ಸರ್ಕಾರಿ ಗುತ್ತಿಗೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ.4ರಷ್ಟು ಮೀಸಲಾತಿ ನೀಡುವ ಸರ್ಕಾರದ ತೀರ್ಮಾನದ ವಿರುದ್ಧ ಸದನದ ಒಳಗೆ ಮತ್ತು ಹೊರಗೆ ಹೋರಾಟ ತೀವ್ರಗೊಳಿಸಲು ಪ್ರತಿಪಕ್ಷ ಬಿಜೆಪಿ ಸಜ್ಜಾಗಿದೆ.
ಬೆಂಗಳೂರು (ಮಾ.17): ಸರ್ಕಾರಿ ಗುತ್ತಿಗೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ.4ರಷ್ಟು ಮೀಸಲಾತಿ ನೀಡುವ ಸರ್ಕಾರದ ತೀರ್ಮಾನದ ವಿರುದ್ಧ ಸದನದ ಒಳಗೆ ಮತ್ತು ಹೊರಗೆ ಹೋರಾಟ ತೀವ್ರಗೊಳಿಸಲು ಪ್ರತಿಪಕ್ಷ ಬಿಜೆಪಿ ಸಜ್ಜಾಗಿದೆ. ಇದೇ ವೇಳೆ ಸರ್ಕಾರ ಕೂಡ ತನ್ನ ನಡೆ ಸಮರ್ಥಿಸಿಕೊಳ್ಳುವ ಸುಳಿವು ನೀಡಿದೆ. ಸರ್ಕಾರದ ತೀರ್ಮಾನದ ವಿರುದ್ಧ ಸೋಮವಾರ ಸದನದಲ್ಲಿ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಪರಿಷತ್‌ನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಇದೇ ವೇಳೆ, ಇದೊಂದು ಅಸಂವಿಧಾನಿಕ ನಡೆ ಎಂದು ಕಿಡಿಕಾರಿರುವ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ಇದರ ವಿರುದ್ಧ ರಾಜ್ಯದಲ್ಲಿ ಹೋರಾಟ ತೀವ್ರಗೊಳಿಸಲಿದೆ ಎಂದಿದ್ದಾರೆ. ಅಲ್ಲದೆ, ‘ಸುಪ್ರೀಂಕೋರ್ಟ್ ಇದನ್ನು ನೋಡಿಕೊಳ್ಳಲಿದೆ’ ಎನ್ನುವ ಮೂಲಕ ಇದರ ವಿರುದ್ಧ ಕಾನೂನು ಹೋರಾಟ ನಡೆಸುವ ಬಗ್ಗೆ ಪರೋಕ್ಷ ಸುಳಿವು ನೀಡಿದ್ದಾರೆ. ಈ ಮಧ್ಯೆ, ಸರ್ಕಾರದ ತೀರ್ಮಾನವನ್ನು ಸಮರ್ಥಿಸಿಕೊಂಡಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಕುವೆಂಪು ಅವರ ನಾಡಗೀತೆಯನ್ನೊಮ್ಮೆ ವಿಜಯೇಂದ್ರ ಓದಲಿ, ಸಮಬಾಳು, ಸಮಪಾಲು ಎನ್ನುವವರು ಅಲ್ಪಸಂಖ್ಯಾತರನ್ನು ಎಂಎಲ್‌ಸಿ, ಎಂಪಿ ಮಾಡಲಿ’ ಎಂದು ಸವಾಲು ಹಾಕಿದ್ದಾರೆ.
ಮುಸ್ಲಿಮರಿಗಷ್ಟೇ ಗುತ್ತಿಗೆ ಮೀಸಲಾತಿ ಕೊಟ್ಟಿಲ್ಲ: ಡಿ.ಕೆ.ಶಿವಕುಮಾರ್
ವಿಜಯೇಂದ್ರ ಕಿಡಿ: ಬೆಳಗಾವಿಯಲ್ಲಿ ಭಾನುವಾರ ಮಾತನಾಡಿದ ವಿಜಯೇಂದ್ರ, ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲು ನೀಡುವ ಸರ್ಕಾರದ ತೀರ್ಮಾನ ಅಸಂವಿಧಾನಿಕ. ಧರ್ಮದ ಆಧಾರದ ಮೀಸಲಾತಿ ಕೊಡುವ ಬಗ್ಗೆ ಸಂವಿಧಾನದಲ್ಲಿ ಎಲ್ಲಿಯೂ ಉಲ್ಲೇಖ ಆಗಿಲ್ಲ. ಕಾಂಗ್ರೆಸ್ ನಿರ್ಧಾರ ಧರ್ಮ, ಧರ್ಮಗಳ ಮಧ್ಯೆ ಕಂದಕ ನಿರ್ಮಾಣ ಮಾಡುವ ಷಡ್ಯಂತ್ರ್ಯ ರೂಪಿಸುತ್ತಿದೆ. ಸರ್ಕಾರದ ಈ ಓಲೈಕೆ ನೀತಿಯನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ. ಸೋಮವಾರದಿಂದ ಸದನದ ಒಳಗೆ ಮತ್ತು ಹೊರಗೆ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಯಡಿಯೂರಪ್ಪ ಮಾತನಾಡಿ, ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಿರುವುದು ಸರಿಯಲ್ಲ. ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಸುಪ್ರೀಂಕೋರ್ಟ್ ಈಗಾಗಲೇ ಈ ಬಗ್ಗೆ (ಮುಸ್ಲಿಂ ಮೀಸಲು ವಿರುದ್ಧ) ಹೇಳಿದೆ. ಹೀಗಾಗಿ, ಸುಪ್ರೀಂಕೋರ್ಟ್ ಇದನ್ನು ನೋಡಿಕೊಳ್ಳಲಿದೆ ಎಂದಿದ್ದಾರೆ. ಇದೇ ವೇಳೆ, ಬೆಂಗಳೂರಿನಲ್ಲಿ ಮಾತನಾಡಿದ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಗುತ್ತಿಗೆಯಲ್ಲಿ ಮುಸ್ಲಿಂರಿಗೆ ಮೀಸಲಾತಿ ವಿರೋಧಿಸಿ ಉಭಯ ಸದನಗಳಲ್ಲಿ ಬಿಜೆಪಿ ಹೋರಾಟ ನಡೆಸಲಿದೆ. ಮುಸ್ಲಿಂ ಮನಸ್ಥಿತಿಯ ಇಂತಹ ಹಿಂದುಗಳಿಂದ ದೇಶಕ್ಕೆ ಗಂಡಾಂತರ ಕಾಡಿದೆ ಎಂದು ಕಿಡಿ ಕಾರಿದ್ದಾರೆ.
ವಿಜಯೇಂದ್ರ ನಾಡಗೀತೆ ಓದಲಿ: ಈ ಮಧ್ಯೆ, ಗದಗದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಸ್ಲಿಮರಾಗಲಿ, ಕ್ರಿಶ್ಚಿಯನ್, ಸಿಖ್, ಬೌದ್ಧರಾಗಲಿ, ಇವರೆಲ್ಲಾ ಈ ದೇಶದ ಪ್ರಜೆಗಳು. ನಾವು ಎಲ್ಲ ಹಿಂದುಳಿದ, ಅಲ್ಪಸಂಖ್ಯಾತರ ಬಗ್ಗೆ ಚಿಂತನೆ ಮಾಡುತ್ತೇವೆ. ಸಮಬಾಳು-ಸಮಪಾಲು ಎನ್ನುವವರು ಅಲ್ಪಸಂಖ್ಯಾತರನ್ನು ಎಂಎಲ್‌ಸಿ ಮಾಡಲಿ. ರಾಜ್ಯಸಭಾ ಸದಸ್ಯರನ್ನಾಗಿ ಮಾಡಲಿ. ಇಬ್ಬರು ಕ್ರಿಶ್ಚಿಯನ್, ಮೂವರು ಮುಸ್ಲಿಮರನ್ನು ಕೇಂದ್ರದಲ್ಲಿ ಮಂತ್ರಿ ಮಾಡಲಿ. ಆಗ ಸಮಬಾಳು, ಸಮಪಾಲು ಎಂದು ಮಾತನಾಡುವುದಕ್ಕೆ ವಿಜಯೇಂದ್ರ ಅವರಿಗೆ ಅವಕಾಶವಿದೆ. ಅವರು ಕುವೆಂಪು ಅವರ ನಾಡಗೀತೆಯನ್ನು ಒಮ್ಮೆ ಓದಲಿ ಎಂದು ತಿರುಗೇಟು ನೀಡಿದ್ದಾರೆ.
ಕೋರ್ಟ್ ನೋಡಿಕೊಳ್ಳುತ್ತೆಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಿರುವುದು ಸರಿಯಲ್ಲ. ಸುಪ್ರೀಂಕೋರ್ಟ್ ಈಗಾಗಲೇ ಈ ಬಗ್ಗೆ ಹೇಳಿದೆ. ಹೀಗಾಗಿ, ಇದನ್ನು ಸುಪ್ರೀಂಕೋರ್ಟ್ ನೋಡಿಕೊಳ್ಳಲಿದೆ.
- ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ
ಮುಸ್ಲಿಮರಿಗೆ ಶೇ.4ರಷ್ಟು ಮೀಸಲು ನೀಡುವ ಸರ್ಕಾರದ ತೀರ್ಮಾನ ಅಸಂವಿಧಾನಿಕ. ಧರ್ಮದ ಆಧಾರದ ಮೀಸಲಾತಿ ಕೊಡುವ ಬಗ್ಗೆ ಸಂವಿಧಾನದಲ್ಲಿ ಎಲ್ಲಿಯೂ ಉಲ್ಲೇಖ ಆಗಿಲ್ಲ. ಇದರ ವಿರುದ್ಧ ಸೋಮವಾರದಿಂದ ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡುತ್ತೇವೆ.
- ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ಮುಸ್ಲಿಂ ಮೀಸಲಾತಿ ಕದನ, ಕಾಂಗ್ರೆಸ್ ಸರ್ಕಾರದ ನಡೆ ದೇಶಕ್ಕೇ ಅಪಾಯ: ಬಿಜೆಪಿ
ಬಿಜೆಪಿಯವರು ಅಲ್ಪಸಂಖ್ಯಾತರನ್ನು ಎಂಎಲ್‌ಸಿ, ಸಂಸದರನ್ನಾಗಿ ಮಾಡಲಿ. 2 ಕ್ರಿಶ್ಚಿಯನ್, 3 ಮುಸ್ಲಿಮರನ್ನು ಕೇಂದ್ರದಲ್ಲಿ ಮಂತ್ರಿ ಮಾಡಲಿ. ಆಗ ಸಮಬಾಳು, ಸಮಪಾಲು ಎಂದು ಮಾತನಾಡುವುದಕ್ಕೆ ವಿಜಯೇಂದ್ರಗೆ ಅವಕಾಶವಿದೆ. ಅವರು ಒಮ್ಮೆ ಕುವೆಂಪು ನಾಡಗೀತೆ ಓದಲಿ.
- ಡಿ.ಕೆ.ಶಿವಕುಮಾರ್, ಡಿಸಿಎಂ