Belagavi: ಜೆಡಿಎಸ್‌ಗೆ 123 ಸ್ಥಾನ ಗೆಲ್ಲುವ ಗುರಿ: ಸಿ.ಎಂ.ಇಬ್ರಾಹಿಂ

By Govindaraj S  |  First Published Nov 6, 2022, 11:41 PM IST

ಜಿಲ್ಲೆಯ ಎಲ್ಲ ಕ್ಷೇತ್ರದಲ್ಲಿ ಜೆಡಿಎಸ್‌ ಸ್ಪರ್ಧೆ, ರಾಜ್ಯಾದ್ಯಂತ ಎಲ್ಲ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇವೆ. ರಾಜ್ಯದಲ್ಲಿ ಜೆಡಿಎಸ್‌ 123 ಸ್ಥಾನ ಗೆಲ್ಲುವ ಗುರಿ ಹೊಂದಿದೆ. ಸ್ವಂತ ಬಲದಿಂದ ಗೆದ್ದು ಅಧಿಕಾರಕ್ಕೆ ಬರುತ್ತೇವೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ವಿಶ್ವಾಸ ವ್ಯಕ್ತಪಡಿಸಿದರು.


ಬೆಳಗಾವಿ (ನ.06): ಜಿಲ್ಲೆಯ ಎಲ್ಲ ಕ್ಷೇತ್ರದಲ್ಲಿ ಜೆಡಿಎಸ್‌ ಸ್ಪರ್ಧೆ, ರಾಜ್ಯಾದ್ಯಂತ ಎಲ್ಲ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇವೆ. ರಾಜ್ಯದಲ್ಲಿ ಜೆಡಿಎಸ್‌ 123 ಸ್ಥಾನ ಗೆಲ್ಲುವ ಗುರಿ ಹೊಂದಿದೆ. ಸ್ವಂತ ಬಲದಿಂದ ಗೆದ್ದು ಅಧಿಕಾರಕ್ಕೆ ಬರುತ್ತೇವೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಕಾಂಗ್ರೆಸ್‌ ಒಬ್ಬರನ್ನೊಬ್ಬರು ಬೈಯ್ದಾಡುತ್ತಿದ್ದಾರೆ. ಒಬ್ಬರು ನಲವತ್ತು ಪರ್ಸೆಂಟ್‌, ಇನೊಬ್ಬರು ಇಪ್ಪತ್ತು ಪರ್ಸೆಂಟ್‌. ರಾಹುಲ್‌ ಗಾಂಧಿ ಬಂದರು ನಡೆದುಕೊಂಡು ಹೋದರು. ಆದರೆ, ಏನು ಸಂದೇಶ ಕೊಟ್ಟರು. ನಾವು ಕಾಂಗ್ರೆಸ್‌ ಅನ್ನೂ ಬೈಯ್ಯುತ್ತಿಲ್ಲ, ಬಿಜೆಪಿಯನ್ನು ಬೈಯ್ಯುತ್ತಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಏನೋ ಮಾಡುತ್ತೇವೆ ಎಂದು ಹೇಳುತ್ತಿದ್ದೇವೆ. ಬಿಜೆಪಿಯವರು ಸಿಬಿಐ, ಇಡಿ ಅವರನ್ನು ದುರ್ಬಳಕೆ ಮಾಡಿಕೊಂಡು ಇತರರನ್ನು ಹೆದರಿಸುತ್ತಿದ್ದಾರೆ ಎಂದರು.

Latest Videos

undefined

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಎಚ್‌ಡಿಕೆ ಸಿಎಂ: ಸಿಎಂ ಸ್ಥಾನ ದೇವೇಗೌಡರ ಕುಟುಂಬಕ್ಕೆ ಸೀಮಿತ ಆಗಿದೆಯಾ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕುಮಾರಸ್ವಾಮಿ ಅವರು ಸಿಎಂ ಆಗಬೇಕು ಎಂದು ಅವರ ಮನೆಗೆ ಹೋದವರು ಯಾರು. ಅವರನ್ನು ಕೆಳಗೆ ಇಳಿಸಿದವರು ಯಾರು ಎಂದು ಎಲ್ಲರಿಗೂ ಗೊತ್ತಿದೆ. ಅವರ ಅವಧಿಯಲ್ಲಿ ಮಾಡಬೇಕಿದ್ದ ಕೆಲಸ ಅರ್ಧಕ್ಕೆ ನಿಂತಿದೆ. ಅದನ್ನು ಪೂರ್ಣಗೊಳಿಸಲಿ ಎಂದು ಕುಮಾರಸ್ವಾಮಿ ಅವರನ್ನೇ ನಾವು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಸಿಎಂ ಸ್ಥಾನ ನನಗೆ ಅಥವಾ ಮತ್ತೆ ಇನ್ನಾರಿಗಾದರೂ ಸಿಗಬಹುದು ಎಂದರು.

ಕೈಗೊಂಬೆಯಂತೆ ಮಲ್ಲಿಕಾರ್ಜುನ ಖರ್ಗೆ ಕೆಲಸ: ಸಿ.ಎಂ.ಇಬ್ರಾಹಿಂ

ಬಿಜೆಪಿಯವರಿಂದ ಬಸವಣ್ಣನವರಿಗೆ ಅವಮಾನ: ಜಾತಿ ಆಧಾರದ ಮೇಲೆ ಪಕ್ಷಗಳು ರಾಜಕೀಯ ಮಾಡುತ್ತಿವೆಯಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಇಬ್ರಾಹಿಂ, ಕತ್ತಿ, ಕೋರೆ, ಲಿಂಗಾಯತರು. ಅವರು ಬಿಜೆಪಿ ಸೇರಿದ ನಂತರ ಬಿಜೆಪಿಗೆ ಬಲ ಬಂದಿದೆ. ಅವರಿಲ್ಲದಿದ್ದರೆ ಬಿಜೆಪಿ ಬೀಜ ಇಲ್ಲದ ಪಕ್ಷವಾಗುತ್ತದೆ ಎಂದು ವ್ಯಂಗ್ಯವಾಡಿದರು. ಬಿಜೆಪಿಯವರು ಲಿಂಗಾಯತರಿಂದಲೇ ಬೆಳೆದವರು. ಈಗ ಬಸವಕೃಪಾದ ಹೆಸರು ಹೇಳಿ ಕೇಶವಕೃಪಾ ಮಾಡಲು ಹೊರಟ್ಟಿದ್ದಾರೆ. ಅದರಿಂದ ಹೊರಗೆ ಬನ್ನಿ ಎಂದು ನಾವು ಲಿಂಗಾಯತರಿಗೆ ಹೇಳಲು ಹೊರಟ್ಟಿದ್ದೇವೆ. ಬಸವಣ್ಣವರಿಗೆ ಪಠ್ಯಪುಸ್ತಕದಲ್ಲಿ ಅವಮಾನ ಮಾಡಿದವರು ಬಿಜೆಪಿಯವರು ಎಂದು ಹರಿಹಾಯ್ದರು.

ನಮ್ಮದು ಸ್ಥಳೀಯ ಪಕ್ಷ: ಮರಾಠರು ಮತ್ತು ಲಿಂಗಾಯತ ಸಮಾಜದ ಜನರನ್ನು ನಮ್ಮೊಟ್ಟಿಗೆ ನಾವು ಕರೆದುಕೊಂಡು ಹೋಗುತ್ತೇವೆ. ಟಿಕೆಟ್‌ ಹಂಚಿಕೆಯಲ್ಲಿ ಮರಾಠಾ, ಲಿಂಗಾಯತ, ಹಿಂದುಳಿದವರಿಗೆ ಪ್ರಾಮುಖ್ಯತೆ ಕೊಡುತ್ತೇವೆ. ನಮ್ಮದು ರಾಷ್ಟ್ರೀಯ ಪಕ್ಷ ಅಲ್ಲ ಸ್ಥಳೀಯ ಪಕ್ಷ. ರಾಜ್ಯದ ಜನರಿಗಾಗಿ ರಾಜ್ಯದ ಜನರಿಂದಲೇ ಹುಟ್ಟಿರುವ ಪಕ್ಷ. ನಾನು ಜೆಡಿಎಸ್‌ ಅಧ್ಯಕ್ಷ ಆದ ಬಳಿಕ ಸಭೆಗಳಿಗೆ ಜನರನ್ನು ಕರೆತಂದು ಭಾಷಣ ಮಾಡುವುದಿಲ್ಲ. ಜನರು ತಾವಾಗಿಯೇ ಸಭೆಗೆ ಬರುತ್ತಿದ್ದಾರೆ. ಪಂಚರತ್ನ ಕಾರ್ಯಕ್ರಮವನ್ನು ಜೆಡಿಎಸ್‌ ಪಕ್ಷ ಆರಂಭಿಸಲಿದೆ. ಎಲ…ಕೆಜಿಯಿಂದ ಪಿಜಿವರೆಗೂ ಉಚಿತ ಶಿಕ್ಷಣ, ಪ್ರತಿ ಪಂಚಾಯಿತಿಯಲ್ಲಿ ಹೈಟೆಕ್‌ ಆಸ್ಪತ್ರೆಗಳು, ಪ್ರತಿಯೊಬ್ಬರಿಗೂ ವಾಸಿಸಲು ಮನೆ, ರಾಜ್ಯದ ಎಲ್ಲ ನೀರಾವರಿ ಯೋಜನೆ ಪೂರ್ಣ, ಮಹಿಳಾ ಸಬಲೀಕರಣ ಈ ಐದೂ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಐದು ವರ್ಷದಲ್ಲಿ ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು.

ರಾಜ್ಯ ಪ್ರವಾಸ ಆರಂಭಿಸಿದ್ದೇವೆ: ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷ ಸಂಘಟಿಸಲು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ನಾನು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇವೆ. ಇದರ ಜತೆಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಬರುತ್ತಿದ್ದಾರೆ. ಜನರು ಸಾವಿರಾರು ಸಂಖ್ಯೆಯಲ್ಲಿ ಸ್ಪಂದಿಸುತ್ತಿದ್ದಾರೆ ಎಂದರು. ಜನರ ಜತೆ ನೇರವಾಗಿ ಸಂಪರ್ಕ ಮಾಡುತ್ತಿದ್ದೇವೆ. ಆಯಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಗುರುತಿಸಿ, ಕೆಲಸ ಪ್ರಾರಂಭಿಸುವಂತೆ ಸೂಚನೆ ನೀಡಲಾಗಿದೆ ಎಂದರು. ಜೆಡಿಎಸ್‌ ಪಕ್ಷ ಎಲ್ಲ ಸಮಾಜದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದೆ. ಕರುನಾಡು ಸರ್ವಜನಾಂಗದ ಶಾಂತಿಯ ತೋಟ ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕಿದೆ. 

ನಾವು ಕರ್ನಾಟಕದ ಸಾರ್ವಭೌಮತ್ವ ಉಳಿಸಿಕೊಳ್ಳುತ್ತೇವೆ. ಈ ಬಾರಿ ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ವಿಶ್ವಾಸವ್ಯಕ್ತಪಡಿಸಿದರು. ಬೆಳಗಾವಿ ಸುವರ್ಣ ವಿಧಾನಸೌಧ ಸದ್ಬಳಕೆಯಾಗಬೇಕು. ಈ ಭಾಗದ ಜನರು ಸಮಸ್ಯೆ ತೆಗೆದುಕೊಂಡು ಬೆಂಗಳೂರು ಬರುವುದು ಬೇಡ. ಅದು ಇಲ್ಲಿಯೇ ಇತ್ಯರ್ಥವಾಗಬೇಕು. ರಾಜ್ಯದಲ್ಲಿ ಜೆಡಿಎಸ್‌ ಸರ್ಕಾರಕ್ಕೆ ಬಂದರೆ ಬೆಳಗಾವಿ ಸುವರ್ಣ ವಿಧಾನಸೌಧ ಸದ್ಬಳಕೆಗೆ ಆದ್ಯತೆ ನೀಡಲಾಗುವುದು ಎಂದರು. ಈ ಸಂದರ್ಭದಲ್ಲಿ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ, ಜೆಡಿಎಸ್‌ ಮುಖಂಡರಾದ ಫೈಜುಲ್ಲಾ ಮಾಡಿವಾಲೆ, ಭೀಮಪ್ಪ ಗಡಾದ, ಇನ್ನಿತರರು ಉಪಸ್ಥಿತರಿದ್ದರು.

ರಮೇಶ ಜಾರಕಿಹೊಳಿ ಜೆಡಿಎಸ್‌ಗೆ ಬಂದರೆ ಸ್ವಾಗತ: ನಮ್ಮಲ್ಲಿ ಒಂದೊಂದು ಸೀಟ್‌ಗೆ ಎರಡು ಮೂರು ಜನರ ಸ್ಪರ್ಧೆ ಇದೆ. ಬೆಳಗಾವಿಯಿಂದ ನಮ್ಮ ಪಕ್ಷಕ್ಕೆ ಕೆಲವರು ಬರುತ್ತಿದ್ದಾರೆ. ರಮೇಶ ಜಾರಕಿಹೊಳಿ ಬರುವ ಕುರಿತು ಇನ್ನೂ ಚರ್ಚೆ ಆಗಿಲ್ಲ. ಅದನ್ನು ಕುಮಾರಸ್ವಾಮಿ ಅವರನ್ನೇ ಕೇಳಬೇಕು. ಮಾಜಿ ಸಚಿವ ರಮೇಶ ಜಾರಕಿಹೊಳಿ ಜೆಡಿಎಸ್‌ ಪಕ್ಷಕ್ಕೆ ಬಂದರೆ ಸ್ವಾಗತ. ಸ್ಥಳೀಯರು ಒಪ್ಪಿಕೊಂಡರೆ ಯಾರೇ ಕೂಡ ಜೆಡಿಎಸ್‌ಗೆ ಬಂದರೂ ಸ್ವಾಗತ. ನಾವು ಸಾಹುಕಾರ ಪರವಾಗಿಯೂ ಇಲ್ಲ, ವಿರುದ್ಧವಾಗಿಯೂ ಇಲ್ಲ ಎಂದರು.

ಈಶ್ವರಪ್ಪ ಬಾಯ್‌ಬಿಟ್ರೆ ಶಿವಮೊಗ್ಗದಲ್ಲಿ ಗಲಭೆ ಸೃಷ್ಟಿಯಾಗುತ್ತೆ: ಸಿ.ಎಂ.ಇಬ್ರಾಹಿಂ ಆರೋಪ

ಸಿದ್ದರಾಮಯ್ಯ ಅವರನ್ನು ನೋಡಿದರೆ ಇನ್ನು ಅಯ್ಯೋ ಅನಿಸುತ್ತದೆ. ಈಗಲೂ ಅವರ ಮೇಲೆ ನನಗೆ ಪ್ರೀತಿ ಇದೆ. ತಬ್ಬಲಿಯು ನೀನಾದ ಮಗನೇ ಅನ್ನೋ ಹಾಗೆ ಅವರು ತಬ್ಬಲಿ ಆಗಿದ್ದಾರೆ. ಅವರು ವರುಣಾ ಕ್ಷೇತ್ರದಲ್ಲಿ ನಿಂತೂ ಅಲ್ಲೇ ಗೆಲ್ಲಲಿ ಎಂದು ಹಾರೈಸುತ್ತೇನೆ.
-ಸಿ.ಎಂ.ಇಬ್ರಾಹಿಂ, ರಾಜ್ಯಾಧ್ಯಕ್ಷ, ಜೆಡಿಎಸ್‌

click me!