ಪಂಚರತ್ನ ಯೋಜನೆಗಳ ಜಾಗೃತಿಗೆ ರಾಜ್ಯಾದ್ಯಂತ ಎಚ್ಡಿಕೆ ಪ್ರವಾಸ: ನಿಖಿಲ್‌ ಕುಮಾರಸ್ವಾಮಿ

By Govindaraj S  |  First Published Nov 6, 2022, 10:41 PM IST

ರಾಜ್ಯದ ರೈತರು, ಜನಸಾಮಾನ್ಯರಿಗೆ ಪೂರಕವಾಗಿರುವ ಪಂಚರತ್ನ ಯೋಜನೆಗಳ ಬಗ್ಗೆ ತಿಳಿಸಲು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಭಾನುವಾರ ತಿಳಿಸಿದರು. 


ಭಾರತೀನಗರ (ನ.06): ರಾಜ್ಯದ ರೈತರು, ಜನಸಾಮಾನ್ಯರಿಗೆ ಪೂರಕವಾಗಿರುವ ಪಂಚರತ್ನ ಯೋಜನೆಗಳ ಬಗ್ಗೆ ತಿಳಿಸಲು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಭಾನುವಾರ ತಿಳಿಸಿದರು. ಕಪರೆಕೊಪ್ಪಲು ಗ್ರಾಮದಲ್ಲಿ ಶ್ರೀಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದ ಉದ್ಘಾಟನೆ ಮತ್ತು ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ರೈತರು, ರಾಜ್ಯದ ಜನರ ದೃಷ್ಠಿಯಿಂದ ಜೆಡಿಎಸ್‌ ಪಕ್ಷ ಪಂಚರತ್ನ ಯೋಜನೆ ಜಾರಿಗೆ ತರಲಾಗಿದೆ. 

ರಾಜ್ಯದ ಜನರು 5 ವರ್ಷ ಜೆಡಿಎಸ್‌ ಪಕ್ಷ ಸರ್ಕಾರ ರಚನೆಗೆ ಆಶೀರ್ವಾದ ಮಾಡಿದರೆ ಈ ಯೋಜನೆಯಿಂದ ಅನುಕೂಲವಾಗಲಿದೆ ಎಂದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಚ್‌.ಡಿ.ಕುಮಾರಣ್ಣ ಮುಖ್ಯಮಂತ್ರಿಯಾಗಿ ಸರ್ಕಾರ ರಚಿಸುವುದು ಶತಸಿದ್ದ. ಈ ಬಾರಿ ಸ್ವತಂತ್ರವಾದ ಜಾತ್ಯತೀತ ಜನತಾದಳ ಪಕ್ಷವನ್ನು ಅಧಿಕಾರಕ್ಕೆ ತರಲು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಾಗಿದೆ. ಎಲ್ಲರೂ ಒಗ್ಗೂಡಿ 2023 ಕ್ಕೆ ಜೆಡಿಎಸ್‌ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸೋಣ ಎಂದು ಕೋರಿದರು.

Tap to resize

Latest Videos

ಪಂಚರತ್ನ ಯೋಜನೆಯಿಂದ ರಾಜ್ಯದ ಸರ್ವತೋಮುಖ ಅಭಿವೃದ್ಧಿ: ನಿಖಿಲ್‌ ಕುಮಾರಸ್ವಾಮಿ

ಯುವಕರು ಯಾವುದೇ ಹಣ ಆಮಿಷಗಳಿಗೆ ಬಲಿಯಾಗಬಾರದು. ಕುಮಾರಣ್ಣ ಮತ್ತು ನಿಖಿಲ್‌ ಕುಮಾರಸ್ವಾಮಿ ಅವರು ಬಂದಾಗ ಜೈಕಾರ ಹಾಕಿ ಬೆಂಬಲಿಸಿದರೆ ಸಾಲದು. ನಮ್ಮ ಪಕ್ಷದಿಂದ ನಿಲ್ಲುವಂತಹ ಅಭ್ಯರ್ಥಿಗಳನ್ನು ಹೆಚ್ಚಿನ ಬಹುಮತದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಡಿ.ಸಿ.ತಮ್ಮಣ್ಣ ಅವರಿಗೆ ದೊಡ್ಡ ದೂರದೃಷ್ಟಿಇದೆ. ಕ್ಷೇತ್ರವನ್ನು ಸರ್ವೋತೋಮುಖ ಅಭಿವೃದ್ಧಿಯತ್ತ ಕೊಂಡೋಯ್ಯುವುದರಲ್ಲಿ ಯಾವುದೇ ಸಂಶಯವಿಲ್ಲ. ಇಂತಹ ಶಾಸಕರನ್ನು ಪಡೆದಿರುವುದು ನಮ್ಮ ನಿಮ್ಮೆಲ್ಲರ ಪುಣ್ಯ. ಐಷಾರಾಮಿ ಜೀವನದಲ್ಲಿ ಬೆಂಗಳೂರಿನಲ್ಲಿ ಕಾಲಕಳೆಯಬಹುದಿತ್ತು. ಆದರೆ ನಿಮ್ಮೆಲ್ಲರ ಸೇವೆಗಾಗಿ ಇಲ್ಲೆ ಇದ್ದು ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದರು.

ಶಾಸಕ ಡಿ.ಸಿ.ತಮ್ಮಣ್ಣ ಅವರ ಕಾರ್ಯವೈಖರಿಯನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ತಮ್ಮಣ್ಣರಿಗೆ 80 ವರ್ಷ ವಯಸ್ಸಾಗಿದ್ದರೂ ಯಾರಿಗೂ ಕಡಿಮೆ ಇಲ್ಲದ್ದಂತೆ ಸಂಘಟಿಸುತ್ತಾ ಕ್ಷೇತ್ರವನ್ನು ಅಭಿವೃದ್ದಿ ಪಡಿಸುತ್ತಿದ್ದಾರೆ. ಇಂತಹ ಶಾಸಕರನ್ನು ಬೆಂಬಲಿಸುವುದು ನಿಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ.ಸಿ.ತಮ್ಮಣ್ಣ ಮಾತನಾಡಿ, ಶ್ರೀಕಾಲಭೈರವೇಶ್ವರ ಸರ್ವರಿಗೂ ಒಳ್ಳೆದನ್ನು ಉಂಟುಮಾಡಲಿ. ಮುಂದಿನ ದಿನಗಳಲ್ಲಿ ರೈತರು ಉಳಿಯಬೇಕಾದರೆ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬರಬೇಕು. ಕುಮಾರಸ್ವಾಮಿ ಸರ್ಕಾರದಲ್ಲಿ ರೈತರಿಗೆ 45 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಇದನ್ನು ರೈತರು ಎಂದಿಗೂ ಮರೆಯುವಂತಿಲ್ಲ ಎಂದರು.

ಬೆಲ್ಲದಾರತಿ, ಜೆಸಿಬಿ ಮೂಲಕ ಹೂ ಹಾಕಿ ಅದ್ಧೂರಿ ಸ್ವಾಗತ: ನಿಖಿಲ್‌ ಕುಮಾರಸ್ವಾಮಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಮಹಿಳೆಯರು ಬೆಲ್ಲದಾರತಿ ನೀಡಿ ಗ್ರಾಮಕ್ಕೆ ಬರಮಾಡಿಕೊಂಡರು. ರಸ್ತೆಯುದ್ದಕ್ಕೂ ಗ್ರಾಮದೇವತೆಗಳೊಂದಿಗೆ ತಮಟೆ-ನಗಾರಿಗಳ ಜೊತೆ ಮೆರವಣಿಗೆ ನಡೆಸಿ ಜೆಸಿಪಿ ಮೂಲಕ ಹೂವನ್ನು ಹಾಕಿ ಅದ್ದೂರಿಯಾಗಿ ಸ್ವಾಗತಿಸಿದರು. ನಿಖಿಲ್‌ ಜೊತೆ ಫೋಟೋ ಮತ್ತು ಸೆಲ್ಫಿ ಕ್ಲಿಕಿಸಿಕೊಳ್ಳಲು ಮುಗಿಬಿದ್ದಿದ್ದರು. ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು. ಈ ವೇಳೆ ಶ್ರೀಗಿರಿ ತಪೋವನದ ಶ್ರೀರಾಮಾರೂಡಸ್ವಾಮಿ ಮಠದ ಶ್ರೀಬಸವಾನಂದಸ್ವಾಮೀಜಿ ಟಿ.ನರಸೀಪುರ ವೇದಾವತಿ ಮಾತಾಜಿ ಭಕ್ತಾಧಿಗಳಿಗೆ ಆಶೀರ್ವಚನ ನೀಡಿದರು.

ಅಸೆಂಬ್ಲಿ ಚುನಾವಣೆಯಲ್ಲಿ ನಿಖಿಲ್‌ ಸ್ಪರ್ಧೆ ಖಚಿತಪಡಿಸಿದ ಎಚ್‌ಡಿಕೆ

ವೇದಿಕೆಯಲ್ಲಿ ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು, ಗಂಗಾಮತಸ್ಥರ ಜಿಲ್ಲಾಧ್ಯಕ್ಷ ಎಸ್‌.ರಮೇಶ್‌, ಮೈಸೂರು ಮಹಾಮಂಡಳಿ ಅಧ್ಯಕ್ಷ ಎಂ.ಎಸ್‌.ಸಿದ್ದಲಿಂಗರಾಜು, ಜೆಡಿಎಸ್‌ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಗುರುದೇವರಹಳ್ಳಿ ಅರವಿಂದ್‌, ದಯಾನಂದ್‌, ಗ್ರಾಪಂ ಮಾಜಿ ಅಧ್ಯಕ್ಷ ಕೆ.ಎಂ.ಪುಟ್ಟಸ್ವಾಮಿ, ಉಪಾಧ್ಯಕ್ಷ ಜಯಲಕ್ಷ್ಮಿ, ಸದಸ್ಯರಾದ ವೀರಭದ್ರ, ನಿರೂಪಕಿ ಮಂಡ್ಯ ಅನುಪಮ ಸೇರಿದಂತೆ ಹಲವರಿದ್ದರು.

click me!