ಯಾವ ಪಕ್ಷಕ್ಕೆ ಹಾನಿ, ಯಾರಿಗೆ ಲಾಭ ಎಂಬ ಹರಟೆ, ಹೈ-ಕ ಭಾಗದ ಬಿಜೆಪಿ ಶಾಸಕರಿಗೆ ಹೊಸ ಪಕ್ಷದ ಆತಂಕ, ನಮಗೆ ಲಾಭ ಖಚಿತ ಎನ್ನುತ್ತಿದ್ದಾರೆ ಕಾಂಗ್ರೆಸ್ ಶಾಸಕರು.
ಸುವರ್ಣಸೌಧ(ಡಿ.27): ಬಿಜೆಪಿಯಿಂದ ಮುನಿಸಿಕೊಂಡಿದ್ದ ಜನಾರ್ದನ ರೆಡ್ಡಿ, ಇದೀಗ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂಬ ಹೊಸ ಪಕ್ಷವನ್ನು ಘೋಷಿಸಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ಅಕ್ಷರಶಃ ಸಂಚಲನವನ್ನುಂಟು ಮಾಡಿದೆ. ಚಳಿಗಾಲದ ಅಧಿವೇಶನದಲ್ಲಿ ರೆಡ್ಡಿಯ ಹೊಸ ಪಕ್ಷ ಬಿಸಿಯನ್ನುಂಟು ಮಾಡಿದೆ. ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷ ಎರಡೂ ಮೊಗಸಾಲೆಗಳಲ್ಲಿ ಬರೀ ಇದರದ್ದೇ ಚರ್ಚೆ ನಡೆಯುತ್ತಿದ್ದು, ಲಾಭ-ಹಾನಿ ಲೆಕ್ಕಾಚಾರ ಆರಂಭಿಸಲಾಗಿದೆ.
ಶುಕ್ರವಾರ ಅಧಿವೇಶನ ಮುಗಿಸಿಕೊಂಡು ತೆರಳಿದ್ದ ಶಾಸಕರೆಲ್ಲರೂ ಸೋಮವಾರ ಮರಳಿ ಅಧಿವೇಶನದಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ಬರುವಷ್ಟರಲ್ಲೇ ರೆಡ್ಡಿ ಹೊಸ ಪಕ್ಷ ಘೋಷಣೆಯಾಗಿದ್ದು ಹೊಸ ವಿಷಯವಾಗಿತ್ತು.
ಜನಾರ್ದನ ರೆಡ್ಡಿ ಹೈದರಾಬಾದ್ ಕರ್ನಾಟಕ ಪ್ರದೇಶವನ್ನೇ ಕೇಂದ್ರೀಕೃತವಾಗಿಟ್ಟುಕೊಂಡು ಪಕ್ಷವನ್ನು ಕಟ್ಟಲು ಹೊರಟ್ಟಿದ್ದಾರೆ. ಇದರಿಂದಾಗಿ ಈ ಭಾಗದ ಶಾಸಕರಲ್ಲಿ ಒಂದು ಹಂತದಲ್ಲಿ ನಡುಕ ಹುಟ್ಟುಹಾಕಿದೆ. ಅದರಲ್ಲೂ ಬಿಜೆಪಿ ಶಾಸಕರು ತಮ್ಮ ಗೆಲುವಿಗೆ ರೆಡ್ಡಿ ಪಕ್ಷ ಎಷ್ಟರ ಮಟ್ಟಿಗೆ ಅಡ್ಡಗಾಲು ಆಗಬಹುದು. ಅದನ್ನು ತಪ್ಪಿಸಬೇಕೆಂದರೆ ಏನೆಲ್ಲ ಕಸರತ್ತುಗಳನ್ನು ಮಾಡಬೇಕು ಎಂಬ ಬಗ್ಗೆ ತಮ್ಮದೇ ಆದ ಲೆಕ್ಕಾಚಾರದಲ್ಲಿ ತೊಡಗಿದ್ದು ಕಂಡು ಬಂತು. ಜತೆಗೆ ರೆಡ್ಡಿ ಅವರು ಕಳೆದ 10-12 ವರ್ಷದಿಂದ ರಾಜಕೀಯದಿಂದ ದೂರವೇ ಇದ್ದಾರೆ. ಹೀಗಾಗಿ ಅಷ್ಟೊಂದು ಪರಿಣಾಮ ಬೀರಲಿಕ್ಕಿಲ್ಲ ಎಂದು ಬಿಜೆಪಿ ಶಾಸಕರು ವಾದ ಮುಂದಿಡುತ್ತಿದ್ದರು. ಆದರೂ ಅವರಲ್ಲಿನ ಆತಂಕ ಮಾತ್ರ ಎದ್ದು ಕಾಣುತ್ತಿತ್ತು. ಈ ನಡುವೆ ಜನಾರ್ದನ ರೆಡ್ಡಿ ಸಹೋದರರಾದ ಕರುಣಾಕರ ರೆಡ್ಡಿ, ಸೋಮಶೇಖರ ರೆಡ್ಡಿ ಕೂಡ ಕೆಲಕಾಲ ಈ ಚರ್ಚೆ ನಡೆಸಿರುವುದುಂಟು.
ಟಿಕೆಟ್ ಕೊಟ್ರೂ ಕಷ್ಟ, ಬಿಟ್ಟರೂ ಕಷ್ಟ: ಬಿಜೆಪಿಗೆ ಬಿಸಿತುಪ್ಪವಾದ ಜನಾರ್ದನ ರೆಡ್ಡಿ..!
ಬಿಜೆಪಿಗೆ ನಷ್ಟ ಖಚಿತ?:
‘ಇನ್ನು ರಡ್ಡಿ ಪಕ್ಷದಿಂದ ಬಿಜೆಪಿಗೆ ನಷ್ಟವಾಗುವುದು ಖಚಿತ. ಇದರಿಂದ ಕಾಂಗ್ರೆಸ್‌ಗೆ ಹೆಚ್ಚಿನ ಲಾಭ ಬರುತ್ತದೆ. ಹಿಂದೆ ಬಿಎಸ್‌ಆರ್ ಹಾಗೂ ಕೆಜೆಪಿ ಪಕ್ಷಗಳೆರಡು ಉಗಮವಾದಾಗಲೂ ಇದೇ ರೀತಿ ಆಗಿತ್ತು’ ಎಂಬ ಲೆಕ್ಕಾಚಾರ ಕಾಂಗ್ರೆಸ್ ಶಾಸಕರು ಮುಂದಿಡುತ್ತಾರೆ. ಒಟ್ಟಿನಲ್ಲಿ ರೆಡ್ಡಿ ಹೊಸ ಪಕ್ಷ ಹುಟ್ಟುಹಾಕಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನವನ್ನುಂಟು ಮಾಡಿರುವುದಂತೂ ಸತ್ಯ.