ಹುಬ್ಬಳ್ಳಿಯಲ್ಲಿ ಸೋಮವಾರ ನಡೆದ ಮುಸ್ಲಿಂ ಸಮುದಾಯದ ಸಮಾವೇಶದಲ್ಲಿ ನಾನು ನೀಡಿರುವ ಹೇಳಿಕೆ ಸ್ಪಷ್ಟವಾಗಿದೆ. ಮುಸ್ಲಿಮರೂ ಸೇರಿದಂತೆ ಎಲ್ಲರಿಗೂ ರಕ್ಷಣೆ ಕೊಡುತ್ತೇವೆ ಎಂದಿದ್ದೇನೆ, ಇದರಲ್ಲಿ ತಪ್ಪೇನಿದೆ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬೆಂಗಳೂರು (ಡಿ.06): ಹುಬ್ಬಳ್ಳಿಯಲ್ಲಿ ಸೋಮವಾರ ನಡೆದ ಮುಸ್ಲಿಂ ಸಮುದಾಯದ ಸಮಾವೇಶದಲ್ಲಿ ನಾನು ನೀಡಿರುವ ಹೇಳಿಕೆ ಸ್ಪಷ್ಟವಾಗಿದೆ. ಮುಸ್ಲಿಮರೂ ಸೇರಿದಂತೆ ಎಲ್ಲರಿಗೂ ರಕ್ಷಣೆ ಕೊಡುತ್ತೇವೆ ಎಂದಿದ್ದೇನೆ, ಇದರಲ್ಲಿ ತಪ್ಪೇನಿದೆ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಬೆಳಗಾವಿಯ ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಹುಬ್ಬಳ್ಳಿಯಲ್ಲಿ ತಾವು ನೀಡಿದ ಹೇಳಿಕೆ ಬಗ್ಗೆ ಪ್ರತಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರಲ್ಲ ಎಂಬ ಪ್ರಶ್ನೆಗೆ, ಮಾಧ್ಯಮದವರ ಮೇಲೂ ಗರಂ ಆದ ಅವರು, ನಾನು ಹೇಳಿದ್ದು ಒಂದು ನೀವು ಬರೆದಿರುವುದು ಒಂದು. ಒಂದು ಪತ್ರಿಕೆಯವರು ಮಾತ್ರ ಸರಿಯಾಗಿ ಬರೆದಿದ್ದಾರೆ. ಮುಸ್ಲಿಂ ಸೇರಿದಂತೆ ಎಲ್ಲಾ ಸಮುದಾಯಗಳ ರಕ್ಷಣೆಗೆ ನಮ್ಮ ಸರ್ಕಾರ ಬದ್ದ ಅಂತ ನಾನು ಹೇಳಿರೋದು. ನೀವು ಅದಕ್ಕೆ ಉಪ್ಪು ಕಾರ ಹಾಕಬೇಡಿ. ಹೇಳಿರೋದನ್ನು ಬಿಟ್ಟು ಬೇರೆ ಬರೆದರೆ ಏನು ಮಾಡುವುದು ಎಂದರು.
ಸಿಎಂ ಸಿದ್ದರಾಮಯ್ಯ ಅವರಿಗೆ ಬಹಳ ಅನುಭವವಿದೆ: ಬಿ.ಕೆ. ಹರಿಪ್ರಸಾದ್ ವ್ಯಂಗ್ಯ
ಏನಿದು ವಿವಾದ?: ಹುಬ್ಬಳ್ಳಿ ಮುಸ್ಲಿಂ ಸಮಾವೇಶದಲ್ಲಿ ಭಾಷಣ ಮಾಡಿದ್ದ ಸಿದ್ದರಾಮಯ್ಯ ಅವರು, ಈ ವರ್ಷ ನಾಲ್ಕು ಸಾವಿರ ಕೋಟಿ ಅನುದಾನವನ್ನು ಅಲ್ಪಸಂಖ್ಯಾತರ ಇಲಾಖೆಗೆ ಕೊಟ್ಟಿದ್ದೇವೆ. 10 ಸಾವಿರ ಕೋಟಿ ಹಣ ಅಲ್ಪಸಂಖ್ಯಾತ ಇಲಾಖೆಗೆ ಖರ್ಚು ಮಾಡಬೇಕು ಅನ್ನೋದು ನಮ್ಮ ಉದ್ದೇಶ. ನಾನು ಕೊಟ್ಟಿದ್ದ ಹಣ ಬಿಜೆಪಿ ಸರ್ಕಾರ ಕಡಿಮೆ ಮಾಡಿತ್ತು. ನಿಮ್ಮ ಧಾರ್ಮಿಕ ಕೇಂದ್ರಗಳಿಗೆ ಅನುದಾನ ಬೇಕು. ದೇಶದ ಸಂಪತ್ತಲ್ಲಿ ನಿಮಗೆ ಪಾಲು ಸಿಗಬೇಕು. ದೇಶದ ಸಂಪತ್ತು ನಿಮಗೂ ಹಂಚುತ್ತೇನೆ. ನಿಮಗೆ ಅನ್ಯಾಯ ಮಾಡೋಕೆ ನಾನು ಬಿಡಲ್ಲ. ನಿಮ್ಮನ್ನು ನಾನು ರಕ್ಷಣೆ ಮಾಡ್ತೀನಿ ಎಂದು ಹೇಳಿದ್ದರು.
ವಿಪಕ್ಷದ ಎಲ್ಲ ಪ್ರಶ್ನೆಗೆ ಸರ್ಕಾರ ಉತ್ತರಿಸಲಿದೆ: ವಿಧಾನಮಂಡಳದ ಚಳಿಗಾಲದ ಅಧಿವೇಶನ ಪ್ರಾರಂಭವಾಗಿದ್ದು, ವಿರೋಧಪಕ್ಷದವರು ಕೇಳುವ ಪ್ರತಿಯೊಂದು ಪ್ರಶ್ನೆಗೆ ಉತ್ತರಿಸಲು ಸರ್ಕಾರ ಸಿದ್ಧವಿದೆ. ಈ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳತ್ತಲೂ ಗಮನಹರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ವಿರೋಧಪಕ್ಷದವರು ಜಂಟಿಯಾಗಿ ಹೋರಾಟ ಕೈಗೊಳ್ಳಲಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ರಚನೆಯಾಗಿ ಆರು ತಿಂಗಳು ಕಳೆದರೂ ಬಿಜೆಪಿಯವರು ವಿಪಕ್ಷ ನಾಯಕರನ್ನು ಆಯ್ಕೆ ಮಾಡಿರಲಿಲ್ಲ. ವಿರೋಧ ಪಕ್ಷದವರಿಗೆ ಸರ್ಕಾರವನ್ನು ಪ್ರಶ್ನಿಸುವ ಯಾವ ನೈತಿಕತೆಯೂ ಇಲ್ಲ. ಅವರು ಜಂಟಿಯಾಗಿ ಹೋರಾಟ ನಡೆಸಿದರೂ, ಅವರ ಎಲ್ಲ ಹೋರಾಟಗಳಿಗೆ ಉತ್ತರಿಸಲು ಸರ್ಕಾರ ಸಿದ್ಧವಿದೆ ಎಂದರು.
ಬಿಜೆಪಿಯವರಿಗೆ ಏಕೆ ಇಷ್ಟೊಂದು ಗಾಬರಿಯಾಗುತ್ತಿದೆ: ಸಚಿವ ದಿನೇಶ್ ಗುಂಡೂರಾವ್ ಪ್ರಶ್ನೆ
ಪಂಚರಾಜ್ಯ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳಿಂದ ಅಪೇಕ್ಷಿತ ಯಶಸ್ಸು ಸಾಧ್ಯವಾಗದಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ತೆಲಂಗಾಣದಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಗೆಲುವು ಸಾಧಿಸಿದೆ. ಮಧ್ಯಪ್ರದೇಶದಲ್ಲಿ ಗೆಲುವು ಸಾಧಿಸಿರುವ ಬಿಜೆಪಿಯವರೂ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಎಂದಿಗೂ ಚುನಾವಣೆಯಲ್ಲಿ ಗೆಲುವು ಸಾಧಿಸಲೆಂದು ಗ್ಯಾರಂಟಿ ಯೋಜನೆಗಳನ್ನು ಘೋಷಿಸುವುದಿಲ್ಲ. ಬಡ ಜನರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುವ ಪ್ರಾಮಾಣಿಕತೆಯಿಂದ ಇವುಗಳನ್ನು ಜಾರಿಗೊಳಿಸಲಾಗಿದೆ. ಗ್ಯಾರಂಟಿ ಯೋಜನೆಗಳೆಲ್ಲ ಬಡವರ ಕಾರ್ಯಕ್ರಮಗಳು ಎಂದಷ್ಟೇ ಹೇಳಿದರು.