ಕಮಲ ಕೆರೆಯಲ್ಲಿದ್ರೆ ಚೆಂದ, ತೆನೆ ಹೊಲದಲ್ಲಿದ್ರೆ ಚೆಂದ, ದಾನ ಮಾಡುವ ಕೈ ಅಧಿಕಾರದಲ್ಲಿದ್ರೆ ಚೆಂದ : ಡಿಕೆಶಿ

By Kannadaprabha News  |  First Published Apr 23, 2023, 11:27 AM IST

ಬಿಜೆಪಿಯವರದ್ದು ಭಾವನೆ, ನಮ್ಮದು ಬದುಕು. ಅವರು, ಹಿಂದೂ ಮುಂದು ಎನ್ನುತ್ತಾರೆ. ನಾವೆಲ್ಲರೂ ಒಂದು ಎಂದು ನಾವುಗಳು ಹೇಳುತ್ತೇವೆ. ಹುಟ್ಟುವಾಗ ಯಾರೂ ಅರ್ಜಿ ಹಾಕುವುದಿಲ್ಲ, ಹೆಸರು ಮಾತ್ರ ಬೇರೆ ಬೇರೆ. ಸಹೋದರತ್ವ ಕಾಂಗ್ರೆಸ್‌ ಪಕ್ಷದ ಮೂಲ ಸಿದ್ಧಾಂತ ಎಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ 


ಶೃಂಗೇರಿ (ಏ.23) : ಕಮಲ ಕೆರೆಯಲ್ಲಿದ್ರೆ ಚೆಂದ, ತೆನೆ ಹೊಲದಲ್ಲಿದ್ರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ರೆ ಚೆಂದ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಜೆಸಿಬಿಎಂ ಕಾಲೇಜಿನ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಶೃಂಗೇರಿ ಕ್ಷೇತ್ರ (Shringeri assembly constitucncy) ಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಶಾರದಾಂಬೆ ದರ್ಶನಕ್ಕಾಗಿ ಶೃಂಗೇರಿಗೆ ಬಂದಿದ್ದೆ. ನಾನು ದೇವರಲ್ಲಿ ಪ್ರಾರ್ಥನೆ ಮಾಡ ಬೇಕೆಂದು ಗುರುಗಳ ಬಳಿ ಹೇಳಿದ್ದೆ. ಇದಕ್ಕೆ ಅವಕಾಶ ಕಲ್ಪಿಸಿದ್ದರು ಎಂದರು.

Latest Videos

undefined

ಎಲ್ಲ ವಿಘ್ನ ನಿವಾರಣೆ ಮಾಡುವಂತೆ ವಿಘ್ನೇಶ್ವರನ ಬಳಿ ಬಂದಿದ್ದೇನೆ: ಡಿ.ಕೆ. ಶಿವಕುಮಾರ್

ಧರ್ಮಪೀಠಕ್ಕೂ, ರಾಜಕಾರಣಕ್ಕೂ ಸಂಬಂಧ ಬೆರೆಸುವುದು ಸರಿಯಲ್ಲ. ತಾಯಿ ಶಾರದಾಂಬೆ, ಗುರುಗಳ ಆಶೀರ್ವಾದ ಪಡೆಯಲು ಹಾಗೂ ಲೋಕ ಕಲ್ಯಾಣಕ್ಕೆ ಬಂದಿದ್ದೆ. ಇಂದಿರಾ ಗಾಂಧಿ, ರಾಜೀವ್‌ಗಾಂಧಿಯವರು ಲೋಕ ಕಲ್ಯಾಣಕ್ಕಾಗಿ ಇಲ್ಲಿಗೆ ಬಂದು ಹೋಮ ಮಾಡಿಸಿದ್ದರು. ಇದನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಶೃಂಗೇರಿ ರೈತ ಪ್ರಧಾನ ಕ್ಷೇತ್ರ, ಇಲ್ಲಿ ಯಾವುದೇ ಕೈಗಾರಿಕೆ ಇಲ್ಲ, ರೈತನಿಗೆ ಸಂಬಳ ಇಲ್ಲ ಪ್ರಮೋಷನ್‌, ಲಂಚ ಇಲ್ಲ ಎಂದ ಅವರು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಜನರ ಆದಾಯ ಡಬಲ್‌ ಆಗಲಿಲ್ಲ, ಗ್ಯಾಸ್‌ ರೈಟ್‌ ಡಬಲ್‌ ಆಯ್ತು ಎಂದರು.

ದೇಶದಲ್ಲಿ ಕೋವಿಡ್‌ ಬಂದಾಗ ಕ್ಯಾಂಡಲ್‌ ಹಚ್ಚಿ, ಚಪ್ಪಾಳೆ ಹೊಡೆಯಿರಿ ಎಂದರು. ನಾವು ಕೋವಿಡ್‌ ಬಾಧಿತರಿಗೆ ಪರಿಹಾರ ಕೊಡಿ ಎಂದೆವು. ಆದರೆ, ಯಾರಿಗೂ ಪರಿಹಾರ ನೀಡಲಿಲ್ಲ. ಕೋವಿಡ್‌ ಸಂದರ್ಭದಲ್ಲಿ ಜನರಿಗೆ 20 ಲಕ್ಷ ಕೋಟಿ ರು. ನೀಡಿದ್ದೆವೆಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಂ ಹೇಳಿದ್ದಾರೆ. ಯಾರಿಗೆ ಕೊಟ್ಟಿದ್ದೇವೆಂದು ಸಾರ್ವಜನಿಕವಾಗಿ ಹೇಳಲಿ ಎಂದರು. ಅರಣ್ಯ ಹಕ್ಕು ಕಾಯ್ದೆ, ಉಳುವವನೆ ಭೂಮಿ ಒಡೆಯ ಕಾಯ್ದೆ ಮಾಡಿದ್ದು ಕಾಂಗ್ರೆಸ್‌. ಜನರ ಬದುಕಿಗೆ ಅನುಕೂಲ ಮಾಡಲು ಬಿಜೆಪಿ ಸರ್ಕಾರ ಯಾವುದಾದರೂ ಕಾರ್ಯಕ್ರಮ ಮಾಡಿದೆಯಾ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಕೇಳಬೇಕು ಎಂದು ಹೇಳಿದರು.

ಬಿಜೆಪಿಯದ್ದು ಭಾವನೆ:

ಬಿಜೆಪಿಯವರದ್ದು ಭಾವನೆ, ನಮ್ಮದು ಬದುಕು. ಅವರು, ಹಿಂದೂ ಮುಂದು ಎನ್ನುತ್ತಾರೆ. ನಾವೆಲ್ಲರೂ ಒಂದು ಎಂದು ನಾವುಗಳು ಹೇಳುತ್ತೇವೆ. ಹುಟ್ಟುವಾಗ ಯಾರೂ ಅರ್ಜಿ ಹಾಕುವುದಿಲ್ಲ, ಹೆಸರು ಮಾತ್ರ ಬೇರೆ ಬೇರೆ. ಸಹೋದರತ್ವ ಕಾಂಗ್ರೆಸ್‌ ಪಕ್ಷದ ಮೂಲ ಸಿದ್ಧಾಂತ ಎಂದು ಅಭಿಪ್ರಾಯ ಪಟ್ಟರು.

ಆಧಾರ್‌ ಕಾರ್ಡ್‌ಲಿಂಕ್‌ ಮಾಡಲು ಹಣ, ಖರೀದಿಯಲ್ಲಿ ಜಿಎಸ್‌ಟಿ ಕಟ್ಟುತ್ತಿದ್ದೇವೆ. ಕೇಂದ್ರ ಸರ್ಕಾರ ಪ್ರತಿದಿನ ಪಿಕ್‌ ಪಾಕೆಟ್‌ ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು. ರಾಜ್ಯದಲ್ಲಿ ಬಹಳಷ್ಟುಬ್ರಾಹ್ಮಣರು ತುಂಬಾ ಬಡತನದಲ್ಲಿದ್ದಾರೆ. ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡದೆ ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಮೀಸಲಾತಿಯನ್ನು ಬಿಜೆಪಿ ಸರ್ಕಾರ ಮೊಟಕುಗೊಳಿಸಿ,ಇದನ್ನು ಜಾರಿಗೆ ತರಲು 3 ತಿಂಗಳ ಕಾಲಾವಕಾಶ ಕೋರಿ ಸುಪ್ರಿಂ ಕೋರ್ಚ್‌ಗೆ ಅಫಿಡವಿಟ್‌ ಹಾಕಲಾಗಿದೆ ಎಂದು ಹೇಳಿದರು.

ಅರಣ್ಯ ಇಲಾಖೆಯಿಂದ ಆಗಿರುವ ತೊಂದರೆ ಬಗೆಹರಿಸಲಾಗುವುದು. ನಿಮ್ಮನ್ನು ಉಳಿಸುವ ಬದ್ಧತೆ ನಮ್ಮ ಪಕ್ಷಕ್ಕಿದೆ. ಎಲೆ ಅಡಿಕೆ ಎಷ್ಟುಪವಿತ್ರ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಗೊತ್ತಿಲ್ಲ. ಎಲೆ ಅಡಿಕೆ ದೇವರಿಗೆ ಸಮಾನ, ದೇವರನ್ನು ರಕ್ಷಣೆ ಮಾಡದೆ ಇದ್ದವರು ನೀವು ಜನರನ್ನು ಹೇಗೆ ರಕ್ಷಣೆ ಮಾಡುತ್ತೀರಾ ಎಂದು ಪ್ರಶ್ನಿಸಿದರು. ರಾಹುಲ್‌ ಗಾಂಧಿಯವರನ್ನು ಮನೆಯಿಂದ ಬಿಡಿಸಿದ್ರೆ ಕಾಂಗ್ರೆಸ್‌ ಪಕ್ಷ ನಿಮ್ಮ ಕುತಂತ್ರಗಳಿಗೆ ಜಗ್ಗುವುದಿಲ್ಲ, ಹೆದರುವುದಿಲ್ಲ ಎಂದರು.

ಬಿ.ಎಸ್‌.ಯಡಿಯೂರಪ್ಪ(BS Yadiyurappa) ಈ ರಾಜ್ಯದ ಸಿಎಂ ಆಗಿದ್ದಾಗ ಕೊಟ್ಟಿದ್ದು ಸೈಕಲ್‌-ಸೀರೆ ಎರಡೇ ಕಾರ್ಯಕ್ರಮ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ ಗ್ಯಾರಂಟಿ ಕಾಡ್‌ ರ್‍ನಲ್ಲಿ ಕೊಟ್ಟಮಾತನ್ನು ಉಳಿಸಿಕೊಳ್ಳುತ್ತೇವೆ ಎಂದರು. ಆಯನೂರು ಮಂಜುನಾಥ್‌ ಟಿಕೆಟ್‌ ಕೇಳಿದ್ದರು. ಕಳೆದ 6 ತಿಂಗಳಿಂದ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಟಿಕೆಟ್‌ ನೀಡುವಂತೆ ನನಗೆ ಮತ್ತು ಗಾಯತ್ರಿ ಶಾಂತೇಗೌಡರ ಬೆನ್ನು ಹತ್ತಿದ್ದರು ಎಂದರು. ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡರು ನಿಮ್ಮ ಸ್ವಾಭಿಮಾನಕ್ಕೆ ದಕ್ಕೆ ಆಗದ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಅವರನ್ನು ಮತ್ತೆ ಗೆಲ್ಲಿಸಿ ಎಂದರು.

ಕಾಂಗ್ರೆಸ್‌ ಮುಖಂಡ ಡಾ.ಬಿ.ಎಲ್‌. ಶಂಕರ್‌, ಶಾಸಕ ಟಿ.ಡಿ. ರಾಜೇಗೌಡ, ಅರುಣಾಚಲ ಪ್ರದೇಶದ ಶಾಸಕ ದ್ವಾರಕನಾಥ್‌, ಎಐಸಿಸಿ ಕಾರ್ಯದರ್ಶಿ ಬಿ.ಎಲ್‌. ಸಂದೀಪ್‌, ವಿಧಾನಪರಿಷತ್‌ ಮಾಜಿ ಸದಸ್ಯರಾದ ಗಾಯತ್ರಿ ಶಾಂತೇಗೌಡ, ಶ್ರೀನಿವಾಸ, ಕೆಪಿಸಿಸಿ ಕಿಸಾನ್‌ ಘಟಕದ ರಾಜ್ಯಾಧ್ಯಕ್ಷ ಸಚ್ಚಿನ್‌ ಮಿಗಾ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ. ಅಂಶುಮಂತ್‌, ಜಿಪಂ ಮಾಜಿ ಅಧ್ಯಕ್ಷ ಎಚ್‌.ಎಂ. ಸತೀಶ್‌, ಎಸ್‌.ಪೇಟೆ ಸತೀಶ್‌ ಉಪಸ್ಥಿತರಿದ್ದರು.

Karnataka election 2023: ಶೃಂಗೇರಿಯಲ್ಲಿಂದು ಡಿಕೆಶಿ ಚುನಾವಣಾ ಪ್ರಚಾರ

ಶೃಂಗೇರಿ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿದ್ದವರು, ಒಮ್ಮೆ ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿದ್ದವರು, ಅಧಿಕಾರ ಇದ್ದಾಗ ಏನು ಮಾಡಲಾಗದೆ, ಕೊಟ್ಟಕುದುರೆಯ ನೇರಲರಿಯದೆ ಮತ್ತೊಂದು ಕುದುರೆಯನೇರ ಬಯಸುವರು ವೀರರೂ ಅಲ್ಲ, ಧೀರರೂ ಅಲ್ಲ. ನಮ್ಮ ಬೀಗರು, ರಾಜೇಗೌಡರು ಸ್ನೇಹಿತರು, ಅವರುಗಳು ಪರಸ್ಪರ ವ್ಯವಹಾರ ಮಾಡಿದ್ದರು. ಇದರಲ್ಲಿ ಏನೋ ಅವ್ಯವಹಾರ ಆಗಿದೆ ಎಂದು ಹೇಳಿ ದೂರು ಕೊಟ್ಟರು. ಇದರಲ್ಲಿ ನನ್ನ ಹೆಸರು ಸೇರಿಸಲು ನೋಡಿದ್ರು, ಇದಕ್ಕೆ ಜಗ್ಗುವ ಮಗ ನಾನಲ್ಲ. ನಮ್ಮ ಬೀಗರು ಶೇ. 40 ರಷ್ಟುಲಂಚದ ಹಣದಲ್ಲಿ ವ್ಯವಹಾರ ಮಾಡಿದವರಲ್ಲ.

- ಡಿ.ಕೆ. ಶಿವಕುಮಾರ್

click me!