ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಪಂಚರತ್ನ ರಥಯಾತ್ರೆ ಮಂಗಳವಾರ ತುಮಕೂರು ಜಿಲ್ಲೆಯ ಗುಬ್ಬಿ, ಶಿರಾ ತಾಲೂಕುಗಳಲ್ಲಿ ಸಂಚರಿಸಿತು. ಈ ವೇಳೆ ಕುಮಾರಸ್ವಾಮಿ ಅವರಿಗೆ ಕ್ರೇನ್ ಮೂಲಕ ಕೊತ್ತಂಬರಿ ಸೊಪ್ಪಿನ ಹಾರ ಹಾಕಿ ಅದ್ಧೂರಿ ಸ್ವಾಗತ ನೀಡಲಾಯಿತು.
ಶಿರಾ/ತುಮಕೂರು (ಡಿ.07): ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಪಂಚರತ್ನ ರಥಯಾತ್ರೆ ಮಂಗಳವಾರ ತುಮಕೂರು ಜಿಲ್ಲೆಯ ಗುಬ್ಬಿ, ಶಿರಾ ತಾಲೂಕುಗಳಲ್ಲಿ ಸಂಚರಿಸಿತು. ಈ ವೇಳೆ ಕುಮಾರಸ್ವಾಮಿ ಅವರಿಗೆ ಕ್ರೇನ್ ಮೂಲಕ ಕೊತ್ತಂಬರಿ ಸೊಪ್ಪಿನ ಹಾರ ಹಾಕಿ ಅದ್ಧೂರಿ ಸ್ವಾಗತ ನೀಡಲಾಯಿತು. ಗುಬ್ಬಿ ಪಟ್ಟಣದಲ್ಲಿ ಹೆಲಿಕಾಪ್ಟರ್ ಮೂಲಕ ಪುಷ್ಪ ಮಳೆ ಸುರಿಸುವ ಮೂಲಕ ಸ್ವಾಗತ ನೀಡಿದರೆ, ಶಿರಾ ತಾಲೂಕಿನಲ್ಲಿ ಬೆಳಗಿನ ಜಾವ 4 ಗಂಟೆಗೆ ಆಗಮಿಸಿದ ಯಾತ್ರೆಗೆ ರಸ್ತೆಯುದ್ದಕ್ಕೂ ಕಿಕ್ಕಿರಿದು ಸೇರಿದ್ದ ಜನರಿಂದ ಭರ್ಜರಿ ಸ್ವಾಗತವೇ ಸಿಕ್ಕಿತು.
ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ನಮ್ಮ ರೈತ ಸಮುದಾಯದ ಕಾರ್ಯಕರ್ತರು, ಅಭಿಮಾನಿಗಳು ಹೋದಲ್ಲೆಲ್ಲ ಕಡಲೆಕಾಯಿ ಹಾರ, ಕ್ಯಾಪ್ಸಿಕಂ ಹಾರ, ಎಳನೀರು, ಮುಸುಕಿನ ಜೋಳದ ಹಾರ, ಸೇಬಿನ ಹಾರ, ಕಡಲೇಕಾಯಿ ಹಾರ, ಕೊಬ್ಬರಿ ಹಾರ, ಕೊತ್ತಂಬರಿ ಸೊಪ್ಪಿನ ಹಾರ, ಅಡಕೆ ಹಾರ ಹಾಕಿ, ಹೂ ಮಳೆ ಸುರಿಸಿ ಅದ್ಧೂರಿಯಾಗಿ ಸ್ವಾಗತ ಕೋರಿದ್ದಾರೆ. ಜನರ ಅಭಿಮಾನವನ್ನು ಮರೆಯಲು ಸಾಧ್ಯವಿಲ್ಲ. ಇದು ಕೋಲಾರದಿಂದ ಆರಂಭವಾಗಿದೆ. ರೈತರು ಬೆಳೆಯುವ ಬೆಳೆಗಳಿಂದ ಹಾರ ಹಾಕಿ ಸ್ವಾಗತ ಮಾಡಿದರು. ಒಂದೊಂದಕ್ಕೂ ಒಂದೊಂದು ವಿಶೇಷ ಇದೆ. 2018ರಲ್ಲಿ ಇಂಡಿ ಕ್ಷೇತ್ರದ ಭೇಟಿ ವೇಳೆ ಕ್ರೇನ್‌ನಲ್ಲಿ ಸೇಬಿನ ಹಾರ ಹಾಕಿದ್ದರು. ಈಗ ಅದು ಪ್ರತಿಯೊಂದು ಪಕ್ಷದಲ್ಲೂ ಈ ರೀತಿ ಸ್ವಾಗತಿಸುವ ಪರಿಪಾಠ ಇದೆ ಎಂದರು.
ಬಯಲುಸೀಮೆ ಜಿಲ್ಲೆಗಳ ಅಭಿವೃದ್ಧಿಗೆ 1 ಸಾವಿರ ಕೋಟಿ: ಎಚ್.ಡಿ.ಕುಮಾರಸ್ವಾಮಿ
ಕ್ಷೇತ್ರ ಹುಡುಕಿಕೊಂಡು ಹೋಗಲು ಟೂರಿಂಗ್ ಟಾಕೀಸಾ?: ಪ್ರತಿ ಚುನಾವಣೆಯಲ್ಲೂ ಒಂದೊಂದು ಕ್ಷೇತ್ರ ಹುಡುಕಿಕೊಂಡು ಹೋಗಲು ನಾನೇನು ಟೂರಿಂಗ್ ಟಾಕೀಸಾ ಎನ್ನುವ ಮೂಲಕ ಗುಬ್ಬಿಯಲ್ಲಿ ಸ್ಪರ್ಧಿಸುವಂತೆ ಎಸ್.ಆರ್.ಶ್ರೀನಿವಾಸ್ ನೀಡಿದ್ದ ಆಹ್ವಾನಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ನಾನು ಎಲ್ಲಿ ಸ್ಪರ್ಧಿಸಬೇಕು ಅಂತ ಅವರ ಅನುಮತಿ ತೆಗೆದುಕೊಂಡು ನಿಲ್ಲಬೇಕಾ? ಅದನ್ನು ಜನ ಹಾಗೂ ಕಾರ್ಯಕರ್ತರು ಮಾಡುತ್ತಾರೆ ಎಂದರು.
ಜೆಡಿಎಸ್ ಟಿಕೆಟ್ ಶೀಘ್ರ ನಿರ್ಧಾರ: ಶಿರಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ವಿಧಾನಸಭೆಗೆ ಸ್ಪರ್ಧಿಸಲು ಐವರು ಆಕಾಂಕ್ಷಿಗಳು ಇದ್ದಾರೆ. ಅವರೆಲ್ಲರನ್ನು ಕರೆದು ಒಂದು ಸಭೆ ಮಾಡಿ ಶೀಘ್ರದಲ್ಲಿಯೇ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಕುಮಾರಸ್ವಾಮಿ ಹೇಳಿದರು. ತಾಲೂಕಿನ ಹುಂಜನಾಳು ಗ್ರಾಮದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಕಳೆದ ವಿಧಾನಸಭಾ ಉಪಚುನಾವಣೆಯಲ್ಲಿ ಶಿರಾ ಕ್ಷೇತ್ರದಲ್ಲಿ ಹಿನ್ನಡೆಯಾಗಿದೆ. ಈಗ ಪ್ರತಿಯೊಂದು ಗ್ರಾಮಗಳಲ್ಲಿ ಹೆಣ್ಣುಮಕ್ಕಳು ನಾವು ಬಿಜೆಪಿಗೆ ಮತ ಕೊಟ್ಟು ಮನೆಗಳು ಹಾಳಾಗಿವೆ.
Pancharatna Rathayatra: ಜನರ ನೆಮ್ಮದಿಯುತ ಬದುಕಿಗೆ ಪಂಚರತ್ನ: ಎಚ್.ಡಿ.ಕುಮಾರಸ್ವಾಮಿ
ನಾವು ತಪ್ಪು ಮಾಡಿದ್ದೇವೆ. ಈ ಬಾರಿ ಜೆಡಿಎಸ್‌ಗೆ ಮತ ನೀಡಲು ಮಾನಸಿಕವಾಗಿ ಸಿದ್ದರಾಗಿದ್ದೇವೆ ಎಂದು ಹೇಳುತ್ತಿದ್ದಾರೆ. ಚಿಕ್ಕ ಮಕ್ಕಳೂ ಸಹ ಕುಮಾರಣ್ಣನ ನೋಡಬೇಕು ಎಂದು ಕಾದಿದ್ದು, ನನ್ನ ಮನಕಲಕಿದೆ. ಜನರ ಭಾವನೆಗಳನ್ನು ಗಮನಿಸಿದ್ದೇನೆ. ಈ ಬಾರಿ ನನ್ನ ಗುರಿ ತಲುಪಲು ಯಾವುದೇ ಸಂಶಯ ಕಾಣುತ್ತಿಲ್ಲ. ಸ್ಪಷ್ಟಬಹುಮತದ ಸರ್ಕಾರ ತರಬೇಕೆಂಬ ನನ್ನ ಗುರಿಗೆ ಹತ್ತಿರವಾಗುತ್ತಿದ್ದೇನೆ ಎಂದರು. ಶಿರಾ ತಾಲೂಕಿನಲ್ಲಿ ಪಂಚರತ್ನ ರಥಯಾತ್ರೆ ಯಶಸ್ವಿಯಾಗಿ ನಡೆಯಿತು. ಜನತೆ ಬೆಳಗಿನ ಜಾವದವರೆಗೂ ಕಾದು ನಮಗೆ ಬೆಂಬಲ ನೀಡಿದ್ದಾರೆ. ರಥಯಾತ್ರೆಯ 18ನೇ ದಿನ ಗುಬ್ಬಿ ಕ್ಷೇತ್ರದಲ್ಲಿ ಮುಗಿದ ನಂತರ ಪಂಚರತ್ನ ರಥಯಾತ್ರೆಗೆ ತಾತ್ಕಾಲಿಕವಾಗಿ ತೆರೆ ಎಳೆದಿದ್ದೇವೆ. ಡಿ.11ರಿಂದ ಚಿಕ್ಕನಾಯಕನಹಳ್ಳಿ ಮತ್ತೆ ಆರಂಭ ಆಗುತ್ತೆ ಎಂದರು.