
ಹುಬ್ಬಳ್ಳಿ (ಏ.19): ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ಗುಡ್‌ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಯಾಗಿರುವುದು. ಬಿಜೆಪಿಯಲ್ಲಿ ತೀವ್ರ ಸಿಟ್ಟಿಗೆ ಕಾರಣವಾಗಿದೆ. ಈ ಕಾರಣಕ್ಕೆ ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರು ಹುಬ್ಬಳ್ಳಿಯ ಅರವಿಂದ್ ಬೆಲ್ಲದ್ ನಿವಾಸದಲ್ಲಿ ಬಿಜೆಪಿ ವರಿಷ್ಠರ ರಹಸ್ಯ ಸಭೆ ನಡೆಸಿ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಶೆಟ್ಟರ್ ಗೆಲ್ಲಬಾರದು ಎಂದು ಬಿಜೆಪಿ ನಾಯಕರಿಗೆ ಜೆ.ಪಿ. ನಡ್ಡಾ ಖಡಕ್ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಮೂಲಕ ಶೆಟ್ಟರ್ ಕಟ್ಟಿ ಹಾಕಲು ಬಿಜೆಪಿ ರಣತಂತ್ರ ಹೆಣೆದಿದೆ. ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಸಚಿವ ಗೋವಿಂದ್ ಕಾರಜೋಳ, ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ, ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್, ಜಿಲ್ಲಾಧ್ಯಕ್ಷ ಸಂಜಯ್ ಕಪಟ್ಕರ್ ಈ ಸಭೆಯಲ್ಲಿ ಉಪಸ್ಥಿತಿ ಇದ್ದರು.
ಗುರು ಶೆಟ್ಟರ್ ಆಶೀರ್ವಾದ ಪಡೆದ ಶಿಷ್ಯ ಟೆಂಗಿನಕಾಯಿ!
ಹುಬ್ಬಳ್ಳಿಯಲ್ಲಿ ಸೆಂಟ್ರಲ್ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆ ವೇಳೆ ಜಗದೀಶ್ ಶೆಟ್ಟರ್ - ಮಹೇಶ್ ಟೆಂಗಿನಕಾಯಿ ಮುಖಾಮುಖಿಯಾದ ಪ್ರಸಂಗ ನಡೆಯಿತು. ಈ ವೇಳೆ ಶೆಟ್ಟರ್ ಕಾಲಿಗೆ ಬಿದ್ದು ಮಹೇಶ್ ಟೆಂಗಿನಕಾಯಿ ನಮಸ್ಕರಿಸಿದರು. ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ನಾಮಪತ್ರ ಸಲ್ಲಿಕೆ ನಂತರ ಹೇಳಿಕೆ ನೀಡಿ, ನಾಮಪತ್ರ ಸಲ್ಲಿಕೆಗೂ ಮುನ್ನ ಗುರು ಜಗದೀಶ್ ಶೆಟ್ಟರ್ ಆಶೀರ್ವಾದ ಪಡೆದಿದ್ದೇನೆ. ಗುರುವಿನ ಆಶೀರ್ವಾದ ಸಿಕ್ಕಿರೋದ್ರಿಂದ ಖಂಡಿತಾ ಗೆಲುವು ಸಿಗುತ್ತೆ. ಶೆಟ್ಟರ್ ಪಕ್ಷಾಂತರ ಮಾಡಿದ್ದಾರೆ. ಹೀಗಾಗಿ ಬಿಜೆಪಿ ಬೆಂಬಲಿಗರು ಅವರಿಗೆ ಮತ ಹಾಕೋ ಪ್ರಶ್ನೆಯೇ ಇಲ್ಲ. ಸೆಂಟ್ರಲ್ ಕ್ಷೇತ್ರದಲ್ಲಿ ನನ್ನ ಗೆಲುವು ನಿಶ್ಚಿತ ಎಂದರು.
ಹುಬ್ಬಳ್ಳಿಯಲ್ಲಿ ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ಜಗದೀಶ್ ಶೆಟ್ಟರ್, 50 ಸಾವಿರ ಮತಗಳ ಅಂತರದಿಂದ ಗೆದ್ದು ಮತ್ತೊಮ್ಮೆ ವಿಧಾನಸಭೆ ಪ್ರವೇಶ ಮಾಡತ್ತೇನೆ ಎಂದು ಮಹೇಶ ಟೆಂಗಿನಕಾಯಿಗೆ ಗುರುವಿನ ಆಶೀರ್ವಾದ ವಿಚಾರಕ್ಕೆ ಸಂಬಂಧಿಸಿ, ಶಿಷ್ಯನಿಗೆ ಗುರು ಆಶೀರ್ವಾದ ಮಾಡುವುದು ಸಹಜ. ನನಗೆ ಜನರ ಆಶೀರ್ವಾದ ಇದೆ. ನನಗೆ ಟಿಕೆಟ್ ತಪ್ಪಿಸಿದ್ದರಿಂದ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದೇನೆ ಎಂದರು. ಇನ್ನು ಪಕ್ಷಾಂತರಿಗಳಿಗೆ ಜನ ತಕ್ಕಪಾಠ ಕಲಿಸುತ್ತಾರೆಂಬ ನಡ್ಡಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಎಲ್ಲದ್ದಕ್ಕೂ ಜನತೆ ಉತ್ತರ ಕೊಡಲಿದ್ದಾರೆ, ನನ್ನ ಗೆಲವು ಖಚಿತ ಎಂದರು.
ಸವದಿ , ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಗೆ ಯತ್ನಾಳ ಪ್ರತಿಕ್ರಿಯೆ:
ಬಿಜೆಪಿಯ ಅಧಿಕೃತ ಅಭ್ಯರ್ಥಿ ಬಸವರಾಜ್ ಹುಂದ್ರಿ ನಾಮಪತ್ರ ಸಲ್ಲಿಸಿದ ಬಳಿಕ ಹುಕ್ಕೇರಿಯಲ್ಲಿ ಮಾಧ್ಯಮಗಳಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಲಕ್ಷ್ಮಣ್ ಸವದಿ ಮತ್ತು ಜಗದೀಶ್ ಶೆಟ್ಟರ್ ಕಾಂಗ್ರೇಸ್ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದಾರೆ. ಅವರು ಯಾವ ತತ್ವ ಸಿದ್ದಾಂತದ ಆಧಾರದ ಮೇಲೆ ಹೋಗಿದ್ದಾರೆ ಎಂದು ರಾಜ್ಯದ ಜನರಿಗೆ ಗೊತ್ತಾಗಿದೆ. ಅವರು ಸಾಕಷ್ಟು ಅನುಭವಿಸಿ ಪಕ್ಷದಿಂದ ದೊಡ್ಡವರಾಗಿದ್ದಾರೆ. ನಾನು ಅವರಿಗೆ ಇಷ್ಟೇ ಕೇಳಲು ಬಯಸುತ್ತೇನೆ. ಕಾಂಗ್ರೆಸ್ ಸಂಸ್ಕೃತಿ ಲಿಂಗಾಯತ ವಿರೋಧಿ ಸಂಸ್ಕೃತಿಯಾಗಿದೆ. ಕಾಂಗ್ರೆಸ್ ಅಧ್ಯಕ್ಷರು ಮೀಸಲಾತಿ ವಾಪಸ್ ಪಡೆಯುತ್ತೇವೆ ಅಂತ ಹೇಳಿದ್ದಾರೆ. ಜಗದೀಶ ಶೆಟ್ಟರ್ ಹಾಗೂ ಸವದಿಯವರು ಉತ್ತರ ಇದಕ್ಕೆ ಕೊಡಬೇಕು. ಹಲವು ಸಮುದಾಯಗಳಿಗೆ ನಮ್ಮ ಸರ್ಕಾರ ಮೀಸಲಾತಿ ನೀಡಿ ಸಾಮಾಜಿಕ ನ್ಯಾಯ ನೀಡುವ ಕೆಲಸ ಮಾಡಿದೆ ಈ ಎಲ್ಲಾ ಮೀಸಲಾತಿಯನ್ನು ತೆಗೆದು ಹಾಕುತ್ತೆವೆ ಅಂತ ಅಧ್ಯಕ್ಷರು ಹೇಳ್ತಾರೆ ಇದಕ್ಕೆ ಮೊದಲಿಗೆ ಸವದಿ ಮತ್ತು ಶೆಟ್ಟರ್ ಉತ್ತರ ನೀಡಬೇಕು. ಕೇವಲ ಶಾಸಕರಾಗೋ ಸಲುವಾಗಿ ಸ್ವಾರ್ಥದಿಂದ ಹೊರ ಹೋದವರು ಶೆಟ್ಟರ್ ಮತ್ತು ಸವದಿ ಎಂದು ಯತ್ನಾಳ ಹೇಳಿದ್ದಾರೆ.
ಸಿದ್ದರಾಮನಹುಂಡಿಗೆ ಭೇಟಿ ಕೊಟ್ಟ ಸಿದ್ದು, ಸೊಸೆ-ಮೊಮ್ಮಗನ ಜತೆ ಸೆಲ್ಫಿಗೆ ಮುಗಿಬಿದ್ದ ಜನ!
ಸತೀಶ್ ಜಾರಕಿಹೊಳಿಗೆ ಟಾಂಗ್:
ಧಾರ್ಮಿಕ ರೀತಿಯಲ್ಲಿ ಹಿಂದೂ ಧರ್ಮದ ಸಂಸ್ಕೃತಿಯಲ್ಲಿ ನಾವು ನಾಮಪತ್ರ ಸಲ್ಲಿಕೆ ಮಾಡಿದ್ದೀವಿ. ಮೂಢ ನಂಬಿಕೆ ಹಾಗೂ ಹಿಂದೂ ಶಬ್ಧ ಅಸಯ್ಯ ಎಂದವರು ಸುಡುಗಾಡಿಗೆ ಹೋಗಿ ನಾಮಪತ್ರ ಪೂಜೆ ಮಾಡಲಿ. ನಂತರ ನಾಮಪತ್ರ ಸಲ್ಲಿಕೆ ಮಾಡಲಿ ಎಂದು ಹೆಸರು ಹೇಳದೆ ಸತೀಶ್ ಜಾರಕಿಹೊಳಿಗೆ ಟಾಂಗ್ ನೀಡಿದ ಯತ್ನಾಳ.
ಬಿಜೆಪಿ ಬಿಡಲು ಈಶ್ವರಪ್ಪ ಹೊಣೆ ಆಯನೂರು ಮಂಜುನಾಥ್ ಗಂಭೀರ ಆರೋಪ,
ಕ್ಷೇತ್ರದಲ್ಲಿ ಮಾರುತಿ ಅಷ್ಟಗಿಯವರನ್ನು ಯಾಕೆ ಹಿಡಿಯುವ ಕೆಲಸ ಆಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಯತ್ನಾಳ, ಯಾವ ಮಾರುತಿ ಅಷ್ಟಗಿ ಕುಷ್ಟಗಿ ನಿಂತರೂ ಕೆಲಸ ಆಗೋದಿಲ್ಲ. ಅವರು ಕಳೆದ ಬಾರಿಯೇ ಕಡೆಯ ಎರಡು ದಿನಗಳಲ್ಲಿ ಒಳ್ಳೆಯ ರೀತಿಯಲ್ಲಿ ಚುನಾವಣೆ ಮಾಡಿದ್ದರೆ ಶಾಸಕಾರಾಗುತ್ತಿದ್ರು ಎಂದು ಹೇಳಿದ್ರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.