
ಮೈಸೂರು (ಆ.25): ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಖಂಡಿಸಿ ಜೆಡಿಎಸ್ ವತಿಯಿಂದ ಆ.25ರಂದು ಧರ್ಮಸ್ಥಳ ಚಲೋಗೆ ಕರೆ ನೀಡಲಾಗಿದ್ದು, 350ಕ್ಕೂ ಅಧಿಕ ಕಾರುಗಳಲ್ಲಿ ಜನರು ಬರುತ್ತಾರೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ. ನಗರದಲ್ಲಿರುವ ಸುದ್ದಿಗಾರರೊಂದಿಗೆ ಮಾತನಾಡಿ, ಸೋಮವಾರ ಬೆಳಗ್ಗೆ ಸಾ.ರಾ. ಕನ್ವೆನ್ಷನ್ ಹಾಲ್ ಮುಂಭಾಗದಿಂದ ಯಾತ್ರೆ ಹೊರಡಲಿದೆ. ಮಂಡ್ಯದಿಂದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಧರ್ಮಸ್ಥಳ ಚಲೋ ನಡೆಯುತ್ತದೆ. ಇಲವಾಲದ ಬಳಿ ನಾವು ಅವರ ಜೊತೆ ಸೇರಿಕೊಳ್ಳುತ್ತೇವೆ. ಕೆ.ಆರ್.ನಗರ, ಹರದನಹಳ್ಳಿ ಮಾರ್ಗವಾಗಿ ಧರ್ಮಸ್ಥಳಕ್ಕೆ ತೆರಳುತ್ತೇವೆ.
ಮೈಸೂರಿನಿಂದ 150 ಹಾಗೂ ಮಂಡ್ಯದಿಂದ 200 ಸೇರಿ ಒಟ್ಟು 350ಕ್ಕೂ ಅಧಿಕ ಕಾರುಗಳಲ್ಲಿ ಜನರು ಬರುತ್ತಾರೆ ಎಂದು ಹೇಳಿದರು. ಧಾರ್ಮಿಕ, ದಾಸೋಹ, ಶಿಕ್ಷಣ, ಮಹಿಳೆಯರ ಸ್ವಾವಲಂಭನೆಗೆ ಸಾಲ ಕೊಡುವುದು ಸೇರಿ ದೇವಸ್ಥಾನಗಳ ಪುನರುಜ್ಜೀವನಕ್ಕೆ ಧರ್ಮಸ್ಥಳ ನೆರವು ನೀಡುತ್ತಿದೆ. ನನ್ನ ಕ್ಷೇತ್ರದ ದೇವಾಲಯಗಳನ್ನು ಧರ್ಮಸ್ಥಳದ ಸಂಸ್ಥೆ ಅಭಿವೃದ್ಧಿಪಡಿಸಿದೆ. ಇತ್ತೀಚೆಗೆ ಕ್ಷೇತ್ರದ ವಿರುದ್ಧ ಷಡ್ಯಂತ್ರ ಮಾಡಲಾಗಿದ್ದು, ಪಾರದರ್ಶಕ ತನಿಖೆ ನಡೆಯಲಿ ಎಂದು ನಾವು ಸುಮ್ಮನಿದ್ದೆವು. ಯಾರೋ ಒಬ್ಬ ಬಂದು ದೂರು ಕೊಟ್ಟಾಗ ನಾವು ಯೋಚನೆ ಮಾಡಬೇಕಿತ್ತು.
ಶವವನ್ನು ವ್ಯಕ್ತಿ ಒಬ್ಬನೇ ಎತ್ತಿಕೊಂಡು ಹೋಗಿ ಹೂಳಲು ಸಾಧ್ಯವಿಲ್ಲ. ಇದೆಲ್ಲವನ್ನೂ ನಾವು ಸೂಕ್ಷ್ಮವಾಗಿ ಯೋಚನೆ ಮಾಡಬೇಕು ಎಂದರು. ಎಷ್ಟೋ ಕಡೆ ಇದುವರೆಗೂ ಸ್ಮಶಾನಗಳು ಇಲ್ಲ. ಹಲವರು ತಮ್ಮ ಜಮೀನಿನಲ್ಲೇ ಅಂತ್ಯ ಸಂಸ್ಕಾರ ಮಾಡುತ್ತಾರೆ. ನೇತ್ರಾವತಿ ನದಿ ತೀರದಲ್ಲಿ ಅನೇಕ ಶವಗಳು ಬರುತ್ತವೆ. ಈಗ ದೂರುದಾರರನ್ನು ಬಂಧನ ಮಾಡಲಾಗಿದೆ. ಆದರೆ, ಆ ವ್ಯಕ್ತಿಯ ಹಿಂದೆ ಇರುವವರು ಯಾರು? ಎಂಬುದರ ಕುರಿತು ತನಿಖೆ ಆಗಬೇಕು. ಎಸ್ಐಟಿ ತನಿಖೆ ಯಾವ ರೀತಿ ಆಗುತ್ತಿದೆ ಎಂಬುದು ನಮಗೆ ಗೊತ್ತಿಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.