
ವಿಧಾನಪರಿಷತ್: ವಿಧಾನಪರಿಷತ್ತಿನಲ್ಲಿ ಸೃಷ್ಟಿಯಾಗಿರುವ ನಜೀರ್ ಅಹ್ಮದ್ ಅವರ ಹೇಳಿಕೆ ಮತ್ತು ಸಿಟಿ ರವಿ ಅವರ ತಿರುಗೇಟಿನ ವಿವಾದ ಇದೀಗ ಮುಖ್ಯಮಂತ್ರಿಗಳ ಅಂಗಳ ತಲುಪಿದೆ. ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯ ನಂತರವೂ ಬಿಕ್ಕಟ್ಟು ಬಗೆಹರಿದಿಲ್ಲ. ಸಚಿವ ಎಚ್.ಕೆ. ಪಾಟೀಲ್ ಸೇರಿದಂತೆ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿಗಳ ಸಂದೇಶದೊಂದಿಗೆ ಸಭಾಪತಿಗಳೊಂದಿಗೆ ಚರ್ಚೆ ನಡೆಸಿದ್ದು, ಅಂತಿಮ ನಿರ್ಧಾರದ ಹೊಣೆಗಾರಿಕೆಯನ್ನು ಸಿಎಂ ಜೊತೆಗಿನ ಮಾತುಕತೆ ಬಳಿಕ ಪ್ರಕಟಿಸಲು ನಜೀರ್ ಅಹ್ಮದ್ ನಿರ್ಧರಿಸಿದ್ದಾರೆ.
ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರು ಸಿ.ಟಿ. ರವಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು, 'ನಾವು ಇಲ್ಲೇ ಹುಟ್ಟಿ, ಇಲ್ಲೇ ಬೆಳೆದು, ಇಲ್ಲೇ ಸಾಯುತ್ತೇವೆ. ನಜೀರ್ ಅಹ್ಮದ್ ಅವರನ್ನು 'ಪಾಕಿಸ್ತಾನದ ನಾಲಿಗೆ' ಎಂದು ಕರೆಯುವುದು ಎಷ್ಟು ಸರಿ? ಅವರ ವಿರುದ್ಧ ಕ್ರಮ ಕೈಗೊಳ್ಳಿ' ಎಂದು ಪಟ್ಟು ಹಿಡಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು, 'ನಮ್ಮ ದೂರಿನ ಬಗ್ಗೆ ಮೊದಲು ಕ್ರಮವಾಗಲಿ, ಕಂಪ್ಲೇಂಟ್‌ಗೆ ಮತ್ತೊಂದು ಕಂಪ್ಲೇಂಟ್ ಪರಿಹಾರವಲ್ಲ' ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸದನದಲ್ಲಿ ಅಕ್ಷರಶಃ ಕೆಂಡ ಕಾರಿದ ಸಿ.ಟಿ. ರವಿ, 'ಭಾರತದ ನಾಲಿಗೆ ಪ್ರಧಾನಿಯ ಬಗ್ಗೆ ಅಂತಹ ಕೀಳು ಪದ ಬಳಸಲು ಸಾಧ್ಯವೇ ಇಲ್ಲ. ಪ್ರಧಾನಿ ಬಗ್ಗೆ ಗೌರವ ಇರುವವರು ಯಾರೂ ಹಾಗೆ ಮಾತನಾಡಲಾರರು. ಆಚಾರವಿಲ್ಲದ ನಾಲಿಗೆ ನೀಚ ಬುದ್ಧಿಯ ಬಿಡು ನಾಲಿಗೆ ಎಂದು ದಾಸರು ಹೇಳಿದ್ದು ಇಂತಹ ಸಂದರ್ಭಕ್ಕೇ ಇರಬೇಕು. ನಾನು ನನ್ನ ಮಾತಿಗೆ ಈಗಲೂ ಬದ್ಧ' ಎಂದು ಗುಡುಗಿದರು. ಸಭಾಪತಿಗಳು ಅವರು ಆಡಿದ ಮಾತುಗಳನ್ನು ಓದಿದಾಗಲೂ ರವಿ ತಮ್ಮ ನಿಲುವಿನಿಂದ ಹಿಂದೆ ಸರಿಯಲಿಲ್ಲ.
ತನ್ನ ವಿರುದ್ಧದ ಆರೋಪಗಳಿಗೆ ಉತ್ತರಿಸಿದ ನಜೀರ್ ಅಹ್ಮದ್, 'ಸಭಾಪತಿಗಳೇ, ನಾನು ಪ್ರಧಾನಿ ಬಗ್ಗೆ ಮಾತನಾಡಿದ್ದು ತಪ್ಪು ಎಂದಾದರೆ, ಸಿ.ಟಿ. ರವಿ ಅವರು ಆಡಿದ ಮಾತುಗಳೂ ತಪ್ಪು ತಾನೇ? ಇಬ್ಬರಿಗೊಂದು ನ್ಯಾಯವೇಕೆ? ಸಮ ಸಮಾಜ ಅಂದರೆ ಎಲ್ಲರಿಗೂ ಒಂದೇ ರೂಲ್ಸ್ ಇರಬೇಕು' ಎಂದು ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ಬೈರತಿ ಸುರೇಶ್, 'ಸಿ.ಟಿ. ರವಿ ವಿಷಾದ ವ್ಯಕ್ತಪಡಿಸಲಿ, ಆಮೇಲೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ' ಎಂದರು.
ಸಭಾಪತಿ ಬಸವರಾಜ ಹೊರಟ್ಟಿ ಅವರು ಸಂಧಾನದ ಸೂತ್ರವಾಗಿ 'ನಜೀರ್ ಅಹ್ಮದ್ ಮೊದಲು ಕ್ಷಮೆ ಕೇಳಲಿ, ಆಮೇಲೆ ಸಿ.ಟಿ. ರವಿ ವಿಷಾದ ವ್ಯಕ್ತಪಡಿಸಲಿ' ಎಂಬ ಸಲಹೆ ನೀಡಿದರು. ನಜೀರ್ ಅಹ್ಮದ್ 'ನನ್ನ ಮಾತಿನಿಂದ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ' ಎಂದರಾದರೂ, ಬಿಜೆಪಿ ಸದಸ್ಯರು ಒಪ್ಪಲಿಲ್ಲ. 'ವಿಷಾದಕ್ಕೂ ಅವಕಾಶವಿಲ್ಲ, ಕೇವಲ ಕ್ಷಮೆಯೊಂದೇ ನಮಗೆ ಬೇಕು. ಪೀಠದಿಂದ ಕ್ಷಮೆಯಾಚನೆಗೆ ಸೂಚನೆ ಬರಲಿ' ಎಂದು ಬಿಜೆಪಿ ಸದಸ್ಯರು ಹಠ ಹಿಡಿದರು. ಇದರಿಂದಾಗಿ ಸದನದಲ್ಲಿ ಜಟಾಪಟಿ ಮುಂದುವರಿಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.