
ರಾಂಚಿ: "ನಾನು ತಪ್ಪು ಮಾಡಿದ್ದರೆ, ನೀವೇಕೆ ಸುಮ್ಮನೆ ನನ್ನನ್ನು ಪ್ರಶ್ನೆ ಮಾಡುತ್ತಿದ್ದೀರಿ. ನಿಮಗೆ ಸಾಧ್ಯವಾದರೆ ಬಂದು ನನ್ನನ್ನು ಬಂಧಿಸಿ," ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಹೇಳಿದ್ದಾರೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬುಡಕಟ್ಟು ಜನಾಂಗದ ಮುಖ್ಯಮಂತ್ರಿಗೆ ಕಿರುಕುಳ ನೀಡಲು ಈ ರೀತಿ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
"ಬಿಜೆಪಿಯನ್ನು ವಿರೋಧಿಸುವ ಧ್ವನಿಗಳನ್ನು ಹತ್ತಿಕ್ಕಲು ಸ್ವತಂತ್ರ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ಬಳಸಿಕೊಳ್ಳುತ್ತಿದೆ. ಇದು ಅಸಂವಿಧಾನಾತ್ಮಕ ಕೆಲಸ," ಎಂದು ಸೊರೇನ್ ಹೇಳಿದ್ದಾರೆ. ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಅಕ್ರಮ ಹಣ ಲೇವಾದೇವಿ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಅವರ ಮೇಲೆ ಆರೋಪಿಸಿದೆ. ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಜಾರಿಗೊಳಿಸಿದೆ. ನೊಟೀಸ್ ಜಾರಿಯಾದ ಬೆನ್ನಲ್ಲೇ ಅವರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ ಕೇಂದ್ರವನ್ನು ಖಂಡಿಸಿದ್ದಾರೆ. ತಾಕತ್ತಿದ್ದರೆ ಬಂಧಿಸಿ ಎಂದು ಸವಾಲು ಹಾಕಿದ್ದಾರೆ. ಇಡಿ ಸೃಷ್ಟಿಸಿರುವ ವಿವಾದಕ್ಕೆ ಸರಿಯಾದ ಉತ್ತರ ನೀಡುತ್ತೇನೆ ಎಂದೂ ಅವರು ಹೇಳಿದ್ದಾರೆ.
ರಾಂಚಿಯ ಜಾರಿ ನಿರ್ದೇಶನಾಲಯದ ಕಚೇರಿಗೆ ಇಂದು ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿತ್ತು. ಆದರೆ ಸೊರೇನ್ ವಿಚಾರಣೆಗೆ ಹಾಜರಾಗಿಲ್ಲ. ಅದರ ಬದಲು ಜಾರ್ಖಂಡ್ ಮುಕ್ತಿ ಮೋರ್ಚಾದಲ್ಲಿ ಕಾರ್ಯಕರ್ತರ ಜತೆ ಮಾತನಾಡಿದರು. ಜಾರ್ಖಂಡ್‌ನಲ್ಲಿ ಸದ್ಯ ಕಾಂಗ್ರೆಸ್ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷಗಳ ಸಮ್ಮಿಶ್ರ ಸರ್ಕಾರವಿದೆ. ಸಾವಿರಾರು ಕೋಟಿ ಸಾಲ ಪಡೆದು ವಂಚಿಸಿದ ಉದ್ಯಮಿಗಳನ್ನು ಭಾರತದಿಂದ ಓಡಿಹೋಗಲು ಬಿಟ್ಟು ವಿರೋಧ ಪಕ್ಷಗಳ ವಿರುದ್ಧ ಕೇಂದ್ರ ಹರಿಹಾಯುತ್ತಿದೆ ಎಂದು ಸೊರೇನ್ ಹೇಳಿದರು.
ಇದನ್ನೂ ಓದಿ: ಗುಜರಾತ್ ಚುನಾವಣೆ ದಿನಾಂಕ ಪ್ರಕಟ, ಉಚಿತ ಆಫರ್ ಘೋಷಿಸಿದ ಕೇಜ್ರಿವಾಲ್!
ಹೇಮಂತ್ ಸೊರೇನ್ ಕಲ್ಲಿದ್ದಲು ಗಣಿಗಾರಿಕೆಯನ್ನು ತನ್ನ ಒಡೆತನದ ಸಂಸ್ಥೆಗೇ ಟೆಂಡರ್ ನೀಡಿರುವ ಆರೋಪವನ್ನು ಎದುರಿಸುತ್ತಿದ್ದಾರೆ. ಈ ಕಾರಣದಿಂದ ಅವರನ್ನು ಶಾಸಕ ಸ್ಥಾನದಿಂದಲೇ ವಜಾಗೊಳಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿತ್ತು. ನಂತರ ತನಿಖೆ ನಡೆಸಿದ ಆಯೋಗ ರಾಜ್ಯಪಾಲ ರಮೇಶ್ ಬಾಯಿಸ್‌ಗೆ ವರದಿ ನೀಡಿದೆ. ಆದರೆ ರಾಜ್ಯಪಾಲರು ಇನ್ನೂ ಯಾವುದೇ ಕ್ರಮವನ್ನು ಜರುಗಿಸಿಲ್ಲ. ಈ ಸಮಸ್ಯೆ ಸ್ವಲ್ಪ ತಣ್ಣಗಾಗಿದೆ ಅಂದುಕೊಂಡಿದ್ದಾಗಲೇ ಜಾರಿ ನಿರ್ದೇಶನಾಲಯ ಸೊರೇನ್ ಹಿಂದೆ ಬಿದ್ದಿದೆ. ಹೇಮಂತ್ ಸೊರೇನ್ ರಾಜ್ಯಪಾಲರಿಗೂ ತಕ್ಷಣ ಆಯೋಗ ಮಾಡಿರುವ ಶಿಫಾರಸ್ಸನ್ನು ಬೆಳಕಿಗೆ ತನ್ನಿ ಎಂದಿದ್ದರು.
ಇದನ್ನೂ ಓದಿ: Gujarat Election 2022: ಗುಜರಾತ್‌ನಲ್ಲಿ ಡಿಸೆಂಬರ್ 1, 5ಕ್ಕೆ ಎರಡು ಹಂತದ ಮತದಾನ, 8ಕ್ಕೆ ಫಲಿತಾಂಶ!
ಬಿಜೆಪಿ ವಿರುದ್ಧ ಆಪರೇಷನ್ ಕಮಲದ ಆರೋಪವನ್ನೂ ಹೇಮಂತ್ ಸೊರೇನ್ ಮಾಡಿದ್ದರು. ಪಶ್ಚಿಮ ಬಂಗಾಳದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ಕಾಂಗ್ರೆಸ್ ಶಾಸಕರು ಇರುವುದಾಗಿ ಮತ್ತು ಅವರಿಗೆ 50 ಲಕ್ಷ ನಗದು ನೀಡಿರುವುದಾಗಿ ಸೊರೇನ್ ಆರೋಪಿಸಿದ್ದರು. ನನ್ನ ವಿರುದ್ಧ ಮಾಡುತ್ತಿರುವ ಪಿತೂರಿ ಬುಡಕಟ್ಟು, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಮುದಾಯದ ಮೇಲೆ ಮಾಡುತ್ತಿರುವ ದಾಳಿ ಎಂದು ಸೊರೇನ್ ಉಲ್ಲೇಖಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ಅವರು ಬಿಜೆಪಿ ಹೆಸರು ಹೇಳದೇ ಪರೋಕ್ಷವಾಗಿ ದಾಳಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.