ಸಚಿವ ಪ್ರಿಯಾಂಕ್ ಖರ್ಗೆ ಮೊದಲು ಗೆದ್ದಾಗ ಅವರಿಗೆ ಸಚಿವ ಸ್ಥಾನ ಕೊಡಲಾಯಿತು. ಎರಡು ತಿಂಗಳ ನಂತರ ಐಟಿಬಿಟಿ ಖಾತೆಯನ್ನು ನೀಡಲಾಯಿತು. 2ನೇ ಬಾರಿ ಗೆದ್ದಾಗ ಅವರಿಗೆ ಸಮಾಜ ಕಲ್ಯಾಣ ಇಲಾಖೆ ಕೊಡಲಾಯಿತು. 3ನೇ ಬಾರಿಗೆ ಗೆದ್ದಾಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್, ಐಟಿಬಿಟಿ ಖಾತೆ ಕೊಡಲಾಗಿದೆ. ಐಟಿಬಿಟಿ ಖಾತೆಯನ್ನು ಸಚಿವ ಎಂ.ಬಿ. ಪಾಟೀಲ್ ಅವರಿಂದ ಕಸಿದುಕೊಂಡಿದ್ದಾರೆ. ಅದಕ್ಕಾಗಿ ಅವರು ಕರ್ನಾಟಕದ ವಿಶೇಷ ಮಗು ಎಂದು ಲೇವಡಿ ಮಾಡಿದ ಸಂಸದ ಡಾ. ಉಮೇಶ್ ಜಾಧವ್
ಕಲಬುರಗಿ(ಅ.23): ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕರ್ನಾಟಕದ ವಿಶೇಷ ಹುಡುಗಾಟದ ಮಗು ಎಂದು ಬಿಜೆಪಿ ಸಂಸದ ಡಾ. ಉಮೇಶ್ ಜಾಧವ್ ಗೇಲಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಮೊದಲು ಗೆದ್ದಾಗ ಅವರಿಗೆ ಸಚಿವ ಸ್ಥಾನ ಕೊಡಲಾಯಿತು. ಎರಡು ತಿಂಗಳ ನಂತರ ಐಟಿಬಿಟಿ ಖಾತೆಯನ್ನು ನೀಡಲಾಯಿತು. 2ನೇ ಬಾರಿ ಗೆದ್ದಾಗ ಅವರಿಗೆ ಸಮಾಜ ಕಲ್ಯಾಣ ಇಲಾಖೆ ಕೊಡಲಾಯಿತು. 3ನೇ ಬಾರಿಗೆ ಗೆದ್ದಾಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್, ಐಟಿಬಿಟಿ ಖಾತೆ ಕೊಡಲಾಗಿದೆ. ಐಟಿಬಿಟಿ ಖಾತೆಯನ್ನು ಸಚಿವ ಎಂ.ಬಿ. ಪಾಟೀಲ್ ಅವರಿಂದ ಕಸಿದುಕೊಂಡಿದ್ದಾರೆ. ಅದಕ್ಕಾಗಿ ಅವರು ಕರ್ನಾಟಕದ ವಿಶೇಷ ಮಗು ಎಂದು ಲೇವಡಿ ಮಾಡಿದರು.
ರಾಜ್ಯ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಲೂಟಿ ನಡೆಸುತ್ತಿದೆ: ಕೇಂದ್ರ ಸಚಿವ ಭಗವಂತ ಖೂಬಾ
ಮಾಜಿ ಸಚಿವ ರೇವು ನಾಯಕ್ ಬೆಳಮಗಿ ಮತ್ತು ಅಫಜಲಪುರದ ಹಿರಿಯ ಶಾಸಕ ಎಂ.ವೈ.ಪಾಟೀಲ್ ಅವರನ್ನು ಎಡ ಮತ್ತು ಬಲ ಬದಿಯಲ್ಲಿ ತಾವು ಮಧ್ಯೆ ಕುಳಿತು ಸುದ್ದಿಗೋಷ್ಠಿ ಮಾಡುತ್ತಾರೆ. ಹೀಗಾಗಿ ಅವರು ವಿಶೇಷ ಮಗು ಎಂದು ಅವರು ಪರೋಕ್ಷವಾಗಿ ಜರಿದರು.
ಖರ್ಗೆ ಮೋದಿಗಿಂತ ಸೂಪರ್ ಆಗಲಿ
ಸಚಿವ ಖರ್ಗೆ ಅವರು ಅತ್ಯಂತ ಬಾಲಿಶತನದಿಂದ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ ಜಾಧವ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೂ ಮತ್ತು ತಮ್ಮಗೂ ಪ್ರಿಯಾಂಕ್ ಅವರು ಹೋಲಿಕೆ ಮಾಡಿಕೊಂಡಿದ್ದಾರೆ. ಮೋದಿ ಅವರು ವಿದೇಶಕ್ಕೆ ಹೋದರೆ ಅವರು ವಿಶ್ವನಾಯಕ ಆಗುತ್ತಾರೆ. ನಾನು ಅಮೇರಿಕಕ್ಕೆ ಹೋದರೆ ಟೀಕೆ ಮಾಡುತ್ತಾರೆ ಎಂಬ ಖರ್ಗೆಯವರು ಮೋದಿಗಿಂತ ಸೂಪರ್ ಆಗಲಿ, ಅದಕ್ಕೆ ನಮ್ಮದೇನೂ ತಕರಾರಿಲ್ಲ ಎಂದು ಛೇಡಿಸಿದರು.
ಕರ್ನಾಟಕದಲ್ಲಿ ತೀವ್ರ ಬರಗಾಲ ಬಿದ್ದಿದ್ದು, ವಿದ್ಯುತ್ ಹಾಗೂ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಗತಿ ಪರಿಶೀಲನಾ ಸಭೆ ಮಾಡಬೇಕು ಎಂದು ನಾನು ಆಗ್ರಹಿಸಿದ್ದೆ. ಅದಕ್ಕೆ ಪ್ರಿಯಾಂಕ್ ಅವರು ನ್ಯಾಯಾಲಯಕ್ಕೆ ಹೋಗು ಎಂದು ಹೇಳುತ್ತಾರೆ ಎಂದು ಆಕ್ಷೇಪಿಸಿದ ಡಾ. ಜಾಧವ್ ಅವರು, ನಾನೇಕೆ ನ್ಯಾಯಾಲಯಕ್ಕೆ ಹೋಗಲಿ ಎಂದು ಪ್ರಶ್ನಿಸಿದರು.
ಹೇಳಿಕೆ ಸಮರ್ಥನೆ:
ಸಭೆ ಮಾಡುವುದು ಅವರ ಕರ್ತವ್ಯವಾಗಿದ್ದು, ಆನ್‍ಲೈನ್ ಮೂಲಕ ಸಭೆ ಮಾಡಿದರೆ ಉಪಯೋಗ ಏನು?, ಕೆಡಿಪಿ ಸಭೆ ಆದರೆ ಎಲ್ಲ ಶಾಸಕರು, ಅಧಿಕಾರಿಗಳು ಬರುತ್ತಾರೆ. ಮಾಧ್ಯಮದವರೂ ಸಹ ಉಪಸ್ಥಿತರಿರುತ್ತಾರೆ. ಹಾಗಾಗಾಗಿ ಕೆಡಿಪಿ ಸಭೆಯನ್ನು ಮಾಡಿ ಎಂದು ಒತ್ತಾಯಿಸಿರುವೆ ಎಂದು ತಮ್ಮ ಬೇಡಿಕೆಯನ್ನು ಮತ್ತೆ ಸಮರ್ಥಿಸಿಕೊಂಡರು.
ಸಚಿವ ಪ್ರಿಯಾಂಕ್ ಖರ್ಗೆಯವರು ನನಗೆ ಜಾಧವ್ ಎಂದು ಮಾತನಾಡುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ನನಗೆ ಅತ್ಯಂತ ಪ್ರೀತಿಯಿಂದ ಜಾಧವ್ ಎಂದೇ ಕರೆಯುತ್ತಾರೆ ಎಂದು ತಿರುಗೇಟು ನೀಡಿದರಲ್ಲದೇ, ಸಿಎಂ ಜನಸ್ಪಂದನಾ ಸಭೆಯನ್ನು ಜಿಲ್ಲಾ ಕೇಂದ್ರದಲ್ಲಿ ಮಾಡಲು ಆದೇಶಿಸಿದ್ದರು. ಆದಾಗ್ಯೂ, ಸಚಿವ ಖರ್ಗೆ ಅವರು ಚಿಂಚೋಳಿಯಲ್ಲಿ ಮಾಡಿದರು. ಅದೂ ಹೈದ್ರಾಬಾದ್ ಸಮೀಪ ಆಗುತ್ತಿದ್ದು, ಬೇಗ ಅಲ್ಲಿಂದ ಹೋಗಲು ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಅಲ್ಲಿ ಮಾಡಿದರು. ಇಂತಹ ತಾಲೂಕಿನಲ್ಲಿ ಜನಸ್ಪಂದನಾ ಸಭೆಯು ಗದಗ್ ಜಿಲ್ಲೆ ಹೊರತುಪಡಿಸಿದರೆ ಕಲಬುರ್ಗಿ ಜಿಲ್ಲೆಯಲ್ಲಿ ಆಗಿದೆ ಎಂದು ಅವರು ಟೀಕಿಸಿದರು.
ಊರಿನ ಹೆಸರೆತ್ತಿದರೆ ಗೌರವ:
ನನಗೆ ಚಿಂಚೋಳಿ ಎಂಪಿ ಎಂದು ಪ್ರಿಯಾಂಕ್ ಅವರು ಕರೆಯುತ್ತಾರೆ. ನನ್ನ ಊರಿನ ಕುರಿತು ಮಾತನಾಡಿದರೆ ನನಗೆ ಗೌರವ ಹೆಚ್ಚುತ್ತದೆ. ಪ್ರಿಯಾಂಕ್ ಖರ್ಗೆ ಬೆಂಗಳೂರು ಡಾಲರ್ಸ್ ಕಾಲೋನಿ ಸಚಿವ ಎಂದು ಎಂದು ಕುಟುಕಿದ ಅವರು, ಜನಸ್ಪಂದನಾ ಸಭೆಯಲ್ಲಿ ಜಾಧವ್ ಮಗನಿದ್ದ, ಬೇಕಾದರೆ ಅವರನ್ನೇ ಕೇಳಿ ಎಂದು ಪ್ರಿಯಾಂಕ್ ಖರ್ಗೆ ವಿಡಂಬನಾತ್ಮಕವಾಗಿ ಹೇಳಿಕೆ ನೀಡುತ್ತಾರೆ. ಜನಸ್ಪಂದನಾ ಸಭೆಯಲ್ಲಿ ನನ್ನ ಮಗ ಇದ್ದರೂ ಸಹ ಆ ಕ್ಷೇತ್ರದ ಶಾಸಕ ಎಂಬುದನ್ನು ಸಚಿವರು ಮರೆಯಬಾರದೆಂದು ಅಸಮಾಧಾನ ಹೊರ ಹಾಕಿದರು.
ಬಂಡವಾಳದಾರರನ್ನು ಕರೆತನ್ನಿ: ಡಾ. ಜಾಧವ್
ಚಿತ್ತಾಪುರ, ಕಲಬುರ್ಗಿ ಕುರಿತು ಕಾಳಜಿ ಇಲ್ಲ. ಬೆಂಗಳೂರಿನಲ್ಲಿ ವೈದ್ಯಕೀಯ ಕಾಲೇಜು ಮಾಡುತ್ತಾರೆ. ಆದಾಗ್ಯೂ, ಅವರ ತಂದೆ ಸ್ವಾತಂತ್ರ್ಯ ಸಿಕ್ಕಾಗಿನಿಂದ ಕಲಬುರ್ಗಿ ಆಳುತ್ತಿದ್ದಾರೆ. ನೀವು ಅಮೇರಿಕಾಗಾದ್ರೋ ಹೋಗಿ, ಎಲ್ಲಿಗಾದ್ರೂ ಹೋಗಿ. ಆದಾಗ್ಯೂ, ಸುಮ್ನೆ ಹೋಗಿ ಬರಬೇಡಿ. ಬಂಡವಾಳದಾರರನ್ನು ಕರೆತನ್ನಿ. ನೀವು ಅಮೇರಿಕಾಕ್ಕೆ ಹೋದರೆ ನಮಗೇನೂ ಬ್ಯಾನಿ ಇಲ್ಲ. ಆದಾಗ್ಯೂ, ಕಲಬುರ್ಗಿಯನ್ನು ಗಮನದಲ್ಲಿಟ್ಟುಕೊಳ್ಳಿ ಎಂದು ಜಾಧವ್ ಹೇಳಿದರು.
ದೇಶಕ್ಕೆ ಮತ್ತೊಮ್ಮೆ ಮೋದಿ ಅನಿವಾರ್ಯ: ಕೇಂದ್ರ ಸಚಿವ ಭಗವಂತ ಖೂಬಾ
ನಾನು ಜಿಲ್ಲಾ ಉಸ್ತುವಾರಿ ಸಚಿವನಾದ ಮೇಲೆ ಸಂಸದರು ಕ್ರಿಯಾಶೀಲರಾಗಿದ್ದಾರೆ ಎಂಬ ಪ್ರಿಯಾಂಕ್ ಖರ್ಗೆ ಅವರ ಟೀಕೆಯನ್ನು ಉಲ್ಲೇಖಿಸಿದ ಜಾಧವ್ ಅವರು, ಹೌದು ನಾನು ಕ್ರಿಯಾಶೀಲನಾಗಿದ್ದೇನೆ. ಈ ಹಿಂದೆ ಕಾಂಗ್ರೆಸ್ಸಿನಲ್ಲಿದ್ದಾಗಲೂ ಕ್ರಿಯಾಶೀಲನಾಗಿ ಮೂರು ಬಾರಿ ಶಾಸಕನಾಗಿದ್ದೆ. ಆ ಪಕ್ಷದಲ್ಲಿ ನಾನು ಕ್ರಿಯಾಶೀಲವಾಗಿದ್ದರಿಂದಲೇ ಮುಂದೆ ಎಲ್ಲಿ ತಮಗೆ ಸಮಸ್ಯೆ ಆಗುತ್ತದೆ ಎಂದುಕೊಂಡು ನನಗೆ ಆ ಪಕ್ಷದಿಂದ ಹೊರಹಾಕಿದರು. ಈಗಲೂ ಸಹ ನಾನು ಕ್ರಿಯಾಶೀಲವಾಗಿದ್ದು, ಅವರಿಗೆ ಸಮಸ್ಯೆಯಾಗುತ್ತದೆ ಎಂಬ ಭೀತಿ ಅವರಿಗೆ ಕಾಡುತ್ತಿದೆ ಎಂದು ಅವರು ಮಾತಲ್ಲೇ ಕುಟುಕಿದರು.
ಜೇವರ್ಗಿ ತಾಲೂಕಿನ ಹುಲ್ಲೂರ್ ಚೆಕ್‍ಪೋಸ್ಟ್ ಬಳಿ ಅಕ್ರಮ ಮರಳು ಸಾಗಾಟ ಪ್ರಕರಣದಲ್ಲಿ ಅಮಾಯಕನಿಗೆ ಗುಂಡು ಹಾರಿಸಲಾಗಿದೆ. ಚಿಂಚೋಳಿ ತಾಲೂಕಿನಲ್ಲಿ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಶರಣಪ್ರಕಾಶ್ ಪಾಟೀಲ್ ಅವರ ಹೆಸರು ಕೇಳಿಬಂದಿದೆ. ಸೇಡಂ ತಾಲೂಕಿನಲ್ಲಿ ಅಮಾಯಕರ ಮೇಲೆ ಅಟ್ರಾಸಿಸಿ ಪ್ರಕರಣ ದಾಖಲಿಸಲಾಗಿದೆ. ಅಫಜಲಪುರ ತಾಲೂಕಿನಲ್ಲಿ ಒಂದು ವಾರದಲ್ಲಿ ಎರಡು ಬರ್ಬರ ಕೊಲೆಗಳಾಗಿವೆ. ಹೀಗೆ ಅಪರಾಧಿ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಡಾ. ಜಾಧವ್ ಆರೋಪಿಸಿದರು.