
ಮದ್ದೂರು : ಮಂಡ್ಯ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಜೆಡಿಎಸ್ ಕಾಲ ಮುಗಿದುಹೋಯಿತು. ಜೆಡಿಎಸ್ ಕಾರ್ಯಕರ್ತರು ಸಮಯ ವ್ಯರ್ಥ ಮಾಡಬೇಡಿ. ಇನ್ನೇನಿದ್ದರೂ ಕಾಂಗ್ರೆಸ್ ಕಾಲ. ಪಕ್ಷಭೇದ ಮರೆತು ಕಾಂಗ್ರೆಸ್ ಪರ ನಿಲ್ಲುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಲಹೆ ನೀಡಿದರು.
ಮದ್ದೂರು ಹೊರವಲಯದ ಕೆಸ್ತೂರು ಸರ್ಕಲ್‌ನಲ್ಲಿ ಮದ್ದೂರು ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಸಮಾರಂಭದಲ್ಲಿ ಮಾತನಾಡಿ, ಶಾಸಕ ಕೆ.ಎಂ.ಉದಯ್ ಜೊತೆ ಕಾಂಗ್ರೆಸ್ ಸರ್ಕಾರವಿದೆ. ರೈತರು, ಸಮಾಜ ಬಗ್ಗೆ ಚಿಂತನೆ ಮಾಡಿದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ ಎಂದರು.
ಮದ್ದೂರು ಕಾಂಗ್ರೆಸ್‌ಗೆ ದೊಡ್ಡ ಶಕ್ತಿ ಕೊಟ್ಟ ಸ್ಥಳ. ಈ ಜಿಲ್ಲೆ ಹಲವು ಹಲವು ರಾಜಕೀಯ ನಾಯಕರನ್ನು ಬೆಳೆಸಿದೆ. ಇದೇ ಮಣ್ಣಿನವರಾದ ಎಸ್.ಎಂ.ಕೃಷ್ಣ ನನ್ನ ನಾಯಕರು, ಅವರನ್ನು ನೆನಸಿಕೊಳ್ಳದಿದ್ದರೆ ತಪ್ಪಾಗುತ್ತದೆ. ಇತಿಹಾಸ ಮರೆತವನು ಎಂದಿಗೂ ಇತಿಹಾಸ ಸೃಷ್ಟಿಸಲಾರ ಎಂಬ ಮಾತಿದೆ ಎಂದ ಶಿವಕುಮಾರ್, ಶಾಸಕನಾಗಿ ಉದಯ್ ಕೆಲಸ ಬಹಳ ಸಂತೋಷ ತಂದಿದೆ. ನಾವಿಲ್ಲಿ ಜೈಕಾರ ಹಾಕಿಸಿಕೊಳ್ಳಲು ಬಂದವರಲ್ಲ. ಜನರ ಋಣ ತೀರಿಸಬೇಕಾದದ್ದು ನಮ್ಮ ಕರ್ತವ್ಯ ಎಂದು ನುಡಿದರು.
ಮದ್ದೂರು ತಾಲೂಕಿಗೆ 1 ಸಾವಿರ ಕೋಟಿ ರು.ಗೂ ಹೆಚ್ಚು ಅನುದಾನ ಅಭಿವೃದ್ಧಿ ಕೆಲಸಕ್ಕೆ ಕೊಟ್ಟಿದ್ದೇವೆ. ಮದ್ದೂರಿನ ಎಲ್ಲಾ ಕಾಲುವೆಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಮದ್ದೂರಿನಲ್ಲಿ ಹೊಸ ನೀರಾವರಿ ಕಚೇರಿ ಸ್ಥಾಪಿಸಿದ್ದು, ಮಂಡ್ಯ ಭಾಗದಲ್ಲಿ ಹೊಸ ಕೃಷಿ ವಿವಿ ಸ್ಥಾಪನೆಗೆ ಮುಂದಾಗಿದ್ದೇವೆ. ಮಂಡ್ಯ ಜಿಲ್ಲೆ ಅಭಿವೃದ್ಧಿಗೆ ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ನಾವು ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ ಎಂದರು.
ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ 5 ಗ್ಯಾರಂಟಿ ಕೊಟ್ಟಿದೆ. ದೇಶದ ಯಾವ ಸರ್ಕಾರವೂ ಇಂತಹ ಕಾರ್ಯಕ್ರಮವನ್ನು ಮಾಡಿಲ್ಲ. ಸಿದ್ದರಾಮಯ್ಯ ಸರ್ಕಾರದ ಬಜೆಟ್ ಗಾತ್ರ 4.8 ಲಕ್ಷ ಕೋಟಿ ರು. ಅದರಲ್ಲಿ 1 ಲಕ್ಷ ಕೋಟಿ ರು. ಹಣವನ್ನು ಜನರ ಬದುಕು, ಆರೋಗ್ಯ, ಪ್ರವಾಸ, ವಿದ್ಯುತ್‌ಗಾಗಿ ನೀಡಿದ್ದೇವೆ ಎಂದರು.
ಬಿಜೆಪಿ ಅಥವಾ ಜೆಡಿಎಸ್ ಅಧಿಕಾರದಲ್ಲಿದ್ದಾಗ ಜನರ ಕಷ್ಟಕ್ಕೆ ಆಗಿದ್ಯಾ ಎಂದು ಪ್ರಶ್ನಿಸಿದ ಶಿವಕುಮಾರ್, ಸಾಧನೆ ಸುಮ್ಮನೆ ಬರವುದಿಲ್ಲ, ಶ್ರಮದ ತುದಿಯಲ್ಲಿ ಅದರ ಫಲ ಇದೆ. ಕಾಂಗ್ರೆಸ್ ಸರ್ಕಾರ ಜನರ ಬದುಕಿಗಾಗಿ ಅನೇಕ ಕಾರ್ಯಕ್ರಮ ರೂಪಿಸಿದೆ.
ಆದರ್ಶ ಬದುಕಿಗೆ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿದೆ. ಯೋಗಿ ಎಂದು ಕರೆಸಿಕೊಳ್ಳುವುದು ಮುಖ್ಯವಲ್ಲ, ಉಪಯೋಗಿ ಎನಿಸಿಕೊಳ್ಳುವುದು ಮುಖ್ಯ ಎಂದು ಹೇಳಿದರು.
ಆಸ್ತಿ ಖರೀದಿಸಲು ಬಂದಿರಲಿಲ್ಲ:
ಕೆಲದಿನಗಳ ಹಿಂದೆ ನಾನು ಮದ್ದೂರು ತಾಲೂಕು ಕಚೇರಿಗೆ ಬಂದಿದ್ದೆ. ಆಸ್ತಿ ಖರೀದಿಸಲು ಬಂದಿರಬೇಕೆಂದು ಎಲ್ಲರೂ ಆಶ್ಚರ್ಯ ಪಟ್ಟಿದ್ದರು. ಆದರೆ, ನಾನು ಆಸ್ತಿ ಖರೀದಿಸಲು ಬಂದಿರಲಿಲ್ಲ. ಶಾಸಕ ಉದಯ್ 2 ಕೋಟಿ ರು. ಮೌಲ್ಯದ ಜಾಗವನ್ನ ಕಾಂಗ್ರೆಸ್ ಕಚೇರಿಗೆ ಕೊಟ್ಟಿದ್ದಾರೆ. ಆ ಜಾಗದ ರಿಜಿಸ್ಟ್ರೇಷನ್‌ಗಾಗಿ ಬಂದಿದ್ದೆ. ಆ ರೀತಿ 6 ಶಾಸಕರು ರಾಜ್ಯದಲ್ಲಿ ಕಾಂಗ್ರೆಸ್ ಕಚೇರಿಗೆ ಜಾಗ ನೀಡಿದ್ದಾರೆ. ಶಾಸಕ ಉದಯ್ ಕಾರ್ಯವೈಖರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಮೂರು ಸರ್ವೆಯಲ್ಲೂ ಉದಯ್ ಹೆಸರು:
ಕಳೆದ ಚುನಾವಣೆ ಸಮಯದಲ್ಲಿ ಎಸ್.ಎಂ.ಕೃಷ್ಣ ಸಹೋದರನ ಮಗ ಗುರುಚರಣ್‌ಗೆ ಟಿಕೆಟ್ ನೀಡಬೇಕೆಂದುಕೊಂಡಿದ್ದೆ. ಆ ಸಮಯದಲ್ಲಿ ಉದಯ್ ಹೆಸರು ಹೆಚ್ಚು ಚಾಲ್ತಿಯಲ್ಲಿತ್ತು. ಇಬ್ಬರ ಹೆಸರನ್ನು ತೆಗೆದುಕೊಂಡು ಚರ್ಚಿಸಲು ಎಸ್.ಎಂ.ಕೃಷ್ಣ ಅವರ ಬಳಿ ಹೋದೆ. ಅವರು ನನ್ನ ಕುಟುಂಬಕ್ಕೆ ಒಂದು ಟಿಕೆಟ್ ಕೊಡುವಂತೆ ಹೇಳಿದರು. ಗುರುಚರಣ್‌ಗೇ ಟಿಕೆಟ್ ಕೊಡುವ ಆಸೆ ನನಗಿತ್ತು. ಆದರೆ, ಚುನಾವಣಾ ಪೂರ್ವದಲ್ಲಿ ನಡೆಸಿದ ಮೂರು ಸಮೀಕ್ಷೆಯಲ್ಲೂ ಉದಯ್ ಪರ ಜನರ ಒಲವಿತ್ತು ಎಂದು ವಿವರಿಸಿದರು.
ಈ ವಿಚಾರವನ್ನು ಎಸ್.ಎಂ.ಕೃಷ್ಣ ಜೊತೆ ಚರ್ಚಿಸಿದಾಗ ನನ್ನ ಮಗ ಮುಖ್ಯ ಅಲ್ಲ, ಕಾಂಗ್ರೆಸ್‌ಗೆ ಅಧಿಕಾರಕ್ಕೆ ಬರುವುದು ಮುಖ್ಯ ಎಂದರು. ಹಾಗಾಗಿ ಉದಯ್ ಅವರನ್ನು ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಮಾಡಲಾಯಿತು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.