ಸಿ.ಟಿ. ರವಿ ವಿರುದ್ಧ ಕಾಂಗ್ರೆಸ್‌ ಪರ ಪ್ರಚಾರ ಆರಂಭಿಸಿದ ಜೆಡಿಎಎಸ್‌ ನಾಯಕ ಭೋಜೇಗೌಡ

By Sathish Kumar KHFirst Published May 1, 2023, 11:01 PM IST
Highlights

ಎಸ್‌ಡಿಪಿಐಯೊಂದಿಗೆ ಬಿಜೆಪಿ ಒಳ ಒಪ್ಪಂದವೆಂದು ಭೋಜೇಗೌಡ ಆರೋಪ 
ಕಾಂಗ್ರೆಸ್‌ನೊಂದಿಗೆ ಜೆಡಿಎಸ್‌ ಹೊಂದಾಣಿಕೆಯೋ, ವ್ಯಭಿಚಾರವೋ ಎಂದ ಸಿ.ಟಿ. ರವಿ

ವರದಿ :ಅಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಮೇ 1): ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಸ್‌ಡಿಪಿಐನೊಂದಿಗೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿರುವುದು ವ್ಯಭಿಚಾರ ಅನ್ನಿಸುವುದಿಲ್ಲವೇ? ಬಿಜೆಪಿಯವರಿಗೆ ತಾಕತ್ತಿದ್ದರೆ ಎಸ್‌ಡಿಪಿಐ ನಿಷೇಧಿಸಲು ಮುಂದಾಗಲಿ ಎಂದು ಜೆಡಿಎಸ್‌ ವಿಧಾನ ಪರಿಷತ್‌ ಸದಸ್ಯ ಎಸ್.ಎಲ್.ಭೋಜೇಗೌಡ, ಶಾಸಕ ಸಿಟಿ ರವಿ ಅವರಿಗೆ ಸವಾಲೆಸೆದರು.

ಚಿಕ್ಕಮಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು ಜಿಲ್ಲೆಯ ಶೃಂಗೇರಿ ಕ್ಷೇತ್ರದ ಅಭ್ಯರ್ಥಿ ಸುಧಾಕರಶೆಟ್ಟಿ, ಮೂಡಿಗೆರೆಯ ಎಂ.ಪಿ.ಕುಮಾರಸ್ವಾಮಿ, ಕಡೂರು ಕ್ಷೇತ್ರದಿಂದ ವೈ.ಎಸ್.ವಿ.ದತ್ತ ಅವರುಗಳು ಈ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆಂದು ತಿಳಿಸಿದರು. ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸೀರೆಗಳು ಹಂಚಿಕೆಯಾಗುತ್ತಿದ್ದು, ಪರಿಶೀಲಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ತಿಳಿಸಲಾಗಿದೆ. ಚಿನ್ನದ ನಾಣ್ಯಗಳು ಹಂಚಲು ಕ್ಷೇತ್ರಕ್ಕೆ ಬರುತ್ತಿರುವ ವಿಷಯ ತಿಳಿದು ಬಂದಿದೆ ಅದು ಅಸಲಿಯೋ, ನಕಲಿಯೋ ಎಂದು ಗೊತ್ತಾಗಬೇಕಿದೆ ಎಂದರು.

ಮೋದಿಗೆ ವಿಷ ಸರ್ಪ, ನಾಲಾಯಕ್‌ ಎಂದಿದ್ದಾಯ್ತು! ಈಗ ಮನುಷ್ಯತ್ವ ಇಲ್ಲದ ಪ್ರಧಾನಿಯಂತೆ!

ಪ್ರಜಾಪ್ರಭುತ್ವದಲ್ಲಿ ನಿಮ್ಮ ವಿರುದ್ಧ ಮತ ಕೇಳಬಾರದೇ?: ಚಿಕ್ಕಮಗಳೂರಿನ ಅಭಿವೃದ್ಧಿಯ ಹರಿಕಾರರೆಂದು ಕರೆಸಿಕೊಳ್ಳುವ ಸಿ.ಟಿ.ರವಿ ಅಭಿವೃದ್ಧಿ ವಿಷಯಗಳನ್ನು ಮುಂದಿಟ್ಟುಕೊಂಡು ಮತಕೇಳಿ ಗೆಲ್ಲಬೇಕು. ಆದರೆ ಕೇಂದ್ರ ಸಚಿವರನ್ನು ಕರೆಸಿಕೊಂಡು ಬೀದಿಬೀದಿಯಲ್ಲಿ ಪ್ರಚಾರ ನಡೆಸುವ ಅಗತ್ಯವೇನಿದೆ. ಬಿಜೆಪಿ ಅಭ್ಯರ್ಥಿ ವಿರುದ್ಧ ಮಾತನಾಡಿದರೆ ಹೊಟ್ಟೆಕಿಚ್ಚಿಗಾಗಿ ಎಂದು ಹೇಳುತ್ತಾರೆ. ಕಳೆದ ಚುನಾವಣೆಯಲ್ಲಿ ನಿಮಗೆ ಮತನೀಡದ 83 ಸಾವಿರ ಜನರು ನಿಮ್ಮ ಬಗ್ಗೆ ಹೊಟ್ಟೆ ಕಿಚ್ಚುಪಟ್ಟು, ವಿಷ ತುಂಬಿಕೊಂಡಿದ್ದಾರೆಯೇ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಮ್ಮ ವಿರುದ್ಧ ಮತ ಕೇಳಬಾರದ ಎಂದು ಪ್ರಶ್ನಿಸಿದರು. 

ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಲು ತೀರ್ಮಾನ : ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯನ್ನು ಸೋಲಿಸಬೇಕಾಗಿದೆ.  ಅದಕ್ಕಾಗಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗೆ ಸ್ಪರ್ಧೆ ಒಡ್ಡುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಸ್.ಎಲ್.ಭೋಜೇಗೌಡ ಸ್ಪಷ್ಟಪಡಿಸಿದರು. ಬೆಂಬಲಿಸುವ ಪಕ್ಷದ ಹೆಸರನ್ನು ಹೇಳಲು ಇಚ್ಚಿಸದ ಅವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಕಾರ್ಯಕರ್ತರಲಿ ಮನವಿ ಮಾಡಿದ್ದ ಮೊಬೈಲ್ ಸಂಭಾಷಣೆ ನನ್ನದೆ  ಆ ಹೇಳಿಕೆಗೆ ಈಗಲೂ ಬದ್ಧನಾಗಿರುವೆ ಎಂದು ಹೇಳಿದರು .ಜಾತ್ಯತೀತ ಪಕ್ಷದ ಮತಗಳು ವಿಭಜನೆಯಾಗುವುದರಿಂದ ಬಿಜೆಪಿ ಗೆಲವು ಸಾಧಿಸಲು ಸಾಧ್ಯವಾಗುತ್ತದೆ ಇದನ್ನು ಮನಗಂಡು ಚಿಕ್ಕಮಗಳೂರು ಕ್ಷೇತ್ರದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರುಗಳು ಬಿಜೆಪಿಗೆ ಸ್ಪರ್ಧೆಯೊಡ್ಡುವ ಪಕ್ಷವನ್ನು ಬೆಂಬಲಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಇದು ಪಕ್ಷದ ವರಿಷ್ಠರು ಮತ್ತು ಪಕ್ಷದ ತೀರ್ಮಾನವಲ್ಲ, ಕ್ಷೇತ್ರದ ಕಾರ್ಯಕರ್ತರ ತೀರ್ಮಾನವೆಂದರು.

ಜೆಡಿಎಸ್‌ ವರಿಷ್ಠರಿಂದ ನೋಟೀಸ್: ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೈಗೊಂಡಿರುವ ತೀರ್ಮಾನ ಬಗ್ಗೆ ಸಮಜಾಯಿಸಿ ನೀಡುವಂತೆ ಪಕ್ಷದ ರಾಜ್ಯಾಧ್ಯಕ್ಷರು ನನಗೆ ನೋಟೀಸ್ ನೀಡಿದ್ದಾರೆ. ಅದಕ್ಕೆ  ಉತ್ತರಿಸಬೇಕು. ಚುನಾವಣೆ ಮುಗಿದ ಬಳಿಕ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ತೆರಳಿ ಕ್ಷೇತ್ರದಲ್ಲಿರುವ ವಾತಾವರಣ, ಕೈಗೊಂಡಿರುವ ತೀರ್ಮಾನ ಕುರಿತು ಮಾಹಿತಿ ನೀಡಲಾಗುವುದು. ಬೇರೆಯವರ ಕುಮ್ಮಕ್ಕಿನಿಂದ ಚಿಕ್ಕಮಗಳೂರು ಕ್ಷೇತ್ರದಿಂದ ಜಾತ್ಯತೀತ ಜನತಾದಳದ ಅಭ್ಯರ್ಥಿಯಾಗಿ ತಿಮ್ಮಶೆಟ್ಟಿ ಕಣಕ್ಕಿಳಿಯುತ್ತಿರುವ ವಿಷಯ ಪಂಚರತ್ನ ರಥಯಾತ್ರೆ ಬಳಿಕ ಗೊತ್ತಾಯಿತು. ಬಿ.ಫಾರಂ ನೀಡದಂತೆ ತಡೆಯಲು ಮುಂದಾದರೆ ಗೊಂದಲ ಸೃಷ್ಟಿಯಾಗುತ್ತದೆ ಎಂಬ ಕಾರಣಕ್ಕೆ ಬಿಫಾರಂ ನೀಡಲಾಯಿತು ಎಂದರು.

ವರುಣಾದಲ್ಲಿ ಸೋಮಣ್ಣಂಗೆ ಓಟು ಸಿದ್ದರಾಮಯ್ಯಂಗೆ ಏಟು: ಪ್ರತಾಪ್‌ ಸಿಂಹ

ವ್ಯಭಿಚಾರವೋ, ಹೊಂದಾಣಿಕೆಯೋ ಹೇಳಿ:  ಜೆಡಿಎಸ್‌ನ ಅಧಿಕೃತ ಅಭ್ಯರ್ಥಿಯಿದ್ದರೂ ವಿಧಾನ ಪರಿಷತ್‌ ಸದಸ್ಯ ಎಸ್.ಎಲ್. ಭೋಜೇಗೌಡ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸುವಂತೆ ಮತದಾರರಿಗೆ ಮನವಿ ಮಾಡಿದ್ದಾರೆ. ಕಾಂಗ್ರೆಸ್ ಪರ ಮತಯಾಚನೆ ಮಾಡಿರುವ ಭೋಜೇಗೌಡ, 'ಶಾಸಕ ಸಿ.ಟಿ. ರವಿ ಸೋಲಿಸಲು ಕಾಂಗ್ರೆಸ್‌ಗೆ ಮತ ಹಾಕಿ. ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾಖಾನ್ ಎನ್ನುತ್ತಾರೆ. ದೇವೇಗೌಡರನ್ನು ಮುಂದಿನ ಜನ್ಮದಲ್ಲಿ ಸಾಬರಾಗಿ ಹುಟ್ಟಿ ಎನ್ನುತ್ತಾರೆ. ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡುತ್ತಾ ಇಷ್ಟುದ್ದ ಬೆಳೆದವನನ್ನು ನೀವು ಸೋಲಿಸಬೇಕು' ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿ ಬಿಟ್ಟು ಬೇರೊಬ್ಬ ಅಭ್ಯರ್ಥಿಗೆ ಮತಹಾಕಿ ಎಂದು ಹೇಳುವ ಭೋಜೇಗೌಡರ ಬಗ್ಗೆ ಜೆಡಿಎಸ್ ಆನಧಿಕೃತ ಹೊಂದಾಣಿಕೆಯೋ, ರಾಜಕೀಯ ವ್ಯಭಿಚಾರವೋ ಎಂದು ಶಾಸಕ ಸಿ.ಟಿ. ರವಿ ಪ್ರಶ್ನಿಸಿದ್ದಾರೆ. 

click me!