ಬೆಂಗಳೂರು (ಜೂ.15): ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜತೆ ಮುನಿಸಿಕೊಂಡು ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿರುವ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರೊಂದಿಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮಾತನಾಡಿ ಮನವೊಲಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ.
ಜಿ.ಟಿ.ದೇವೇಗೌಡ ಅವರಿಗೆ ಕರೆ ಮಾಡಿದ ದೇವೇಗೌಡ ಅವರು ಅರ್ಧಗಂಟೆಗೂ ಹೆಚ್ಚು ಕಾಲ ಮಾತನಾಡಿದರು. ಈ ವೇಳೆ ಪಕ್ಷ ಬಿಟ್ಟು ಹೋಗದಿರುವಂತೆ ತಿಳಿಸಿದರು. ಮುಂದಿನ ಚುನಾವಣೆಯಲ್ಲಿ ತಮಗೂ ಮತ್ತು ತಮ್ಮ ಮಗನಿಗೂ ಟಿಕೆಟ್ ನೀಡಲಾಗುವುದು. ಪಕ್ಷ ಬಿಟ್ಟು ಹೋಗಬೇಡಿ ಎಂದು ಆಶ್ವಾಸನೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ಮಾಜಿ ಸಿಎಂ ಎಸ್‌ಎಂ ಕೃಷ್ಣರಿಂದ ದೇವೇಗೌಡರ ಸರ್ಕಾರ ಪತನದ ಕಾರಣ ಬಹಿರಂಗ
ಪಕ್ಷ ತೊರೆಯಲು ಮುಂದಾಗಿರುವ ಶಾಸಕರ ಮನವೊಲಿಕೆಗೆ ಮುಂದಾಗಿರುವ ದೇವೇಗೌಡ ಅವರು, ಶಾಸಕ ಸಿ.ಎಸ್.ಪುಟ್ಟರಾಜು ಅವರೊಂದಿಗೂ ಸಹ ಮಾತುಕತೆ ನಡೆಸಿದ್ದು, ಅವರ ಮನವೊಲಿಕೆಗೂ ಪ್ರಯತ್ನ ಮಾಡಿದ್ದಾರೆ. ಅಲ್ಲದೆ, ಇತರೆ ಅಸಮಾಧಾನಿತ ಮುಖಂಡರೊಂದಿಗೂ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ದೇವೇಗೌಡರ ಜತೆಗೆ ಮಾತನಾಡಿದ ಅಸಮಾಧಾನಿತ ಶಾಸಕರು, ಮುಖಂಡರು ಮತ್ತೆ ಸಿಗೋಣ, ಮಾತಾಡೋಣ ಎಂದಷ್ಟೇ ತಿಳಿಸಿದ್ದಾರೆ. ನಿಮ್ಮ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ. ಮತ್ತೆ ಮಾತನಾಡೋಣ ಎಂದಿದ್ದಾರೆ ಎನ್ನಲಾಗಿದೆ.
ಜಿ.ಟಿ.ದೇವೇಗೌಡ ಅವರು ಕುಮಾರಸ್ವಾಮಿ ಜತೆ ಮುನಿಸಿಕೊಂಡು ಪಕ್ಷದ ಚಟುವಟಿಕೆಯಿಂದ ದೂರ ಉಳಿದಿದ್ದಾರೆ. ಕಾಂಗ್ರೆಸ್ ಅಥವಾ ಬಿಜೆಪಿಗೆ ಸೇರಲು ಚಿಂತನೆ ನಡೆಸಿದ್ದಾರೆ. ಇದಲ್ಲದೇ, ಪಕ್ಷದ ಕೆಲವು ಮುಖಂಡರು ಸಹ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಕೆಲವರು ಪಕ್ಷ ತೊರೆದು ಕಾಂಗ್ರೆಸ್ ಅಥವಾ ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಇದನ್ನು ಅರಿತ ದೇವೇಗೌಡ ಅಸಮಾಧಾನಿತ ಪಕ್ಷದ ಶಾಸಕರ ಜತೆ ಮಾತುಕತೆ ನಡೆಸಿ ಮನವೊಲಿಕೆ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.