
ಬೆಂಗಳೂರು (ಮೇ.25): ಕಾಂಗ್ರೆಸ್ ಪಕ್ಷಕ್ಕೆ ಇತ್ತೀಚೆಗೆ ಸೇರ್ಪಡೆಗೊಂಡು ಬಿಜೆಪಿ ಹೈಕಮಾಂಡ್‌ಗೆ ಸೆಡ್ಡುಹೊಡೆದು ವಿರೋಚಿತ ಸೋಲುಂಡ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯುವುದೇ ಎಂಬ ಕುತೂಹಲ ನಿರ್ಮಾಣವಾಗಿದೆ. ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಸೇರ್ಪಡೆಯಿಂದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭವಾಗಿದೆ ಎಂದು ಗಟ್ಟಿಯಾಗಿ ನಂಬಿರುವ ಕಾಂಗ್ರೆಸ್ ಹೈಕಮಾಂಡ್ ಶೆಟ್ಟರ್ ಅವರಿಗೆ ಸೂಕ್ತ ಸ್ಥಾನ ಮಾನ ನೀಡಬೇಕು ಎಂಬ ಇರಾದೆ ಹೊಂದಿದೆ.
ಹೀಗಾಗಿ ಶೆಟ್ಟರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಅಂತರ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿಕೊಳ್ಳುವ ಸಾಧ್ಯಾಸಾಧ್ಯತೆ ಬಗ್ಗೆ ರಾಜ್ಯ ನಾಯಕರೊಂದಿಗೆ ಚರ್ಚೆ ನಡೆಸಲಿದೆ ಎಂದು ತಿಳಿದುಬಂದಿದೆ. ಲೋಕಸಭಾ ಚುನಾವಣೆ ದೃಷ್ಟಿಯಿಂದ ಶೆಟ್ಟರ್ ಅವರಿಗೆ ಈ ಗೌರವ ನೀಡಿದರೆ ಅದು ಪಕ್ಷಕ್ಕೆ ಹೆಚ್ಚು ಲಾಭ ತಂದುಕೊಡುತ್ತದೆ ಎಂಬ ಹಿನ್ನೆಲೆಯಲ್ಲಿ ಹೈಕಮಾಂಡ್ ಈ ನಿಲುವು ಹೊಂದಿದೆ ಎನ್ನಲಾಗಿದೆ. ಆದರೆ, ತಮ್ಮ ಬೆಂಬಲಿಗರಿಗೆ ಸಂಪುಟದಲ್ಲಿ ಸ್ಥಾನ ಕೊಡಿಸುವ ಉಮೇದಿಯಲ್ಲಿರುವ ರಾಜ್ಯ ನಾಯಕರ ಪ್ರತ್ಯೇಕ ಪಟ್ಟಿಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ದೊಡ್ಡದೇ ಇದೆ. ಹೀಗಾಗಿ ಶೆಟ್ಟರ್ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಧಾರವಾಡದಿಂದ ಪ್ರಹ್ಲಾದ್ ಜೋಶಿ ವಿರುದ್ಧ ಕಣಕ್ಕೆ ಇಳಿಸುವಂತೆ ಮಾಡುವ ಇರಾದೆ ರಾಜ್ಯ ನಾಯಕರು ಹೊಂದಿದ್ದಾರೆ ಎನ್ನಲಾಗಿದೆ.
ಟಿಪ್ಪು ಹೊಡೆದು ಹಾಕಿದಂತೆ ಸಿದ್ದರಾಮಯ್ಯನನ್ನು ಹೊಡೆದು ಹಾಕಿ ಎಂದಿದ್ದ ಅಶ್ವತ್ಥ್ ವಿರುದ್ಧ ಎಫ್‌ಐಆರ್
ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ನಗರಕ್ಕೆ ಆಗಮಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸಂಪುಟ ವಿಸ್ತರಣೆ ಬಗ್ಗೆ ಸಮತೋಲನ ಸಾಧಿಸಲು ಯತ್ನಿಸಿದರೂ ಫಲ ನೀಡಿಲ್ಲ. ಹೀಗಾಗಿ ಉಭಯ ನಾಯಕರು ತಮ್ಮದೇ ಆದ ಪ್ರತ್ಯೇಕ ಪಟ್ಟಿಯೊಂದಿಗೆ ದೆಹಲಿಗೆ ತೆರಳಿದ್ದಾರೆ. ಹೀಗಾಗಿ ಈ ಪ್ರತ್ಯೇಕ ಪಟ್ಟಿಹೊಂದಿರುವ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರ ನಡುವೆ ಸಮತೋಲನ ಸಾಧಿಸುವ ಹೊಣೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ಸುರ್ಜೇವಾಲ ಅವರ ಮೇಲೆ ಬಿದ್ದಿದೆ.
ಸೋತಿದ್ದಕ್ಕೆ ಎದೆಗುಂದಬೇಕಿಲ್ಲ: ಶಾಸಕರಿಗೆ ಧೈರ್ಯ ತುಂಬಿದ ಎಚ್.ಡಿ.ದೇವೇಗೌಡ
ಶೆಟ್ಟರ್‌ಗೆ ಸಚಿವ ಸ್ಥಾನ ನೀಡಲು ಆಗ್ರಹ: ಮುತ್ಸದ್ದಿ ರಾಜಕಾರಣಿ, ಲಿಂಗಾಯತ ಸಮಾಜದ ಪ್ರಬಲ ನಾಯಕ ಜಗದೀಶ ಶೆಟ್ಟರ್ ಹಾಗೂ ಬೆಳಗಾವಿ ಶಾಸಕಿ ಲಕ್ಷ್ಮೇ ಹೆಬ್ಬಾಳಕರ್ ಅವರನ್ನು ಸಚಿವರನ್ನಾಗಿ ಮಾಡಬೇಕು ಎಂದು ಇಲ್ಲಿನ ಗಣೇಶನಗರದ ವೀರಶೈವ ಲಿಂಗಾಯತ ಅಭಿವೃದ್ಧಿ ಸಂಘದ ಅಧ್ಯಕ್ಷ ಶಿವಯೋಗಿ ಎಂ.ಎಮ್ಮಿ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಶೆಟ್ಟರ್ ಅವರು ಬಿಜೆಪಿಯಲ್ಲಿ ಕಳೆದ 30 ವರ್ಷದಿಂದ ಇದ್ದವರು. ಈ ಸಲ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಆದರೆ ಈ ಸಲ ಸೋತಿದ್ದಾರೆ. ಅವರು ಕಾಂಗ್ರೆಸ್ ಸೇರಿರುವುದರಿಂದ ಪಕ್ಷಕ್ಕೆ ಬಲ ಬಂದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನ ಬರಲು ಶೆಟ್ಟರ್ ಅವರ ಶ್ರಮವೂ ಇದೆ. ಆದಕಾರಣ ಅವರನ್ನು ಎಂಎಲ್‌ಸಿ ಮಾಡಿ ಸಚಿವರನ್ನಾಗಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇನ್ನೂ ಸಮಾಜದ ಪ್ರಬಲ ನಾಯಕಿ ಲಕ್ಷ್ಮೇ ಹೆಬ್ಬಾಳಕರ್ ಕೂಡ ಪಕ್ಷಕ್ಕೆ ಸಾಕಷ್ಟು ದುಡಿದವರು. ಅವರನ್ನು ಪಕ್ಷದ ಹೈಕಮಾಂಡ್ ಮಹಿಳಾ ಕೋಟಾದಲ್ಲಿ ಸಚಿವರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.