ಮತ್ತೆ ಯಡಿಯೂರಪ್ಪ ಜೊತೆ ಜೆಡಿಎಸ್‌ನ ಹೊರಟ್ಟಿಭೇಟಿ ಸಸ್ಪೆನ್ಸ್| 2 ವಾರದಲ್ಲಿ 2 ಬಾರಿ ಭೇಟಿ: ಬಿಜೆಪಿ ಸೇರ್ತಾರಾ?| ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆಗೆ ಭೇಟಿ ಮಾಡಿದ್ದೆ ಅಷ್ಟೆ: ಹೊರಟ್ಟಿ
ಬೆಂಗಳೂರು[ಡಿ.18]: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಜೆಡಿಎಸ್ ಹಿರಿಯ ನಾಯಕ ಬಸವರಾಜ ಹೊರಟ್ಟಿಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಕಳೆದ ವಾರವಷ್ಟೇ ಹೊರಟ್ಟಿಅವರು ಜ್ಞಾನಜ್ಯೋತಿ ಸಭಾಂಗಣದ ಬಳಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಮಂಗಳವಾರ ರೇಸ್‌ಕೋರ್ಸ್ ರಸ್ತೆಯಲ್ಲಿನ ಶಕ್ತಿ ಭವನದಲ್ಲಿ ಮತ್ತೊಮ್ಮೆ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಹೊರಟ್ಟಿಅವರು ಪದೇ ಪದೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತಿರುವುದು ರಾಜಕೀಯ ವಲಯದಲ್ಲಿ ನಾನಾ ರೀತಿಯಲ್ಲಿ ವ್ಯಾಖ್ಯಾನಕ್ಕೆ ಕಾರಣವಾಗಿದ್ದು, ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಗೆ ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
ಆದರೆ ಇದನ್ನು ತಳ್ಳಿಹಾಕಿರುವ ಬಸವರಾಜ ಹೊರಟ್ಟಿಅವರು, ಅಭಿವೃದ್ಧಿ ಕಾರ್ಯಗಳ ಸಂಬಂಧ ಭೇಟಿ ಮಾಡಲಾಗಿದೆಯೇ ಹೊರತು ಪಕ್ಷ ತೊರೆಯುವಂತಹ ನಿರ್ಧಾರ ಮಾಡಿಲ್ಲ. ಅಭಿವೃದ್ಧಿ ಕೆಲಸ ಕುರಿತು ಚರ್ಚೆ ನಡೆಸುವ ಸಂಬಂಧ ಆಗಾಗ್ಗೆ ಭೇಟಿ ಮಾಡುತ್ತಿದ್ದೇನೆ. ಇದಕ್ಕೆ ರಾಜಕೀಯ ಬೆರೆಸುವುದು ಸೂಕ್ತವಲ್ಲ ಎಂದು ಹೇಳಿದರು.
ಕಾರಜೋಳ ಒಬ್ಬರೇ ಡಿಸಿಎಂ ಸಾಕು:
ಗೋವಿಂದ ಕಾರಜೋಳ ಒಬ್ಬರೇ ಉಪಮುಖ್ಯಮಂತ್ರಿಯಾಗಿದ್ದರೆ ಸಾಕು. ಬಿಜೆಪಿಯಲ್ಲಿ ಒಂದೇ ಉಪಮುಖ್ಯಮಂತ್ರಿ ಹುದ್ದೆ ಇರಬೇಕು. ಒಬ್ಬರಿಗಿಂತ ಹೆಚ್ಚು ಎಷ್ಟುಜನರನ್ನು ಮಾಡಿದರೂ ಅದಕ್ಕೆ ಅರ್ಥ ಇಲ್ಲ. ಸಚಿವ ಗೋವಿಂದ ಕಾರಜೋಳ ಒಬ್ಬರೇ ಉಪಮುಖ್ಯಮಂತ್ರಿಯಾಗಿ ಸಾಕು ಎಂದರು.
ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಜೆಡಿಎಸ್ ಶಾಸಕರಾದ ಸುರೇಶ್‌ಗೌಡ ಮತ್ತು ರವೀಂದ್ರ ಶ್ರೀಕಂಠಯ್ಯ ಸೇರಿದಂತೆ ಇತರರು ಸಹ ಬಿಜೆಪಿ ಸೇರ್ಪಡೆಯಾಗುತ್ತಾರೋ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ. ಆದರೆ, ಇದರ ಬಗ್ಗೆ ಬಹಳ ಚರ್ಚೆಯಾಗುತ್ತಿದೆ. ಅಧಿಕಾರ ಎಲ್ಲಿ ಇರುತ್ತದೋ ಅಲ್ಲಿಗೆ ಹೋಗುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತವೆ. ಆದರೆ, ಅವರು ಬಿಜೆಪಿಗೆ ಈಗ ಹೋಗಿ ಏನು ಮಾಡುತ್ತಾರೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ಡಿಸೆಂಬರ್ 18ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ