ದಶಕಗಳ ಕಾಲ ತಾವು ನಂಬಿದ್ದ, ಪ್ರತಿಪಾದಿಸಿದ್ದ ಸಿದ್ಧಾಂತಕ್ಕೆ ತದ್ವಿರುದ್ಧವಾಗಿ ಬಿಜೆಪಿ ತೊರೆದು, ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಓರ್ವ ಅವಕಾಶವಾದಿ ರಾಜಕಾರಣಿ, ಲಿಂಗಾಯತ ವಿರೋಧಿ ಆಗಿರುವ ಕಾಂಗ್ರೆಸ್ ಜೊತೆ ಶೆಟ್ಟರ್ ನಿಂತಿದ್ದು ದೌರ್ಭಾಗ್ಯ ಎಂದು ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ, ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಹ ಸಂಯೋಜಕ ಡಾ.ಎ.ಎಚ್.ಶಿವಯೋಗಿ ಸ್ವಾಮಿ ಟೀಕಿಸಿದರು.
ದಾವಣಗೆರೆ (ಏ.23) : ದಶಕಗಳ ಕಾಲ ತಾವು ನಂಬಿದ್ದ, ಪ್ರತಿಪಾದಿಸಿದ್ದ ಸಿದ್ಧಾಂತಕ್ಕೆ ತದ್ವಿರುದ್ಧವಾಗಿ ಬಿಜೆಪಿ ತೊರೆದು, ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಓರ್ವ ಅವಕಾಶವಾದಿ ರಾಜಕಾರಣಿ, ಲಿಂಗಾಯತ ವಿರೋಧಿ ಆಗಿರುವ ಕಾಂಗ್ರೆಸ್ ಜೊತೆ ಶೆಟ್ಟರ್ ನಿಂತಿದ್ದು ದೌರ್ಭಾಗ್ಯ ಎಂದು ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ, ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಹ ಸಂಯೋಜಕ ಡಾ.ಎ.ಎಚ್.ಶಿವಯೋಗಿ ಸ್ವಾಮಿ ಟೀಕಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಮಾನ್ಯ ಕಾರ್ಯಕರ್ತರಾಗಿದ್ದ ಜಗದೀಶ ಶೆಟ್ಟರ್‌ಗೆ ಶಾಸಕ, ಸಚಿವ, ಮುಖ್ಯಮಂತ್ರಿ, ರಾಜ್ಯಾಧ್ಯಕ್ಷ ಮಾಡಿದ ಬಿಜೆಪಿ ತನಗೆ 6 ಬಾರಿ ಅವಕಾಶ ನೀಡಿದ ನಂತರವೂ ಮತ್ತೊಮ್ಮೆ ಸ್ಪರ್ಧಿಸಲು ಅವಕಾಶ ನೀಡಿಲ್ಲವೆಂಬ ಕಾರಣಕ್ಕೆ ಅವಕಾಶವಾದಿ ರಾಜಕಾರಣಿ ಜಗದೀಶ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಕಾರ್ಯಕರ್ತರಿಗೆ ನೋವುಂಟು ಮಾಡಿದೆ ಎಂದರು.
ಶೆಟ್ಟರ್, ಸವದಿ ತಪ್ಪು ಹೆಜ್ಜೆ: ವಿಧಾನಸಭಾಧ್ಯಕ್ಷ ಕಾಗೇರಿ ಬೇಸರ
ನಿಲುವು ಸ್ಪಷ್ಟಪಡಿಸಲಿ:
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ, 370ನೇ ವಿಧಿ ರದ್ಧತಿ, ಗೋಹತ್ಯೆ ನಿಷೇಧ ಸೇರಿದಂತೆ ಬಿಜೆಪಿಯ ಪ್ರತಿಯೊಂದು ನಡೆಗೂ ಕಾಂಗ್ರೆಸ್ ವಿರೋಧಿಸಿಕೊಂಡೇ ಬಂದಿದೆ. ಈಗ ಕಾಂಗ್ರೆಸ್ ಸೇರ್ಪಡೆಯಾದ ಶೆಟ್ಟರ್ ತಮ್ಮ ನಿಲುವು ಸ್ಪಷ್ಟಪಡಿಸಲಿ. ಪಕ್ಷದ ಧ್ವಜದ ಜೊತೆಗೆ ಭಾವನೆ, ನಂಬಿಕೆಗಳೂ ಬದಲಾಗುತ್ತದೆಯೇ ಎಂಬುದನ್ನು ನಾಡಿನ ಜನತೆ ಮುಂದೆ ಜಗದೀಶ ಶೆಟ್ಟರ್ ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ ಮಾತನಾಡಿ, ವೀರಶೈವ ಲಿಂಗಾಯತರನ್ನು ಕಾಂಗ್ರೆಸ್ ಪಕ್ಷ ಹೇಗೆಲ್ಲಾ ನಡೆಸುತ್ತಾ ಬಂದಿದೆಯೆಂಬುದಕ್ಕೆ ಇತಿಹಾಸವೇ ಇದೆ. 1969ರಲ್ಲಿ ಎಸ್.ನಿಜಲಿಂಗಪ್ಪ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಪಕ್ಷ ವಿಭಜಿಸಿ, ಎಸ್ಸೆನ್‌ರನ್ನೇ ಮೂಲೆಗುಂಪು ಮಾಡಿದ್ದು ಇಂದಿರಾಗಾಂಧಿ. 1990ರಲ್ಲಿ ಆಗಿನ ಸಿಎಂ ವೀರೇಂದ್ರ ಪಾಟೀಲರನ್ನು ಅನಾರೋಗ್ಯದ ಸ್ಥಿತಿಯಲ್ಲಿದ್ದರೂ ಅಧಿಕಾರದಿಂದ ಕೆಳಗಿಳಿಸಿ, ಅಗೌರವ ತೋರಿದ್ದು ರಾಜೀವ್ ಗಾಂಧಿ ಎಂದು ಆರೋಪಿಸಿದರು.
ವೀರಶೈವ ಲಿಂಗಾಯತರಿಂದ ಕಾಂಗ್ರೆಸ್‌ಗೆ ಪಾಠ:
ಕಾಂಗ್ರೆಸ್ 1990ರಿಂದ ಈ ವರೆಗೂ ಕಳೆದ 33 ವರ್ಷದಲ್ಲಿ ಯಾವೊಬ್ಬ ಲಿಂಗಾಯತರನ್ನೂ ಮುಖ್ಯಮಂತ್ರಿ ಮಾಡಿಲ್ಲ. ಕಾಂಗ್ರೆಸ್ ಪಕ್ಷದ ದ್ವಂದ್ವ ನೀತಿಯನ್ನು ಲಿಂಗಾಯತರು ಅರ್ಥ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ವೀರಶೈವ ಲಿಂಗಾಯತ ಧರ್ಮ ವಿಭಜನೆಗೆ ಮುಂದಾಗಿದ್ದರು. ಅಲ್ಲದೇ, ಲಿಂಗಾಯತರಿಗೆ ಸರ್ಕಾರ ನೀಡಿದ ಮೀಸಲಾತಿಯನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಹಿಂಪಡೆಯುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಘೋಷಣೆ ಮಾಡಿದ್ದಾರೆ. ಇಂತಹವರಿಗೆ ವೀರಶೈವ ಲಿಂಗಾಯತರೂ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು. ವೀರಶೈವ ಲಿಂಗಾಯತ ಸೇರಿದಂತೆ ಎಲ್ಲಾ ಜಾತಿಗಳ ವಿರೋಧಿ ಮನಸ್ಥಿತಿಯ ಕಾಂಗ್ರೆಸ್ ಪಕ್ಷವು ವೀರಶೈವ ಲಿಂಗಾಯತ ಮತ ಗಳಿಸುವ ಏಕೈಕ ಉದ್ದೇಶದಿಂದ ಈಗ ಸಮಾಜದ ಮೇಲೆ ಅತೀ ಕಾಳಜಿ ತೋರುತ್ತಾ, ಮೊಸಳೆ ಕಣ್ಣೀರು ಸುರಿಸುತ್ತಿದೆ. ಪ್ರಜ್ಞಾವಂತ ವೀರಶೈವ ಸಮುದಾಯ ಕಾಂಗ್ರೆಸ್ ನಾಯಕರ ತಂತ್ರ, ಕುತಂತ್ರಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು.
ಉತ್ತರ ಶಾಸಕ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ಪಕ್ಷದ ರಾಜ್ಯ ಕಾರ್ಯದರ್ಶಿ, ಮಾಜಿ ಮೇಯರ್ ಸುಧಾ ಜಯರುದ್ರೇಶ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ, ಜಿಲ್ಲಾ ವಕ್ತಾರ ಡಿ.ಎಸ್.ಶಿವಶಂಕರ್, ಪಾಲಿಕೆ ಸದಸ್ಯ ಕೆ.ಪ್ರಸನ್ನಕುಮಾರ ಇತರರಿದ್ದರು.
ಕಾಂಗ್ರೆಸ್ ಬಲಪಡಿಸಿದ ಬಿಜೆಪಿಯ ಘಟಾನುಘಟಿ ನಾಯಕರು..!
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ರನ್ನು ಶೆಟ್ಟರ್ ಟೀಕಿಸಿದ್ದು ಆತ್ಮವಂಚನೆ ಪರಮಾವಧಿ. ಸಂಘದ ಪ್ರಚಾರಕರಾದ, ಇಂಜಿನಿಯರಿಂಗ್ ಪದವೀಧರರಾದ ಸಂತೋಷ್ ತಮ್ಮ ಜೀವನವನ್ನೇ ರಾಷ್ಟ್ರ ಕಾರ್ಯಕ್ಕೆ ಸಂಪೂರ್ಣ ತೊಡಗಿಸಿಕೊಂಡ ಇಂತಹವರನ್ನು ಹತ್ತಿರದಿಂದ ಬಲ್ಲ ಯಾವುದೇ ವ್ಯಕ್ತಿ ಜಗದೀಶ ಶೆಟ್ಟರ್ ಟೀಕೆ, ಮಾತುಗಳ ಒಪ್ಪುವುದಿಲ್ಲ, ಸಹಿಸುವುದೂ ಇಲ್ಲ.
ಡಾ.ಎ.ಎಚ್.ಶಿವಯೋಗಿ ಸ್ವಾಮಿ, ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಹ ಸಂಯೋಜಕ
ಹಿರಿಯ ವಯಸ್ಸಲ್ಲಿ ಜಗದೀಶ ಶೆಟ್ಟರ್ ಸಣ್ಣತನ ತೋರಬಾರದಿತ್ತು. ತಮಗೆ ಟಿಕೆಟ್ ನೀಡಲಿಲ್ಲವೆಂಬುದನ್ನೇ ನೆಪ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಶೆಟ್ಟರ್ ಸೇರ್ಪಡೆಯಾಗಿದ್ದು ಸರಿಯಲ್ಲ. ಶೆಟ್ಟರ್ ಕಾಂಗ್ರೆಸ್‌ಗೆ ಯಾಕೆ ಸೇರ್ಪಡೆಯಾದರೆಂಬುದು ಗೊತ್ತಿಲ್ಲ. ಬಿ.ಎಲ್.ಸಂತೋಷ್‌ರನ್ನು ದೂಷಿಸುವುದೂ ಸರಿಯಲ್ಲ. ಪಕ್ಷದ ಬಗ್ಗೆ ಅಗೌರವ ತೋರುವುದನ್ನೂ ನಾವ್ಯಾರೂ ಸಹಿಸುವುದಿಲ್ಲ.
- ಎಸ್.ಎ.ರವೀಂದ್ರನಾಥ, ದಾವಣಗೆರೆ ಉತ್ತರ ಶಾಸಕ