ಬಿಜೆಪಿಯವರು ತಮ್ಮ ಕೋಟೆ ಫೌಂಡೇಷನ್‌ ಭದ್ರಪಡಿಸಿಕೊಳ್ಳಲಿ: ಎಚ್‌.ಡಿ.ಕುಮಾರಸ್ವಾಮಿ

By Kannadaprabha NewsFirst Published Mar 2, 2023, 2:00 AM IST
Highlights

ಜೆಡಿಎಸ್‌ ಎರಡು ಜಿಲ್ಲೆಗೆ ಸೀಮಿತ. ಆ ಭದ್ರ ಕೋಟೆಯನ್ನು ಈ ಬಾರಿ ಅಲುಗಾಡಿಸುತ್ತೇವೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಸದ್ಯ ಅವರು ನನ್ನ ಭದ್ರ ಕೋಟೆಯ ಮೇಲೆ ಬ್ರಹ್ಮಾಸ್ತ್ರ ಬಿಡುವುದಿರಲಿ, ತಮ್ಮ ಕೋಟೆಯ ಫೌಂಡೇಷನ್‌ ಭದ್ರ ಪಡಿಸಿಕೊಳ್ಳಲಿ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಚಿಕ್ಕಮಗಳೂರು (ಮಾ.02): ಜೆಡಿಎಸ್‌ ಎರಡು ಜಿಲ್ಲೆಗೆ ಸೀಮಿತ. ಆ ಭದ್ರ ಕೋಟೆಯನ್ನು ಈ ಬಾರಿ ಅಲುಗಾಡಿಸುತ್ತೇವೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಸದ್ಯ ಅವರು ನನ್ನ ಭದ್ರ ಕೋಟೆಯ ಮೇಲೆ ಬ್ರಹ್ಮಾಸ್ತ್ರ ಬಿಡುವುದಿರಲಿ, ತಮ್ಮ ಕೋಟೆಯ ಫೌಂಡೇಷನ್‌ ಭದ್ರ ಪಡಿಸಿಕೊಳ್ಳಲಿ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಶೃಂಗೇರಿ ಹಾಗೂ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ದಿನಗಳ ಪಂಚರತ್ನ ಯಾತ್ರೆ ಮುಗಿಸಿ ಬುಧವಾರ ಮೂಡಿಗೆರೆ ಕ್ಷೇತ್ರಕ್ಕೆ ತೆರಳುವ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿಯವರು ತಮ್ಮ ಭದ್ರ ಕೋಟೆ ಎಂದು ಹೇಳಿ 15 ವರ್ಷ ರಾಜಕೀಯ ಮಾಡಿದ್ರಲ್ಲಾ, ಆ ಕೋಟೆಯ ಫೌಂಡೇಷನ್‌ ಅಲುಗಾಡುತ್ತಿವೆ. 

ಅವುಗಳನ್ನು ಉಳಿಸಿ ಕೊಳ್ಳಲು ಯತ್ನಿಸಿದರೆ ಅಲ್ಪಸ್ವಲ್ಪ ಉಳಿಯಬಹುದು. ನಮ್ಮ ಭಾಗದಲ್ಲಿ ಜೆಡಿಎಸ್‌ ವೋಟ್‌ಗಳನ್ನು ಕುಂಠಿತಗೊಳಿಸುವ ಪ್ರಯತ್ನ ಯಶಸ್ವಿಯಾಗಿದಿಲ್ಲ ಎಂದು ಹೇಳಿದರು. ಲಘುವಾಗಿ ಮಾತನಾಡುವವರು ತಾವು ಬಂದಿರುವ ಹಿನ್ನಲೆ ಆತ್ಮಾವಲೋಕನ ಮಾಡಿಕೊಳ್ಳುವುದು ಸೂಕ್ತ. ದೇಶ ಮತ್ತು ಹಿಂದೂ ಸಂಸ್ಕೃತಿ ಬಗ್ಗೆ ಮಾತನಾಡುತ್ತಾರೆ. ಇವರಿಗೆ ಇಲ್ಲಿ ಸರಿ ಹೋಗೋದಿಲ್ಲ, ಪಾಕಿಸ್ಥಾನದಲ್ಲಿ ಸ್ಪರ್ಧೆ ಮಾಡಲಿ ಎನ್ನುವುದು. ಇಲ್ಲಿ ಹುಟ್ಟಿಪಾಕಿಸ್ತಾನದಲ್ಲಿ ಚುನಾವಣೆ ಮಾಡಲು ಸಾಧ್ಯವಿಲ್ಲ. ಹಿಂದೂ ಸಂಸ್ಕೃತಿ ಏನೆಂದು ತಿಳಿದುಕೊಂಡಿದ್ದಾರಾ ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ನವರು ಕೈಯಲ್ಲಿ ಖಜಾನೆ ಕೆರೆಯುತ್ತಿದ್ದರು. ಬಿಜೆಪಿಯವರು ಜೆಸಿಬಿ, ಹಿಟಾಚಿಯಿಂದ ಖಜಾನೆ ಕೆರೆಯುತ್ತಿದ್ದಾರೆ. 

Latest Videos

ಅಡಿಕೆ ಬೆಳೆಗಾರರನ್ನು ಬೀದಿಗೆ ತರುವ ಹುನ್ನಾರ: ಎಚ್‌ಡಿಕೆ ಆರೋಪ

ಇಂತಹವರು ದೇಶಕ್ಕೆ ಬುದ್ಧಿ ಹೇಳ್ತಾರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಖಜಾನೆ ಲೂಟಿ ಆಗ್ತಾ ಇದೆ. ಎರಡು ರಾಷ್ಟ್ರೀಯ ಪಕ್ಷಗಳನ್ನು ಹೊರಗಿಡಲು ರಾಜ್ಯದ ಜನತೆ ತೀರ್ಮಾನಿಸಿದ್ದಾರೆ ಎಂದು ಹೇಳಿದರು. ಜೆಡಿಎಸ್‌ ಮುಗಿಸುವುದಾಗಿ ಹೇಳಿದ್ದರು. ಕೇವಲ 20ಸ್ಥಾನ ಗೆಲ್ಲುತ್ತದೆ ಎನ್ನುತ್ತಿದ್ದರು. ಆದರೆ ಜನರ ಬೆಂಬಲ ನೋಡಿದರೆ, ಬಿಜೆಪಿ, ಕಾಂಗ್ರೆಸ್‌ ಗಿಂತ ಒಂದು ಹೆಜ್ಜೆ ಮುಂದೆ ಇರುತ್ತೇವೆ. ಬಿಜೆಪಿ ಇತ್ತೀಚೆಗೆ ನಡೆಸಿರುವ ಸರ್ವೆ ಪ್ರಕಾರ 40 ರಿಂದ 60 ಸ್ಥಾನಗಳಲ್ಲಿ ಜೆಡಿಎಸ್‌ ಗೆಲ್ಲಲಿದೆ. ಮುಂದಿನ ಎರಡು ತಿಂಗಳು ಜನರ ಸಮೀಪಕ್ಕೆ ಹೋಗಿ ಜನರ ವಿಶ್ವಾಸ ಪಡೆದು ರಾಜ್ಯದಲ್ಲಿ ಅಧಿಕಾರಕ್ಕೆ ಬರುವಷ್ಟುಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದರು.

ಅಧಿಕಾರ ಹಿಡಿಯುವುದು ಖಚಿತ: ರಾಜ್ಯದಲ್ಲಿ ಜೆಡಿಎಸ್‌ ಸರ್ಕಾರ ಸ್ಥಾಪನೆ ಆಗುವುದು ಖಚಿತ. ಈ ಬಗ್ಗೆ ಯಾವುದೇ ಅನುಮಾನ ಇಲ್ಲ, ಜನರಿಗೆ ಯಾವ ರೀತಿ ಕಾರ್ಯಕ್ರಮ ನೀಡ ಬೇಕೆಂಬುದರ ಬಗ್ಗೆ ಬ್ಲೂ ಪ್ರಿಂಟ್‌ ಸಿದ್ಧಪಡಿಸುತ್ತಿದ್ದೇನೆ ಎಂದು ಹೇಳಿದರು. ಬಿಜೆಪಿಯವರಂತೆ ಜನರನ್ನು ಕರೆಸಿಕೊಂಡು ನಾವು ರೋಡ್‌ ಶೋ ಮಾಡ್ತಾ ಇಲ್ಲ. ಜನರು ಸ್ವಇಚ್ಛೆಯಿಂದ ಬರುತ್ತಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ ಈ ಬಾರಿ ಜೆಡಿಎಸ್‌ಗೆ ಬಹುಮತದ ಸರ್ಕಾರ ರಚನೆಗೆ ಸಹಕರಿಸಲಿದ್ದಾರೆ ಎಂದರು. ಚಿಕ್ಕಮಗಳೂರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ ಗೆಲುವು ಖಚಿತ. ಶೃಂಗೇರಿ ಹಾಗೂ ಚಿಕ್ಕಮಗಳೂರು ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆ ಸಾಗಿದಾಗ ಅಪಾರ ಸಂಖ್ಯೆಯಲ್ಲಿ ಜನ ಬಂದಿದ್ದರು. ಸದ್ಯ ಮೂರು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. 

ರೇವಣ್ಣ, ಎಚ್‌​ಡಿ​ಕೆ ನಡುವೆ ಭಿನ್ನಾಭಿಪ್ರಾಯ ಇಲ್ಲ: ಸಿ.ಎಂ.ಇಬ್ರಾಹಿಂ

ಮುಂದಿನ ದಿನಗಳಲ್ಲಿ ಕಡೂರು ಹಾಗೂ ತರೀಕೆರೆ ಕ್ಷೇತ್ರಗಳಲ್ಲೂ ಸಮರ್ಥ ಅಭ್ಯರ್ಥಿಯನ್ನು ನಿಲ್ಲಿಸಲಾಗುವುದು ಎಂದು ಹೇಳಿದರು. ಈವರೆಗೆ 74 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದು, ಮೂಡಿಗೆರೆ 75ನೇ ಕ್ಷೇತ್ರ. ಚಿಕ್ಕಮಗಳೂರಲ್ಲಿ ಅಭೂತಪೂರ್ವ ಪಂಚರತ್ನ ರಥಯಾತ್ರೆಗೆ ಅಪಾರ ಬೆಂಬಲ ಸಿಕ್ಕಿದೆ. ಯಾತ್ರೆ ವೇಳೆ ಜನರು ಸಾಕಷ್ಟುಸಂಕಷ್ಟಹೇಳಿದ್ದಾರೆ. ಈ ಕ್ಷೇತ್ರದಲ್ಲಿ ಶಾಸಕರಿಂದ ತಾರತಮ್ಯ ನಡೆಯುತ್ತಿದೆ. ಮತ ಹಾಕಿದವರಿಗೆ ಒಂದು ಮತ ಹಾಕದವರಿಗೆ ಮತ್ತೊಂದು ರೀತಿ ನೋಡುತ್ತಾರೆ ಎಂದು ಜನರು ಹೇಳಿಕೊಳ್ಳುತ್ತಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ, ಮಾಜಿ ಸಚಿವ ಬಿ.ಬಿ. ನಿಂಗಯ್ಯ, ತಿಮ್ಮಶೆಟ್ಟಿ, ಪಕ್ಷದ ಜಿಲ್ಲಾಧ್ಯಕ್ಷ ರಂಜನ್‌ ಅಜಿತ್‌ಕುಮಾರ್‌ ಉಪಸ್ಥಿತರಿದ್ದರು.

click me!