
ಪಾಪ-ಪುಣ್ಯ, ಶಾಪ ಇವುಗಳ ಬಗ್ಗೆ ಒಂದಿಷ್ಟು ಮಂದಿ ನಂಬಿಕೆ ಇಟ್ಟರೆ, ಇವೆಲ್ಲಾ ಸುಳ್ಳು, ಬೋಗಸ್ ಎನ್ನುವವರು ಮತ್ತೊಂದಿಷ್ಟು ಮಂದಿ. ಅದೇನೇ ಇದ್ದರೂ ಮನುಷ್ಯನ ಊಹೆಗೂ ನಿಲುಕದ ಯಾವುದೋ ಒಂದು ಶಕ್ತಿ ಕೆಲಸ ಮಾಡುತ್ತಿದೆ ಎನ್ನುವುದಂತೂ ಸತ್ಯ. ಆ ಶಕ್ತಿ ಸಾಮಾನ್ಯ ಜನರಿಗೆ ಗೋಚರ ಆಗುವುದಿಲ್ಲ ಎಂದ ಮಾತ್ರಕ್ಕೆ ಆ ಶಕ್ತಿ ಇಲ್ಲ ಎಂದೇನಲ್ಲ. ಆದರೆ ಅದು ಅವರವರ ನಂಬಿಕೆಗೆ ಬಿಟ್ಟಿರುವ ವಿಷಯ. ಈ ವಿಷಯ ಇಲ್ಲಿ ಹೇಳಲು ಕಾರಣ, ಸದ್ಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೆಳಕ್ಕೆ ಇಳಿಸಿ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡಬೇಕು ಎಂದು ಹಲವು ವರ್ಷಗಳಿಂದ ಸೋನಿಯಾ ಗಾಂಧಿ ಹಾಗೂ ಕೆಲವು ಕಾಂಗ್ರೆಸ್ಸಿಗರು ಶ್ರಮಿಸುತ್ತಲೇ ಬಂದಿದ್ದಾರೆ. 6 ದಶಕಗಳ ಕಾಲ ನಮ್ಮ ದೇಶದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ (ಮಧ್ಯೆ ಮಧ್ಯೆ ಒಂದಿಷ್ಟು ವರ್ಷ ಬಿಟ್ಟು), ಇದೀಗ ಆಡಳಿತಾರೂಢ ಪಕ್ಷವಾಗಲು ಹೆಣಗಾಡುತ್ತಿದೆ.
ಇದರ ನಡುವೆಯೇ, ಇದೀಗ ಖ್ಯಾತ ಜ್ಯೋತಿಷಿ ಒಬ್ಬರು, ಇದರ ರಹಸ್ಯವನ್ನು ತೆರೆದಿಟ್ಟಿದ್ದಾರೆ. ಜೀನತ್ ಸಿದ್ಧಿಖಿ ಅವರ ಯುಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಇಂದಿರಾಗಾಂಧಿ ಕುಟುಂಬಕ್ಕೆ ಈ ಪರಿಸ್ಥಿತಿ ಬರಲು ಇರುವ ಕುತೂಹಲದ ಕಾರಣವನ್ನು ಅವರು ವಿವರಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ರಾಹುಲ್ ಗಾಂಧಿ ಅವರು ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಹಿಂದಿಗಿಂತಲೂ ಪ್ರಬುದ್ಧರಾಗಿ ವಿರೋಧ ಪಕ್ಷದ ನಾಯಕನಾಗಿ ಬೆಳೆದಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಅವರು ದೇಶದ ಪ್ರಧಾನಿಯಾಗುವುದೇ ಇಲ್ಲ ಎಂದಿದ್ದಾರೆ. ಇದಾಗಲೇ ಇದೇ ವಿಷಯವನ್ನು ಹಲವು ಜ್ಯೋತಿಷಿಗಳು ಹೇಳಿದ್ದಾರೆ. ಆದರೆ, ಇದಕ್ಕೆ ನೀಡಿರುವ ಕಾರಣ ಮಾತ್ರ ಸ್ವಲ್ಪ ವಿಭಿನ್ನವಾಗಿದೆ.
ಅದು ಇಂದಿರಾಗಾಂಧಿ ಕುಟುಂಬಕ್ಕೆ ಇರುವ ಗೋಪಾಷ್ಟಮಿ ಶಾಪ ಎನ್ನುವುದು ಈ ಜ್ಯೋತಿಷಿಯ ಮಾತು. ಅಚ್ಚರಿಯ ವಿಷಯ ಏನೆಂದರೆ, ಇಂದಿರಾಗಾಂಧಿ ಮತ್ತು ರಾಜೀವ್ಗಾಂಧಿ ಅವರ ಹ*ತ್ಯೆಯಾದದ್ದೂ ಗೋಪಾಷ್ಟಮಿಯ ದಿವಸವೇ. ಅದೇ ರೀತಿ ಸಂಜಯ್ ಗಾಂಧಿ ಅವರ ಮೃತಪಟ್ಟಿದ್ದೂ ಇದೇ ದಿನ. ಆದ್ದರಿಂದ ಇವರ ಕುಟುಂಬಕ್ಕೆ ಕರಪಾತ್ರಿ ಮಹಾರಾಜ್ ನೀಡಿರುವ ಭಯಂಕರ ಶಾಪವೇ ಕಾರಣ ಎಂದಿದ್ದಾರೆ. ಅಷ್ಟಕ್ಕೂ ಇದು ಸಂಭವಿಸಿದ್ದು ಇಂದಿರಾಗಾಂಧಿ ಅವರ ಅಧಿಕಾರಾವಧಿಯಲ್ಲಿ ಎನ್ನುತ್ತಾರೆ ಇವರು. ನವೆಂಬರ್ 7, 1966 ರಂದು, ದೇಶಾದ್ಯಂತ ಗೋಹತ್ಯೆ ನಿಷೇಧವನ್ನು ಒತ್ತಾಯಿಸಿ ಹಿಂದೂ ಸಾಧುಗಳು ಬೃಹತ್ ಪ್ರತಿಭಟನೆ ನಡೆಸಿದ್ದರು. ದೆಹಲಿಯ ಸಂಸತ್ತಿನ ಬಳಿ ಹಿಂಸಾತ್ಮಕ ಗಲಭೆಗಳಿಗೆ ಕಾರಣವಾಯಿತು. ಪೊಲೀಸರು ಜನಸಮೂಹದ ಮೇಲೆ ಗುಂಡು ಹಾರಿಸಿದರು, ಆಗ ಸಾಧು- ಸಂತರು ಮತ್ತು ಹಲವು ಹಸುಗಳು ಪ್ರಾಣ ಕಳೆದುಕೊಂಡರು. ಅದು ನಡೆದದ್ದು, ಗೋಪಾಷ್ಟಮಿ ದಿನವೇ. ಆದ್ದರಿಂದ ಇದೇ ದಿನ ನಿಮ್ಮ ಸಂಪೂರ್ಣ ಕುಟುಂಬ ನಾಶವಾಗುತ್ತದೆ ಎಂದು ಕರಪಾತ್ರಿ ಮಹಾರಾಜ್ ಶಾಪ ಕೊಟ್ಟಿದ್ದರು ಎಂದಿದ್ದಾರೆ.
ಅದೇ ಕಾರಣಕ್ಕೆ, ಅವರ ನಂತರ ರಾಜೀವ್ ಗಾಂಧಿ ಅಧಿಕಾರಕ್ಕೆ ಬಂದರೂ ಗಾಂಧಿ ಕುಟುಂಬದ ಪತನ ಶುರುವಾಯಿತು. ಅವರು ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡಲಿಲ್ಲ ಎನ್ನಲಾಗುತ್ತದೆ. ಅಂದಹಾಗೆ, ಅಕ್ಟೋಬರ್ 31, 1984 ರಂದು ಅವರ ಅಂಗರಕ್ಷಕರಿಂದ ಇಂದಿರಾಗಾಂಧಿ ಹ*ತ್ಯೆಗೀಡಾದರು, ಮೇ 21, 1991 ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಚುನಾವಣಾ ಪ್ರಚಾರದಲ್ಲಿದ್ದಾಗ ಎಲ್‌ಟಿಟಿಇಗೆ ಸಂಬಂಧಿಸಿದ ಆತ್ಮ*ಹತ್ಯಾ ಬಾಂಬರ್‌ನಿಂದ ರಾಜೀವ್ ಗಾಂಧಿ ಸಾವನ್ನಪ್ಪಿದರು. ಜೂನ್ 23, 1980 ರಂದು ವಿಮಾನ ಅಪಘಾತದಲ್ಲಿ ಸಂಜಯ್ ಗಾಂಧಿ ನಿಧನರಾದರು. ಈ ಜ್ಯೋತಿಷಿ ಪ್ರಕಾರ, ರಾಹುಲ್ ಗಾಂಧಿಯವರಿಗೂ ಇದೇ ದಿನ ಮುಂದೊಮ್ಮೆ ಕಂಟಕವಿದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.