ಕೊರೋನಾ ಹೆಸರಿನಲ್ಲಿ ಸರ್ಕಾರ ಜನರನ್ನು ಭಯದ ವಾತಾವರಣಕ್ಕೆ ತಳ್ಳಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು. ನಗರದ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಬಸ್ ಯಾತ್ರೆ ಮಾಡೇ ಮಾಡುತ್ತೇವೆ.
ಹುಬ್ಬಳ್ಳಿ (ಡಿ.27): ಕೊರೋನಾ ಹೆಸರಿನಲ್ಲಿ ಸರ್ಕಾರ ಜನರನ್ನು ಭಯದ ವಾತಾವರಣಕ್ಕೆ ತಳ್ಳಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು. ನಗರದ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಬಸ್ ಯಾತ್ರೆ ಮಾಡೇ ಮಾಡುತ್ತೇವೆ. ಈಗಾಗಲೇ ರಾಜ್ಯದ ಜನ ಕೊರೋನಾ ಶಾಕ್‌ನಿಂದ ಹೊರಬಂದು ಜೀವನ ಸಾಗಿಸುತ್ತಿದ್ದಾರೆ. ಈ ಹಿಂದೆ ಜನರಿಗೆ ಸಹಕಾರ ಕೊಡಬೇಕಿದ್ದಾಗ ಸರ್ಕಾರ ಸಹಕಾರ ಕೊಡಲಿಲ್ಲ. ಸುಖಾಸುಮ್ಮನೆ ಜನರಲ್ಲಿ ಭಯ ಹುಟ್ಟಿಸಬಾರದು. ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದುಕೊಂಡು ತನ್ನ ಜವಾಬ್ದಾರಿ ನಿಭಾಯಿಸಲಿ ಎಂದರು.
ಉ.ಕರ್ನಾಟಕಕ್ಕೆ ಪ್ರತ್ಯೇಕ ಪ್ಯಾಕೇಜ್: ಬೆಳಗಾವಿ, ಕಾರವಾರ, ನಿಪ್ಪಾಣಿಯನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಣೆ ಮಾಡಬೇಕೆಂಬ ಮಹಾರಾಷ್ಟ್ರದವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮಹಾರಾಷ್ಟ್ರ- ಬೆಳಗಾವಿ ಗಡಿಯಲ್ಲಿ ರಾಜ್ಯಗಳ ಗಡಿಗಳು ಗುರುತು ಆಗಿವೆ. ಹೀಗಾಗಿ ಮಹಾರಾಷ್ಟ್ರದ ಒಂದು ಹಳ್ಳಿಯೂ ನಮಗೆ ಬೇಡ. ನಮ್ಮ ಹಳ್ಳಿ ಅವರಿಗೆ ಬೇಡ. ಇದೀಗ ಜನರು ನೆಮ್ಮದಿಯಿಂದ ಇದ್ದಾರೆ. ಮುಂದೆ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಆಗ ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಪ್ಯಾಕೇಜ್ ಘೋಷಣೆ ಮಾಡಿ ಈ ಭಾಗದಲ್ಲಿ ಉದ್ಯೋಗಾವಕಾಶ ಸೃಷ್ಟಿಗೆ ಮುಂದಾಗುತ್ತೇವೆ ಎಂದು ತಿಳಿಸಿದರು.
ಡಿಕೆಶಿ ಕುಕ್ಕರ್ ಬಾಂಬ್ ಹೇಳಿಕೆ ಬಗ್ಗೆ ರವಿ ಪ್ರಸ್ತಾಪದಿಂದ ಗದ್ದಲ
ಈಗಾಗಲೇ ಕೇಂದ್ರ ಗೃಹ ಸಚಿವರು ಎರಡು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ಮಾಡಿದ್ದಾರೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಇದರಿಂದ ಸಭೆಗೆ ಕಿಮ್ಮತ್ತು ಇಲ್ಲವಾಯಿತು. ಇದೆಲ್ಲ ಬಿಜೆಪಿ ತಂತ್ರಗಾರಿಕೆ ಎಂದು ಕಿಡಿಕಾರಿದರು. ಇದೀಗ ಜನಾರ್ದನ ರೆಡ್ಡಿ ಪಕ್ಷ ಹುಟ್ಟಿದೆ. ಅದಕ್ಕೆ ನಾಮಕರಣ ಆಗಿದೆ. ಮುಂದೆ ಚಿಹ್ನೆ ಬರಲಿ. ಕೇವಲ ಒಂದು ಸುದ್ದಿಗೋಷ್ಠಿ ಮಾಡಿದರೆ ನಾನು ಅದನ್ನು ಗಂಭೀರವಾಗಿ ಪರಿಗಣಿಸಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೂ ನಾಯಕರು ಬೆಳೆಯಬೇಕು.
ಅವರು ಯಶಸ್ಸು ಸಾಧಿಸಲಿ, ಜನ ಸೇವೆ ಮಾಡಲಿ. ಈ ಸಮಯದಲ್ಲಿ ಟೀಕೆ ಮಾಡುವ ಪ್ರವೃತ್ತಿ ನನ್ನದಲ್ಲ. ಒಳ್ಳೆಯ ಕೆಲಸ ಮಾಡಲು ಯಾರೇ ಮುಂದೆ ಬಂದರೂ ನಾವು ಅಭಿನಂದಿಸುತ್ತೇನೆ. ನಾವು ನೀತಿ ಮೇಲೆ ರಾಜಕಾರಣ ಮಾಡುತ್ತೇವೆ. ಪಕ್ಷ ಈಗ ಉದಯ ಆಗಿದೆ. ಅದು ಬೆಳೆದು ಮರವಾಗ ಬೇಕಾದರೆ ವರ್ಷಗಳು ಬೇಕಾಗುತ್ತವೆ. ಅವರಿಗೆ ಒಳ್ಳೆಯದಾಗಲಿ ಎಂದು ರೆಡ್ಡಿ ಅವರ ನೂತನ ರಾಜಕೀಯ ಪಕ್ಷದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
Bus Yatra: ಜ.11ಕ್ಕೆ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಬಸ್ ಯಾತ್ರೆ
ಗುತ್ತಿಗೆರಾರರು ಜಾಗರೂಕರಾಗಿರಿ: ಸರ್ಕಾರದ ಭ್ರಷ್ಟಾಚಾರ ಕುರಿತು ಕೆಂಪಣ್ಣ ಅವರು ಸತ್ಯ ಹೇಳಿದ್ದಕ್ಕೆ ವಾರಂಟ್ ಹೊರಡಿಸಿ ಬಂಧಿಸಿದ್ದಾರೆ. ರಾಜ್ಯದ ಗುತ್ತಿಗೆದಾರರು ಈ ವಿಚಾರದಲ್ಲಿ ಜಾಗರೂಕರಾಗಿರಿ ಎಂದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು. ‘ಇದು ಕೇವಲ ಕೆಂಪಣ್ಣ ಒಬ್ಬರ ಮೇಲಿನ ದೌರ್ಜನ್ಯ ಅಲ್ಲ. ಗುತ್ತಿಗೆದಾರರಿಗೆ ದಿನನಿತ್ಯ ಆಗುತ್ತಿರುವ ಕಿರುಕುಳ. ಈ ಸರ್ಕಾರವನ್ನು ಕಿತ್ತೊಗೆಯಲು ಭ್ರಷ್ಟಾಚಾರದ ಮಾಹಿತಿ ಒದಗಿಸಿಕೊಡಬೇಕು. ಲೋಕಾಯುಕ್ತ, ಇ,ಡಿ., ಐಟಿ ಸಂಸ್ಥೆಗಳು ಭ್ರಷ್ಟಾಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ತನಿಖೆ ಮಾಡಬೇಕು.ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದರು.