ರಾಷ್ಟ್ರ ರಾಜಕಾರಣದಲ್ಲಿ ತಂತ್ರಗಾರಿಕೆ ವಿಚಾರಕ್ಕೆ ಬಂದಾಗ ಬಿಜೆಪಿ ಇತರ ಎಲ್ಲಾ ಪಕ್ಷಗಳಿಗಿಂತ ಒಂದು ಹೆಜ್ಜೆ ಮುಂದೆ. ಆಪರೇಷನ್ ಕಮಲ ಎನ್ನುವ ಅಸ್ತ್ರದ ಮೂಲಕವೇ ಬಿಜೆಪಿ ಹಲವು ರಾಜ್ಯಗಳಲ್ಲಿ ಅಧಿಕಾರಿ ಹಿಡಿದಿದೆ. ಕಳೆದ 6 ವರ್ಷಗಳಲ್ಲಿ 7 ರಾಜ್ಯಗಳಲ್ಲಿ ಬಿಜೆಪಿ ಆಪರೇಷನ್ ಕಮಲ ಮಾಡಿದ್ದು ಇದರಲ್ಲಿ ನಾಲ್ಕರಲ್ಲಿ ಯಶ ಕಂಡಿದೆ.
ನವದೆಹಲಿ (ಜೂನ್ 22): ಶಿವಸೇನೆಯ ಬಲಾಢ್ಯ ನಾಯಕ ಏಕನಾಥ್ ಶಿಂಧೆ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಬಂಡಾಯವೆದ್ದಿದ್ದಾರೆ. ಇದರ ಬೆನ್ನಲ್ಲಿಯೇ ಮಹಾರಾಷ್ಟ್ರದಲ್ಲಿ ರಾಜಕೀಯ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ಬಂಡಾಯ ಶಾಸಕರು ಬುಧವಾರ ಗುಜರಾತ್‌ನ ಸೂರತ್‌ನಿಂದ ಅಸ್ಸಾಂನ ಗುವಾಹಟಿಗೆ ತಲುಪಿದ್ದು, ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಪತನಕ್ಕೆ ಕೌಂಟ್ ಡೌನ್ ಆರಂಭವಾಗಲಿದೆ.
ಶಿವಸೇನಾ ನಾಯಕ ಸಂಜಯ್ ರಾವತ್ ಮಹಾರಾಷ್ಟ್ರದಲ್ಲಿ ಸರ್ಕಾರವನ್ನು ಉರುಳಿಸಲು ಇದು ಮೂರನೇ ಪ್ರಯತ್ನ ಎಂದು ಹೇಳಿದ್ದು, ಈ ಬಾರಿಯೂ ಆಪರೇಷನ್ ಕಮಲ ಯಶಸ್ವಿಯಾಗೋದಿಲ್ಲ ಎಂದಿದ್ದಾರೆ. ‘ಆಪರೇಷನ್ ಕಮಲ’ ಎಂಬುದು ಬಿಜೆಪಿಯ ತಂತ್ರಕ್ಕೆ ರೂಪುಗೊಂಡ ಪದವಾಗಿದ್ದು, ಇದರಲ್ಲಿ ಸ್ಥಾನಗಳ ಕೊರತೆಯ ಹೊರತಾಗಿಯೂ ಪಕ್ಷವು ಸರ್ಕಾರ ರಚಿಸಲು ಪ್ರಯತ್ನಿಸುತ್ತದೆ. ಕಳೆದ 6 ವರ್ಷಗಳಲ್ಲಿ ಬಿಜೆಪಿ 7 ರಾಜ್ಯಗಳಲ್ಲಿ ‘ಆಪರೇಷನ್ ಕಮಲ’ ನಡೆಸಿದೆ. ಈ ಪೈಕಿ ಬಿಜೆಪಿ 4 ಬಾರಿ ಯಶಸ್ಸು ಕಂಡಿದ್ದರೆ, 3 ಬಾರಿ ಸೋಲು ಕಂಡಿದೆ. 7 ರಾಜ್ಯಗಳ 'ಆಪರೇಷನ್ ಕಮಲ'ದ ಸಂಪೂರ್ಣ ವಿವರ ಇಲ್ಲಿದೆ.
1. ಮಧ್ಯಪ್ರದೇಶ (Madhya pradesh): 2018ರ ವಿಧಾನಸಭೆ ಚುನಾವಣೆ ಬಳಿಕ ಯಾವ ಪಕ್ಷಕ್ಕೂ ಬಹುಮತ ದೊರೆತಿರಲಿಲ್ಲ. ಬಿಎಸ್‌ಪಿ ಹಾಗೂ ಸ್ವತಂತ್ರ ಶಾಸಕರ ಬಲದಿಂದ ಕಾಂಗ್ರೆಸ್ ಸರ್ಕಾರವನ್ನು ರಚನೆ ಮಾಡಿತ್ತು. ಇನ್ನೊಂದೆಡೆ ಅನುಭವಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾಗೆ ತಮ್ಮನ್ನು ಪಕ್ಷ ಕಡೆಗಣನೆ ಮಾಡಿದೆ ಎನ್ನುವ ಸಿಟ್ಟಿತ್ತು. ಇದನ್ನು ಲಾಭವನ್ನಾಗಿ ಮಾಡಿಕೊಂಡ ಬಿಜೆಪಿ 2022ರ ಮಾರ್ಚ್‌ನಲ್ಲಿ ಸಿಂಧಿಯಾರನ್ನು ಸಂಪರ್ಕಿಸಿ, ಅವರ ಬೆಂಬಲಿತ ಶಾಸಕರೊಂದಿಗೆ ಬಂಡಾಯವೆಬ್ಬಿಸಿತು. ಬಂಡಾಯ ಶಮನ ಮಾಡುವ ಕಾಂಗ್ರೆಸ್ ಪ್ರಯತ್ನ ವಿಫಲವಾಗಿತ್ತು. ಕೇವಲ 15 ತಿಂಗಳಿಗೆ ಕಮಲ್‌ನಾಥ್ ನೇತೃತ್ವದ ಮಧ್ಯಪ್ರದೇಶ ಸರ್ಕಾರ ಬಹುಮತ ಕಳೆದುಕೊಂಡರೆ, ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ಮುಖ್ಯಮಂತ್ರಿ ಎನಿಸಿಕೊಂಡರು.
2. ರಾಜಸ್ಥಾನ (Rajasthan): 2018ರ ಚುನಾವಣೆಯಲ್ಲಿ ಹಾಗೂ ಹೀಗೂ ಮಾಡಿ ಕಾಂಗ್ರೆಸ್ 100 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಮುಖ್ಯಮಂತ್ರಿ ಅಶೋಕ್ ಗ್ಲೆಹೊಟ್, ಬಿಎಸ್‌ಪಿ ಹಾಗೂ ಸ್ವತಂತ್ರ ಶಾಸಕರ ಬಲ ಪಡೆದು ಕಾಂಗ್ರೆಸ್ ಅನ್ನು ಇನ್ನಷ್ಟು ಗಟ್ಟಿ ಮಾಡುವ ಪ್ರಯತ್ನ ಮಾಡಿದರು. ಇನ್ನೊಂದೆಡೆ ಸಚಿನ್ ಪೈಲಟ್, ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಆಪರೇಷನ್ ಕಮಲದ ಅಸ್ತ್ರ ಪ್ರಯೋಗಿಸಿ ಸಚಿನ್ ಪೈಲಟ್‌ರನ್ನು ಸೆಳೆಯುವ ಪ್ರಯತ್ನವನ್ನು ಬಿಜೆಪಿ ಮಾಡಿತ್ತು. ಇದರ ಬೆನ್ನಲ್ಲಿಯೇ 2020ರ ಜುಲೈಯಲ್ಲಿ 18 ಶಾಸಕರ ಬೆಂಬಲದೊಂದಿಗೆ ಸಚಿನ್ ಪೈಲಟ್ ಗುರುಗ್ರಾಮದ ಹೋಟೆಲ್‌ಗೆ ಬಂದಿದ್ದರು. ಕೊನೆಗೆ ಪ್ರಿಯಾಂಕಾ ವಾದ್ರಾ ಹಾಗೂ ಸಚಿನ್ ಪೈಲಟ್ ನಡುವೆ ಮಾತುಕತೆ ನಡೆದಿದ್ದ ಆಪರೇಷನ್ ಕಮಲ ವಿಫಲವಾಗಿತ್ತು.
3. ಕರ್ನಾಟಕ (Karnataka): 2017ರ ಚುನಾವಣೆಯಲ್ಲಿ 104 ಸ್ಥಾನಗಳೊಂದಿಗೆ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನವನ್ನೂ ಸ್ವೀಕರಿಸಿದ್ದರು. ಆದರೆ, ವಿಶ್ವಾಸಮತ ಯಾಚನೆಯಲ್ಲಿ ಸೋಲು ಕಂಡಿದ್ದರಿಂದ ಸರ್ಕಾರ ಪತನಗೊಂಡಿತ್ತು. ಆ ಬಳಿಕ ಕಾಂಗ್ರೆಸ್‌ನ 80 ಹಾಗೂ ಜೆಡಿಎಸ್‌ನ 30 ಶಾಸಕರು ಸೇರಿ ಸರ್ಕಾರ ರಚಿಸಿದ್ದರು. ಆದರೆ, ಈ ಸರ್ಕಾರ 2 ವರ್ಷ ಕೂಡ ಪೂರೈಸಲಿಲ್ಲ. 2019ರ ಜುಲೈನಲ್ಲಿಕಾಂಗ್ರೆಸ್ ನ 12 ಶಾಸಕರು ಹಾಗೂ ಜೆಡಿಎಸ್‌ನ 3 ಶಾಸಕರು ಬಂಡಾಯವೆದ್ದರು. ಕಾಂಗ್ರೆಸ್-ಜೆಡಿಎಸ್ ಸರ್ಕಾರಕ್ಕೆ 101 ಸ್ಥಾನಗಳು ಉಳಿಸಿಕೊಂಡರೆ, ಬಿಜೆಪಿ 105 ಸ್ಥಾನಗಳನ್ನು ಉಳಿಸಿಕೊಂಡಿತ್ತು. ವಿಷಯ ಸುಪ್ರೀಂ ಕೋರ್ಟ್ ಮೆಟ್ಟಿಲಿಗೂ ಏರಿದ್ದರಿಂದ ವಿಶ್ವಾಸಮತ ಯಾಚನೆ ಮಾಡುವಂತೆ ಸೂಚನೆ ನೀಡಲಾಗಿತ್ತು. ಈ ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆ ನೀಡಿದ್ದರು.
4. ಮಹಾರಾಷ್ಟ್ರ (Maharashtra): 2019ರ ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಫಲಿತಾಂಶ ಬಂದಾಗ ಬಿಜೆಪಿ-ಶಿವಸೇನೆ ನೇತೃತ್ವದ ಮೈತ್ರಿಕೂಟ ಬಹುಮತ ಪಡೆದುಕೊಂಡಿತ್ತು. ಬಿಜೆಪಿ 105 ಸ್ಥಾನಗಳಲ್ಲಿ ಮತ್ತು ಶಿವಸೇನೆ 56 ಸ್ಥಾನಗಳಲ್ಲಿ ಗೆದ್ದಿತ್ತು. ಎನ್‌ಸಿಪಿ 54 ಸ್ಥಾನಗಳಲ್ಲಿ ಹಾಗೂ ಕಾಂಗ್ರೆಸ್ 44 ಸ್ಥಾನಗಳಲ್ಲಿ ಜಯಿಸಿತ್ತು. ಆದರೆ, ಮುಖ್ಯಮಂತ್ರಿ ಸ್ಥಾನ ಬೇಕೇಬೇಕು ಎಂದು ಪಟ್ಟುಹಿಡಿದ ಶಿವಸೇನೆ, ಬಿಜೆಪಿಯನ್ನು ತೊರೆದು ಎನ್‌ಸಿಪಿ ಹಾಗೂ ಕಾಂಗ್ರೆಸ್‌ನೊಂದಿಗೆ ಮಹಾ ವಿಕಾಸ ಅಘಾಡಿ ಸರ್ಕಾರ ರಚನೆ ಮಾಡಿತು. ಆದರೆ, ಅಚ್ಚರಿ ಎನ್ನುವಂತೆ 2019ರ ನವೆಂಬರ್ 23ಕ್ಕೆ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೆ, ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಅಜಿತ್ ಪವಾರ್ ಜೊತೆಗೆ ಹೋಗುವ ಪಕ್ಷದ ಶಾಸಕರನ್ನು ತಡೆದರು. ಇದಾದ ಬಳಿಕ ಸುಪ್ರೀಂ ಕೋರ್ಟ್ ವಿಶ್ವಾಸಮತಕ್ಕೆ ಆದೇಶಿಸಿತ್ತು. ಫಡ್ನವಿಸ್ ಅವರು ಬಹುಮತ ಪಡೆಯಲು ಸಾಧ್ಯವಿಲ್ಲ ಎಂದು ಭಾವಿಸಿದಾಗ, ಅವರು 72 ಗಂಟೆಗಳಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇಲ್ಲಿ ಎನ್‌ಸಿಪಿಯನ್ನು ಮುರಿದು ಸರ್ಕಾರ ರಚಿಸುವುದು ಬಿಜೆಪಿಯ ತಂತ್ರವಾಗಿತ್ತು. ಆದರೆ ಅದು ವಿಫಲವಾಯಿತು.
5. ಗೋವಾ (Goa): 2017 ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷವು ಸಂಪೂರ್ಣ ಬಹುಮತವನ್ನು ಪಡೆಯಲಿಲ್ಲ, ಆದರೆ ಕಾಂಗ್ರೆಸ್ 17 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಅಧಿಕಾರದ ಕೀಲಿಕೈ ಸಣ್ಣ ಪಕ್ಷಗಳು ಮತ್ತು ಸ್ವತಂತ್ರರ ಕೈಯಲ್ಲಿತ್ತು. ಮನೋಹರ್ ಪರಿಕ್ಕರ್ ಅವರು 21 ಶಾಸಕರ ಬೆಂಬಲವನ್ನು ಪ್ರತಿಪಾದಿಸಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ರಾಜ್ಯಪಾಲ ಮೃದುಲಾ ಸಿನ್ಹಾ ಅವರಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿದರು. ಗೋವಾದಲ್ಲಿ ಕಾಂಗ್ರೆಸ್‌ನ ಬಹುಮತವನ್ನು ಬಿಜೆಪಿ ಕಿತ್ತುಕೊಂಡಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿದ್ದ ಕಾರಣಕ್ಕೆ ಕಾಂಗ್ರೆಸ್‌ಗೆ ಸರ್ಕಾರ ರಚನೆ ಮಾಡುವ ಅವಕಾಶವನ್ನು ಮೊದಲು ನೀಡಬೇಕಿತ್ತು ಎಂದು ಕಾಂಗ್ರೆಸ್ ಈ ಸಮಯದಲ್ಲಿ ವಾದ ಮಾಡಿತ್ತು.
6. ಅರುಣಾಚಲ ಪ್ರದೇಶ (Arunachal Pradesh) : 2014 ರ ಚುನಾವಣೆಯ ನಂತರ, ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತದ ಸರ್ಕಾರವನ್ನು ರಚಿಸಿತು. ಆದರೆ, ಕಾಂಗ್ರೆಸ್ ನಾಯಕರ ನಡುವಿನ ವೈಷಮ್ಯ ಬಯಲಿಗೆ ಬರುತ್ತಲೇ ಇತ್ತು. ಅಂತಿಮವಾಗಿ, 16 ಸೆಪ್ಟೆಂಬರ್ 2016 ರಂದು, ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಪೆಮಾ ಖಂಡು ಮತ್ತು 42 ಶಾಸಕರು ಪಕ್ಷವನ್ನು ತೊರೆದು ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ ಪ್ರದೇಶಕ್ಕೆ ಸೇರಿದರು. ಬಿಜೆಪಿಯ ನೆರವಿನೊಂದಿಗೆ ಪಿಪಿಎ ಸರ್ಕಾರ ರಚಿಸಿತು.
ಕರ್ನಾಟಕದಲ್ಲಿ ಮತ್ತೆ ಆಪರೇಷನ್ ಕಮಲ, ಸುಳಿವು ಕೊಟ್ಟ ಸಚಿವ
7. ಉತ್ತರಾಖಂಡ (Uttarakhand): 2012ರ ವಿಧಾನಸಭೆ ಚುನಾವಣೆಯಲ್ಲಿ ಉತ್ತರಾಖಂಡದಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಕ್ಕಿರಲಿಲ್ಲ. ಕಾಂಗ್ರೆಸ್ 32 ಸ್ಥಾನಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷ ಎನಿಸಿಕೊಂಡಿತ್ತು. ಬಿಜೆಪಿ 31 ಸ್ಥಾನಗಳನ್ನು ಗೆದ್ದಿತ್ತು. ಹೀಗಿರುವಾಗ ಈ ಸೋಲನ್ನು ಅರಗಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಗಲಿಲ್ಲ, ಆದರೆ 2014ರಲ್ಲಿ ಕೇದಾರನಾಥ ದುರಂತದ ನಂತರ ಕಾಂಗ್ರೆಸ್ ವಿಜಯ್ ಬಹುಗುಣ ಅವರನ್ನು ಬದಲಾಯಿಸಿ ಹರೀಶ್ ರಾವತ್ ಅವರನ್ನು ಸಿಎಂ ಮಾಡಿದ ಕೂಡಲೇ ಬಿಜೆಪಿ, ಆಪರೇಷನ್ ಕಮಲದ ಅಸ್ತ್ರ ಬಳಕೆ ಮಾಡಿತು. ಬಹುಗುಣ ಅವರ ಅಸಮಾಧಾನದ ಲಾಭವನ್ನು ಬಿಜೆಪಿ ಪಡೆದುಕೊಂಡಿತು. 18 ಮಾರ್ಚ್ 2016 ರಂದು ಬಹುಗುಣ ಸೇರಿದಂತೆ 9 ಕಾಂಗ್ರೆಸ್ ಶಾಸಕರು ಬಂಡಾಯವೆದ್ದರು. ಆದಾಗ್ಯೂ, ಉತ್ತರಾಖಂಡದ ಸ್ಪೀಕರ್ ಒಂಬತ್ತು ಕಾಂಗ್ರೆಸ್ ಬಂಡಾಯಗಾರರನ್ನು ಅನರ್ಹಗೊಳಿಸಿದಾಗ, ಕೇಂದ್ರ ಸರ್ಕಾರ ಅದೇ ದಿನ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿತು. ಇದಾದ ಬಳಿಕ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಬಂಡಾಯ ಶಾಸಕರನ್ನು ದೂರವಿಟ್ಟು ವಿಶ್ವಾಸಮತ ಯಾಚನೆ ನಡೆಸಲಾಯಿತು. ರಾವತ್ 11 ಮೇ 2016 ರಂದು ಬಹುಮತದ ಪರೀಕ್ಷೆಯನ್ನು ಗೆದ್ದರು. ಸುಪ್ರೀಂ ಕೋರ್ಟ್‌ನಿಂದಾಗಿ, ಶಾಸಕರನ್ನು ಒಡೆಯುವ ಬಿಜೆಪಿಯ ತಂತ್ರವು ಇಲ್ಲಿಯೂ ಕೆಲಸ ಮಾಡಲಿಲ್ಲ.
ಹಳೇ ಮೈಸೂರು ಆಯ್ತು, ಈಗ ಕಲ್ಯಾಣ ಕರ್ನಾಟಕದಲ್ಲಿ ಆಪರೇಷನ್ ಕಮಲ
ಈ ಏಳು ರಾಜ್ಯಗಳ ‘ಆಪರೇಷನ್ ಕಮಲ’ ತಂತ್ರಗಳನ್ನು ನೋಡಿದಾಗ ಬಿಜೆಪಿ ಎರಡು ರೀತಿಯ ರಣತಂತ್ರವನ್ನು ಅಳವಡಿಸಿಕೊಂಡಿದೆ ಎನ್ನುವುದು ಪಕ್ಕಾ. ಒಂದು ವಿರೋಧ ಪಕ್ಷದ ಬಂಡಾಯ ಶಾಸಕರ ಬಣವನ್ನು ಸೆಳೆದುಕೊಂಡು ಸರ್ಕಾರ ರಚನೆ ಮಾಡುವುದು, ಇನ್ನೊಂದು ಸಣ್ಣ ಪಕ್ಷಗಳು ಮತ್ತು ಸ್ವತಂತ್ರ ಶಾಸಕರನ್ನು ಸೆಳೆದುಕೊಂಡು ಸರ್ಕಾರ ರಚನೆ ಮಾಡುವುದು. ಮಹಾರಾಷ್ಟ್ರದಲ್ಲಿ ಬಿಜೆಪಿ ಈಗ ಮೊದಲನೆಯ ತಂತ್ರವನ್ನು ಹೂಡಿದ್ದು ಫಲಿತಾಂಶ ಇನ್ನಷ್ಟೇ ಬರಬೇಕಿದೆ.