ಮಾಜಿ ಸಚಿವ ಜೆಡಿಎಸ್ ಹಿರಿಯ ಮುಖಂಡರಾದ ಜಿ ಟಿ ದೇವೇಗೌಡ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ
ಬೆಂಗಳೂರು (ಅ.08): ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮೇಲೆ ಐಟಿ, ಇಡಿ, ಈಗ ಸಿಬಿಐ ಹೀಗೆ ಒಂದರ ಮೇಲೊಂದು ದಾಳಿ ನಡೆಯುತ್ತಿರುವುದರಿಂದ ಅವರು ಬಹಳ ನೊಂದಿದ್ದಾರೆ. ಇದೊಂದು ರಾಜಕೀಯ ಪ್ರೇರಿತ ದಾಳಿ. ಡಿ.ಕೆ.ಶಿವಕುಮಾರ್ ಮತ್ತು ನಾನು ಬಹಳ ವರ್ಷದ ಸ್ನೇಹಿತರು. ಹಾಗಾಗಿ ಭೇಟಿ ನೀಡಿ ಅವರ ಕುಟುಂಬಕ್ಕೆ ಧೈರ್ಯ ತುಂಬಿದ್ದೇನೆ’ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗಲೂ ಡಿ.ಕೆ.ಶಿವಕುಮಾರ್ ಅವರ ಮೇಲೆ ದಾಳಿ ನಡೆದಿತ್ತು. ಐಟಿ- ಇಡಿ ದಾಳಿ ನಡೆಸಿ ಶಿವಕುಮಾರ್ ಅವರನ್ನು ಬಂಧಿಸಿದ್ದರು. ಯಾವುದೇ ಸರ್ಕಾರ ಇರಲಿ ಯೋಚನೆ ಮಾಡಬೇಕು, ಚುನಾವಣೆ ಘೋಷಣೆಯಾದ ಬಳಿಕ ಈ ರೀತಿ ದಾಳಿ ಮಾಡಿಸುವುದು ಸರಿ ಅಲ್ಲ. ಇದು ರಾಜಕೀಯ ಪ್ರೇರಣೆ ದಾಳಿ ಎಂದು ಜನರು ಭಾವಿಸಿದ್ದಾರೆ’ ಎಂದರು.
ಬೈ ಎಲೆಕ್ಷನ್: ಡಿಕೆಶಿಯನ್ನು ದಿಢೀರ್ ಭೇಟಿಯಾದ ಆರ್.ಆರ್. ನಗರ ಅಭ್ಯರ್ಥಿ..! ...
‘ಮೈತ್ರಿ ಸರ್ಕಾರ ಪತನದ ಬಳಿಕ ತಮ್ಮದೇ ಪಕ್ಷ ಜೆಡಿಎಸ್ ನಾಯಕರಿಂದ ಅಂತರ ಕಾಯ್ದುಕೊಳ್ಳುತ್ತಿದ್ದೀರಲ್ಲ’ ಎಂಬ ಪ್ರಶ್ನೆಗೆ, ‘ಕೊರೋನಾದಿಂದಾಗಿ ಹೆಚ್ಚು ಓಡಾಡುವ ಹಾಗಿಲ್ಲ. ಎಲ್ಲವೂ ನಿಮಗೆ ಗೊತ್ತಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ನಾವು ಸಚಿವರಾಗಿದ್ದೆವು.
ಬಹಳ ವರ್ಷಗಳಿಂದ ಸ್ನೇಹಿತರಾದ ನಾವು ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನಿಸಿ, ಮುಂಬೈಗೂ ಸಹ ಹೋಗಿದ್ದೆವು. ಉಪಮುಖ್ಯಮಂತ್ರಿಯಾಗುವುದಾಗಿದ್ದರೆ ಬಿಜೆಪಿಯಿಂದ ಆಗಲೇ ಆಗಬಹುದಿತ್ತು. ಮೊದಲೇ ತಮಗೆ ಬಿಜೆಪಿಯಿಂದ ಆಫರ್ ಬಂದಿತ್ತು. ಆದರೆ ನಾವು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕೆಂದು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡೆವು. ಐದು ವರ್ಷ ಅವರೇ ಇರಬೇಕೆಂದು ಬಯಸಿದ್ದೆವು. ಅವರನ್ನು ನಾವೇ ಮುಖ್ಯಮಂತ್ರಿ ಮಾಡಿ ನಾವೇ ಅಧಿಕಾರದಿಂದ ಇಳಿಸಲು ಪ್ರಯತ್ನಿಸಿದ್ದೆವು ಎನ್ನುವುದೆಲ್ಲ ಸುಳ್ಳು’ ಎಂದು ಜಿ.ಟಿ.ದೇವೇಗೌಡ ಹೇಳಿದರು.