ಎಸ್ಸಿ, ಎಸ್ಟಿ ಹಣ ಬೇರೆ ಯೋಜನೆಗೆ ಬಳಸಿದ್ರೆ ಅಪರಾಧವಲ್ಲ: ಸಚಿವ ಚಲುವರಾಯಸ್ವಾಮಿ

By Kannadaprabha News  |  First Published Jul 13, 2024, 12:45 AM IST

ಗೃಹಲಕ್ಷ್ಮೀ ಯೋಜನೆಯ ಹಣವನ್ನು ನಾವು ನಿಲ್ಲಿಸಿಲ್ಲ, ನಮ್ಮ ಐದು ಗ್ಯಾರಂಟಿಗಳಲ್ಲಿ ಯಾವುದನ್ನು ನಿಲ್ಲಿಸಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ. 


ಹಾಸನ (ಜು.13): ಗೃಹಲಕ್ಷ್ಮೀ ಯೋಜನೆಯ ಹಣವನ್ನು ನಾವು ನಿಲ್ಲಿಸಿಲ್ಲ, ನಮ್ಮ ಐದು ಗ್ಯಾರಂಟಿಗಳಲ್ಲಿ ಯಾವುದನ್ನು ನಿಲ್ಲಿಸಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ. ನಗರದ ಜಿಲ್ಲಾ ಪಂಚಾಯತ್ ಹೇಮಾವತಿ ಸಭಾಂಗಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು. ಇದೇ ವೇಳೆ ಮುಂದೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಗಲು ಕನಸು ಕಾಣುತ್ತಿದ್ದು, ಬೇಕಾದರೇ ಮಂಡ್ಯದಲ್ಲೂ ಮನೆ ಮಾಡಿ ಅಲ್ಲಿಂದಲೇ ಡೆಲ್ಲಿಗೆ ಹೋಗಲಿ ಎಂದು ಚಲುವರಾಯಸ್ವಾಮಿ ವ್ಯಂಗ್ಯವಾಡಿದರು. ವಿರೋಧ ಪಕ್ಷ ನಾಯಕ ಆರ್ ಅಶೋಕ್ ವಿರುದ್ಧವೂ ಸಚಿವ ಚೆಲುವರಾಯಸ್ವಾಮಿ ವಾಗ್ದಾಳಿ ನಡೆಸಿ, ವಿರೋಧ ಪಕ್ಷದ ನಾಯಕನಾಗಬೇಕು ಎಂದರೆ ಅದಕ್ಕೆ ಸಮರ್ಥನಾಗಬೇಕು ಎಂದೇನಿಲ್ಲ ಎಂದು ಲೇವಡಿ ಮಾಡಿದರು.

ಸರ್ಕಾರ ಉತ್ತರಿಸುತ್ತೆ: ಪರಿಶಿಷ್ಟ ಜಾತಿ, ಪಂಗಡಗಳ ಮೀಸಲು ಹಣವನ್ನು ಗ್ಯಾರಂಟಿಗೆ ಬಳಸಿಕೊಂಡಿದ್ದಕ್ಕೆ ಕೇಂದ್ರ ಆಯೋಗದಿಂದ ನೋಟಿಸ್ ಜಾರಿ ಮಾಡಿರುವ ವಿಚಾರವಾಗಿ ಮಾತನಾಡಿ, ಇದಕ್ಕೆ ನಮ್ಮ ಸರ್ಕಾರ ಉತ್ತರ ಕೊಡುತ್ತದೆ. ಎಸ್ಸಿ, ಎಸ್ಟಿ ಹಣವನ್ನು ಇಂತದಕ್ಕೆ ಉಪಯೋಗಿಸಿಕೊಳ್ಳಬೇಕು ಎಂದಿಲ್ಲ. ಮೀಸಲಿರುವ ೩೮ ಸಾವಿರ ಕೋಟಿ ಹಣವನ್ನು ಎಸ್ಸಿ, ಎಸ್ಟಿ ಅವರಿಗೆ ತಲುಪಿಸಬೇಕು ಅಷ್ಟೇ. ಈ ಕಾನೂನನ್ನ ತಂದಿದ್ದೇ ಸಿದ್ದರಾಮಯ್ಯನವರು. ಸಿದ್ದರಾಮಯ್ಯನವರೇ ಯೋಜನೆ ತಂದ್ರು ಎಂಬುದನ್ನು ನೀವು ಕೂಡ ಅಪ್ರಿಷಿಯೇಟ್ ಮಾಡುವುದಿಲ್ಲ. ಈ ಯೋಜನೆಯನ್ನು ಕೆಲ ರಾಜ್ಯಗಳು ತಾವು ಕೂಡ ಜಾರಿಗೆ ತರಲು ಯೋಜಿಸಿವೆ. ಅದು ಎಲ್ಲೂ ಪ್ರಚಾರ ಆಗೊಲ್ಲ. ೩೮,೦೦೦ ಕೋಟಿಯನ್ನ ಬೇರೆ ಜನರಿಗೆ ಕೊಟ್ಟರೆ ಮಾತ್ರ ಅಪರಾಧ. ಬೇರೆ ಯಾವುದೇ ಯೋಜನೆಗೆ ಹಣ ನೀಡಿದ್ರೆ ಅದು ಅಪರಾಧ ಅಲ್ಲ. 

Latest Videos

undefined

ಅಂತಿಮ ಘಟ್ಟದಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

ಈ ವಿಚಾರವನ್ನು ವಿರೋಧ ಪಕ್ಷಗಳು ಟೀಕೆಗೋಸ್ಕರ ಮಾಡುತ್ತಿರಬಹುದು! ಆಯೋಗಕ್ಕೆ ಯಾರಾದರೂ ತಪ್ಪು ಮಾಹಿತಿ ನೀಡಿದ್ದಾರೋ ಏನೋ ಗೊತ್ತಿಲ್ಲ. ಇದರಿಂದ ಯಾರದಾದರೂ ಸಂಬಳವನ್ನು ನಿಲ್ಲಿಸಿದ್ದೇವೆಯಾ? ಹೊರಗುತ್ತಿಗೆ ಆಧಾರದವರಿಗೂ ಸಂಬಳವನ್ನು ನಿಲ್ಲಿಸಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯವನ್ನು ನಾವು ನಿಲ್ಲಿಸಿದ್ದೇವಾ! ವಿರೋಧ ಪಕ್ಷದವರು ಕೂಗಾಡಿವರೆಗೂ ಕೂಗಾಡಿಕೊಳ್ಳಲಿ ಎಂದು ಸುಮ್ಮನೆ ಇದ್ದೇವೆ ಅಷ್ಟೇ. ರಾಜ್ಯದ ಬಜೆಟ್ ಸೇರಿದಂತೆ ಯಾವುದೇ ಅಭಿವೃದ್ಧಿ ಕಾರ್ಯವನ್ನು ನಾವು ನಿಲ್ಲಿಸಿಲ್ಲ. ಸಿಎಸ್‌ಆರ್‌ ಫಂಡ್‌ ಅನ್ನು ಕೂಡ ನಾವು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿದ್ದೇವೆ. ಇದನ್ನೆಲ್ಲಾ ವಿರೋಧ ಪಕ್ಷಗಳು ಹೇಳೋದೇ ಇಲ್ಲ. ಇಲ್ಲ ಸಲ್ಲದ್ದನ್ನು ಉಪಯೋಗಿಸಿ ನಮ್ಮ ವಿರುದ್ಧ ಮಾತನಾಡುತ್ತಾರೆ ಎಂದು ವಿರೋಧ ಪಕ್ಷದವರ ಹೇಳಿಕೆಗೆ ಸಿಡಿಮಿಡಿಗೊಂಡರು.

ಹಗಲು ಕನಸು: ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ವಿಚಾರವಾಗಿ ಮಾತನಾಡಿ, ಬೆಂಗಳೂರು ಅಂದರೆ ಅದಕ್ಕೆ ಒಂದು ಬ್ರಾಂಡ್ ಇರುವುದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಹೆಸರುವಾಸಿಯಾಗಿದೆ. ಬೆಂಗಳೂರು ಗ್ರಾಮಾಂತರ ಇದ್ದುದ್ದು ರಾಮನಗರ ಜಿಲ್ಲೆಯಾಯಿತು. ಬೆಂಗಳೂರು ಎಂದು ಮಾಡಿದ್ದರೇ ವ್ಯಾಲ್ಯೂ ಜಾಸ್ತಿ ಆಗುತ್ತಿತ್ತು. ನಮಗೆ ಸ್ಟೇಟಸ್ ಸಿಗುತ್ತಿತ್ತು. ಬೆಂಗಳೂರು ಎನ್ನುವುದಕ್ಕೂ ಹಾಸನ ಮಂಡ್ಯ ಅನ್ನೋದು ವ್ಯತ್ಯಾಸ ಇದೆ. ಬೆಂಗಳೂರಿನಲ್ಲಿ ಬದುಕುವರೆಗೂ ನಮಗೂ ನಿಮಗೂ ಒಂದೇನಾ. ಈ ಎಲ್ಲಾ ದೃಷ್ಟಿಯಿಂದ ಅದನ್ನು ಬೆಂಗಳೂರು ದಕ್ಷಿಣ ಎಂದು ಮಾಡಲು ಪಾಪ ಮುಂದಾಗಿದ್ದಾರೆ. ಪಾಪ ಕುಮಾರಸ್ವಾಮಿ ಅವರು ಆಗಲೇ ಹಗಲು ಕನಸು ಕಾಣುತ್ತಿದ್ದಾರೆ. ಮುಂದಕ್ಕೆ ಮುಖ್ಯಮಂತ್ರಿ ಆಗುತ್ತೇನೆ ಎನ್ನುತ್ತಿದ್ದಾರೆ. ಬಿಜೆಪಿಯವರನ್ನು ಎಲ್ಲಿಗೆ ಕಳಿಸುತ್ತಾರೋ ಗೊತ್ತಿಲ್ಲ ಎಂದರು.

ಮುಜುಗರ ಇಲ್ಲ: ವಾಲ್ಮೀಕಿ ನಿಗಮದಲ್ಲಿ ಹಗರಣ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಈ ಪ್ರಕರಣದಿಂದ ನಮಗೆ ಯಾವ ಮುಜುಗರ ಆಗೊಲ್ಲ. ಹಿಂದಿನ ಬಿಜೆಪಿ ಸರ್ಕಾರ ಸೇರಿದಂತೆ ಹಲವು ಸರ್ಕಾರಗಳಲ್ಲಿ ಈ ರೀತಿ ನಡೆದಿದೆ. ತನಿಖೆ ನಡೆಯುತ್ತಿದೆ ಈಗಲೇ ತಪ್ಪಿತಸ್ಥರು ಎಂದು ತೀರ್ಮಾನ ಮಾಡಲು ಆಗೋದಿಲ್ಲ. ಮಂತ್ರಿಗಳಿಂದ ಆ ರೀತಿ ನಿರ್ದೇಶನ ಹೋಗಿಲ್ಲ ಎಂಬ ಮಾಹಿತಿ ನಮಗಿದೆ. ಇ.ಡಿ ಮತ್ತು ಎಸ್ ಐ ಟಿ ಎರಡು ಕೂಡ ತನಿಖೆ ನಡೆಸುತ್ತಿದ್ದು ತನಿಖಾ ವರದಿ ಬರಲಿ ನೋಡೋಣ ಎಂದರು.

ಅಧಿಕೃತ ವಿರೋಧ ಪಕ್ಷ ನಾಯಕರು ೧೩೬ ಶಾಸಕರು ಇರೋ ಪ್ರಜಾಪ್ರಭುತ್ವ ಸರ್ಕಾರವನ್ನು ಕಿತ್ತಾಕುತ್ತೇವೆ ಎನ್ನುತ್ತಾರಲ್ಲ. ಆ ಥರ ಬಾಯಲ್ಲಿ ಮಾತನಾಡುವುದೇ ಒಂದು ದೊಡ್ಡ ಅಪರಾಧ ಅವರಿಗೆ ಶಿಕ್ಷೆ ಆಗಬೇಕು. ಜನತಂತ್ರ ವ್ಯವಸ್ಥೆಯಲ್ಲಿ ಯಾವುದೇ ಜನಪ್ರತಿನಿಧಿ ಆ ರೀತಿ ಮಾತನಾಡಬಾರದು. ಮುಖ್ಯಮಂತ್ರಿ ಅವರ ಪತ್ನಿಗೆ ಅವರ ಕೊಟ್ಟ ಅವರ ಅಣ್ಣ ಕೊಟ್ಟಿರುವಂಥ ಜಮೀನನ್ನ ಯಾವುದೇ ನೋಟಿಸ್ ನೀಡದೆ ಆ ಜಾಗವನ್ನು ಮೂಡಾದವರು ಉಪಯೋಗಿಸಿ ಅದಕ್ಕೆ ತತ್ಸಮಾನವಾಗಿ ಸಿಎಂ ಪತ್ನಿಯವರಿಗೆ ಜಾಗ ನೀಡಿದ್ದಾರೆ. ಯುಡಿ ಆಕ್ಟ್ ಪ್ರಕಾರ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಸೈಟ್ ನೀಡಲಾಗಿದೆ. ಬಿಜೆಪಿ ಅಧ್ಯಕ್ಷರು ಇದ್ದಾಗ ಈ ಘಟನೆ ನಡೆದಿದೆ. ಇದಕ್ಕೆ ಯಾರು ನಿವೇಶನಗಳನ್ನು ಕೊಟ್ಟರು ಎನ್ನೋದು ಕಾರಣವೇ ಹೊರತು ಮುಖ್ಯಮಂತ್ರಿಗಳ ಅಲ್ಲವೆಯಲ್ಲ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಈ ಪ್ರಕರಣ ನಡೆದಿರೋದು. ತನಿಖೆ ಆಗಲಿ ಈಗಲೇ ಆತುರ ಏಕೆ ಎಂದು ಹೇಳಿದರು.

ವಾಲ್ಮೀಕಿ ಪ್ರಕರಣದಲ್ಲಿ ಮಂತ್ರಿಗಳು-ಶಾಸಕರು ಭಾಗಿಯಾಗಿದ್ದರೆ ಅದು ಖಂಡಿತ ಕಳಂಕ: ಸಚಿವ ಸತೀಶ್‌ ಜಾರಕಿಹೊಳಿ

ಅನಧಿಕೃತ ಬಿ.ಪಿ.ಎಲ್. ಕಾರ್ಡ್ ಬಗ್ಗೆ ಪರಿಶೀಲನೆ: ಬಿಪಿಎಲ್ ಕಾರ್ಡ್ ಮರು ಪರಿಶೀಲನೆಗೆ ಸಿಎಂ ಸೂಚನೆ ನೀಡಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ತಮಿಳುನಾಡಿನಲ್ಲಿ ೪೦ರಿಂದ ೪೫ ಪರ್ಸೇಂಟ್ ಮಾತ್ರ ಬಿಪಿಎಲ್ ಕಾರ್ಡ್‌ಗಳಿವೆ. ನಮ್ಮ ರಾಜ್ಯದಲ್ಲಿ ೮೦ರಿಂದ ೮೫ ಪರ್ಸೆಂಟ್‌ನಷ್ಟು ಬಿಪಿಎಲ್ ಕಾರ್ಡ್‌ದಾರರಿದ್ದಾರೆ. ಸಾವಿರ ಎಕರೆ ತೆಂಗಿನ ಮರ ಇರುವವರಿಗೂ ಒಂದು ಎಕರೆ ಇರುವವರಿಗೂ ಬಿಪಿಎಲ್ ಕಾರ್ಡ್ ಇದೆ. ಇಬ್ಬರಿಗೂ ಅಕ್ಕಿ ಸಿಗುತ್ತೆ. ಒಬ್ಬ ಮಾರ್ತಾನೆ, ಒಬ್ಬ ಉಪಯೋಗಿಸುತ್ತಾನೆ. ಅನಧಿಕೃತವಾಗಿ ಬಿಪಿಎಲ್ ಪಡಿತರ ಕಾರ್ಡ್ ಹೊಂದಿರುವವರ ಬಗ್ಗೆ ಸರ್ಕಾರಕ್ಕೆ ದೂರು ಬಂದ ಹಿನ್ನೆಲೆಯಲ್ಲಿ ಅದನ್ನು ನಾವು ಪರಿಶೀಲಿಸುತ್ತಿದ್ದೇವೆ ಅಷ್ಟೇ. ಕರ್ನಾಟಕದಲ್ಲಿ ೮೫% ಬಡವರಿದ್ದರೆ ಎಲ್ಲರಿಗೂ ಕೊಡುತ್ತೇವೆ. ಕರ್ನಾಟಕದಲ್ಲಿ ೮೦ ರಿಂದ ೮೫% ಬಡವರಿದ್ದಾರೆ ಎಂಬುದನ್ನು ನೀವು ನಾವು ನಂಬೋಕಾಗಲ್ಲ ಅನ್ನೋದು ಗೊತ್ತಿದೆ ಎಂದರು.

click me!