ ಟಿಕೆಟ್‌ ನೀಡದೇ ಇರುವ ಕಾಂಗ್ರೆಸ್‌ ಧೋರಣೆ ಬಗ್ಗೆ ಬೇಸರವಿದೆ. ಬರುವ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಲಾಡ್‌ನನ್ನು ಸೋಲಿಸುವುದಕ್ಕಾಗಿ ಶ್ರಮಿಸುತ್ತೇವೆ.

-ಅಜೀಜ್‌ ದೇವರಾಯ, ಛಬ್ಬಿ ಅಭಿಮಾನಿ ಬಳಗದ ಸದಸ್ಯ

click me!