
ಮೈಸೂರು (ಆ.11): ಡಿ.ಕೆ. ಶಿವಕುಮಾರ್ ಅವರು ದೇವೇಗೌರ ವಯಸ್ಸಿಗೆ ಮರ್ಯಾದೆ ಕೊಡುವುದನ್ನು ಕಲಿಯಬೇಕು. ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ಇಲ್ಲವಾದರೆ ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಬಿಜೆಪಿ- ಜೆಡಿಎಸ್ ಆಯೋಜಿಸಿದ್ದ ಮೈಸೂರು ಚಲೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಮತದಾರರು ಮೈತ್ರಿ ಪಕ್ಷಕ್ಕೆ ಹೆಚ್ಚಿನ ಬಹುಮತ ನೀಡಿ ಮೋದಿ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಇದರಿಂದ ಆಡಳಿತ ಪಕ್ಷಕ್ಕೆ ತಳಮಳ ಸೃಷ್ಟಿಯಾಗಿದೆ ಎಂದರು.
ನಾಳೆ ಚುನಾವಣೆ ಎದುರಾದರೆ ಏನು? ಎಂಬ ತಳಮಳ ಸರ್ಕಾರಕ್ಕೆ ಇದೆ. ನಾನು ಮತ್ತು ವಿಜಯೇಂದ್ರ ಅವರು ಅಣ್ಣ- ತಮ್ಮಂದಿರಂತೆ ಇದ್ದೇವೆ. ಜನಾಂದೋಲನ ಸಮಾವೇಶದ ಪಾಪವನ್ನು ವರುಣ ದೇವ ತೊಳೆದಿದ್ದಾನೆ. ನಾನು ಮತ್ತು ವಿಜಯೇಂದ್ರ ಅವರು ಮೈಸೂರಿಗೆ ಕಾಲಿಡುತ್ತಲೇ ಜೋರು ಮಳೆ ಬಂದು ಪಾಪ ತೊಳೆದಿದೆ. ಸಿದ್ದರಾಮಯ್ಯ ಅವರು ತುಂಬಾ ಹಿರಿಯರು, ಅನುಭವಸ್ಥರು. ಅವರ ಮೇಲೆ ಗೌರವವಿದೆ. ಆದರೆ ಅವರು ಮೂಲ ಜನತಾ ಪರಿವಾರದವರು. ನಮ್ಮ ಪಕ್ಷದಿಂದ ಆಯ್ಕೆಯಾಗಿ ಉಪ ಮುಖ್ಯಮಂತ್ರಿ ಆಗಿದ್ದರು. ಆಗ ಸೋನಿಯಾ ಗಾಂಧಿ ವಿದೇಶಿ ಮಹಿಳೆ ಎಂದಿದ್ದರು.
ಕಾಂಗ್ರೆಸ್ ಗೆ ಬಂದ ಮೇಲೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿ ಕೇಂದ್ರಕ್ಕೆ ಕಳುಹಿಸಿದರು. ಡಾ.ಜಿ. ಪರಮೇಶ್ವರ್ ಅವರನ್ನು ಸೋಲಿಸಿದರು. ವಿ. ಶ್ರೀನಿವಾಸ ಪ್ರಸಾದ್ ಅವರನ್ನು ಮಂತ್ರಿ ಮಂಡಲದಿಂದ ಆಚೆ ಹಾಕಿದರು. ಇದೇನಾ ನೀವು ಅಹಿಂದ ವರ್ಗಕ್ಕೆ ನೀಡಿದ ಕೊಡುಗೆ? ಎಂದು ಪ್ರಶ್ನಿಸಿದರು. ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ನಮ್ಮ ಮೈಸೂರು ಚಲೋ ಹೋರಾಟ ಯಶಸ್ವಿಯಾಗಿದೆ. ಕಾಂಗ್ರೆಸ್ ದುರಾಡಳಿತ ನಡೆಸುತ್ತಿದೆ. ಸರ್ಕಾರ ದಲಿತರ ಉದ್ಧಾರಕ್ಕೆ ಅನುದಾನ ನಿಗದಿಪಡಿಸಿದರೆ ಉದ್ಧಾರ ಆಗಲ್ಲ. ಬಳಕೆಯಿಂದ ಉದ್ದಾರವಾಗಲಿದೆ ಎಂದು ತಜ್ಞರು ಹೇಳಿದ್ದಾರೆ. ಆಂದೋಲನ ಮಾಡಬೇಕಿದ್ದು ನಾವು, ಅಧಿಕಾರದಲ್ಲಿ ಇರುವ ನೀವಲ್ಲ. ಅದು ಸರ್ಕಾರ ವಿರೋಧಿ ಆಂದೋಲನ. ಪರವಾದ ಆಂದೋಲನವಲ್ಲ ಎಂದು ಟೀಕಿಸಿದರು.
ಮುಡಾ, ವಾಲ್ಮೀಕಿ ಹಗರಣದಲ್ಲಿ ಸಿಎಂ ಆಗಲಿ ಪಿಎಂ ಆಗಲಿ ಶಿಕ್ಷೆ ಆಗಲಿ: ಎಂಟಿಬಿ ನಾಗರಾಜ್
ಮತ್ತೋರ್ವ ಮಾಜಿ ಸಚಿವ ಭೈರತಿ ಬಸವರಾಜು ಮಾತನಾಡಿ, ನಾವು ಕಾಂಗ್ರೆಸ್ ದುರಾಡಳಿತ ತಿಳಿಸುವ ಕೆಲಸ ಮಾಡುತ್ತಿದ್ದೆವೆ. ಮಳೆ ಬಂದು ತೊಂದರೆಯಾದರೂ ಜನರ ಕಷ್ಟ ಸುಖ ಕೇಳಿಲ್ಲ. ಆದರೆ ನಮ್ಮ ಸರ್ಕಾರದ ಅವಧಿಯಲ್ಲಿ ಸಮರೋಪಾದಿಯಲ್ಲಿ ಪರಿಹಾರ ವಿತರಿಸಿದ್ದಾಗಿ ಹೇಳಿದರು. ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಸರ್ಕಾರದ ಮಟ್ಟದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಈ ಹೋರಾಟದಲ್ಲಿ ಗೆಲುವಾಗಬೇಕು, ನಮ್ಮ ಸರ್ಕಾರ ಅಧಿಕಾರಕ್ಕೆ ಬರಬೇಕು. ಸಮಾವೇಶಕ್ಕೆ ಬರುವ ಜನರಿಗೆ ತೊಂದರೆ ಆಗುತ್ತಿದೆ. ಪೊಲೀಸರು ಜನರ ವಿರುದ್ಧವಾದರೆ ನಾವು ಹೊರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.