ಚುನಾವಣಾ ಹೊಸ್ತಿಲಲ್ಲಿ ಜೆಡಿಎಸ್‌ ಸಂಘಟನೆ ಚುರುಕು..!

By Kannadaprabha NewsFirst Published Dec 9, 2022, 3:30 AM IST
Highlights

ಬಿಜೆಪಿ, ಕಾಂಗ್ರೆಸ್ಸಿನ ಎರಡನೇ ಹಂತದ ನಾಯಕರನ್ನು ನೆಚ್ಚಿದ ಜೆಡಿಎಸ್‌, ನಾಲ್ಕು ಬಾರಿ ಜಿಲ್ಲೆಗೆ ಆಗಮಿಸಿ ಸಂಘಟನೆ ಮಾಡಿದ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ

ಬಸವರಾಜ ಹಿರೇಮಠ
ಧಾರವಾಡ(ಡಿ.09):
ರಾಜ್ಯದ ದಕ್ಷಿಣದಲ್ಲಿ ಪಂಚರತ್ನ ಅಭಿಯಾನದಿಂದ ಸಂಘಟನೆಯತ್ತ ಮುನ್ನುಗ್ಗುತ್ತಿರುವ ಜಾತ್ಯತೀತ ಜನತದಾಳ (ಜೆಡಿಎಸ್‌), ಉತ್ತರದಲ್ಲಿ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಊರೂರು ತಿರುಗಿ ಪಕ್ಷವನ್ನು ಬಲಪಡಿಸುತ್ತಿದ್ದಾರೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಜೆಡಿಎಸ್‌ ಧಾರವಾಡ ಜಿಲ್ಲೆಯಲ್ಲಿ ಪಕ್ಷವನ್ನು ಒಗ್ಗೂಡಿಸುತ್ತಿದ್ದು, ಒಂದು ತಿಂಗಳ ಅವಧಿಯಲ್ಲಿ ಸಿ.ಎಂ. ಇಬ್ರಾಹಿಂ ನಾಲ್ಕು ಬಾರಿ ಜಿಲ್ಲೆಗೆ ಆಗಮಿಸಿ ಸಭೆಗಳನ್ನು ನಡೆಸಿದ್ದಾರೆ. ಈ ಬಾರಿ ಬಿಜೆಪಿ, ಕಾಂಗ್ರೆಸ್‌ಗೆ ಸವಾಲು ಒಡ್ಡಿ ಅಧಿಕಾರ ಹಿಡಿಯುವ ಭರದಲ್ಲಿ ವಿಧಾನಸಭಾ ಕ್ಷೇತ್ರ, ಜಿಪಂ ಕ್ಷೇತ್ರ ಹಾಗೂ ಬೂತ್‌ ಮಟ್ಟದಲ್ಲಿ ಜೆಡಿಎಸ್‌ ಕಾರ್ಯ ಯೋಜನೆ ರೂಪಿಸುತ್ತಿದೆ.

ಫಲಿತಾಂಶಕ್ಕಾಗಿ ಕಸರತ್ತು:

ಧಾರವಾಡದಲ್ಲಿ ಪಕ್ಷದ ಕಚೇರಿ ಉದ್ಘಾಟನೆ, ಹುಬ್ಬಳ್ಳಿಯಲ್ಲಿ ವಿಧಾನಸಭಾ ಚುನಾವಣಾ ಆಕಾಂಕ್ಷಿಗಳ ಸಭೆ, ಕಲಘಟಗಿ ಹಾಗೂ ಅಳ್ನಾವರ ಸುತ್ತಿರುವ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ತನ್ನ ತಂಡದೊಂದಿಗೆ ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಏನೆಲ್ಲಾ ಕಸರತ್ತು ಹಾಕುತ್ತಿದ್ದಾರೆ.

ದೆಹಲಿ ತಂತ್ರಗಾರಿಕೆಯೊಂದಿಗೆ ಕರ್ನಾಟಕದಲ್ಲೂ ಅಖಾಡಕ್ಕಿಳಿಯಲಿದೆ ಆಪ್‌..!

2ನೇ ಹಂತದ ನಾಯಕರಿಗೆ ಮಣೆ:

ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಪ್ರಸ್ತುತ ಬಿಜೆಪಿ ಹಾಗೂ ಕಾಂಗ್ರೆಸ್ಸಿನಲ್ಲಿ ತೀವ್ರ ಪೈಪೋಟಿ ನಡೆದಿದೆ. ಒಂದೊಂದು ಕ್ಷೇತ್ರಕ್ಕೆ ಅದರಲ್ಲೂ ಕಾಂಗ್ರೆಸ್ಸಿನಲ್ಲಿ ಹತ್ತಾರು ಅಭ್ಯರ್ಥಿಗಳು ಟಿಕೆಟ್‌ಗಾಗಿ ಹಾತೊರೆಯುತ್ತಿದ್ದಾರೆ. ಆದರೆ, ಒಂದು ಕ್ಷೇತ್ರಕ್ಕೆ ಒಬ್ಬರಿಗೆ ಮಾತ್ರ ಟಿಕೆಟ್‌ ಸಿಗುವ ಹಿನ್ನೆಲೆಯಲ್ಲಿ ಉಳಿದ ಎರಡು ಅಥವಾ ಮೂರನೇ ಹಂತದ ನಾಯಕರನ್ನು ಜೆಡಿಎಸ್‌ ಸೆಳೆಯಲು ಯೋಜನೆ ರೂಪಿಸಿದೆ.

ಜೆಡಿಎಸ್‌ಗೆ ಸೇರ್ಪಡೆ:

ಮೂಲಗಳ ಪ್ರಕಾರ ಜನವರಿ ತಿಂಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ಸಿನಿಂದ ಸಾಕಷ್ಟುಮುಖಂಡರು ಜೆಡಿಎಸ್‌ಗೆ ಬರಲಿದ್ದಾರೆ ಎಂಬ ಮಾಹಿತಿ ಇದೆ. ಈಗಾಗಲೇ ಜಿಲ್ಲೆಯ ಎಲ್ಲ ಕ್ಷೇತ್ರಗಳಿಗೆ ಜೆಡಿಎಸ್‌ನಿಂದಲೂ ಟಿಕೆಟ್‌ ಆಕಾಂಕ್ಷಿಗಳಿದ್ದಾರೆ. ಆಯಾ ಕ್ಷೇತ್ರದಲ್ಲಿ ಪಕ್ಷಕ್ಕಾಗಿ ದುಡಿದವರಿಗೆ ಮಣೆ ಹಾಕುವುದಲ್ಲದೇ ಈ ಬಾರಿ ಅಧಿಕಾರ ಪಡೆಯಬೇಕೆಂಬ ನಿಟ್ಟಿನಲ್ಲಿ ಪ್ರಬಲ ಜಾತಿ ಹಾಗೂ ಪ್ರಭಾವ ಇದ್ದವರನ್ನು ಕಣಕ್ಕೆ ಇಳಿಸಲು ಯೋಜನೆ ರೂಪಿಸಲಾಗಿದೆ ಎಂದು ಜೆಡಿಎಸ್‌ ಜಿಲ್ಲಾಧ್ಯಕ್ಷ ಗುರುರಾಜ ಹುಣಸೀಮರದ ಮಾಹಿತಿ ನೀಡಿದರು.

ಎಚ್‌.ಡಿ. ದೇವೇಗೌಡ, ಎಚ್‌.ಡಿ. ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರ ಸಲಹೆಯಂತೆ ಜಿಲ್ಲೆಯಲ್ಲಿ ಹೊಸದಾಗಿ ಪಕ್ಷವನ್ನು ಕಟ್ಟಲಾಗಿದೆ. ಪಕ್ಷದಲ್ಲಿ ಪ್ರಾಮಾಣಿಕ ಮುಖಂಡರು, ಕಾರ್ಯಕರ್ತರು ಸಾಕಷ್ಟಿದ್ದು ಈಗಾಗಲೇ ಅವರನ್ನು ಒಗ್ಗೂಡಿಸಲಾಗಿದೆ. ಬರುವ ದಿನಗಳಲ್ಲಿ ಬಿಜೆಪಿ, ಕಾಂಗ್ರೆಸ್ಸಿನಿಂದಲೂ ಮುಖಂಡರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದು ವಿಧಾನಸಭಾ ಚುನಾವಣೆ ಹೊತ್ತಿಗೆ ಜೆಡಿಎಸ್‌ ಗಟ್ಟಿಗೊಳ್ಳುತ್ತದೆ. ಈ ಬಾರಿ ಜೆಡಿಎಸ್‌ಗೆ ಉತ್ತಮ ಅವಕಾಶವಿದೆ. ಈ ಅವಕಾಶ ಬಳಸಿಕೊಳ್ಳಲು ಸಿದ್ಧರಾಗಿದ್ದೇವೆ ಎನ್ನುತ್ತಾರೆ ಜೆಡಿಎಸ್‌ ಮುಖಂಡರು.

ವಿಧಾನಸಭಾ ಚುನಾವಣೆಗೆ ಕಣ ಸಿದ್ಧಗೊಳಿಸುತ್ತಿದೆ ಎಐಎಂಐಎಂ!

ಒಟ್ಟಿನಲ್ಲಿ ಬಿಜೆಪಿ ಕಾಂಗ್ರೆಸ್‌ ಮಧ್ಯೆ ನಾನೂ ಪ್ರಬಲ ಪೈಪೋಟಿ ಎಂದು ತೋರಿಸಿಕೊಳ್ಳಲು ಜೆಡಿಎಸ್‌ ಜಿಲ್ಲೆಯಲ್ಲಿ ತೀವ್ರ ಕಸರತ್ತು ನಡೆಸಿದೆ. ಸಂಘಟನೆ ಕೊರತೆಯಿಂದ ಕಳೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಳಪೆ ಫಲಿತಾಂಶ ಪಡೆದ ಜೆಡಿಎಸ್‌ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ಫಲಿತಾಂಶ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ಸಿದ್ಧಾಂತಗಳಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ. ಎಚ್‌.ಡಿ. ಕುಮಾರಸ್ವಾಮಿ ಆಡಳಿತಕ್ಕೆ ಮನಸೋತ ರಾಜ್ಯದ ಜನತೆ ಈ ಬಾರಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ನೀಡಲು ಮುಂದಾಗಿದ್ದಾರೆ ಎಂದು ಕ್ಷೇತ್ರ ಸಂಚಾರದಲ್ಲಿ ತಿಳಿದು ಬರುತ್ತಿದೆ. ಸದ್ಯ ಮುಖಂಡತ್ವ, ಜಾತಿಯ ಪ್ರಬಲತೆ, ಪಕ್ಷ ಸಂಘಟನೆಯಾಗಿದ್ದು ಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಬಹುಮತ ನಿಶ್ಚಿತ ಅಂತ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ತಿಳಿಸಿದ್ದಾರೆ. 
 

click me!