ಗೂಂಡಾ ವರ್ತನೆ ಹಾಗೂ ಟಾರ್ಗೆಟ್ ರಾಜಕಾರಣ ಏನೇ ಇದ್ದರು ಅದು ಕಾಂಗ್ರೆಸ್ ಸಂಸ್ಕೃತಿ ಎಂದು ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಟೀಕೆಗೆ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದರು.
ರಾಮನಗರ (ಜು.12): ಗೂಂಡಾ ವರ್ತನೆ ಹಾಗೂ ಟಾರ್ಗೆಟ್ ರಾಜಕಾರಣ ಏನೇ ಇದ್ದರು ಅದು ಕಾಂಗ್ರೆಸ್ ಸಂಸ್ಕೃತಿ ಎಂದು ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಟೀಕೆಗೆ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಗುಂಡೂವರ್ತನೆ ಯಾರಾದರು ಪ್ರಾರಂಭ ಮಾಡಿದ್ದರೆ ಈ ಜಿಲ್ಲೆಯ ಕಾಂಗ್ರೆಸ್ ನಾಯಕರು. ಕುಮಾರಸ್ವಾಮಿ ಅಧಿಕಾರಿಗಳಿಗೆ ಕೆಲಸ ಮಾಡಲು ಸ್ವಾತಂತ್ರ್ಯ ನೀಡಿದ್ದರೇ ಹೊರತು ಎಂದೂ ಹಸ್ತಕ್ಷೇಪ ಮಾಡಿದವರಲ್ಲ ಎಂದರು.
ಬಿಜೆಪಿ ತನ್ನ ಆಡಳಿತದ ಅವಧಿಯಲ್ಲಿ ಟಾರ್ಗೆಟ್ ರಾಜಕಾರಣ ಮಾಡಲಿಲ್ಲ. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಜೆಡಿಎಸ್ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತದೆ. ಈಗ ಹಳ್ಳಿಮಾಳ ಸೊಸೈಟಿ ಅಧ್ಯಕ್ಷರ ಚುನಾವಣೆ ವಿಚಾರದ ಹೋರಾಟಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಕಾರ್ಯಕರ್ತರ ಮೇಲೆ ಸುಳ್ಳು ಎಫ್ ಐಆರ್ ಗಳನ್ನು ದಾಖಲಿಸುತ್ತಾರೆ. ಅಂತಹ ನೂರು ಎಫ್ ಐಆರ್ ದಾಖಲಿಸಿದರೂ ಹೆದರುವುದಿಲ್ಲ ಎಂದು ಕಿಡಿಕಾರಿದರು. ಕಂದಾಯ ಭವನದ ಗಾಜು ಒಡೆದಾಗ ಪೊಲೀಸರು ಅಲ್ಲಿಯೇ ಇದ್ದರು. ಆ ಗಾಜು ಒಡೆಯಲು ಏನು ಕಾರಣ ಎಂಬುದನ್ನು ಪೊಲೀಸರು ವಿಡಿಯೋ ಇದ್ದರೆ ಪರಿಶೀಲಿಸಲಿ.
ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರೊಂದಿಗೆ ಕೆಲ ಪೊಲೀಸ್ ಅಧಿಕಾರಿಗಳು ಅವಾಚ್ಯ ಪದಗಳನ್ನು ಬಳಕೆ ಮಾಡಿದರು. ಬೇಕಂತಲೇ ನಮ್ಮನ್ನು ಪ್ರಚೋದನೆ ಮಾಡಿದರು ಎಂದು ಆರೋಪಿಸಿದರು. ಈವರೆಗೆ ದೇವೇಗೌಡ ಮತ್ತು ಕುಮಾರಸ್ವಾಮಿರವರು ಅಧಿಕಾರಿಗಳನ್ನು ಗೌರವದಿಂದ ನಡೆಸಿಕೊಂಡು ಬಂದಿದ್ದಾರೆ. ಪೊಲೀಸ್ ಠಾಣೆಗಳಲ್ಲಿ ಯಾರ ಮೇಲೂ ಎಫ್ ಐಆರ್ ದಾಖಲಿಸದೆ ಮಾತುಕತೆಯಲ್ಲೇ ಸಮಸ್ಯೆ ಬಗೆಹರಿಸುವಂತೆ ಹೇಳಿ ಆರೋಗ್ಯಕರ ವಾತಾವರಣ ಸೃಷ್ಟಿ ಮಾಡಿದ್ದರು. ಆದರೀಗ ಕೆಲ ಪೊಲೀಸ್ ಅಧಿಕಾರಿಗಳು ಕಾನೂನು, ಶಾಂತಿ ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಮರೆತು ಸರ್ಕಾರದ ಏಜೆಂಟ್ ರಂತೆ ವರ್ತಿಸುತ್ತಿದ್ದಾರೆ.
ಅಂತಿಮ ಘಟ್ಟದಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಯಾವುದೊ ಪಕ್ಷದ ನಾಯಕರ ಕೈಗೊಂಬೆಯಾಗಿ ನಡೆದುಕೊಳ್ಳುವ ಬದಲು ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದುಕೊಳ್ಳಲಿ. ನೀವು ಯಾವುದೊ ಒಂದು ಪಕ್ಷದ ಏಜೆಂಟರಂತೆ ಕೆಲಸ ಮಾಡಿದರೆ ನಾವು ಕೈಕಟ್ಟಿಕೊಂಡು ಕೂರಲು ಆಗುವುದಿಲ್ಲ ಎಂದು ಎಚ್ಚರಿಸಿದರು. ಹಳ್ಳಿಮಾಳ ಸೊಸೈಟಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತರು ಎಷ್ಟಿದ್ದರು. ಅಧ್ಯಕ್ಷರ ಚುನಾವಣೆ ವೇಳೆ ನಾಮಪತ್ರ ವಿರೂಪಗೊಳಿಸಿದ ಜೆಡಿಎಸ್ ನಿರ್ದೇಶಕರ ವರ್ತನೆ ಸಮರ್ಥಿಸಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ತಬ್ಬಿಬ್ಬಾದ ನಿಖಿಲ್ ಕುಮಾರಸ್ವಾಮಿ, ಹಿಂದಿನ ವಿಚಾರ ನನಗೇನು ಗೊತ್ತಿಲ್ಲ. ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ. ಶಾಂತಿಯುತ ಚುನಾವಣೆ ನಡೆಯಬೇಕು ಎಂದು ಹಾರಿಕೆ ಉತ್ತರ ನೀಡಿದರು.