
ಕೋಲಾರ (ಆ.16): ಸರ್ಕಾರ ಆಡಳಿತ ನಡೆಸುತ್ತಿಲ್ಲ ಮ್ಯಾನೇಜ್ ಮಾಡುತ್ತಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ಸಚಿವರಾಗಿದ್ದುಕೊಂಡು ಜವಾಬ್ದಾರಿಯುತ ಹೇಳಿಕೆ ನೀಡಬೇಕು. ಇಲ್ಲ ರಾಜೀನಾಮೆ ನೀಡಬೇಕು ಎಂದು ಹೇಳಿದರು. ನಗರದ ಸರ್.ಎಂ.ವಿ. ಕ್ರೀಡಾಂಗಣದಲ್ಲಿ 76ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಚಿವ ಮಾಧುಸ್ವಾಮಿಯವರು ಹಿರಿಯರು ಕಾನೂನು ಸಚಿವರಾಗಿದ್ದು ಸರ್ಕಾರಕ್ಕೆ ಮುಜುಗರ ಉಂಟು ಮಾಡುವುದು ಸಮಂಜಸವಲ್ಲ ಎಂದರು.
ಚುನಾವಣೆಗೆ ಹಿಂಜರಿಯುವುದಿಲ್ಲ: ರಾಜ್ಯ ಸರ್ಕಾರವು ಚುನಾವಣೆಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ. ಚುನಾವಣೆಗೆ ನಾವು ಎಂದಿಗೂ ಹಿಂಜರಿಯುವುದಿಲ್ಲ. ನಾಳೆಯೇ ಚುನಾವಣೆ ಅಧಿಸೂಚನೆ ಪ್ರಕಟಿಸಿದರೂ ನಮ್ಮ ಸರ್ಕಾರ ಸಿದ್ದವಿದೆ. ಅದರೆ ಕಾಂಗ್ರೆಸ್‌ನ ಕೆಲವರಿಗೆ ಚುನಾವಣೆ ಬಗ್ಗೆ ಭೀತಿ ಇರುವುದರಿಂದ ತಕರಾರು ಅರ್ಜಿಗಳನ್ನು ಹಾಕುತ್ತಾ ತಡೆಯುಂಟು ಮಾಡುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಹಿಂದುಳಿದ ವರ್ಗಗಳ ಮೀಸಲಾತಿ ಶೇ 50ರಷ್ಟು ಇದ್ದರೂ ಸಹ ನಮಗೆ ಯಾವುದೇ ಸಮಸ್ಯೆ ಇಲ್ಲ ಅದರೊಳಗೆ ಚುನಾವಣೆ ನಡೆಸಲು ನಾವು ಸಿದ್ದವಿದ್ದೇವೆ ಎಂದರು.
ಮಾಧುಸ್ವಾಮಿ ಇಲಾಖೆ ಕುಂಟುತ್ತಿರಬೇಕು: ಸಚಿವ ಎಸ್‌ಟಿಎಸ್ ತಿರುಗೇಟು
ಕಾಂಗ್ರೆಸ್ ಕಾರ್ಯಕ್ರಮಗಳಿಗೆ ಜನರನ್ನು ಕರೆ ತರಲು ಅವರಂತೆ ನಾವು ಹಣ ನೀಡಿ ಕರೆ ತರುವುದಿಲ್ಲ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಜನರು ಮೆಚ್ಚಿ ಸ್ವಯಂ ಪ್ರೇರಿತರಾಗಿ ಬರುತ್ತಿದ್ದಾರೆ ಅವರ ಹಾಗೆ ಇಂದಿನ ಬೆಂಗಳೂರಿನ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಮೆಟ್ರೋಗೆ ಬಸ್‌ಗಳಿಗೆ ಹಣ ಕಟ್ಟಿರುವವರು ಯಾರು, ಬಸ್‌ಗಳನ್ನು ಮಾಡಿ ಜನರನ್ನು ಕರೆಸುತ್ತಿರುವವರು ಯಾರು ಎಂದು ಪ್ರಶ್ನಿಸಿದರು.
ಯರ್‌ಗೋಳ್ ಡ್ಯಾಂಗೆ ಕೆಸಿ ವ್ಯಾಲಿ ನೀರು?: ಯರ್‌ಗೋಳ್ ಡ್ಯಾಮ್‌ಗೆ ಕೆ.ಸಿ. ವ್ಯಾಲಿ ನೀರು ಸೇರ್ಪಡೆಯಾಗಿದೆ ಎಂಬ ಬಗ್ಗೆ ನನಗೆ ಯಾವುದೇ ಮಾಹಿತಿ ಬಂದಿಲ್ಲ. ಈ ಯೋಜನೆಯನ್ನು ಕುಡಿಯುವ ನೀರಿಗಾಗಿ ಮಂಜೂರು ಮಾಡಲಾಗಿದೆ. ಕೆ.ಸಿ.ವ್ಯಾಲಿ ನೀರು ಸೇರ್ಪಡೆ ಅಗಿದೆಯೇ ಇಲ್ಲವೆ ಬಗ್ಗೆ ಗಮನ ಹರಿಸಲು ಆ. 19ರಂದು ಸಂಬಂಧಪಟ್ಟಅಧಿಕಾರಿಗಳ ಸಭೆ ಕರೆದು ಅಗತ್ಯ ಕ್ರಮವನ್ನು ಕೈಗೊಳ್ಳುತ್ತೇನೆ ಎಂದು ಹೇಳಿದರು. ರಸ್ತೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಯೋಜನೆಗಳಲ್ಲಿ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಸರ್ಕಾರ ನಡೆಯುತ್ತಿಲ್ಲ ಹೇಗೋ ಮ್ಯಾನೇಜ್ ಮಾಡ್ತಿದ್ದೀವಿ ಅಷ್ಟೇ: ಸಚಿವ ಮಾಧುಸ್ವಾಮಿ ಆಡಿಯೋ ವೈರಲ್
ಕಳೆದ ಎರಡು ತಿಂಗಳಲ್ಲಿ 50 ವರ್ಷದಿಂದ ಆಗದಂತ ಮಳೆಯಿಂದಾಗಿ ಯಾವೂದೇ ಅಭಿವೃದ್ದಿ ಕೆಲಸಗಳನ್ನು ಕೈಗೊಳ್ಳಲು ಸಾಧ್ಯವಾಗಲಿಲ್ಲ. ಆ. 19ರಂದು ಅಧಿಕಾರಿಗಳ ಸಭೆಯಲ್ಲಿ ಸಮಗ್ರ ಮಾಹಿತಿ ಪಡೆದು ಅಭಿವೃದ್ದಿ ಕಾಮಗಾರಿಗಳ ಬಗ್ಗೆ ಸಂಪುಟದಲ್ಲಿ ಮಂಜೂರಾತಿ ಪಡೆಯುವುದಾಗಿ ತಿಳಿಸಿದ ಅವರು ಏನೆ ತಪ್ಪುಗಳು ಅಗಿದ್ದರೂ ಅವುಗಳನ್ನು ಸರಿಪಡೆಸಲು ಕ್ರಮ ಜರುಗಿಸುತ್ತೇನೆ ಎಂದರು. ಜಿಲ್ಲಾಧಿಕಾರಿಗಳ ಸಹಿಯನ್ನು ಪೋರ್ಜರಿ ಮಾಡಿರುವ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗಿದೆ. ಇದರ ಬಗ್ಗೆ ಪೋಲಿಸ್ ಇಲಾಖೆ ಸಮಗ್ರ ತನಿಖೆ ನಡೆಸುತ್ತಿದೆ. ಯಾರೇ ತಪ್ಪು ಮಾಡಿದ್ದರೂ ಕಠಿಣ ಕ್ರಮ ಜರುಗಿಸಲಾಗುವುದು. ಇಂಥಹ ಘಟನೆಗಳಲ್ಲಿ ಅಧಿಕಾರಿಗಳನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.