ದೇಶದ ಗಮನ ಸೆಳೆದು ತೀವ್ರ ಕುತೂಹಲ ಕೆರಳಿಸಿದ್ದ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಬಹುಮತದಿಂದ ಜಯ ಸಾಧಿಸಿದ ತರುವಾಯ ಉಪ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿರುವ ಡಿ.ಕೆ.ಶಿವಕುಮಾರ್ ಮೇಲೆ ಜವಾಬ್ದಾರಿಯೂ ಹೆಚ್ಚಾಗಿದೆ.
ಕೆ. ವಿ. ಮನು
ಕನಕಪುರ (ಮೇ.22): ದೇಶದ ಗಮನ ಸೆಳೆದು ತೀವ್ರ ಕುತೂಹಲ ಕೆರಳಿಸಿದ್ದ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಬಹುಮತದಿಂದ ಜಯ ಸಾಧಿಸಿದ ತರುವಾಯ ಉಪ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿರುವ ಡಿ.ಕೆ.ಶಿವಕುಮಾರ್ ಮೇಲೆ ಜವಾಬ್ದಾರಿಯೂ ಹೆಚ್ಚಾಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ತಾಲೂಕಿನ ಹೆಮ್ಮೆಯ ಮಗ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಅಗಾಧವಾದ ಪ್ರೀತಿ, ವಿಶ್ವಾಸದಿಂದ ಪಕ್ಷಭೇದ ಮರೆತು ಎಲ್ಲಾ ವರ್ಗದ ಜನ ನಿರೀಕ್ಷೆಗೂ ಮೀರಿ ಮತಗಳನ್ನು ನೀಡಿ (1.22 ಲಕ್ಷ ಮತಗಳ ಅಂತರ) ಹೊಸ ದಾಖಲೆ ಬರೆದಿರುವುದರಿಂದ ಹೊಸ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿರುವ ಅವರು ತಾಲೂಕಿಗೆ ಅಗತ್ಯವಾಗಿರುವ ಮೂಲ ಸೌಕರ್ಯಗಳನ್ನು ಒದಗಿಸುವ ನಿರೀಕ್ಷೆಯಿದೆ.
ಸಾತನೂರು ವಿಧಾನಸಭಾ ಕ್ಷೇತ್ರ ಮರುವಿಂಗಡಣೆ ಯಾದ ನಂತರ ಕನಕಪುರ ಕ್ಷೇತ್ರಕ್ಕೆ ಕಾಲಿಟ್ಟು ಶಾಸಕರಾದ ಡಿ.ಕೆ.ಶಿವಕುಮಾರ್ ಅವರು ಸತತವಾಗಿ ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆಯಾಗಿ ನಂಜುಂಡಪ್ಪ ವರದಿಯಲ್ಲಿ ಅತಿ ಹಿಂದುಳಿದ ತಾಲೂಕಾಗಿ ಹೆಸರುಗಳಿಸಿದ್ದ ತಾಲೂಕಿನಲ್ಲಿ ಸಾಕಷ್ಟುಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಮುಂದುವರಿದ ತಾಲೂಕನ್ನಾಗಿ ಮಾಡಿರುವುದು ಅವರ ಬದ್ಧತೆಯನ್ನು ತೋರಿಸುತ್ತದೆ.
ಡಿ.ಕೆ.ಶಿವಕುಮಾರ್ ಡಿಸಿಎಂ: ರಾಮನಗರ ಜಿಲ್ಲೆಯಲ್ಲಿ ಮೂಡಿದ ಅಭಿವೃದ್ಧಿ ನಿರೀಕ್ಷೆಗಳು
ತಾಲೂಕಿನಲ್ಲಿ ತ್ವರಿತವಾಗಿ ಆಗಬೇಕಾದ ಕೆಲಸಗಳು: ತಾಲೂಕಿನ ಜನತೆಯ ಆರೋಗ್ಯದ ದೃಷ್ಟಿಯಿಂದ ಮೊದಲು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಹಿಂದೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಆರಂಭಿಸಿ ಕ್ಷೇತ್ರದ ಜನರ ಬಹುದಿನಗಳ ಕನಸನ್ನು ನನಸು ಮಾಡುವುದು, ಇಸ್ಫೋಸಿಸ್ ಫೌಂಡೇಷನ್ ವತಿಯಿಂದ ನಿರ್ಮಿಸಿರುವ ತಾಯಿ ಮತ್ತು ಮಕ್ಕಳ ಹೆರಿಗೆ ಆಸ್ಪತ್ರೆಗೆ ಅಗತ್ಯವಾದ ಸಿಬ್ಬಂದಿ ಹಾಗೂ ಸಲಕರಣೆಗಳನ್ನು ಆದಷ್ಟೂಬೇಗ ಪೂರೈಸುವುದು, ತಾಲೂಕಿನ ಯುವ ಜನಾಂಗ ಉದ್ಯೋಗ ಅರಸಿ ಬೆಂಗಳೂರು ಸೇರಿದಂತೆ ಪರ ಸ್ಥಳಕ್ಕೆ ಹೋಗುವುದನ್ನು ತಪ್ಪಿಸಲು ಕೈಗಾರಿಕಾ ವಸಾಹತುಗಳ ಆರಂಭ, ತಾಲೂಕಿನ ರೈತರ ಜೀವನಾಡಿಯಾಗಿರುವ ಅರ್ಕಾವತಿ-ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಅಣೆಕಟ್ಟು ಯೋಜನೆಗೆ ಆದಷ್ಟೂಬೇಗ ಅನುಮೋದನೆ ನೀಡುವುದು.
ಕಳೆದ ಹತ್ತು ವರ್ಷಗಳ ಹಿಂದೆ ನಗರದ ಹೌಸಿಂಗ್ ಬೋರ್ಡ್ ಬಳಿಯ ಕರಡಿಗುಡ್ಡೆಯಲ್ಲಿ ನಿರ್ಮಿಸಿರುವ ಮನೆಗಳನ್ನು ಶೀಘ್ರವಾಗಿ ಫಲಾನುಭವಿ ಗಳಿಗೆ ಹಸ್ತಾಂತರಿಸುವುದು, ಕುಂಟುತ್ತಾ ಸಾಗುತ್ತಿರುವ ನ್ಯಾಯಾಲಯದ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸುವುದು, ಗ್ರಾಮೀಣ ಭಾಗದ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯಲು ಅನುಕೂಲವಾಗುವಂತೆ ಹೋಬಳಿಗೊಂದರಂತೆ ಹೈಟೆಕ್ ಶಾಲೆಗಳ ತೆರೆಯ ಬೇಕಾಗಿದೆ, ತಾಲೂಕಿನಲ್ಲಿ ಪ್ರವಾಸೋದ್ಯಮಕ್ಕೆ ಉತ್ತಮ ವಾತಾವರಣವಿದ್ದು, ಸಂಗಮ-ಮೇಕೆದಾಟು, ಚುಂಚಿ ಪಾಲ್ಸ್, ಪುರಾಣ ಕ್ಷೇತ್ರವಾದ ಶಿವಾಲ್ದಪ್ಪ ಬೆಟ್ಟ, ಕಬ್ಬಾಳಮ್ಮ ಬೆಟ್ಟವನ್ನು ಅಭಿವೃದ್ಧಿ ಪಡಿಸುವುದು, ಚಾರಣಪ್ರಿಯರಿಗಾಗಿ ಅಚ್ಚಲು ಬೆಟ್ಟ ಹಾಗೂ ಹೊಸದುರ್ಗದ ಶ್ರೀ ರಾಮದೇವರ ಬೆಟ್ಟಗಳಿಗೆ ಒತ್ತು ನೀಡಿ ಅಭಿವೃದ್ಧಿ ಪಡಿಸಬೇಕಾಗಿದೆ
ರಾಮನಗರ ಕ್ಷೇತ್ರದಲ್ಲಿಯೇ ರಾಜಕೀಯ ಮರು ಜನ್ಮ: ನಿಖಿಲ್ ಕುಮಾರಸ್ವಾಮಿ
ಕಾಡುಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ: ಪಕ್ಕದ ತಮಿಳುನಾಡು ರಾಜ್ಯಕ್ಕೆ ಹೊಂದಿಕೊಂಡಿರುವ ತಾಲೂಕಿನ ಗಡಿಭಾಗದ ಹಳ್ಳಿಗಳಲ್ಲಿ ದಿನನಿತ್ಯ ಆನೆ, ಚಿರತೆ ಸೇರಿದಂತೆ ಕಾಡುಪ್ರಾಣಿಗಳ ಹಾವಳಿಯಿಂದ ರೈತರು ಬೆಳೆದ ಲಕ್ಷಾಂತರ ರೂಪಾಯಿ ಫಸಲು ನಾಶ ಹಾಗೂ ಪ್ರಾಣ ಹಾನಿಯಂತಹ ಪ್ರಕರಣಗಳಿಗೆ ಶಾಶ್ವತ ವಾದ ಪರಿಹಾರ ಕಂಡುಕೊಂಡು ರೈತರ ನೆರವಿಗೆ ಬರಬೇಕಾಗಿದೆ. ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿರುವ ಶಿವಕುಮಾರ್ ಅವರ ಮೇಲೆ ಕ್ಷೇತ್ರದ ಜನರ ನಿರೀಕ್ಷೆ ಅಪಾರವಾಗಿದ್ದು ತಾಲೂಕಿನ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ಹಾಗೂ ಹೊಸ ಕನಕನಗರದ ಕನಸು ಕಂಡಿರುವ ಡಿಕೆಶಿಯವರು ತಮಗೆ ದೊರೆತಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಇಡೀ ರಾಜ್ಯದಲ್ಲೇ ಮಾದರಿ ತಾಲೂಕಾಗಿ ಮಾಡಲಿದ್ದಾರೆ ಎಂಬ ಅಗಾಧವಾದ ನಂಬಿಕೆ, ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ.