* ಕಾಂಗ್ರೆಸ್ ಮುಂದೆ ಹೊಸ ಬೇಡಿಕೆ ಇಟ್ಟ ಜೆಡಿಎಸ್ ಶಾಸಕ ಜಿಟಿ ದೇವೇಗೌಡ
* ಮೂರು ಕ್ಷೇತ್ರದಲ್ಲಿ ಒಂದು ಬೇಕೆಂದು ಬೇಡಿಕೆ ಇಟ್ಟ ಜಿಟಿಡಿ
* ಕಾಂಗ್ರೆಸ್‌ಗೆ ಶುರುವಾಯ್ತು ದೊಡ್ಡ ತಲೆನೋವು
ಮೈಸೂರು, (ಮಾ.12): ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ರೆಬೆಲ್ ಶಾಸಕ ಜಿ. ಟಿ. ದೇವೇಗೌಡ (GT Devegowda) ಅವರು ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಸುದ್ದಿ ಹಲವು ದಿನದಿಂದ ರಾಜ್ಯ ರಾಜಕಾರಣದಲ್ಲಿ ಹರಿದಾಡುತ್ತಿದೆ.
ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಹಾಗೂ ಸಿದ್ದರಾಮಯ್ಯನವರ(Siddaramaiah) ಜೊತೆ ಮಾತುಕತೆ ಮುಗಿಸಿದ್ದು, ಇನ್ನೇನು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯೊಂದೇ ಬಾಕಿ ಇತ್ತು. ಆದ್ರೆ, ಇದೀಗ ಜಿಟಿ ದೇವೇಗೌಡ ಅವರು ಕಾಂಗ್ರೆಸ್ ಸೇರ್ಪಡೆಗೆ ಹೊಸ ಷರತ್ತು ಹಾಕಿದ್ದಾರೆ.ಸಿದ್ದರಾಮಯ್ಯ ಹುಣಸೂರಿನಲ್ಲಿ ಸ್ಪರ್ಧೆ ಮಾಡಲಿ ಗೆಲ್ಲಿಸ್ಕೊಂಡು ಬರುವ ಜವಾಬ್ದಾರಿ ನನ್ನದು ಎಂದು ಜಿಟಿಡಿ ಹೇಳಿದ್ದರು. ಆದರೆ, ಇದೀಗ ಹೊಸ ವರಸೆ ತೆಗೆದಿದ್ದಾರೆ.
undefined
ಸಿದ್ದರಾಮಯ್ಯ ಹುಣಸೂರಿನಲ್ಲಿ ಸ್ಪರ್ಧೆ ಮಾಡ್ಲಿ, ಗೆಲ್ಲಿಸ್ಕೊಂಡು ಬರುವ ಜವಾಬ್ದಾರಿ ನನ್ನದು ಎಂದ ಜೆಡಿಎಸ್ ಶಾಸಕ
ಹೌದು...ನನ್ನ ಮಗನಿಗೆ ಟಿಕೆಟ್ ಕೊಟ್ಟರೆ ಮಾತ್ರ ನಾನು ಕಾಂಗ್ರೆಸ್ ಪಕ್ಷ ಸೇರುತ್ತೇನೆ. ಮೊದಲು ನನ್ನ ಮಗ ಹರೀಶ್ ಗೌಡ ವಿಚಾರದಲ್ಲಿ ಕಾಂಗ್ರೆಸ್ ತನ್ನ ತೀರ್ಮಾನ ಹೇಳಿದ ಮೇಲೆ ಉಳಿದ ಮಾತುಕತೆ ನಡೆಸುತ್ತೇನೆ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ಈ ಬಗ್ಗೆ ಇಂದು(ಶನಿವಾರ) ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಟಿಡಿ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ. ಕೆ. ಶಿವಕುಮಾರ್ ಇಬ್ಬರಿಗೂ ನಾನು ಈ ವಿಷಯನ್ನು ಸ್ಪಷ್ಟವಾಗಿ ಹೇಳಿದ್ದೇನೆ. ನನ್ನ ಮಗನಿಗೆ ಟಿಕೆಟ್ ಕೊಡುವ ವಿಚಾರದಲ್ಲಿ ನಿರ್ಧಾರ ತಿಳಿಸಿದರೆ ನಂತರ ನನ್ನ ತೀರ್ಮಾನ ಹೇಳುತ್ತೇನೆ ಹೇಳಿದರು.
ಮೂರು ಕ್ಷೇತ್ರದಲ್ಲಿ ಒಂದು
ಹಾಗೇ ನೋಡಿದರೆ ಮೈಸೂರು ಜಿಲ್ಲೆಯಲ್ಲಿ ಮೂರು ಕ್ಷೇತ್ರಗಳ ಬಗ್ಗೆ ನನಗೆ ವಿಶ್ವಾಸವಿದೆ. ಹುಣಸೂರು ಕ್ಷೇತ್ರಕ್ಕೆ ನನ್ನ ಮೊದಲ ಆದ್ಯತೆ, ಕೆ. ಆರ್. ನಗರ ಕ್ಷೇತ್ರಕ್ಕೆ ಎರಡನೇ ಆದ್ಯತೆ ನೀಡಿದ್ದೇನೆ. ಚಾಮರಾಜ ಕ್ಷೇತ್ರ ಮೂರನೇ ಆದ್ಯತೆ ಇದೆ ಎಂದು ಹೀಗೆ ಜಿ. ಟಿ. ದೇವೇಗೌಡ ಅವರು ಮೂರು ಕ್ಷೇತ್ರದಲ್ಲಿ ಒಂದು ಕೊಡಿ ಎಂದು ಕಾಂಗ್ರೆಸ್ ಮುಂದೆ ಬೇಡಿಕೆ ಇಟ್ಟರು.
ಈ ನಡುವೆ ಬಿಜೆಪಿ ಅವರು ಕೂಡ ನಮ್ಮ ಜೊತೆ ಇರಿ ಎಂದು ಕೇಳುತ್ತಿದ್ದಾರೆ. ಅವರು ತಂದೆ - ಮಗ ಇಬ್ಬರಿಗೂ ಟಿಕೆಟ್ ಕೊಡುವ ಭರವಸೆ ನೀಡಿದ್ದಾರೆ. ನಾನು ಸದ್ಯಕ್ಕೆ ಯಾವ ನಿರ್ಧಾರ ಮಾಡಿಲ್ಲ. ಇನ್ನೂ 6 ತಿಂಗಳ ನಂತರ ಚಾಮುಂಡಿ ತಾಯಿಯ ನಿರ್ಣಯದಂತೆ ನಾನು ನಿರ್ಧಾರ ಕೈಗೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ನವರು ನನ್ನನ್ನು ಇದುವರೆಗೂ ಸಂಪರ್ಕಿಸಿಲ್ಲ. ಪಕ್ಷದ ಯಾವ ಸಭೆ, ಸಮಾರಂಭಕ್ಕೂ ಕರೆಯುತ್ತಿಲ್ಲ. ಸಿಎಂ ಸ್ಥಾನದಿಂದ ಕುಮಾರಸ್ವಾಮಿ ಕೆಳಗೆ ಇಳಿದ ನಂತರದ ದಿನದಿಂದ ನನ್ನ ಜೊತೆ ಜೆಡಿಎಸ್ ನವರು ಸಂಪರ್ಕದಲ್ಲಿ ಇಲ್ಲ ಎಂದು ತಿಳಿಸಿದರು.
ಕಾಂಗ್ರೆಸ್‌ಗೆ ಶುರುವಾಯ್ತು ತಲೆನೋವು
ಯೆಸ್...ಹುಣಸೂರು, ಕೆ. ಆರ್. ನಗರ ಹಾಗೂ ಚಾಮರಾಜ ಈ ಮೂರು ಕ್ಷೇತ್ರಗಳಲ್ಲಿ ಒಂದನ್ನು ತಮ್ಮ ಪುತ್ರ ಹರೀಶ್‌ಗೆ ನೀಡುವಂತೆ ಜಿಟಿಡಿ ಬೇಡಿಕೆ ಇಟ್ಟಿರುವುದು ಕಾಂಗ್ರೆಸ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಯಾಕಂದ್ರೆ, ಹುಣಸೂರಿನಲ್ಲಿ ಹಾಲಿ ಶಾಸಕ ಬಿಟ್ಟು ಕೊಟ್ಟರೆ ಅಸಮಾಧಾನ ಸ್ಫೋಟವಾಗುತ್ತೆ. ಇನ್ನು ಕೆ.ಆರ್.ನಗರ ಹಾಗೂ ಚಾಮರಾಜದಲ್ಲೂ ಈಗಾಗಲೇ ಮೊದಲಿನಿಂದಲೂ ಪಕ್ಷಕ್ಕೆ ದುಡಿದವರು ಇದ್ದಾರೆ. ಅವರನ್ನು ಬಿಟ್ಟು ಜಿಟಿಡಿ ಪುತ್ರನಿಗೆ ಕೊಟ್ಟರೆ ಕಾಂಗ್ರೆಸ್‌ನಲ್ಲಿ ಅಲ್ಲೋಲ-ಕಲ್ಲೋಲ ವಾಗಲಿದೆ. ಈ ಭಯ ಕಾಂಗ್ರೆಸ್‌ಗೆ ಸಹ ಇದೆ. ಒಂದು ವೇಳೆ ಪುತ್ರನಿಗೆ ನಿರಾಕರಿಸಿದ್ರೆ, ಜಿಟಿಡಿ ಬಿಜೆಪಿ ಸೇರುವುದಂತೂ ಖಚಿತ.ಇದರಿಂದ ಏನು ಮಾಡಬೇಕು ಎನ್ನುವ ಚಿಂತನೆ ಕಾಂಗ್ರೆಸ್ ನಡೆಸಿದೆ.
ಒಟ್ಟಿನಲ್ಲಿ ಜಿಟಿ ದೇವೇಗೌಡ ಇಟ್ಟಿರುವ ಬೇಡಿಕೆಗೆ ಕಾಂಗ್ರೆಸ್‌ಗೆ ದೊಡ್ಡ ತಲೆನೋವು ಶುರುವಾಗಿದ್ದು, ಇದನ್ನು ಕಾಂಗ್ರೆಸ್ ನಾಯಕರು ಹೇಗೆ ಬಗೆಹರಿಸುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.