
ಬೆಂಗಳೂರು(ಡಿ.04): ರಾಜ್ಯದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಕುರ್ಚಿ ಖಾಲಿಯಿಲ್ಲ. ಆದರೆ, ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿ ನಮ್ಮ ನಡುವೆ ಒಪ್ಪಂದವಾಗಿದೆ. ಅದನ್ನು ಈಗ ಬಹಿರಂಗಪಡಿಸಲಾಗದು ಎಂದು ಡಿಸಿಎಂ ಡಿ.ಕೆ.ಶಿವಕು ಮಾರ್ ತಿಳಿಸಿದ್ದಾರೆ. ಆ ಮೂಲಕ ಅಧಿಕಾರ ಹಸ್ತಾಂತರ ಕು ರಿತ ವದಂತಿಗಳಿಗೆ ಮತ್ತೆ ಇಂಬು ನೀಡಿದ್ದಾರೆ.
ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮುಖ್ಯಮಂತ್ರಿ ಹುದ್ದೆ, ಸಿದ್ದರಾಮಯ್ಯ ಮತ್ತು ಗಾಂಧಿ ಕುಟುಂಬ ದೊಂದಿಗಿನ ತಮ್ಮ ಸಂಬಂಧಗಳ ಕುರಿತಂತೆ ಹಲವು ವಿಚಾರಗಳನ್ನು ಡಿ.ಕೆ.ಶಿವಕುಮಾರ್ ಹಂಚಿಕೊಂಡಿದ್ದಾರೆ. ಸಂದರ್ಶನದಲ್ಲಿ ಮುಖ್ಯಮಂತ್ರಿ ಹುದ್ದೆ ವಿಚಾರದ ಪ್ರಶ್ನೆಗೆ ಉತ್ತರಿಸಿರುವ ಡಿ.ಕೆ.ಶಿವಕುಮಾರ್, 'ನಾನು ಮುಖ್ಯಮಂತ್ರಿ ಹುದ್ದೆ ಕುರಿತು ಸದ್ಯಕ್ಕೆ ಚರ್ಚೆ ಮಾಡುವುದಿಲ್ಲ. ನಾನೀಗ ಉಪ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದೇನೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ವಿಲ್ಲ. ಆದರೆ ಅಧಿಕಾರಕ್ಕೆ ಸಂಬಂಧಿಸಿ ಒಪ್ಪಂದವಾಗಿದ್ದು, ಅದನ್ನು ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ, ಆ ಕುರಿತು ಸಮಯ ಬಂದಾಗ ಹೇಳುವೆ' ಎಂದರು.
ಸಹಿಗಾಗಿ ಯತ್ನಾಳ್ ಕೂಡ ಡಿ.ಕೆ.ಶಿವಕುಮಾರ್ ಬಳಿ ಬರ್ತಾರೆ: ಡಿ.ಕೆ.ಸುರೇಶ್
ನಿಷ್ಠೆಗೆ ಬೆಲೆ ಸಿಗುತ್ತೆ:
ನಮ್ಮ ರಾಜಕೀಯ ಸ್ಥಾನಮಾನಗಳ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ. ನನಗೆ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ನಿಭಾಯಿಸುತ್ತೇನೆ. ನಾನು ಯಾವತ್ತೂ ನಮ್ಮ ನಾಯಕರನ್ನು ಬೆದರಿಸುವ ಕೆಲಸಕ್ಕೆ ಹೋಗುವುದಿಲ್ಲ. ನಾನು ಕುಟುಂಬದವರನ್ನು ಅತಿಯಾಗಿ ಪ್ರೀತಿಸುತ್ತೇನೆ. ಗಾಂಧಿ ಕುಟುಂಬಕ್ಕೆ ನನ್ನ ತಲೆಬಾಗುತ್ತದೆ. ನನ್ನ ನಿಷ್ಠೆಗೆ ಮುಂದೆ ಬಹುಮಾನ ಸಿಗುತ್ತದೆ ಎಂಬ ನಂಬಿಕೆಯಿದೆ ಎಂದು ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದು ಜತೆ ಉತ್ತಮ ಸಂಬಂಧ:
ನಾನು ಅಧಿಕಾರಕ್ಕಾಗಿ ಯಾವತ್ತೂ ಪಕ್ಷದ ಅಥವಾ ನಮ್ಮ ನಾಯಕರ ವಿರುದ್ದ ಮಾತನಾಡಿದವನಲ್ಲ. ರಾಜ್ಯ ಮತ್ತು ಪಕ್ಷ ಏನು ಬಯಸುತ್ತದೆ ಎಂಬುದು ನನಗೆ ತಿಳಿದಿದೆ. ಅದರಂತೆ ಕೆಲಸ ಮಾಡುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೂ ನನಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಉತ್ತಮ ಸಂಬಂಧವಿದ್ದು, ಆಡಳಿತಾತ್ಮಕವಾಗಿ ನನ್ನ ಸಲಹೆಗಳನ್ನು ಕೇಳಿ, ಚರ್ಚಿಸುತ್ತಾರೆ. ನಾನೂ ಅವರ ಸಲಹೆಯನ್ನು ಕೇಳಿ ಕೆಲಸ ಮಾಡುತ್ತಿದ್ದೇನೆ. ಸಿದ್ದರಾಮಯ್ಯ ಅವರಿಗೆ ಹೃದಯಪೂರ್ವಕವಾಗಿ ಬೆಂಬಲ ನೀಡುತ್ತಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಒಂದೇ ಒಂದು ಪತ್ರ, ಆಟ ಮುಗಿಸಿದ ಕೈ ಚಾಣಾಕ್ಷ: ಸಿದ್ದು ಬಣಕ್ಕೆ ಡಿಕೆಶಿ ಚೆಕ್‌ಮೇಟ್ ಇಟ್ಟದ್ದು ಹೇಗೆ?
ಭಾರತ್ ಜೋಡೋದಿಂದ ಗ್ಯಾರಂಟಿ ಪರಿಕಲ್ಪನೆ:
ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಗಳನ್ನು ಶೇ.99ರಷ್ಟು ಅನುಷ್ಠಾನಗೊಳಿಸಿದ್ದೇವೆ. ರಾಹುಲ್ ಗಾಂಧಿ ಅವರು ನಡೆಸಿದ ಭಾರತ್ ಜೋಡೋ ಯಾತ್ರೆಯಿಂದ ಬೆಲೆ ಏರಿಕೆ ಸೇರಿಜನರ ಸಮಸ್ಯೆ ಅರಿವಿಗೆ ಬಂತು. ಅಲ್ಲಿಂದಲೇ ಗ್ಯಾರಂಟಿ ಯೋಜನೆಗಳ ಪರಿಕಲ್ಪನೆ ಹುಟ್ಟಿಕೊಂಡಿತು. ಜನರ ಅಭಿವೃದ್ಧಿಗೆ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಅಧಿಕಾರದ ಬಗ್ಗೆ ಬಹಿರಂಗ ಹೇಳಿಕೆ ಸಲ್ಲ
ಮುಖ್ಯಮಂತ್ರಿ ಹುದ್ದೆ ಕುರಿತು ಕೆಲ ಸಚಿವರ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ. ಕೆ.ಶಿವಕುಮಾರ್, ನನ್ನ ಸಂಪುಟ ಸಹದ್ಯೋಗಿಗಳಿಗೆ ಅಧಿಕಾರದ ಬಗ್ಗೆ ಬಹಿರಂಗ ಹೇಳಿಕೆ ನೀಡದಂತೆ ತಿಳಿಸಿದ್ದೇನೆ. ಆದರೂ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳಿಗೆ ಒಳ್ಳೆಯದಾಗಲಿ ಎಂದಷ್ಟೇ ಬಯಸುತ್ತೇನೆ. ಅಲ್ಲದೆ ಎಲ್ಲ ಹೇಳಿಕೆ ಸೇರಿ ಇನ್ನಿತರ ವಿಚಾರಗಳನ್ನು ಪಕ್ಷ ನಿಭಾಯಿಸುತ್ತದೆ ಎಂದು ಇದೇ ವೇಳೆ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.