
ಬೆಂಗಳೂರು (ಅ.08): ಅಧಿಕಾರದಲ್ಲಿದ್ದಾಗಲೇ ಮತ್ತೆ ಅಧಿಕಾರ ನೀಡದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಜನತೆ ಅರ್ಧಚಂದ್ರ ಪ್ರಯೋಗ ಮಾಡಿದರು. ಈಗ ಉಪಚುನಾವಣೆಯಲ್ಲಿ ಕಾಂಗ್ರೆಸ್ ಕೈ ಹಿಡಿಯುತ್ತಾರೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಕೇವಲ ಭ್ರಮೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಜನಕಲ್ಯಾಣಕ್ಕೆ ದೂರದೃಷ್ಟಿಯ ಕಾರ್ಯಸಾಧ್ಯವಾದ ಯೋಜನೆಗಳನ್ನು ರೂಪಿಸುವಲ್ಲಿ ಎಡವಿದ್ದ ಸಿದ್ದರಾಮಯ್ಯ ಅಗ್ಗದ ಯೋಜನೆಗಳ ಮೂಲಕ ಜನರ ತುಟಿಗೆ ತುಪ್ಪ ಸವರುವ ಆಡಳಿತಕ್ಕೆ ಕಳೆದ ಬಾರಿ ತಕ್ಕ ಶಾಸ್ತಿ ಮಾಡಿದ್ದರು. ಇವರ ದುರಾಡಳಿತವನ್ನು ಜನತೆ ಇನ್ನೂ ಮರೆತಿಲ್ಲ. ಉಪಚುನಾವಣೆಯಲ್ಲೂ ಕಾಂಗ್ರೆಸ್ ಪಾಠ ಕಲಿಸಿದ್ದಾರೆ ಎಂದು ಟ್ವೕಟರ್‌ನಲ್ಲಿ ಕಿಡಿಕಾರಿದ್ದಾರೆ.
ಅವನಂತಹ ಪೆದ್ದ ಯಾರೂ ಇಲ್ಲ: ಏಕವಚನದಲ್ಲಿ ಸಿದ್ದರಾಮಯ್ಯ ವಾಗ್ದಾಳಿ
‘ಯಾರನ್ನು ಯಾರು ಎಲ್ಲಿಗೆ ಕಳುಹಿಸಿದರು? ಸ್ವಾರ್ಥ ರಾಜಕಾರಣಕ್ಕಾಗಿ ಮೂಲ ಕಾಂಗ್ರೆಸ್ಸಿಗರ ಮೇಲೆ ಯಾರು ಸವಾರಿ ಮಾಡುತ್ತಿದ್ದಾರೆ? ಎಂಬುದನ್ನು ತಿಳಿಯದಷ್ಟುಜನ ಪೆದ್ದರಲ್ಲ. ನಮ್ಮ ಮೂವರು ಶಾಸಕರು ಪಕ್ಷದಿಂದ ಹೊರ ಹೋಗಲು ನಡೆದ ಸಂಚಿನಲ್ಲಿ ಹಣ ಅಧಿಕಾರದ ಆಮಿಷ ಮಾತ್ರವಲ್ಲ. ಕೆಲವರ ‘ಕೈ’ವಾಡ ಕೂಡ ಕಾರಣ. ಕಾಂಗ್ರೆಸ್ ಪಕ್ಷದ ಹತ್ತಾರು ಮಂದಿ ಪೈಕಿ ಎದೆ ಸೀಳಿದರೆ ಸಿದ್ದು ಕಾಣುತ್ತಾರೆ ಎಂಬ ಅನುಯಾಯಿಗಳು ಬಿಜೆಪಿಗೆ ಹಾರಲು ಮಸಲತ್ತು ನಡೆಸಿದವರು ಯಾರೆಂಬುದು ‘ಸಿದ್ದವನ’ದಲ್ಲಿ ಕುಳಿತಿದ್ದ ‘ರಾಮ’ನಿಗೂ ಗೊತ್ತಿತ್ತು’ ಎಂದು ವಾಗ್ದಾಳಿ ನಡೆಸಿದ್ದಾರೆ.
‘ಮೈತ್ರಿ ಸರ್ಕಾರ ತೆಗೆಯಲು ಅಳಲೇಕಾಯಿ ಪಂಡಿತನಂತೆ ಔಷಧ ಅರೆದ ವ್ಯಕ್ತಿಗೆ ನಮ್ಮ ಮೂವರು ಶಾಸಕರು ಕದ್ದು ಓಡಿ ಹೋದರೋ? ನಾವೇ ಕತ್ತು ಹಿಡಿದು ನೂಕಿದವೋ? ಎಂದು ಗೊತ್ತಿಲ್ಲದ ಜಾಣ ಪೆದ್ದನಾಗಿದ್ದು ವಿಪರ್ಯಾಸ’ ಎಂದು ಲೇವಡಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.