ಗಾಂಧಿ ಹಂತಕರೇ ದೇಶ ವಿಭಜನೆಗೆ ಕಾರಣ: ಬಿಜೆಪಿ ವಿರುದ್ಧ ಎಚ್‌ಡಿಕೆ ವಾಗ್ದಾಳಿ

Published : Aug 16, 2022, 05:10 AM IST
ಗಾಂಧಿ ಹಂತಕರೇ ದೇಶ ವಿಭಜನೆಗೆ ಕಾರಣ: ಬಿಜೆಪಿ ವಿರುದ್ಧ ಎಚ್‌ಡಿಕೆ ವಾಗ್ದಾಳಿ

ಸಾರಾಂಶ

ಇಂದು ದೇಶ ಪ್ರೇಮವನ್ನು ಗುತ್ತಿಗೆ ಪಡೆದವರಂತೆ ವರ್ತಿಸುತ್ತಿರುವ ಶಕ್ತಿಗಳೇ ಸ್ವಾತಂತ್ರ್ಯಾ ನಂತರ ದೇಶ ವಿಭಜನೆಗೆ ಕಾರಣವಾದವು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಬೆಂಗಳೂರು (ಆ.16): ಇಂದು ದೇಶ ಪ್ರೇಮವನ್ನು ಗುತ್ತಿಗೆ ಪಡೆದವರಂತೆ ವರ್ತಿಸುತ್ತಿರುವ ಶಕ್ತಿಗಳೇ ಸ್ವಾತಂತ್ರ್ಯಾ ನಂತರ ದೇಶ ವಿಭಜನೆಗೆ ಕಾರಣವಾದವು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸೋಮವಾರ ಜೆಡಿಎಸ್‌ ಕಚೇರಿಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶದಲ್ಲಿ ಮಾನವೀಯತೆ, ಮಾನವನ ಬದುಕಿನ ಬಗ್ಗೆ ಚಿಂತಿಸುವ ಅಗತ್ಯವಿದ್ದು, ಸರ್ವರಿಗೂ ಸಮಬಾಳು, ಸಮಪಾಲು ಕೊಡಲು ಪ್ರಾಮಾಣಿಕವಾಗಿ ಸ್ಪಂದಿಸಿದಾಗ ಮಾತ್ರ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ. 

ಸ್ವಾತಂತ್ರ್ಯ ಬಂದು 75 ವರ್ಷವಾದರೂ ಬಡತನ ನಿವಾರಣೆಯಾಗಿಲ್ಲ. ಶತಮಾನೋತ್ಸವ ಆಚರಿಸುವ ವೇಳೆಗಾದರೂ ದೇಶದ ಜನರು ಸಂಘರ್ಷರಹಿತ, ಶಾಂತಿ ಮತ್ತು ಸಹಬಾಳ್ವೆಯಿಂದ ಬಾಳುವಂತಹ ವಾತಾವರಣ ಸೃಷ್ಟಿಸಬೇಕಿದೆ ಎಂದು ಹೇಳಿದರು. ಒಂದು ಕಡೆ ಮಾಜಿ ಪ್ರಧಾನಿ ಜವಾಹರ್‌ಲಾಲ್‌ ನೆಹರು ಭಾವಚಿತ್ರ ಕಣ್ಮರೆ ಮಾಡುತ್ತಾರೆ. ಮತ್ತೊಂದು ಕಡೆ ನೆಹರು ರಾಷ್ಟ್ರವಿಭಜನೆ ಆಗಲು ಕಾರಣ ಎನ್ನುವ ನೆಪ ಹೇಳುತ್ತಾರೆ. ಅಂದು ಗಾಂಧೀಜಿ ಅವರನ್ನು ಕೊಲೆ ಮಾಡಿದವರೇ ದೇಶ ವಿಭಜನೆಯಾಗಲು ಕಾರಣ. ಅಂದು ನಿಮ್ಮ (ಬಿಜೆಪಿ) ಸಂಕುಚಿತ ಮನೋಭಾವವೇ ದೇಶ ವಿಭಜನೆಯಾಗಲು ಕಾರಣ. 

ಜೆಡಿಎಸ್‌ ಸ್ವತಂತ್ರ ಸರ್ಕಾರ ರಚಿಸಲು ಆಶೀರ್ವದಿಸಿ: ಎಚ್‌.ಡಿ.ಕುಮಾರಸ್ವಾಮಿ

ಈಗ ನೋಡಿದರೆ ನೆಹರು ಅವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹರಿಹಾಯ್ದರು. 75 ವರ್ಷದ ಸವಿನೆನಪಿಗಾಗಿ ಬಿಜೆಪಿ ಹರ್‌ಘರ್‌ ತಿರಂಗ ಎಂಬ ಕಾರ್ಯಕ್ರಮ ಮಾಡಿದೆ. ಕಾಂಗ್ರೆಸ್‌ ನಡಿಗೆ ಕಾರ್ಯಕ್ರಮ ಮಾಡಿದೆ. ಎರಡೂ ರಾಷ್ಟ್ರೀಯ ಪಕ್ಷಗಳೂ ಜನರಿಗೆ ಮಂಕುಬೂದಿ ಎರಚುತ್ತಿವೆ. ಸ್ವಾತಂತ್ರ್ಯಕ್ಕಾಗಿ ಹುಟ್ಟಿಕೊಂಡ ಕಾಂಗ್ರೆಸ್‌ ಬೇರೆ. ಇಂದು ಕಾಂಗ್ರೆಸ್‌ ಹೆಸರು ಹೇಳಿ ರಾಜಕೀಯ ಮಾಡುವವರು ನಕಲಿ ಕಾಂಗ್ರೆಸ್ಸಿಗರು. 

ನೆಹರು ಭಾವಚಿತ್ರ ವಿಚಾರದಲ್ಲಿ ಬಿಜೆಪಿ ಸರ್ಕಾರ ಹೇಗೆ ನಡೆದುಕೊಂಡಿದೆ ಎಂಬುದನ್ನು ನೋಡಿದ್ದೇನೆ. ಅದು ನಾವೆಲ್ಲರೂ ತಲೆ ತಗ್ಗಿಸುವ ಕೆಲಸವಾಗಿದೆ ಎಂಬುದು ನನ್ನ ಅಭಿಪ್ರಾಯ. ನೆಹರು ಕುಟುಂಬ ಸ್ವಾತಂತ್ರ್ಯ ಹೋರಾಟದಲ್ಲಿ ಹೇಗೆ ಭಾಗವಹಿಸಿತ್ತು, ಅವರ ಕೊಡುಗೆ ಏನೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ವಿಧಾನಪರಿಷತ್‌ ಸದಸ್ಯ ಟಿ.ಎ.ಶರವಣ, ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಆರ್‌.ಪ್ರಕಾಶ್‌ ಇತರರು ಉಪಸ್ಥಿತರಿದ್ದರು.

ಯಾವ ಪಕ್ಷದಲ್ಲೂ ನೈತಿಕತೆ ಉಳಿದಿಲ್ಲ: ಯಾವ ಪಕ್ಷದ ಮುಖಂಡರು ಹೇಳಿಕೆ ಕೊಟ್ಟರು ನಾನು ಇನ್ನು ಮುಂದೆ ತಲೆಕೆಡಿಸಿಕೊಳ್ಳೊಲ್ಲ. ಜನರ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಒತ್ತು ನೀಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು. ತಾಲೂಕಿನ ಗರಕಹಳ್ಳಿಯಲ್ಲಿ ಶ್ರೀ ಸಿದ್ದೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಬಿಎಂಪಿಯ ಚುನಾವಣೆ ಮುಂದೂಡಲು ಬಿಜೆಪಿ ಸರ್ಕಾರ ಕುತಂತ್ರ: ಎಚ್‌ಡಿಕೆ

ಕಾಂಗ್ರೆಸ್‌ ಮುಖಂಡ ಪ್ರಿಯಾಂಕ್‌ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ಇಂತಹ ವಿಚಾರಗಳನ್ನು ಮಾತನಾಡುವುದಕ್ಕೆ ಯಾವುದೇ ಪಕ್ಷಗಳಲ್ಲೂ ನೈತಿಕತೆ ಉಳಿದಿಲ್ಲ. ಇದಕ್ಕೆ ಹೆಚ್ಚಿನ ವ್ಯಾಖ್ಯಾನ ಕೊಡುವ ಅವಶ್ಯಕತೆಯೂ ಇಲ್ಲ. ಅವರು ಯಾವುದೋ ಒಂದು ಸಂದರ್ಭದಲ್ಲಿ ಈ ವಿಚಾರ ಮಾತನಾಡಿದ್ದಾರೆ. ಬಿಜೆಪಿಯವರು ಈ ವಿಷಯವನ್ನು ಬೇರೆ ರೀತಿ ಅರ್ಥ ಕಲ್ಪಿಸಿದ್ದಾರೆ. ಈ ವಿಚಾರ ಕುರಿತು ಪ್ರಿಯಾಂಕ್‌ ಖರ್ಗೆಯವರು ನಾನು ಕ್ಷಮೆ ಕೇಳುತ್ತೇನೆ, ವಿಷಾದ ವ್ಯಕ್ತಪಡಿಸುತ್ತೇನೆ ಅಂತಲೂ ಹೇಳಿದ್ದಾರೆ. ಈ ವಿಚಾರಕ್ಕೆ ಮಹತ್ವ ನೀಡುವ ಅವಶ್ಯಕತೆ ಇಲ್ಲ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಾಲುಮರದ ತಿಮ್ಮಕ್ಕ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ: ಸಿಎಂ ಸಿದ್ದರಾಮಯ್ಯ
Karnataka News Live: ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ: ಯತೀಂದ್ರಗೆ ಆಲ್ ದಿ ಬೆಸ್ಟ್ ಹೇಳಿದ ಕಾಂಗ್ರೆಸ್ ಶಾಸಕ