ನಿಮ್ಮ ಸ್ಥಿತಿಯಲ್ಲಿದ್ದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ: ಶ್ರೀಮಂತ ಪಾಟೀಲ್‌ಗೆ ರಾಜು ಕಾಗೆ ಟಾಂಗ್

By Kannadaprabha NewsFirst Published Oct 22, 2023, 11:30 PM IST
Highlights

ನಿಮಗೆ ಈ ಯೋಜನೆ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ. ನಿಮ್ಮ ಸ್ಥಿತಿಯಲ್ಲಿದ್ದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ ಎಂದು ಹೇಳುವ ಮೂಲಕ ಕಾಲೆಳೆದ ಶಾಸಕ ರಾಜು ಕಾಗೆ 

ಕಾಗವಾಡ(ಅ.22): ಅಧಿಕಾರದಲ್ಲಿದ್ದಾಗ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಲಿಲ್ಲ. ಈಗ ಮತ್ತೇ ಒಂದು ತಿಂಗಳು ಅಧಿಕಾರ ಕೇಳುತ್ತಿದ್ದೀರಿ ಎಂದು ಶಾಸಕ ರಾಜು ಕಾಗೆ ಮಾಜಿ ಸಚಿವ ಶ್ರೀಮಂತ ಪಾಟೀಲರಿಗೆ ಟಾಂಗ್ ಕೊಟ್ಟಿದ್ದಾರೆ.

ತಾಲೂಕಿನ ಉಗಾರ ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಮಾತನಾಡಿದ ಅವರು, ನಿಮಗೆ ಈ ಯೋಜನೆ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ. ನಿಮ್ಮ ಸ್ಥಿತಿಯಲ್ಲಿದ್ದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ ಎಂದು ಹೇಳುವ ಮೂಲಕ ಕಾಲೆಳೆದಿದ್ದಾರೆ. ನನಗೆ ಒಂದು ತಿಂಗಳು ಅಧಿಕಾರ ಕೊಡಿ ನಾನು ಬಸವೇಶ್ವರ ಏತ ನೀರಾವರಿ ಯೋಜನೆಯ ಕಾಲುವೆಗೆ ನೀರು ಹರಿಸುವೆ ಎಂದು ಸಮಯ ಕೇಳಿದ್ದಾರೆ. ಇದಕ್ಕಿಂತ ನಾಚಿಗೇಡಿನ ಸಂಗತಿ ಬೇರೆ ಇಲ್ಲ ಎಂದರು

ಕಾಂಗ್ರೆಸ್‌ ಶಾಸಕರಲ್ಲೇ ಅಸಮಾಧಾನ ಭುಗಿಲೆದ್ದಿದೆ: ಶಾಸಕ ಬಿ.ವೈ.ವಿಜಯೇಂದ್ರ

ಐದು ವರ್ಷ ಅಧಿಕಾರದಲ್ಲಿದ್ದು ಏನು ಮಾಡಿದಿರಿ? ಈಗ ಒಂದು ತಿಂಗಳು ಅಧಿಕಾರದ ಗಡುವು ಕೇಳಲು ತಮಗೆ ಯಾವ ಅರ್ಹತೆ ಇದೆ. ಬಸವೇಶ್ವರ ಏತ ನೀರಾವರಿ ಪೂರ್ಣಗೊಳ್ಳದೆ ಇದ್ದಲ್ಲಿ ನಾನು ರಾಜಕೀಯ ನಿವೃತ್ತಿ ಪಡೆಯುವೆ ಎಂದು ಚುನಾವಣೆಯ ಪೂರ್ವ ಖಿಳೇಗಾಂವ ಬಸವಣ್ಣನ ದೇವಸ್ಥಾನದಲ್ಲಿ ರೈತರಿಗೆ ಪ್ರಮಾಣ ನೀಡಿದ್ದೀರಿ. ಮತ್ತೇ ಚುನಾವಣೆಯಲ್ಲಿ ಯಾವ ಮುಖವಿಟ್ಟು ಮತ ಕೇಳಿದಿರಿ. ರೈತರು ಬಹಳ ಬುದ್ದಿವಂತರು, ಅದಕ್ಕೆ ತಮಗೆ ತಕ್ಕ ಪಾಠ ಕಲಿಸಿ ನನ್ನನ್ನು ಗೆಲ್ಲಿಸಿದ್ದಾರೆ. ನಿಮ್ಮ ಹಾಗೆ ಟೊಳ್ಳು ಭರವಸೆ ನಾನು ನೀಡಲ್ಲ. ತಾವು ಬಸವೇಶ್ವರ ಏತ ನೀರಾವರಿ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಳೆದುಕೊಂಡಿದ್ದೀರಿ. ಈ ಯೋಜನೆಯಲ್ಲಿ ಹಸ್ತಕ್ಷೇಪ ಮಾಡದಿರಿ ಎಂದು ಮಾತಿನಲ್ಲಿ ತಿವಿದಿದ್ದಾರೆ.

ಚಮಕ್ ಕೊಟ್ಟು ಮುಂದೆ ಹೋಗ್ತಿರಬೇಕು ಅಷ್ಟೇ; ಲಕ್ಷ್ಮೀ ಹೆಬ್ಬಾಳ್ಕರ್ ಜೊತೆ ಕೋಲ್ಡ್ ವಾರ್ ಒಪ್ಪಿಕೊಂಡ ಸಾಹುಕಾರ

ಮೊದಲು ರೈತರ ಬಿಲ್ ಕೊಡಿ:

ನಿಜವಾಗಿಯೂ ರೈತರ ಬಗ್ಗೆ ನಿಮಗೆ ಅಷ್ಟೊಂದು ಕಾಳಜಿ ಇದ್ದರೆ ಅವರ ಕಬ್ಬಿನ ಬಾಕಿ ಬಿಲ್ ಕೊಡಿ. ತೂಕದಲ್ಲಿ ಮೋಸ ಮಾಡುವುದು ಬಿಡಿ. ಆ ಮೇಲೆ ರೈತರ ಬಗ್ಗೆ ಮಾತನಾಡಿ ಎಂದು ಚಾಟಿ ಬೀಸಿದರು. ತಮ್ಮ ಅವಧಿಯಲ್ಲಿ ಏನು ಕೆಲಸ ಮಾಡಲಿಲ್ಲ, ಕೇವಲ ಭರವಸೆಗಳನ್ನು ನೀಡಿದಿರಿ. ರೈತರಿಗೆ ತಮ್ಮ ಕಾರ್ಖಾನೆಯ ವತಿಯಿಂದ ನೀರಾವರಿ ಯೋಜನೆಗಳನ್ನು ರೂಪಿಸಿ, ಗಂಗಾ ಕಲ್ಯಾಣ ಯೋಜನೆಯಡಿ ಸಾಲ ಮನ್ನಾ ಮಾಡಿಸುತ್ತೇನೆ ಎಂದು ಹೇಳಿದ್ದೀರಿ. ಈಗ ಯಾಕೆ ರೈತರಿಗೆ ನೋಟಿಸ್ ಕೊಡಿಸುತ್ತಿದ್ದಿರಿ. ಇದಕ್ಕೆ ರೈತರಿಗೆ ಉತ್ತರ ಕೊಡಿ. ನಿಮ್ಮ ಮಾತು ಕೇಳಿ ರೈತರಿಗೆ ಈಗ ಭಿಕ್ಷೆ ಬೇಡುವ ಸ್ಥಿತಿ ಬಂದಿದೆ. ನಿಮಗೆ ರೈತರ ಬಗ್ಗೆ ನಿಜವಾದ ಕಳಕಳಿ ಇದ್ದರೆ ಅವರ, ಮೇಲೆ ಹಾಕಿರುವ ಕೇಸುಗಳನ್ನು ಹಿಂಪಡೆಯಿರಿ ಎಂದು ಟಾಂಗ್ ಕೊಟ್ಟರು.

ಅವರು ಶ್ರೀಮಂತರು, ನಾವು ಬಡವರು. ಅವರಿಗೆ ಬುದ್ಧಿ ಹೇಳುವ ಶಕ್ತಿ ನನಗಿಲ್ಲ. ಸಚಿವರಾಗಿದ್ದರು, ನನಗಿಂತ ಹಿರಿಯರು. ನಿಮಗೆ ಬುದ್ಧಿ ಹೇಳುವಷ್ಟು ದೊಡ್ಡವ ನಾನಲ್ಲ. ನಿಮ್ಮ ಯೋಗ್ಯತೆಗೆ ಇದು ಸರಿಯಲ್ಲ. ಜನ ನಿಮ್ಮನ್ನು ತಿರಸ್ಕರಿಸಿದ್ದಾರೆ, ಸುಮ್ಮನಿರಿ. ಈಗ ಅಧಿಕಾರಕ್ಕೆ ಬಂದಿದ್ದೇವೆ. ಎಲ್ಲ ಕೆಲಸಗಳನ್ನು ಮಾಡುತ್ತೇವೆ. ನೀವು ಕೆಲವು ಒಳ್ಳೆಯ ಕೆಲಸ ಮಾಡಿದ್ದೀರಿ ಅವುಗಳನ್ನು ನಾವು ಸ್ವಾಗತಿಸುತ್ತೇನೆ. ಒಳ್ಳೆಯ ಕೆಲಸ ಮಾಡುತ್ತೇವೆ, ಸಹಕಾರ ನೀಡಿ ಎಂದು ಶಾಸಕ ರಾಜು ಕಾಗೆ ತಿಳಿಸಿದ್ದಾರೆ. 

click me!