ಆಪ್ತಮಿತ್ರ ಲಕ್ಷ್ಮಣ ಸವದಿಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ರಾಜು ಕಾಗೆ ಸಾಂತ್ವನ: ಕಾಂಗ್ರೆಸ್ ನತ್ತ ಸೆಳೆಯುವ ಯತ್ನ
ಸಿದ್ದಯ್ಯ ಹಿರೇಮಠ
ಕಾಗವಾಡ(ಏ.13): ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗದೆ ತೀವ್ರ ಬಂಡಾಯ ಎದ್ದಿರುವ ಹಿರಿಯ ರಾಜಕಾರಣಿ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿ ಸಖ್ಯ ತೊರೆಯಲು ಮುಂದಾಗಿದ್ದಾರೆ. ಟಿಕೆಟ್‌ಗಾಗಿ ಕಾಂಗ್ರೆಸ್ ಹೊಸ್ತಿಲಿಗೆ ಬಂದು ನಿಂತಿರುವ ಸವದಿ ಅವರ ನಡೆ ಮುಂದಿನ ದಿನಗಳಲ್ಲಿ ಕಾಗವಾಡ ಕಾಂಗ್ರೆಸ್‌ಗೆ ವರವಾಗಲಿದೆಯೇ? ಇಂತಹದೊಂದು ಚರ್ಚೆ ಕಾಗವಾಡ ಕ್ಷೇತ್ರದಲ್ಲಿ ನಡೆಯುತ್ತಿದೆ.
ಈ ಹಿಂದೆ ಬಿಜೆಪಿಯಲ್ಲಿ ಲಕ್ಷ್ಮಣ ಸವದಿ ಹಾಗೂ ರಾಜು ಕಾಗೆ ಜೋಡೆತ್ತುಗಳಂತೆ ಇದ್ದವರು. ಕಾಗವಾಡ ಈ ಮುಂಚೆ ಅಥಣಿ ತಾಲೂಕಿನಲ್ಲಿತ್ತು. ಹೀಗಾಗಿ ಅಥಣಿ ಹಾಗೂ ಕಾಗವಾಡಕ್ಕೆ ಭಾವನಾತ್ಮಕ ನಂಟು. ಇದೇ ನಂಟನ್ನು ಸವದಿ, ಕಾಗೆ ಬಿಜೆಪಿಯಲ್ಲಿ ಉಳಿಸಿಕೊಂಡು ಬಂದಿದ್ದರು. 2018ರ ಚುನಾವಣೆಯಲ್ಲಿ ಆಗಿನ ಕಾಂಗ್ರೆಸ್ ಅಭ್ಯರ್ಥಿ ಶ್ರೀಮಂತ ಪಾಟೀಲರ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿದ್ದ ರಾಜು ಕಾಗೆ ಸೋತಿದ್ದರು. ನಂತರ ಆಪರೇಷನ್ ಕಮಲದಿಂದಾಗಿ ಶ್ರೀಮಂತ ಪಾಟೀಲ ಬಿಜೆಪಿ ಸೇರಿದ್ದರಿಂದಾಗಿ ರಾಜು ಕಾಗೆ ಕಾಂಗ್ರೆಸ್ ಸೇರಿ ಉಪ ಚುನಾವಣೆಯಲ್ಲಿ ಮತ್ತೆ ಸೋಲನುಭವಿಸಿದರು. ಸೋಲು ಕಂಡರೂ ರಾಜು ಕಾಗೆ ಕಾಂಗ್ರೆಸ್‌ನಲ್ಲೇ ಉಳಿದಿದ್ದರು. ಆದರೆ, ಈಗ ತಮ್ಮ ಆಪ್ತ ಗೆಳೆಯ ಲಕ್ಷ್ಮಣ ಸವದಿ ಅವರಿಗೂ ಬಿಜೆಪಿ ಟಿಕೆಟ್ ಸಿಗದೇ ಬಂಡಾಯ ಎದ್ದು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಇದು ಸಹಜವಾಗಿ ರಾಜು ಕಾಗೆ ಅವರಿಗೆ ಬಲ ಬಂದಿದೆ. ತಮ್ಮ ಆಪ್ತಮಿತ್ರ ಕಾಂಗ್ರೆಸ್‌ಗೆ ಬಂದರೆ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸುಲಭವಾಗಲಿದೆ ಎಂಬುವುದು ರಾಜು ಕಾಗೆ ಲೆಕ್ಕಾಚಾರ.
ಟಿಕೆಟ್‌ಗೆ ಭಿಕ್ಷೆ ಪಾತ್ರೆ ಹಿಡಿದು ತಿರುಗಲ್ಲ, ನಾನು ಸ್ವಾಭಿಮಾನಿ ರಾಜಕಾರಣಿ: ಲಕ್ಷ್ಮಣ ಸವದಿ
ಸಚಿವ ಸ್ಥಾನ ಬಿಟ್ಟು ಕೊಡುವೆ:
ಸವದಿ, ಕಾಗೆ ಅವರು ಬೇರೆ ಬೇರೆ ಪಕ್ಷದಲ್ಲಿದ್ದರೂ ಆಪ್ತತೆ ಮಾತ್ರ ದೂರ ಆಗಿರಲಿಲ್ಲ. ಹೀಗಾಗಿ ಬಿಜೆಪಿ ಟಿಕೆಟ್ ವಂಚಿತರಾಗಿರುವ ಲಕ್ಷ್ಮಣ ಸವದಿ ಅವರನ್ನು ಕಾಗೆ ಭೇಟಿ ಮಾಡಿ ಸಾಂತ್ವನ ಹೇಳುವುದರ ಮೂಲಕ ಆಪ್ತ ಗೆಳೆಯನಿಗೆ ಅಭಯ ನೀಡಿದ್ದಾರೆ. ಈ ನಡುವೆ ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ಚಿಂತನೆಯಲ್ಲಿರುವಾಗಲೇ ರಾಜು ಕಾಗೆ ಸವದಿ ಅವರನ್ನ ಕಾಂಗ್ರೆಸ್‌ಗೆ ಆಹ್ವಾನಿಸಿದ್ದಾರೆ. ಸವದಿ ಕಾಂಗ್ರೆಸ್ ಸೇರಿದರೆ ತಮಗೂ ಬಲ ಬರುತ್ತದೆ ಎಂಬುವುದು ರಾಜು ಕಾಗೆ ವಿಚಾರ. ಹೀಗಾಗಿ ಲಕ್ಷ್ಮಣ ಸವದಿ ಅವರನ್ನು ಕಾಂಗ್ರೆಸ್‌ಗೆ ಸೆಳೆಯಲು ರಾಜು ಕಾಗೆ ಮುಂದಾಗಿದ್ದಾರೆ. ಇನ್ನಷ್ಟುಮುಂದೆ ಹೋಗಿರುವ ಕಾಗೆ, ಒಂದು ವೇಳೆ ಕಾಂಗ್ರೆಸ್ ಸರ್ಕಾರ ಬಂದರೆ ಆಗ ತಮಗೆ ಸಿಗುವ ಹುದ್ದೆ, ಸಚಿವ ಸ್ಥಾನ ಕೂಡ ತ್ಯಾಗ ಮಾಡುವುದಾಗಿ ಕಾಗೆ ಗೆಳೆಯನಿಗೆ ಭರವಸೆ ನೀಡಿದ್ದಾರೆ.
ಈಗಾಗಲೇ ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಿರುವ ಸವದಿ, ಅಭಿಮಾನಿಗಳು, ಬೆಂಬಲಿಗರ ಅಭಿಪ್ರಾಯ ಕೇಳಿ ರಾಜಕೀಯ ನಡೆ ನಿರ್ಧರಿಸಲಿದ್ದಾರೆ. ಒಂದು ಅಂದಾಜಿನ ಪ್ರಕಾರ ಇನ್ನೆರಡು ದಿನದಲ್ಲಿ ಸವದಿ ಅವರು ಬಿಜೆಪಿ ಸಂಬಂಧ ಕಳಚಲಿದ್ದು ಬಹುತೇಕ ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗಿದೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.