ಬೆಳಗಾವಿ ಟಿಕೆಟ್‌ ಅಂಗಡಿ ಕುಟುಂಬಕ್ಕೆ ನೀಡಲು ಲಾಬಿ, ಅಂಗಡಿ ಪುತ್ರಿ ಪರ ಶೆಟ್ಟರ್‌!

By Suvarna News  |  First Published Oct 8, 2020, 7:15 AM IST

ಬೆಳಗಾವಿ ಟಿಕೆಟ್‌ ಅಂಗಡಿ ಕುಟುಂಬಕ್ಕೆ ನೀಡಲು ಲಾಬಿ| ತಮ್ಮ ಸೊಸೆಯೂ ಆದ ಅಂಗಡಿ ಪುತ್ರಿ ಪರ ಶೆಟ್ಟರ್‌| ಇಲ್ಲವಾದಲ್ಲಿ ಅಂಗಡಿ ಪತ್ನಿಗೆ ಕೊಡಿಸಲು ಪ್ರಯತ್ನ| - ಉಪ​ಚು​ನಾ​ವಣೆ ಘೋಷ​ಣೆಗೂ ಮುನ್ನವೇ ಕಸರತ್ತು ಆರಂಭ| ಪಾಟೀಲ್‌ ತ್ರಯರು, ಮೆಟ​ಗುಡ್ಡ, ಚಿಕ್ಕ​ನ​ಗೌ​ಡರ ರೇಸ್‌ನ​ಲ್ಲಿ| ಸಿಎಂ ಯಡಿ​ಯೂ​ರಪ್ಪರನ್ನು ಭೇಟಿ ಮಾಡಿ ಟಿಕೆ​ಟ್‌ಗೆ ಪ್ರಯ​ತ್ನ


ಬೆಂಗಳೂರು(ಅ.08): ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಇನ್ನೂ ಘೋಷಣೆ ಆಗಿಲ್ಲವಾದರೂ ಆಡಳಿತಾರೂಢ ಬಿಜೆಪಿಯಲ್ಲಿ ಈಗಾಗಲೇ ಟಿಕೆಟ್‌ಗಾಗಿ ತೆರೆಮರೆಯಲ್ಲಿ ಕಸರತ್ತು ಆರಂಭವಾಗಿದೆ.

ಸುರೇಶ ಅಂಗಡಿ ಅವರ ನಿವಾಸಕ್ಕೆ ಬುಧವಾರ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಬೆಳಗಾವಿಗೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಪ್ರವಾಸಿ ಮಂದಿರದಲ್ಲಿ ಆಕಾಂಕ್ಷಿ ಅಭ್ಯರ್ಥಿಗಳು ಲಾಬಿ ನಡೆಸುವ ಪ್ರಯತ್ನ ಮಾಡಿದರು.

Latest Videos

undefined

ಕೆಲವರು ಉಪ​ಚು​ನಾ​ವ​ಣೆ​ಯಲ್ಲಿ ಸುರೇಶ ಅಂಗಡಿ ಅವರ ಕುಟುಂಬದ ಸದಸ್ಯರಿಗೇ ಆದ್ಯತೆ ನೀಡಬೇಕು ಎನ್ನುವ ಒತ್ತಡವನ್ನೂ ಮುಖ್ಯಮಂತ್ರಿ ಮೇಲೆ ಹೇರಿದರು. ಒಂದು ವೇಳೆ ಅಂಗಡಿ ಕುಟುಂಬದವರಿಗೆ ಟಿಕೆಟ್‌ ನೀಡದಿದ್ದರೆ ತಮ್ಮ ಹೆಸರನ್ನು ಪರಿಗಣಿಸುವಂತೆ ಮನವಿ ಮಾಡಿಕೊಂಡರು ಎನ್ನಲಾಗಿದೆ.

ಅಂಗಡಿ ಪತ್ನಿ ಅಥವಾ ಪುತ್ರಿ ಪರ ಶೆಟ್ಟರ್‌ ಯತ್ನ:

ಉಪಚುನಾವಣೆ ಘೋಷಣೆಯಾಗಿಲ್ಲ. ಆದರೂ ಬೆಳ​ಗಾವಿ ಬಿಜೆಪಿ ವಲಯದಲ್ಲಿ ಟಿಕೆಟ್‌ ಆಕಾಂಕ್ಷಿ ಅಭ್ಯರ್ಥಿಗಳ ಪಟ್ಟಿಹನುಮನ ಬಾಲದಂತೆ ಬೆಳೆಯುತ್ತಲೇ ಸಾಗಿದೆ. ಅಂಗಡಿ ಅವರ ಬೀಗರೂ ಆಗಿರುವ ಸಚಿವ ಜಗದೀಶ ಶೆಟ್ಟರ್‌ ಅವರು ತಮ್ಮ ಸೊಸೆಯೂ ಆದ ಸುರೇಶ ಅಂಗಡಿ ಅವರ ಕಿರಿಯ ಪುತ್ರಿ ಶ್ರದ್ಧಾ ಶೆಟ್ಟರ್‌ ಅವರನ್ನು ಕಣಕ್ಕಿಳಿಸಲು ತಯಾರಿ ನಡೆಸುತ್ತಿದ್ದಾರೆ ಎನ್ನುವ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿವೆ.

ಒಂದು ವೇಳೆ ಅಂಗಡಿ ಪುತ್ರಿಗೆ ಟಿಕೆಟ್‌ ನೀಡದಿದ್ದರೆ ಅವರ ಪತ್ನಿಗಾದರೂ ಟಿಕೆಟ್‌ ನೀಡಬೇಕು ಎಂಬ ನಿಟ್ಟಿನಲ್ಲಿ ಶೆಟ್ಟರ್‌, ಮತ್ತವರ ಆಪ್ತರು ವರಿಷ್ಠರ ಮಟ್ಟದಲ್ಲಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ, ಕಳೆದ ಲೋಕಸಭಾ ಚುನಾವಣೆಗೂ ಮೊದಲು ನಿಧನ ಹೊಂದಿದ್ದ ಕೇಂದ್ರದ ಸಚಿವರಾಗಿದ್ದ ಅನಂತಕುಮಾರ್‌ ಅವರ ಪತ್ನಿಗೆ ಬಿಜೆಪಿ ವರಿಷ್ಠರು ಟಿಕೆಟ್‌ ನೀಡಲು ಒಪ್ಪಲಿಲ್ಲ. ಹೀಗಾಗಿ, ಬೆಳಗಾವಿ ಕ್ಷೇತ್ರದಲ್ಲೂ ಇದೇ ಮುಂದುವರೆಯುವುದೇ ಅಥವಾ ಇಲ್ಲವೇ ಎಂಬುದು ಕುತೂಹಲವಾಗಿದೆ.

10ಕ್ಕೂ ಹೆಚ್ಚು ಆಕಾಂಕ್ಷಿಗಳು

ಇನ್ನು ಬಿಜೆಪಿ ಟಿಕೆಟ್‌ ಆಕಾಂಕ್ಷಿ ಅಭ್ಯರ್ಥಿಗಳಾದ ಮಾಜಿ ಶಾಸಕರಾದ ಡಾ| ವಿಶ್ವನಾಥ ಪಾಟೀಲ, ಸಂಜಯ ಪಾಟೀಲ, ಜಗದೀಶ ಮೆಟಗುಡ್ಡ, ದೆಹಲಿಯ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ, ಎಂ.ಬಿ.ಜಿರಲಿ, ರಾಜು ಚಿಕ್ಕನಗೌಡರ ಮತ್ತಿತರರು ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ಈ ನಡುವೆ ಮಹಿಳಾ ಟಿಕೆಟ್‌ ಆಕಾಂಕ್ಷಿಗಳಾದ ಡಾ.ಸೋನಾಲಿ ಸರ್ನೋಬತ್‌, ಜಲಮಂಡಳಿ ಸದಸ್ಯೆ ದೀಪಾ ಕುಡಚಿ ಸೇರಿದಂತೆ ಮತ್ತಿತರರು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

click me!