ರಾಜ್ಯ ಬಿಜೆಪಿ ಉಸ್ತುವಾರಿಗೆ ಚಾಲೆಂಜ್ ಮಾಡಿದ ರೇವಣ್ಣ

By Suvarna NewsFirst Published Sep 7, 2021, 9:15 PM IST
Highlights

* ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್‌ಗೆ ರೇವಣ್ಣ ತಿರುಗೇಟು
* ಜೆಡಿಎಸ್ ಮುಳುಗುವ ಹಡಗು ಎಂದಿದ್ದ  ಅರುಣ್ ಸಿಂಗ್‌
* ಈ ಬಗ್ಗೆ ಜೆಡಿಎಸ್ ನಾಯಕ ಎಚ್‌ಡಿ ರೇವಣ್ಣ ಚಾಲೆಂಜ್

ಬೆಂಗಳೂರು, (ಸೆ.07): ಜೆಡಿಎಸ್ ಮುಳುಗುವ ಹಡಗು ಎಂದು ಹೇಳಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಜೆಡಿಎಸ್ ನಾಯಕ ಎಚ್‌ಡಿ ರೇವಣ್ಣ ಚಾಲೆಂಜ್ ಹಾಕಿದ್ದಾರೆ.

ಇಂದು(ಮಂಗಳವಾರ) ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಜೆಡಿಎಸ್ ಮುಳುಗುವ ಹಡಗು ಎಂದು ಹೇಳಿದ್ದಾರೆ. 2023ರ ಚುನಾವಣೆಯವರೆಗೂ ಈಗಿರುವ ಬಿಜೆಪಿ ಉಸ್ತುವಾರಿಯನ್ನೇ ಮುಂದುವರಿಸಿ ಎಂದು ಕೇಂದ್ರ ಬಿಜೆಪಿ ಮುಖಂಡರಲ್ಲಿ ಮನವಿ ಮಾಡುತ್ತೇನೆ. 2023ರ ಚುನಾವಣೆಯಲ್ಲಿ ಯಾರು ಮುಳುಗುತ್ತಾರೆಂದು ನೋಡೋಣ ಎಂದು ಸವಾಲು ಹಾಕಿದರು.

ಜೆಡಿಎಸ್ ಬಗ್ಗೆ ಅರುಣ್‌ಗೇನು ಗೊತ್ತು?: ಎಚ್‌ಡಿಕೆ ಆಕ್ರೋಶ

 ದೇವೇಗೌಡರು 60 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಏಳು ಬೀಳು ಎಲ್ಲವನ್ನೂ ನೋಡಿದ್ದಾರೆ. ಹಡಗುಗಳು ಮುಳುಗಿದಾಗ ಸಬ್ ಮೆರೀನ್ ಗಳು ಕೆಲಸ ಮಾಡುತ್ತವೆ. ಅದೇ ರೀತಿ ನಮ್ಮ ಜೆಡಿಎಸ್ ಪಕ್ಷ ಕೂಡಾ. ಹಡಗು ಮುಳುಗಿದರೂ ಕೆಲಸ ಮಾಡುವ ಮೆಷಿನರಿಯನ್ನು ಪಕ್ಷದಲ್ಲಿ ಇಟ್ಟುಕೊಂಡಿದ್ದೇವೆ. 2023ರ ಚುನಾವಣೆಯಲ್ಲಿ ನೋಡೋಣ ಎಂದು ತಿರುಗೇಟು ಕೊಟ್ಟರು.

ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡಿಲ್ಲವೆಂದು ಹೇಳಿದ್ದಾರೆ. ಎರಡು ವರ್ಷ ಏನು ದ್ವೇಷದ ರಾಜಕಾರಣ ಮಾಡಿದ್ದಾರೆ ಎಂದು ಅಸೆಂಬ್ಲಿಯಲ್ಲಿ ಹೇಳುತ್ತೇನೆ. ರಾಜ್ಯದ ಸಿಎಂ ಸೌಜನ್ಯದಿಂದ ದೇವೇಗೌಡರನ್ನು ನೋಡಲು ಬಂದಿದ್ದರು, ಗೌರವ ಕೊಟ್ಟಿದ್ದೇವೆ. ನಾವೇನಾದರೂ ಬಿಜೆಪಿ ಜೊತೆ ಸೇರುತ್ತೇವೆ ಅರ್ಜಿ ಹಾಕಿದ್ದೇವಾ ಎಂದು ರೇವಣ್ಣ ಗುಡುಗಿದರು.

ಕಲ್ಬುರ್ಗಿ ಪಾಲಿಕೆ ಅಧಿಕಾರ ವಿಚಾರವಾಗಿ ಮಾತನಾಡಿದ ಅವರು, ಖರ್ಗೆಯವರು ದೇವೇಗೌಡರ ಸಮಕಾಲೀನರು. ದೇವೇಗೌಡರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ನಾವು ಅದಕ್ಕೆ ಬದ್ಧ ಎಂದು ಸ್ಪಷ್ಟಪಡಿಸಿದರು.

click me!