ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿನ ಟಿಕೆಟ್ ವಂಚಿತರು ಒಂದು ವೇಳೆ ಪ್ರಭಾವಿ ಎನಿಸಿದರೆ ಅವರನ್ನು ಸೆಳೆಯುವ ಪ್ರಯತ್ನ ಜೆಡಿಎಸ್ ನಡೆಸಿದಂತಿದೆ. ಈ ಎರಡೂ ಪಕ್ಷಗಳ ಟಿಕೆಟ್ ತಪ್ಪಿದ ಆಕಾಂಕ್ಷಿಗಳಿಗೂ ಸಹ ಜೆಡಿಎಸ್‌ನತ್ತ ಚಿಂತನೆ ನಡೆಸುವುದು ಅನಿವಾರ್ಯವೂ ಎಂದೆನಿಸಿದೆ.
ಯಾದಗಿರಿ(ಏ.13): ಕಾಂಗ್ರೆಸ್ ಹಾಗೂ ಬಿಜೆಪಿ ಟಿಕೆಟ್ ಸಿಗದ ಅತೃಪ್ತರು ಇದೀಗ ಜೆಡಿಎಸ್‌ನತ್ತ ಮುಖ ಮಾಡುತ್ತಿದ್ದು, ಜೆಡಿಎಸ್ ಪಕ್ಷಕ್ಕೆ ಆದಾಯದ ನಿರೀಕ್ಷೆ ಮೂಡಿಸಿದೆ. ಜಿಲ್ಲೆಯ ನಾಲ್ಕೂ ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಘೋಷಿಸಿದರೆ, ಬಿಜೆಪಿ ಮಾತ್ರ ಗುರುಮಠಕಲ್ ಹೊರತುಪಡಿಸಿ ಮೂರು ಕ್ಷೇತ್ರಗಳಲ್ಲಿ (ಯಾದಗಿರಿ, ಸುರಪುರ ಹಾಗೂ ಶಹಾಪುರ) ಟಿಕೆಟ್ ಘೋಷಿಸಿದೆ. ಗುರುಮಠಕಲ್‌ನಲ್ಲಿ ಮಾತ್ರ ಜೆಡಿಎಸ್ ತನ್ನ ಅಭ್ಯರ್ಥಿಯ ಹೆಸರನ್ನು ತಿಂಗಳ ಮೊದಲೇ ಪ್ರಕಟಿಸಿದೆ. ಇನ್ನುಳಿದ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಗುರುಮಠಕಲ್ ಹಾಲಿ ಶಾಸಕ, ನಾಗನಗೌಡ ಕಂದಕೂರ ಅವರ ಪುತ್ರ ಶರಣಗೌಡ ಇಲ್ಲಿನ ಜೆಡಿಎಸ್ ಘೋಷಿತ ಅಭ್ಯರ್ಥಿ. ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿನ ಟಿಕೆಟ್ ವಂಚಿತರು ಒಂದು ವೇಳೆ ಪ್ರಭಾವಿ ಎನಿಸಿದರೆ ಅವರನ್ನು ಸೆಳೆಯುವ ಪ್ರಯತ್ನ ಜೆಡಿಎಸ್ ನಡೆಸಿದಂತಿದೆ. ಈ ಎರಡೂ ಪಕ್ಷಗಳ ಟಿಕೆಟ್ ತಪ್ಪಿದ ಆಕಾಂಕ್ಷಿಗಳಿಗೂ ಸಹ ಜೆಡಿಎಸ್‌ನತ್ತ ಚಿಂತನೆ ನಡೆಸುವುದು ಅನಿವಾರ್ಯವೂ ಎಂದೆನಿಸಿದೆ.
ಮಂಗಳವಾರ ರಾತ್ರಿ ಬಿಜೆಪಿ ಪಟ್ಟಿ ಪ್ರಕಟಗೊಳ್ಳುತ್ತಲೇ ಯಾದಗಿರಿ ಹಾಲಿ ಶಾಸಕ ವೆಂಕಟರೆಡ್ಡಿ ಮುದ್ನಾಳ್ ನಿರುಮ್ಮಳರಾದರು. ಟಿಕೆಟ್ ತಪ್ಪುವ ಸಂಭಾವ್ಯರ ಹೆಸರಲ್ಲಿ ಇವರದ್ದೂ ಹೆಸರು ಇದೆ ಎಂಬ ಸುದ್ದಿಗಳ ಹಿನ್ನೆಲೆಯಲ್ಲಿ ಆತಂಕದಲ್ಲಿದ್ದ ಮುದ್ನಾಳ್ ಬಿಎಸ್‌ವೈ ಕೃಪಾಕಟಾಕ್ಷದಿಂದ ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.
undefined
Karnataka Assembly Elections 2023: ಚುನಾವಣೆ ಬೆನ್ನಲ್ಲೇ ರಂಗೇರುತ್ತಿರುವ ಪಕ್ಷಾಂತರ ಪರ್ವ
ಸುರಪುರದಲ್ಲಿ ಸಹಜವಾಗಿ ಹಾಲಿ ಶಾಸಕ ನರಸಿಂಹ ನಾಯಕ್‌ರ (ರಾಜೂಗೌಡರ) ಒಬ್ಬರೇ ಹೆಸರು ಇರುವುದರಿಂದ ಅಲ್ಲಿ ಬಂಡಾಯದ ಪ್ರಶ್ನೆಯೇ ಉದ್ಭವಿಸಿಲ್ಲ. ಆದರೆ, ಶಹಾಪುರದಲ್ಲಿ ಗುತ್ತಿಗೆದಾರ ಅಮೀನರೆಡ್ಡಿ ಯಾಳಗಿ ಅವರನ್ನು ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಿದ್ದೇ ತಡ, ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಬಣದಲ್ಲಿ ಭಿನ್ನಮತದ ಬೆಂಕಿ ಕಾಣಿಸಿಕೊಂಡಿದೆ.
ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ಕಟ್ಟಾಬೆಂಬಲಿಗ ಗುರು ಪಾಟೀಲ್ 2013ರಲ್ಲಿ ಕೆಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಶರಣಬಸಪ್ಪ ದರ್ಶನಾಪುರ ವಿರುದ್ಧ ಸೋಲುಂಡಿದ್ದ ಗುರು ಪಾಟೀಲ್ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಪ್ರಬಲ ಆಕಾಂಕ್ಷಿಯಾಗಿದ್ದವರು.
ಆದರೆ, ಬಿಜೆಪಿ ಅಮೀನ ರೆಡ್ಡಿಗೆ ಮಣೆ ಹಾಕಿರುವುದು ಶಿರವಾಳ ಪಾಳೆಯದಲ್ಲಿ ಅಸಮಾಧಾನ ಬೇಗುದಿ ಮೂಡಿಸಿದೆ. ಹಾಗೆ ನೋಡಿದರೆ, ಇದೇ ಅಮೀನರೆಡ್ಡಿ ಪಾಟೀಲ್ ಯಾಳಗಿ ಅವರು 2018ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, 20 ಸಾವಿರ ಮತ ಪಡೆಯುವ ಮೂಲಕ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಲ್ಲಿ ನಡುಕ ಹುಟ್ಟಿಸಿದವರು. ನಂತರದ ರಾಜಕೀಯ ಬೆಳವಣಿಗೆಗಳಲ್ಲಿ ಗುರು ಪಾಟೀಲ್ ನೇತೃತ್ವದಲ್ಲಿ ಬಿಜೆಪಿ ಸೇರಿದ ಅಮೀನರೆಡ್ಡಿ ಈಗ ಗುರು ವಿರುದ್ಧವೇ ಸೆಡ್ಡು ಹೊಡೆದಿರುವುದು ರಾಜಕೀಯ ತಂತ್ರಗಳಿಗೆ ಸಾಕ್ಷಿಯಾದಂತಾಗಿದೆ.
ಜೆಡಿಎಸ್‌ಗೆ ಗುರು ಪಾಟೀಲ್?
ಬಿಜೆಪಿ ಟಿಕೆಟ್ ಸಿಗದೆ ನಿರಾಶರಾಗಿರುವ ಮಾಜಿ ಶಾಸಕ ಗುರು ಪಾಟೀಲ್, ಜೆಡಿಎಸ್‌ನತ್ತ ಚಿತ್ತ ಹರಿಸುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ. ಬುಧವಾರ ಅವರ ಸಾವಿರಾರು ಬೆಂಬಲಿಗರು ಗುರು ಪಾಟೀಲ್‌ರ ಶಿರವಾಳದ ನಿವಾಸಕ್ಕೆ ಆಗಮಿಸಿ ಬಿಜೆಪಿ ಹೈಕಮಾಂಡ್ ನಡೆಯ ವಿರುದ್ಧ ಕಿಡಿ ಕಾರಿದ್ದಾರೆ. ಗುರುವಾರ ಬೆಳಗ್ಗೆ ಶಹಾಪುರದ ಮಡ್ನಾಳ್ ರಸ್ತೆಯಲ್ಲಿರುವ ಗೋದಾಮಿನಲ್ಲಿ ಗುರು ಪಾಟೀಲ್ ಮುಂದಿನ ನಡೆ ನಿರ್ಧರಿಸಲಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುವುದೋ ಅಥವಾ ಪಕ್ಷೇತರರಾಗಿ ನಿಲ್ಲಬೇಕೋ ಎಂಬ ಬಗ್ಗೆ ಚರ್ಚೆಗಳು ನಡೆಯಲಿವೆ ಎಂದು ಮೂಲಗಳು ತಿಳಿಸಿವೆ. ಹೆಚ್ಚಿನ ಮತದಾರರುಳ್ಳ ಬಣಜಿಗ ಸಮುದಾಯ ಇಲ್ಲಿ ಗುರು ಪಾಟೀಲರ ಪರ ಚಿಂತನೆ ನಡೆಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಯಾದಗಿರಿ: ಮಾಲಕರೆಡ್ಡಿಗೆ ಕೈ ಕೊಟ್ಟ ಕಾಂಗ್ರೆಸ್..!
ಡಾ. ಮಾಲಕರೆಡ್ಡಿ ಚತ್ತ ಎತ್ತ?
ಇನ್ನು ಯಾದಗಿರಿ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ತಮ್ಮ ಪುತ್ರಿಗೆ ಸಿಗಬಹುದು ಎಂಬ ಲೆಕ್ಕಾಚಾರದಲ್ಲಿದ್ದ ಮಾಜಿ ಸಚಿವ ಡಾ.ಮಾಲಕರೆಡ್ಡಿ ಅವರೂ ನಿರಾಶರಾದಂತಿದ್ದು, ಅವರೂ ಸಹ ಜೆಡಿಎಸ್ ಕದ ತಟ್ಟುತ್ತಿರುವಂತಿದೆ. ಈಗಾಗಲೇ ಜೆಡಿಎಸ್ ನಾಯಕರ ಜೊತೆ ರೆಡ್ಡಿ ಸಂಪರ್ಕ ಸಾಧಿಸಿದ್ದು, ಅಲ್ಲಿಂದ ಹಸಿರು ನಿಶಾನೆಗಾಗಿ ಕಾಯುತ್ತಿದ್ದಾರೆ ಎಂದು ಅವರ ಆಪ್ತ ವಲಯ ತಿಳಿಸಿದೆ. ಹೀಗಾಗಿ, ಕಾಂಗ್ರೆಸ್ ಹಾಗೂ ಬಿಜೆಪಿ ಟಿಕೆಟ್ ವಂಚಿತರಿಗೆ ಆಸರೆಯಾಗಿರುವ ಜೆಡಿಎಸ್ ಮುಂದಿನ ದಿನಗಳಲ್ಲಿ ರಾಜಕೀಯ ಲೆಕ್ಕಾಚಾರಗಳನ್ನೇ ತಲೆಕೆಳಗಾಗಿಸುವ ನಿರೀಕ್ಷೆಯಿದೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.