ಸದನದಲ್ಲಿ ಇಂದು, ನಾಳೆ ಜಿ ರಾಮ್‌ ಜಿ ಸಂಗ್ರಾಮ

Kannadaprabha News   | Kannada Prabha
Published : Feb 03, 2026, 07:12 AM IST
Vidhan soudha

ಸಾರಾಂಶ

ಕೇಂದ್ರ ಸರ್ಕಾರ ಹೊಸದಾಗಿ ತಂದಿರುವ ‘ವಿಬಿ ಜಿ ರಾಮ್‌ ಜಿ’ ಕಾಯ್ದೆಯ ಪರ, ವಿರುದ್ಧ ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಗಳವಾರ ಮತ್ತು ಬುಧವಾರ ಎರಡು ದಿನಗಳ ಕಾಲ ಚರ್ಚೆ ನಡೆಯಲಿದೆ.

ಬೆಂಗಳೂರು : ಕೇಂದ್ರ ಸರ್ಕಾರ ಹೊಸದಾಗಿ ತಂದಿರುವ ‘ವಿಬಿ ಜಿ ರಾಮ್‌ ಜಿ’ ಕಾಯ್ದೆಯ ಪರ, ವಿರುದ್ಧ ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಗಳವಾರ ಮತ್ತು ಬುಧವಾರ ಎರಡು ದಿನಗಳ ಕಾಲ ಚರ್ಚೆ ನಡೆಯಲಿದೆ. ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಕಾಯ್ದೆ ಕುರಿತು ಜುಗಲ್‌ಬಂದಿ ನಡೆಯಲಿದ್ದು, ಭಾರೀ ಕೋಲಾಹಲದ ನಿರೀಕ್ಷೆ ಮೂಡಿಸಿದೆ.

ಆರೋಗ್ಯಕರ ಚರ್ಚೆ ನಡೆದರೆ ಎರಡೂ ದಿನ ಆಡಳಿತ ಮತ್ತು ಪ್ರತಿಪಕ್ಷದವರ ನಡುವೆ ಕಾಯ್ದೆಯ ಅನುಕೂಲ ಹಾಗೂ ಅನಾನುಕೂಲಗಳ ಬಗ್ಗೆ ಸುದೀರ್ಘ ವಾದ ಮಂಡನೆ ನಡೆಯಲಿದೆ. ಜೊತೆಗೆ ಗಾಂಧೀಜಿ ಹೆಸರಿನ ಮನರೇಗಾ ಯೋಜನೆಯನ್ನು ರದ್ದುಪಡಿಸಿದ್ದರ ಬಗ್ಗೆಯೂ ಪರ, ವಿರೋಧ ಚರ್ಚೆಗಳು ನಡೆಯಲಿವೆ. ಕೊನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ನೀಡಲಿದ್ದಾರೆ. ಅಲ್ಲದೆ, ಮೊದಲಿಂದಲೂ ಕಾಯ್ದೆ ವಿರೋಧಿಸುತ್ತಾ ಬಂದಿರುವ ಆಡಳಿತ ಪಕ್ಷ ಕಾಂಗ್ರೆಸ್‌ ಹೊಸ ಕಾಯ್ದೆಯ ವಿರುದ್ಧ ನಿರ್ಣಯ ಮಂಡಿಸಿ ವಿಧಾನಸಭೆ ಮತ್ತು ವಿಧಾನ ಪರಿಷತ್‌ ಎರಡೂ ಕಡೆ ಒಪ್ಪಿಗೆ ಪಡೆಯುವ ಪ್ರಯತ್ನ ನಡೆಸಲಿದೆ. ಈ ವೇಳೆ, ಸರ್ಕಾರದ ನಡೆಗೆ ಪ್ರತಿಪಕ್ಷದವರಿಂದ ತೀವ್ರ ವಿರೋಧ ವ್ಯಕ್ತವಾಗುವ ಸಾಧ್ಯತೆ ಹೆಚ್ಚಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಕ್‌ ಸಮರಕ್ಕೂ ಕಾರಣವಾಗುವ ಸಾಧ್ಯತೆ ಅಧಿಕವಾಗಿದೆ.

ವಿಬಿ ಜಿ ರಾಮ್‌ ಜಿ ಕಾಯ್ದೆಯನ್ನು ಜಾರಿಗೆ

ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ರದ್ದುಪಡಿಸಿ ಹೊಸದಾಗಿ ‘ವಿಕಸಿತ ಭಾರತ್‌ ಗ್ಯಾರಂಟಿ ಫಾರ್‌ ರೋಜ್‌ಗಾರ್‌ ಅಜೀವಿಕಾ ಮಿಷನ್‌-ಗ್ರಾಮೀಣ’(ವಿಬಿ ಜಿ ರಾಮ್‌ ಜಿ) ಕಾಯ್ದೆಯನ್ನು ಜಾರಿಗೆ ತಂದಿದೆ. ಗಾಂಧೀಜಿ ಹೆಸರಿನ ಕಾಯ್ದೆ ಕೈಬಿಡಲಾಗಿದೆ ಹಾಗೂ ಹೊಸ ಕಾಯ್ದೆಯಲ್ಲಿ ಗ್ರಾಮೀಣ ಬಡ, ರೈತ ಕೂಲಿ ಕಾರ್ಮಿಕರ ಉದ್ಯೋಗದ ಹಕ್ಕು ಕಸಿಯಲಿದೆ, ಅಧಿಕಾರ ವಿಕೇಂದ್ರೀಕರಣದ ಬದಲು ಕೇಂದ್ರೀಕರಣಕ್ಕೆ ಒತ್ತು ನೀಡಿ ಗ್ರಾಮ ಪಂಚಾಯಿತಿಗಳ ಅಧಿಕಾರವನ್ನೂ ಕಸಿಯಲಿದೆ ಎಂದು ಆರಂಭದಿಂದಲೂ ಕಾಂಗ್ರೆಸ್‌ ವಿರೋಧಿಸುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಹೊಸ ಕಾಯ್ದೆಯ ಸಾಧಕ, ಬಾಧಕಗಳ ಚರ್ಚೆಗಾಗಿ ಜ.22ರಿಂದ 31ರವರೆಗೆ ವಿಶೇಷ ಅಧಿವೇಶನವನ್ನೂ ಕರೆದಿತ್ತು.

ಆದರೆ, ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡಬೇಕಾದ ಭಾಷಣದಲ್ಲೂ ಕೇಂದ್ರದ ಹೊಸ ಕಾಯ್ದೆಯನ್ನು ಟೀಕಿಸುವ ಅಂಶಗಳನ್ನು ರಾಜ್ಯ ಸರ್ಕಾರ ಸೇರಿಸಿದ್ದರಿಂದ ರಾಜ್ಯಪಾಲರು ಪೂರ್ಣ ಭಾಷಣ ಓದಲು ಒಪ್ಪದೆ ಮೊದಲ ಹಾಗೂ ಕೊನೆಯ ಪ್ಯಾರಾ ಓದಿ ನಿರ್ಗಮಿಸಿದ್ದರು. ಅಲ್ಲದೆ, ಈ ವೇಳೆ ರಾಜ್ಯಪಾಲರು ರಾಷ್ಟ್ರಗೀತೆ ಹಾಡುವ ಮೊದಲೇ ನಿರ್ಗಮಿಸಿದ್ದು, ನಿರ್ಗಮನದ ವೇಳೆ ಕಾಂಗ್ರೆಸ್‌ನ ಕೆಲ ಸದಸ್ಯರು ರಾಜ್ಯಪಾಲರನ್ನು ಅಡ್ಡಗಟ್ಟುವ ಪ್ರಯತ್ನ ನಡೆಸಿದ್ದು ವಿವಾದಕ್ಕೆ ಕಾರಣವಾಗಿತ್ತು.

ಸಂವಿಧಾನ ರಕ್ಷಕರಾದ ರಾಜ್ಯಪಾಲರೇ ರಾಷ್ಟ್ರಗೀತೆಗೆ ಮಾಡಿದ ಅವಮಾನ ಇದು ಎಂದು ಆಡಳಿತ ಪಕ್ಷ ಟೀಕಿಸಿದರೆ, ಕಾಂಗ್ರೆಸ್‌ ಶಾಸಕರು ರಾಜ್ಯಪಾಲರಿಗೆ ಅಗೌರವ ತೋರಿದ್ದು ಅವರನ್ನು ಅಮಾನತು ಮಾಡಬೇಕೆಂದು ಪ್ರತಿಪಕ್ಷ ಸದಸ್ಯರು ಆಗ್ರಹಿಸಿದ್ದರು. ಅಲ್ಲದೆ, ಈ ಸಂಬಂಧ ಸದನದಲ್ಲಿ ಚರ್ಚೆಗೆ ಅವಕಾಶ ಕೋರಿ ಉಭಯ ಪಕ್ಷಗಳು ಪ್ರಸ್ತಾವನೆ ಸಲ್ಲಿಸಿದ್ದವು. ಬಹುತೇಕ ಚರ್ಚೆ, ವಾದ, ವಾಗ್ವಾದಗಳ ಬಳಿಕ ಸ್ಪೀಕರ್‌, ಸಭಾಪತಿ ಅವರು ರಾಜ್ಯಪಾಲರ ಬಗ್ಗೆ ಚರ್ಚಿಸಲು ನಿಯಮದಲ್ಲಿ ಅವಕಾಶವಿಲ್ಲ ಎಂದು ಹೇಳಿ, ಸದನದಲ್ಲಿ ನಡೆದ ಘಟನೆಗಳ ಬಗ್ಗೆ ಸದಸ್ಯರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸಬೇಕೆಂದು ರೂಲಿಂಗ್‌ ನೀಡಿ ಎರಡೂ ವಿವಾದಿತ ವಿಷಯಗಳಿಗೆ ಇತಿಶ್ರೀ ಹಾಡಿದ್ದರು.

ಸರ್ಕಾರದ ವಿಶೇಷ ಸದನಕ್ಕೆ ನಿಗದಿಪಡಿಸಿದ್ದ ದಿನಗಳು ಬಹುತೇಕ ಈ ವಿಷಯಗಳಲ್ಲೇ ಮುಗಿಯುವ ಲಕ್ಷಣಗಳು ಕಂಡಿದ್ದರಿಂದ ಸರ್ಕಾರ ಸದನ ಕಲಾಪ ಸಲಹಾ ಸಮಿತಿಯಲ್ಲಿ ಚರ್ಚಿಸಿ ಜಿ ರಾಮ್‌ ಜಿ ಕಾಯ್ದೆ ಚರ್ಚೆಗಾಗಿ ಜ.4ರವರೆಗೆ ಸದನದ ಕಾರ್ಯಕಲಾಪಗಳನ್ನು ವಿಸ್ತರಿಸಿತ್ತು. ಬಳಿಕವಷ್ಟೇ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣದ ಚರ್ಚೆಗಳು ನಡೆದು ಸೋಮವಾರ ಮುಕ್ತಾಯಗೊಂಡಿವೆ. ಈ ಚರ್ಚೆಗೆ ಮುಖ್ಯಮಂತ್ರಿ ಅವರು ಉತ್ತರವನ್ನೂ ನೀಡಿದ್ದಾರೆ. ಇನ್ನು ಮಂಗಳವಾರ ಮತ್ತು ಬುಧವಾರ ಎರಡು ದಿನ ಹೊಸ ಕಾಯ್ದೆಯ ಬಗ್ಗೆ ಚರ್ಚೆಗಳು ನಡೆಯಲಿವೆ.

ಏನಿದು ವಿವಾದ?

- ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ರದ್ದು ಮಾಡಿತ್ತು

- ಇದರ ಬದಲು ವಿಬಿ ಜಿ ರಾಮ್‌ ಜಿ ಹೆಸರಿನ ಹೊಸ ಕಾಯ್ದೆಯನ್ನು ಜಾರಿಗೆ ತಂದಿದೆ

- ಅಲ್ಲದೆ, ಉದ್ಯೋಗ ಖಾತ್ರಿ ಯೋಜನೆಯಲ್ಲಿನ ಕೂಲಿ ದಿನ ಸೇರಿ ಹಲವು ಅಂಶ ಬದಲು

- ಕೇಂದ್ರದ ಹೊಸ ಕಾಯ್ದೆ ಕೂಲಿ ಕಾರ್ಮಿಕರ ಉದ್ಯೋಗದ ಹಕ್ಕು ಕಸಿಯಲಿದೆ: ಕಾಂಗ್ರೆಸ್‌

- ಕೇಂದ್ರೀಕರಣಕ್ಕೆ ಒತ್ತು. ಗ್ರಾಮ ಪಂಚಾಯಿತಿಗಳ ಅಧಿಕಾರಕ್ಕೂ ಕೊಕ್ಕೆ ಎಂದು ಕಿಡಿ

- ಹೊಸ ಕಾಯ್ದೆಯ ಸಾಧಕ, ಬಾಧಕ ಚರ್ಚೆಗೆ ವಿಶೇಷ ಅಧಿವೇಶನ, ಇಂದು, ನಾಳೆ ಚರ್ಚೆ

- ಚರ್ಚೆಯ ವೇಳೆ ಬಿಜೆಪಿ-ಕಾಂಗ್ರೆಸ್‌ ಸದಸ್ಯರ ಮಧ್ಯೆ ಕಾವೇರಿದ ವಾಕ್ಸಮರ ಸಾಧ್ಯತೆ

- ಮೊದಲ ದಿನ ರಾಜ್ಯಪಾಲರು ಜಿ ರಾಮ್‌ ಜಿ ಕುರಿತು ಟೀಕೆ ಇದ್ದ ಭಾಷಣ ಓದಿರಲಿಲ್ಲ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮುಖ್ಯಮಂತ್ರಿ ಗಾದಿ ಬಗ್ಗೆ ಕೆಣಕಿದ್ದಕ್ಕೆ ಗೂಢಾರ್ಥದಲ್ಲಿ ಡಿಕೆಶಿ ಎದಿರೇಟು
ಅಂದು ಸ್ಟ್ರಾಂಗ್‌ ಇಂದೂ ಸ್ಟ್ರಾಂಗ್‌- ನಾನು ಅಸಹಾಯಕ ಸಿಎಂ ಅಲ್ಲ : ಸಿದ್ದರಾಮಯ್ಯ