ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಜೆಡಿಎಸ್ ಪಕ್ಷದಿಂದ ಮುಳಬಾಗಿಲಿನಿಂದ ಹಮ್ಮಿಕೊಂಡಿರುವ ಪಂಚರತ್ನ ರಥಯಾತ್ರೆಗೆ ನ.18ರಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಚಾಲನೆ ನೀಡಲಿದ್ದಾರೆ ಎಂದು ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ತಿಳಿಸಿದರು.
ಕೋಲಾರ (ನ.17): ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಜೆಡಿಎಸ್ ಪಕ್ಷದಿಂದ ಮುಳಬಾಗಿಲಿನಿಂದ ಹಮ್ಮಿಕೊಂಡಿರುವ ಪಂಚರತ್ನ ರಥಯಾತ್ರೆಗೆ ನ.18ರಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಚಾಲನೆ ನೀಡಲಿದ್ದಾರೆ ಎಂದು ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಹವಮಾನದ ವೈಪರಿತ್ಯದಿಂದ ಎರಡು ಭಾರಿ ಕಾರ್ಯಕ್ರಮ ಮುಂದೂಡಲಾಗಿತ್ತು, ಆದರೆ ಕುರುಡುಮಲೆಯಲ್ಲಿ ವಿಘ್ನೇಶ್ವರನಿಗೆ ಪೂಜೆ ಕಾರ್ಯಕ್ರಮ ನಿಗದಿಪಡಿಸಿದ್ದ ಅವಧಿಯಲ್ಲಿ ಅತ್ಯಂತ ವೈಭವದಿಂದ ನೆರವೇರಿದ್ದು ದೇವರ ಆಶೀರ್ವಾದವು ಸಿಕ್ಕಿದೆ ಎಂದರು.
ನ.18ರಂದು 12 ಗಂಟೆಗೆ ಮುಳಬಾಗಿಲಿನಲ್ಲಿ ಪಂಚರತ್ನ ರಥಯಾತ್ರೆಗೆ ಚಾಲನೆ ದೊರೆಯಲಿದೆ. ಬಳಿಕ ಬೃಹತ್ ಕಾರ್ಯಕರ್ತರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಸುಮಾರು 2 ಲಕ್ಷ ಜನ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ನ.19ರಂದು ಬಂಗಾರಪೇಟೆ, ನ.20ರಂದು ಮಾಲೂರು, ನ.21 ರಂದು ಕೋಲಾರ, ನ.22ರಂದು ಶ್ರೀನಿವಾಸಪುರದಲ್ಲಿ ಪಂಚರತ್ನ ಯಾತ್ರೆ ಕೈಗೊಂಡಿದ್ದು, ಈ ಹಿಂದೆ ನಿಗದಿಪಡಿಸಿದ್ದ ಆಯಾಯ ಕ್ಷೇತ್ರದಲ್ಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಗ್ರಾಮ ವಾಸ್ತವ್ಯದಲ್ಲಿ ಪ್ರತಿಯೊಬ್ಬರು ಕುಮಾರಸ್ವಾಮಿರೊಂದಿಗೆ ಸಂವಾದ ನಡೆಸಲು ಸಮಸ್ಯೆ ತಿಳಿಸಲು, ಪರಿಹಾರ ಕೇಳಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಜೆಡಿಎಸ್ ಅಧಿಕಾರಕ್ಕೆ ಬರೋದು ಸೂರ್ಯ, ಚಂದ್ರರಷ್ಟೇ ಸತ್ಯ, ಕುಮಾರಣ್ಣ ಮುಂದಿನ ಮುಖ್ಯಮಂತ್ರಿ'
ಘಟಬಂಧನ್‌ನಿಂದ ಸಿದ್ದರಾಮಯ್ಯಗೆ ಖೆಡ್ಡ: ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸ್ವರ್ಧಿಸಿದರೂ ಸಹ ನಮ್ಮಲ್ಲಿ ಸೂಕ್ತವಾದ ಅಭ್ಯರ್ಥಿಗಳು ಇದ್ದಾರೆ. ಅದನ್ನು ಕುಮಾರಸ್ವಾಮಿ ಸೂಕ್ತ ಕಾಲದಲ್ಲಿ ನಿರ್ಧಾರ ಕೈಗೊಳ್ಳುತ್ತಾರೆ. ಘಟಬಂಧನ್‌ನಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಚುನಾವಣೆಗೆ ಬಲಿ ನೀಡಲು ಖೆಡ್ಡಾ ತೋಡಿ ಸಿದ್ದವಾಗಿಟ್ಟುಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.
ಜೆ.ಡಿ.ಎಸ್ ಭದ್ರಕೋಟೆ: ಬಾಡಿಗೆ ಜನರನ್ನು ಕರೆತಂದು ಜಯಕಾರ ಹಾಕಿದ ಮಾತ್ರಕ್ಕೆ ಕ್ಷೇತ್ರದ ಜನತೆ ಚುನಾವಣೆಯಲ್ಲಿ ಮತ ಹಾಕಿ ಗೆಲ್ಲಿಸಿ ಬಿಡುತ್ತಾರೆ ಎಂಬುವು ಸಿದ್ದರಾಮಯ್ಯರ ಭ್ರಮೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೆಚ್.ಟಿ.ದೇವೇಗೌಡರ ಮೇಲೆ ಸ್ವರ್ಧಿಸಿ ಭಾರಿ ಅಂತರದಲ್ಲಿ ಸೋಲನ್ನಪ್ಪಿದರು. ಬಾದಮಿ ಕ್ಷೇತ್ರದಲ್ಲಿ ಕೇವಲ 1200 ಮತಗಳ ಅಂತರದಲ್ಲಿ ಗೆದ್ದಿರುವುದು ಅವರಿಗೆ ಸುರಕ್ಷಿತ ಕ್ಷೇತ್ರವಿಲ್ಲದಂತಾಗಿದ್ದು ತಮ್ಮ ಸ್ವಕ್ಷೇತ್ರದಿಂದ ರಾಜಧಾನಿಗೆ ಹೋಗಿ ಬರಲು ಕಷ್ಟವೆಂಬ ನೆಪದಲ್ಲಿ ಕೋಲಾರ ಕ್ಷೇತ್ರದ ಕಡೆ ಕಣ್ಣಿಟ್ಟಿದ್ದಾರೆ. ಕೋಲಾರ ಕ್ಷೇತ್ರಕ್ಕೆ ಯಾರೇ ಬಂದು ಸ್ಪರ್ಧಿಸಿದರೂ ಜೆ.ಡಿ.ಎಸ್. ಪಕ್ಷಕ್ಕೆ ಯಾವುದೇ ಭೀತಿ ಇಲ್ಲ. ಕೋಲಾರ ಕ್ಷೇತ್ರವು ಜೆ.ಡಿ.ಎಸ್ ಪಕ್ಷದ ಭದ್ರಕೋಟೆಯಾಗಿದೆ ಎಂದು ತಿಳಿಸಿದರು.
ಕೊತ್ತೂರುಗೆ ನ್ಯಾಯ ಕೊಡುತ್ತಾರೆಯೇ: ಮುಳಬಾಗಿಲಿನಲ್ಲಿ ಕೊತ್ತೂರು ಮಂಜುನಾಥ್ ಜಾತಿ ಪ್ರಮಾಣ ಇತ್ಯರ್ಥವಾಗದಿದ್ದರೂ ಕೆ.ಪಿ.ಸಿ.ಸಿ.ಯಲ್ಲಿ ಅರ್ಜಿ ಹಾಕಿಕೊಂಡಿದ್ದಾರೆ. ಘಟಬಂಧನ್ ಕ್ಯಾಪ್ಟನ್ ಕೊತ್ತೂರುನ್ನು ನನ್ನ ಕಣ್ಣುಗಳು ಎಂದು ಬೊಗಳೆ ಬಿಡುತ್ತಿದ್ದವರು, ಈಗ ಶ್ರೀನಿವಾಸಪುರ ಕ್ಷೇತ್ರವನ್ನು ಬಿಟ್ಟು ಕೊಡುತ್ತಾರೆಯೇ? ಅವರಿಗೆ ಯಾವ ರೀತಿ ನ್ಯಾಯವನ್ನು ಕೊಡುತ್ತಾರೆ ಎಂದು ಪ್ರಶ್ನೆ ಮಾಡಿದರು.
ಕಾಂಗ್ರೆಸ್‌ಗೆ ಅಭ್ಯರ್ಥಿ ಸಿಗದೆ ಸಿದ್ದರಾಮಯ್ಯರನ್ನು ಕರೆ ತಂದಿದ್ದಾರೆ: ನಮ್ಮದು ಪ್ರಾದೇಶಿಕ ಪಕ್ಷವಾಗಿದೆ. ನಮ್ಮ ಜಿಲ್ಲೆಯಲ್ಲಿ ಪಕ್ಷದ ಶಾಸಕರು ಯಾರೂ ಇಲ್ಲ. ನಾನು ವಿಧಾನ ಪರಿಷತ್ ಸದಸ್ಯ ಓರ್ವ ಮಾತ್ರ ಇದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಸಮರ್ಥವಾದ ಅಭ್ಯರ್ಥಿ ಇಲ್ಲದ ಕಾರಣ ಸಿದ್ದರಾಮಯ್ಯರನ್ನು ಕರೆ ತಂದಿದ್ದಾರೆ. ಶ್ರೀನಿವಾಸಗೌಡ ಯಾವಾಗಲೂ ತಟಸ್ಥರೆ, ವರ್ತೂರು ಪ್ರಕಾಶ ಬಿಜೆಪಿ ಪಕ್ಷ ಸೇರಿದ ಮೇಲೆ ಚಟುವಟಿಕೆಯಿಂದ ಇದ್ದಾರೆ ಎಂದು ಸಿಂಪತಿ ವ್ಯಕ್ತಪಡಿಸಿದರು.
ಶ್ರೀನಿವಾಸಗೌಡರನ್ನು ಜಿ.ಟಿ.ಡಿ.ಗೆ ಹೋಲಿಕೆ ಬೇಡ: ಜಿ.ಟಿ. ದೇವೇಗೌಡರು ಜೆ.ಡಿ.ಎಸ್‌ನಿಂದ ಅಂತರ ಕಾಪಾಡಿಕೊಂಡಿದ್ದರು ಹೊರತಾಗಿ ಬೇರೆ ಯಾವುದೇ ಪಕ್ಷಕ್ಕೆ ಹೋಗಿರಲಿಲ್ಲ. ಹಾಗಾಗಿ ಅವರ ಮೇಲೆ ಎಲ್ಲರಿಗೂ ಗೌರವಿತ್ತು, ಆದ್ದರಿಂದಲೇ ದೇವೇಗೌಡರು ಮತ್ತು ಕುಮಾರಸ್ವಾಮಿ ಮನೆಗೆ ತೆರಳಿ ಹೂವಿನ ಹಾರ ತಾಂಬೂಲ ನೀಡಿ ಆಹ್ವಾನಿಸಿದರು, ಅದರೆ ಇವರಿಗೂ ಶ್ರೀನಿವಾಸಗೌಡರಿಗೂ ಒಂದೇ ಎಂದು ಹೋಲಿಕೆ ಮಾಡಬೇಡಿ, ಬಹಿರಂಗ ಸಭೆಗಳಲ್ಲಿ ನಾನು 4 ಭಾರಿ, ನಾಲ್ಕು ಪಕ್ಷದಿಂದ ಗೆದ್ದಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ ಅವರಿಗೆ ನಾಚಿಕೆಯಾಗಲ್ಲವೇನೂ, ಏನೋ ಅವಾರ್ಡ್ ಸಿಕ್ಕ ಹಾಗೇ ಹೇಳಿಕೊಳ್ಳುವ ಇವರಿಗೆ ನೈತಿಕತೆ ಎಂಬುವುದು ಏನಾದರೂ ಇದೆಯೇ ಎಂದು ಪ್ರಶ್ನಿಸಿದರು.
ತಾಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ, ಅಂಜುಮಾನ್ ಮುಖ್ಯಸ್ಥ ಜಮೀರ್ ಅಹ್ಮದ್, ಜಿ.ಪಂ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ಕೋಲಾರ ವಿಧಾನಸಭಾ ಅಕಾಂಕ್ಷಿ ಸಿ.ಎಂ.ಆರ್. ಶ್ರೀನಾಥ್, ಕೆ.ಜಿ.ಎಫ್ ಕ್ಷೇತ್ರ ಅಕಾಂಕ್ಷಿ ಡಾ.ರಮೇಶ್ ಬಾಬು, ಮಾಲೂರು ಕ್ಷೇತ್ರದ ಅಕಾಂಕ್ಷಿ ರಾಮೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಣಕನಹಳ್ಳಿ ನಟರಾಜ್, ಕಾರ್ಯದರ್ಶಿ ಮುಸ್ತಾಫ್, ವಡಗೂರು ರಾಮು ಇದ್ದರು.
ಜೆಡಿಎಸ್‌ನದ್ದು ಮೊಸರಲ್ಲಿ ಕಲ್ಲು ಹುಡುಕುವ ಯತ್ನ: ರವಿಕುಮಾರ್
ಪಂಚರತ್ನ ಯಾತ್ರೆ ಕುಮಾರಸ್ವಾಮಿ ಕನಸಿನ ಕೂಸು: ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ಪಂಚರತ್ನ ಯೋಜನೆಯ ಕಾರ್ಯಕ್ರಮ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕನಸಿನ ಕೂಸು, ಕಾರ್ಯಕ್ರಮದಲ್ಲಿ 11 ವಾಹನಗಳು ಭಾಗವಹಿಸಲಿದೆ. ಡಿಜಿಟಲ್ ಟಿ.ವಿ.ಸೌಲಭ್ಯಗಳು ಇರುವ ವಾಹನದಲ್ಲಿ ಪಂಚರತ್ನ ಯೋಜನೆಯ ಪ್ರಾತ್ಯೇಕ್ಷಿಕೆಯನ್ನು ಪ್ರಸಾರ ಮಾಡಲಾಗುವುದು, ಪಂಚರತ್ನ ಯೋಜನೆಯಲ್ಲಿ ಸಾರ್ವಜನಿಕರಿಗೆ ಅಗತ್ಯವಾದ ಎಲ್ಲಾ ಯೋಜನೆಗಳು ಆಡಕಗೊಂಡಿದೆ ಎಂದರು.
ಕಳೆದ ಎರಡು ಬಾರಿ ಕಾರ್ಯಕ್ರಮ ಮಳೆಯಿಂದಾಗಿ ಮುಂದೊಡಲಾಗಿತ್ತು. ಈ ಭಾರಿ ಮಳೆ ಬಂದರೂ ಸಹ ಅದಕ್ಕೆ ಅಗತ್ಯವಾದ ಎಲ್ಲಾ ಸಿದ್ದತೆ ಮಾಡಿಕೊಂಡಿದ್ದೇವೆ. ಸುರಕ್ಷತೆಗೆ ಪೂರಕವಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗುವುದು, ಸುಮಾರು ಎರಡು ಲಕ್ಷಕ್ಕೂ ಅಧಿಕ ಜೆ.ಡಿ.ಎಸ್. ಕಾರ್ಯಕರ್ತರು ಸಂಘಟಿತರಾಗುವ ನಿರೀಕ್ಷೆಯಿದೆ. ಪ್ರತಿ ಕ್ಷೇತ್ರದಲ್ಲಿ 24 ಗಂಟೆಗಳ ಅವಧಿಯ ಪ್ರವಾಸ ನಿಗದಿಪಡಿಸಲಾಗಿದೆ. ಗ್ರಾಮ ವಾಸ್ತವ್ಯಗಳಲ್ಲಿ ಸಾರ್ವಜನಿಕರ ಚರ್ಚೆಗಳಿಗೆ ಸಮಯ ಮೀಸಲಿಡಲಾಗಿದೆ, ಎಲ್ಲರು ಮುಕ್ತವಾಗಿ ಚರ್ಚೆಯಲ್ಲಿ ಭಾಗವಹಿಸಬಹುದಾಗಿದೆ ಎಂದರು.