'ಸಿದ್ದರಾಮಯ್ಯನವರಿಗೆ ಹಿಂದುಳಿದ ವರ್ಗದವರ ಮೇಲೆ ಕಾಳಜಿ ಇದೆ, ಒಪ್ಪಲೇಬೇಕು'

By Suvarna NewsFirst Published Sep 7, 2021, 7:16 PM IST
Highlights

* ಜಾತಿ ಜನ ಗಣತಿ ಮಂಡನೆ ವಿಚಾರ
* ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಹೊಗಳಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ
* ಸರ್ಕಾರ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲಿದೆ ಕೋಟಾ

ಬೆಂಗಳೂರು, (ಸೆ.07):  ಜಾತಿ ಜನ ಗಣತಿ ಮಂಡನೆ ವಿಚಾರಕ್ಕೆ ಸಂಬಂಧಿದಂತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಹೊಗಳಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಇಂದು (ಸೆ.07) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಹಿಂದುಳಿದ ವರ್ಗದವರ ಮೇಲೆ ಕಾಳಜಿ ಇದೆ. ಇದನ್ನು ನಾವು ಒಪ್ಪಲೇಬೇಕು. ಆದ್ರೆ ಜಾತಿ ಜನಗಣತಿ ಸಮೀಕ್ಷೆ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸಿದ್ದರಾಮಯ್ಯರನ್ನು ಹೊಗಳಿದರು.

 ಸಿದ್ದರಾಮಯ್ಯ ಹಿಂದುಳಿದ ಸಮಾಜದ ದೊಡ್ಡ ನಾಯಕ : ಹೊಗಳಿದ ಶ್ರೀರಾಮುಲು

ಸಿದ್ದರಾಮಯ್ಯನವರ ಅವಧಿಯಲ್ಲಿ ಜಾತಿ ಜನಗಣತಿ ವರದಿಗೆ 162 ಕೋಟಿ ರೂ ಕರ್ಚು ಮಾಡಲಾಗಿತ್ತು. ಸಿದ್ದರಾಮಯ್ಯನವರೇ ಯಾಕೆ ವರದಿ ಬಿಡುಗಡೆ ಮಾಡಲಿಲ್ಲವೋ ಅವರೇ ಹೇಳಬೇಕು. ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಸರ್ಕಾರದ ಭಾಗವಾಗಿದ್ದಾಗಲೂ ಬಿಡುಗಡೆ ಮಾಡಲಿಲ್ಲ. ಈಗ ನಮ್ಮ ಸರ್ಕಾರದಲ್ಲಿ ಜಯಪ್ರಕಾಶ್ ಹೆಗ್ಡೆ ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದಾರೆ. ಸಮೀಕ್ಷೆ ಬಗ್ಗೆ ಜಯಪ್ರಕಾಶ್ ಹೆಗ್ಡೆಯವ್ರು ಪತ್ರಿಕಾ ಹೇಳಿಕೆ ಹೊರಡಿಸಿದ್ದಾರೆ ಎಂದರು.

ವರದಿಯಲ್ಲಿ ಸದಸ್ಯ ಕಾರ್ಯದರ್ಶಿಗಳ ಸಹಿಯೇ ಇಲ್ಲ. ಸಹಿ ಇಲ್ಲದೇ ಜಾತಿ ಜನಗಣತಿ ಸಮೀಕ್ಷೆ ಅಧಿಕೃತವಾಗುವುದಿಲ್ಲ. ವರದಿಯ ಅಧ್ಯಯನ ಮಾಡಲು ನನಗೆ ಸಮಯ ಬೇಕು ಅಂತ ಜಯಪ್ರಕಾಶ್ ಹೆಗ್ಡೆ ಕೇಳಿದ್ದಾರೆ. ವರದಿಯನ್ನು ಜಯಪ್ರಕಾಶ್ ಹೆಗ್ಡೆಯವರು ಪರಿಶೀಲಿಸಿ ಸರ್ಕಾರಕ್ಕೆ ಮಂಡಿಸುತ್ತಾರೆ. ಆಗ ಸಚಿವ ಸಂಪುಟ ಸಭೆಯಲ್ಲಿ ಅದರ ಬಗ್ಗೆ ಚರ್ಚೆ ಮಾಡ್ತೇವೆ ಎಂದು ಸ್ಪಷ್ಟಪಡಿಸಿದರು.

ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಕೆಲವರು ವರದಿ ಬಿಡುಗಡೆಗೆ ವಿರೋಧಿಸುತ್ತಿರುವುದು ಸಹಜವಾಗಿದೆ. ಕೆಲವು ವರದಿ ಬಿಡುಗಡೆ ಮಾಡಿ ಅಂತಿದ್ದಾರೆ. ಅಭಿಪ್ರಾಯ ಭೇದ ಏನೇ ಇದ್ದರೂ. ವರದಿ ಬಗ್ಗೆ ಸರ್ಕಾರ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.

click me!