
ಹಾರೋಹಳ್ಳಿ(ಜೂ.22): ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಧಾನಿ ಮೋದಿಗೆ ಕರ್ನಾಟಕ ನೆನಪಿಗೆ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದರು. ಮರಳವಾಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೇರೊಬ್ಬರು ಮಾಡಿದ ಕೆಲಸವನ್ನು ತಮ್ಮದೆಂದು ಬಿಂಬಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರು ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ ಎಂದು ಟೀಕಿಸಿದರು.
ಪ್ರಧಾನಿ ಮೋದಿ ಅವರಿಗೆ ಪ್ರೊಗ್ರೆಸ್ ರಿಪೋರ್ಟ್ ಕೊಡಲಾಗಿದೆ. ಅದರಲ್ಲಿ 33 ಸಾವಿರ ಕೋಟಿ ರು. ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಿದರು ಎಂದು ಹೇಳುತ್ತಿದ್ದಾರೆ. ಮೋದಿ ಅವರು ತಾವೇ ರೂಪಿಸಿದ ಹೊಸ ಯೋಜನೆಗಳಿಗೆ ಚಾಲನೆ ನೀಡಿದರೋ ಅಥವಾ ಹಿಂದಿನ ಸರ್ಕಾರಗಳು ರೂಪಿಸಿದ್ದ ಯೋಜನೆಗಳಿಗೆ ಚಾಲನೆ ನೀಡಿದರೋ ಎಂಬುದನ್ನು ಬಿಜೆಪಿ ನಾಯಕರು ಜನರಿಗೆ ತಿಳಿಸಬೇಕು ಎಂದರು.
ಮುಂಬರುವ ಎಲೆಕ್ಷನ್‌ನಲ್ಲಿ ಕುಮಾರಸ್ವಾಮಿ ಯಾವ ಕ್ಷೇತ್ರದಿಂದ ಸ್ಪರ್ಧೆ?: ಎಚ್‌ಡಿಕೆ ಹೇಳಿದ್ದಿಷ್ಟು
ಪ್ರಧಾನಿಯವರು ಉಪನಗರ ರೈಲು ಬಗ್ಗೆ ಮಾತನಾಡಿದ್ದಾರೆ. 2018ರಲ್ಲಿ ಅಧಿಕಾರಕ್ಕೆ ಬರುವವರೆಗೆ ಈ ಯೋಜನೆ ಧೂಳು ಹಿಡಿಯುತ್ತಿತ್ತು. ನಾನು 14 ತಿಂಗಳು ಸಿಎಂ ಆಗಿದ್ದಾಗ ರೇಲ್ವೆ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೆ. ಇದಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೂ ಸಹಕಾರ ನೀಡಿದ್ದರು.
ಆಗ 23 ಸಾವಿರ ಕೋಟಿ ರು. ಮೊತ್ತದ ಯೋಜನೆ ಸಿದ್ಧಪಡಿಸಿ, 2018ರಲ್ಲಿ ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ದೆಹಲಿಗೆ ಹೋಗಿದ್ದೆ. ತಕ್ಷಣ ಅಡಿಗಲ್ಲು ಹಾಕಿ ಎಂದು ನಾನು ಅಂದಿನ ರೇಲ್ವೆ ಸಚಿವ ಪಿಯೂಷ್ ಗೋಯಲ… ಅವರಿಗೆ ಮನವಿ ಮಾಡಿದ್ದೆ. ಆನಂತರ ಕೃಷ್ಣಾ ಕಚೇರಿಯಲ್ಲಿ ಅಂದಿನ ರೇಲ್ವೆ ಸಚಿವ ಪಿಯೂಷ್ ಗೋಯಲ… ಅವರನ್ನೇ ಆಹ್ವಾನಿಸಿ ಚರ್ಚೆ ಮಾಡಿದ್ದೆ. ಮಾಧ್ಯಮಗಳಲ್ಲೂ ಈ ವಿಷಯ ವರದಿಯಾಗಿದೆ ಎಂದು ಹೇಳಿದರು.
ರಾಜ್ಯಸಭಾ ಚುನಾವಣೆ: 'ಕುಮಾರಸ್ವಾಮಿ ಕುಟುಂಬಕ್ಕೆ ಕುಪೇಂದ್ರ ರೆಡ್ಡಿ ಏಕೆ ಸಾಲ ಕೊಟ್ಟಿದ್ದಾರೆ?'
ಆಗ ಲೋಕಸಭೆ ಚುನಾವಣೆಗೂ ಮುನ್ನ ಉಪನಗರ ರೈಲು ಯೋಜನೆಗೆ ಶಂಕುಸ್ಥಾಪನೆ ಮಾಡುವುದಾಗಿ ಹೇಳಿದ್ದೆ. ಆದರೆ, ಬಿಜೆಪಿಯವರು ಬೇಕೆಂದೇ ಅಡಿಗಲ್ಲು ಹಾಕಲು ಒಪ್ಪಿಗೆ ನೀಡಲಿಲ್ಲ. ಅವರ ಬದಲು ಕಾಂಗ್ರೆಸ್ ಜತೆ ಸರ್ಕಾರ ಮಾಡಿದೆ ಎನ್ನುವ ಸಿಟ್ಟು ಅವರಿಗಿತ್ತು. ಆನಂತರ ಆಪರೇಶನ್ ಕಮಲದ ಮೂಲಕ ನನ್ನ ನೇತೃತ್ವದ ಮೈತ್ರಿ ಸರ್ಕಾರವನ್ನು ತೆಗೆದು ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲಾಯಿತು. ಮೂರು ವರ್ಷ ಉಪನಗರ ರೈಲು ಯೋಜನೆ ಬಾಕಿ ಇಟ್ಟರು ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಮೈತ್ರಿ ಸರ್ಕಾರದಲ್ಲಿ ಕಾಲಮಿತಿಯೊಳಗೆ ಉಪನಗರ ರೈಲು ಯೋಜನೆ ಮುಗಿಸಲು ನಾನು ಸಂಪುಟದ ಒಪ್ಪಿಗೆ ತೆಗೆದುಕೊಂಡಿದ್ದೆ. ಅದಕ್ಕೆ ಕೇಂದ್ರ ಸರ್ಕಾರ 19 ಷರತ್ತುಗಳನ್ನು ವಿಧಿಸಿತ್ತು. ಆ ಷರತ್ತುಗಳನ್ನು ನನ್ನ ಸರ್ಕಾರ ಪೂರೈಸಿತ್ತು. ಆದರೆ, ಈಗ ಚುನಾವಣೆ ಬರುತ್ತಿದೆ ಎನ್ನುವ ಕಾರಣಕ್ಕೆ ಬಂದು ಯೋಜನೆಗೆ ಚಾಲನೆ ಕೊಟ್ಟಿದ್ದಾರೆ ಎಂದು ಲೇವಡಿ ಮಾಡಿದರು. ಶಾಸಕಿ ಅನಿತಾ ಕುಮಾರಸ್ವಾಮಿ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಾಮಕೃಷ್ಣ, ಭೈರೇಗೌಡ, ಭುಜಂಗಯ್ಯ, ಪಡುವಣಗೆರೆ ಸಿದ್ದರಾಜು,ತೋಕಸಂದ್ರ ಗ್ರಾಪಂ ಅಧ್ಯಕ್ಷ ಸುನೇತ್ರ ಶಿವರುದ್ರಯ್ಯ,ಪ್ರದೀಪ್,ಗುತ್ತಲಹುಣಸೆ ಶ್ರೀಕಂಠು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.