ಸಂವಿಧಾನ ಬಂಧಿಸಿ ಸರ್ವಾಧಿಕಾರ ಆಡಳಿತ ನಡೆಸಿದ್ದು ಕಾಂಗ್ರೆಸ್: ಸಿ.ಟಿ. ರವಿ

Published : Aug 25, 2025, 08:27 AM IST
CT Ravi

ಸಾರಾಂಶ

ಸಂವಿಧಾನ ಪುಸ್ತಕ ಹಿಡಿದವರು ರಕ್ಷಕರಲ್ಲ. ಸಂವಿಧಾನದ ಮೇಲೆ ನಂಬಿಕೆ ಇರುವವರು ನಿಜವಾದ ರಕ್ಷಕರಾಗಿದ್ದಾರೆ. ಅಂದು ಸಂವಿಧಾನವನ್ನು ಬಂಧಿಸಿ ಸರ್ವಾಧಿಕಾರ ನಡೆಸಿದವರು ಇಂದು ಸಂವಿಧಾನ ಪುಸ್ತಕ ಹಿಡಿದು ದೇಶದ ತುಂಬೆಲ್ಲ ಓಡಾಡುತ್ತಿದ್ದಾರೆ.

ಗದಗ (ಆ.25): ಸಂವಿಧಾನ ಬಂಧಿಸಿ ಸರ್ವಾಧಿಕಾರ ಆಡಳಿತ ನಡೆಸಿದ್ದು ಕಾಂಗ್ರೆಸ್ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಹೇಳಿದರು. ನಗರದ ಜಗದಂಬಾ ದೇವಸ್ಥಾನದ ಲಕ್ಷ್ಮಣಸಾ ಸಭಾಗೃಹದಲ್ಲಿ ನಡೆದ ಸಂವಿಧಾನದ 42ನೇ ತಿದ್ದುಪಡಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ಜೀವನದಲ್ಲಿ ರಕ್ಷಕರು ಯಾರು ಭಕ್ಷಕರು ಯಾರು ಎನ್ನುವುದನ್ನು ಅರಿಯಬೇಕು. ಸಂವಿಧಾನ ಪುಸ್ತಕ ಹಿಡಿದವರು ರಕ್ಷಕರಲ್ಲ. ಸಂವಿಧಾನದ ಮೇಲೆ ನಂಬಿಕೆ ಇರುವವರು ನಿಜವಾದ ರಕ್ಷಕರಾಗಿದ್ದಾರೆ. ಅಂದು ಸಂವಿಧಾನವನ್ನು ಬಂಧಿಸಿ ಸರ್ವಾಧಿಕಾರ ನಡೆಸಿದವರು ಇಂದು ಸಂವಿಧಾನ ಪುಸ್ತಕ ಹಿಡಿದು ದೇಶದ ತುಂಬೆಲ್ಲ ಓಡಾಡುತ್ತಿದ್ದಾರೆ. ಜನರು ಮೂರ್ಖರಲ್ಲ. ನಿಮ್ಮ ಸರ್ವಾಧಿಕಾರ ನೀತಿಯನ್ನು ಅರಿತಿದ್ದಾರೆ ಎಂದರು.

1975ರಲ್ಲಿ ಇಂದಿರಾ ಗಾಂಧಿ ಆಯ್ಕೆಯನ್ನು ಅನೂರ್ಜಿತಗೊಳಿಸಿ ಅಲಹಬಾದ್ ಕೋರ್ಟ್ ಆದೇಶ ನೀಡಿತ್ತು. ಇದರಿಂದ ನ್ಯಾಯಾಲಯದ ತೀರ್ಪಿನಿಂದ ಅವರು ಕಂಗಾಲಾದರು. ನಂತರ ಗುಜರಾತ್‌ನಲ್ಲಿ ಜನತಾ ಫ್ರಂಟ್ ಎನ್ನುವ ಒಕ್ಕೂಟ ಸ್ಥಾಪನೆಗೊಂಡು ಕಾಂಗ್ರೆಸ್ ಸೋಲಿಸಿ ಕಾಂಗ್ರೆಸ್ಸೇತರ ಪಕ್ಷ ಅಧಿಕಾರಕ್ಕೆ ಏರಿತು. ಇದರಿಂದ ಜನತಾ ನ್ಯಾಯಾಲಯದಿಂದ ಇಂದಿರಾ ಗಾಂಧಿಗೆ ಮರ್ಮಾಘಾತವಾಯಿತು ಎಂದರು. ಸಂವಿಧಾನದಲ್ಲಿ ಯುದ್ಧ, ಆಂತರಿಕ ಕಲಹ, ಪ್ರಕೃತಿ ವಿಕೋಪ, ಆರ್ಥಿಕ ಸಂಕಷ್ಟದ ಸಮಯದಲ್ಲಿ ತುರ್ತುಪರಿಸ್ಥಿತಿಗೆ ಅವಕಾಶವಿದೆ. ಆದರೆ, ಜೂನ್ 25, 1975ರಲ್ಲಿ ಇದ್ಯಾವುದೂ ಇರಲಿಲ್ಲ. ಆದರೂ ದೇಶದಲ್ಲಿ ಸಂವಿಧಾನ ದುರ್ಬಳಕೆ ಮಾಡಿಕೊಂಡು ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದರು. ಪ್ರಜಾಪ್ರಭುತ್ವದ ಪರವಾಗಿ ಧ್ವನಿ ಎತ್ತಿದ ವಿರೋಧ ಪಕ್ಷದ ಎಲ್ಲ ನಾಯಕರನ್ನು ಜೈಲಿಗೆ ಅಟ್ಟಿದರು. ಪತ್ರಿಕಾ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಕೆಲಸ ದೇಶದಲ್ಲಿ ಆಯಿತು ಎಂದರು.

ತುರ್ತು ಪರಿಸ್ಥಿತಿ ಸಮಯದಲ್ಲಿ 1,40,000 ಜನರನ್ನು ಜೈಲಿಗೆ ಅಟ್ಟಲಾಯಿತು. 2,500 ಸಾವಿರ ಪತ್ರಕರ್ತರು ಜೈಲು ಶಿಕ್ಷೆ ಅನುಭವಿಸಿದರು. ಆಳುವ ಪಕ್ಷದ ಮರ್ಜಿಗೆ ತಕ್ಕಂತೆ ನ್ಯಾಯಾಲಯ ಕೆಲಸ ಮಾಡುವ ಸ್ಥಿತಿ ನಿರ್ಮಾಣ ಆಗಿತ್ತು. ನಾಗರಿಕ ಹಕ್ಕುಗಳನ್ನು ಕಸಿದುಕೊಂಡು, 21 ತಿಂಗಳು ಸಂವಿಧಾನ ಸರ್ವಾಧಿಕಾರಿಗಳ ಕೈಯಲ್ಲಿ ಬಂಧಿಯಾಗಿತ್ತು. ಸಂವಿಧಾನವನ್ನು ಮನಸೋ ಇಚ್ಛೆ ತಿದ್ದುಪಡಿ ಮಾಡಲಾಯಿತು ಎಂದು ತಿಳಿಸಿದರು. 38, 39ನೇ ತಿದ್ದುಪಡಿ ಜಾರಿಗೆ ತಂದು ರಾಷ್ಟ್ರಪತಿ ಹಾಗೂ ಉಪ ರಾಷ್ಟ್ರಪತಿಗಳ ಹಕ್ಕನ್ನು ಕಸಿದುಕೊಳ್ಳಲಾಯಿತು. ಪ್ರಜಾಪ್ರಭುತ್ವದ ಹೆಸರಿನಲ್ಲಿ ಇಂದಿರಾ ಗಾಂಧಿ ಸರ್ವಾಧಿಕಾರ ಆಡಳಿತ ನಡೆಸಿದರು. ಪ್ರಶ್ನೆ ಮಾಡಿದವರನ್ನು ಬಂಧಿಸಿ ಭಾರತವನ್ನು ಬಂಧಿಖಾನಿಯನ್ನಾಗಿ ಮಾಡಿದ್ದರು. ಆದರೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇದರ ವಿರುದ್ದ ಗುಪ್ತ ಸಭೆ ನಡೆಸಿ ತುರ್ತು ಪರಿಸ್ಥಿತಿಯನ್ನು ಪ್ರಶ್ನಿಸಿ ಸಂಘದ ಸದಸ್ಯರು ಶಿಕ್ಷೆ ಅನುಭವಿಸಿದರು.

ಗುಪ್ತವಾಗಿ ಪತ್ರಿಕೆಯ ಮೂಲಕ ತುರ್ತುಪರಿಸ್ಥಿತಿಯ ಕರಾಳ ಮುಖವನ್ನು ತಿಳಿಸುವ ಪ್ರಯತ್ನ ಮಾಡಲಾಯಿತು. ಆದರೆ, ಸಿಕ್ಕಾಕ್ಕಿಕೊಂಡವರಿಗೆ ಕಾಲು ಕೆಳಗೆ ಮಾಡಿ ತಲೆ ಮೇಲಿರುವಂತೆ ಕಟ್ಟಿ ಏರೋಪ್ಲೆನ್ ಶಿಕ್ಷೆ ಕೊಡಲಾಗಿತ್ತು. ಕಲ್ಲಿನ ಮೇಲೆ ಮಲಗಿಸಿ ರೂಲರ್ ಹೊಡೆದು ಚಪಾತಿ ಶಿಕ್ಷೆ ನೀಡಲಾಗುತ್ತಿತ್ತು. ಅಂದು ದೇಶಭಕ್ತರು ಇಂತಹ ಕಠಿಣ ಶಿಕ್ಷೆ ಅನುಭವಿಸಿದ ಪರಿಣಾಮ ಇಂದು ಪ್ರಜಾಪ್ರಭುತ್ವ ಜೀವಂತವಾಗಿದೆ ಎಂದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇರದಿದ್ದರೇ ಸಂವಿಧಾನ ಉಳಿಯುತ್ತಿರಲಿಲ್ಲ. ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವ, ಪತ್ರಿಕಾ ಸ್ವಾತಂತ್ರ್ಯ, ನ್ಯಾಯಾಲಯದ ವಿರೋಧಿ ಆಗಿದೆ. ಅಧಿಕಾರ ಸಿಕ್ಕಾಗಲೆಲ್ಲ ಕಾಂಗ್ರೆಸ್ ಪಕ್ಷ ಪೊಲೀಸ್ ಬಲವನ್ನು ದುರ್ಬಳಕೆ ಮಾಡಿಕೊಂಡಿದೆ. ಇವರು ಯಾವತ್ತೂ ಸಂವಿಧಾನವನ್ನು ಗೌರವಿಸಲಿಲ್ಲ. ಸಂವಿಧಾನದ ಪುಸ್ತಕ ಹಿಡಿದು ನಾಟಕ ಮಾಡುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಅಧ್ಯಕ್ಷತೆಯನ್ನು ಡಾ. ಗುರುಲಿಂಗಪ್ಪ ಬಿಡನಾಳ ವಹಿಸಿಕೊಂಡಿದ್ದರು. ವಿಪ ಸದಸ್ಯ ಎಸ್.ವಿ. ಸಂಕನೂರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಡಾ. ಪುನೀತಕುಮಾರ ಬೆನಕನವಾರಿ, ನಗರಸಭೆ ಸದಸ್ಯರಾದ ವಿನಾಯಕ ಮಾನ್ವಿ, ಚಂದ್ರಶೇಖರ ತಡಸದ, ಉಮೇಶಗೌಡ್ರ ಪಾಟೀಲ, ನಾಗರಾಜ ತಳವಾರ, ರುದ್ರಣ್ಣ ಗುಳಗುಳಿ, ಎಂ.ಎಂ.ಹಿರೇಮಠ, ಮಾಂತೇಶ ಕೊಟ್ನೆಕಲ್, ರವಿ ದಂಡಿನ, ಡಾ. ಶೇಖರ ಸಜ್ಜನ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ನಿರ್ಮಲಾ ಕೋಳ್ಳಿ, ವಿಜಯಲಕ್ಷ್ಮೀ ಮಾನ್ವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. 1975ರ ತುರ್ತುಪರಿಸ್ಥಿತಿಯಲ್ಲಿ ಅನೇಕ ಬುದ್ಧಿವಂತರು, ಸಂವಿಧಾನದ ಮೇಲೆ ನಂಬಿಕೆ ಇರುವವರು ತುರ್ತು ಪರಿಸ್ಥಿತಿಯನ್ನು ಪ್ರಶ್ನಿಸಿದರು. ಆದರೆ, ಅಂದು 22ರ ಹದಿ ಹರೆಯದ ಕಾನೂನು ವಿದ್ಯಾರ್ಥಿ, ಇಂದಿನ ಕಾನೂನು ಸಚಿವ ಡಾ. ಎಚ್.ಕೆ.ಪಾಟೀಲ ತುರ್ತುಪರಿಸ್ಥಿತಿ ಪ್ರಶ್ನಿಸಲಿಲ್ಲ. ಇಂದಿಗೂ ಪ್ರಶ್ನೆ ಮಾಡಲ್ಲ. ಯಾಕಂದ್ರೆ ಅವರೆಲ್ಲ ಗಾಂಧಿ ಪರಿವಾರ ಹೋಗಳುವ ಪರಿಸ್ಥಿತಿಯಲ್ಲಿದ್ದಾರೆ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

indigo flight: ದೆಹಲಿ ಇಂಡಿಗೋ ವಿಳಂಬದಿಂದಾಗಿ ಸದನಕ್ಕೆ ತಡವಾಗಿ ಬಂದ ಸಚಿವರು!
ಜರ್ಮನಿಗೆ ತೆರಳಿದ ರಾಹುಲ್ ಗಾಂಧಿ: 6 ತಿಂಗಳಲ್ಲಿ ವಿರೋಧ ಪಕ್ಷದ ನಾಯಕನ 5ನೇ ವಿದೇಶಿ ಪ್ರವಾಸ